ಮಕ್ಕಳ ಕ್ರಿಯಾಶೀಲ ಚಟುವಟಿಕೆಗಳ ನಿರ್ವಣೆಯಲ್ಲಿ ಪೋಷಕರು ಜಾಗೃತೆ ವಹಿಸಬೇಕು.

ಚಳ್ಳಕೆರೆ

         ಮಕ್ಕಳಲ್ಲಿ ಉಂಟಾಗುವ ಅನೇಕ ಸಮಸ್ಯೆಗಳ ಬಗ್ಗೆ ಪೋಷಕರು ಜಾಗೃರಾಗಬೇಕು. ಶಿಕ್ಷಣ ಕಲಿಕೆಗೆ ನೀಡುವ ಮಹತ್ವವನ್ನೇ ಮಕ್ಕಳ ಆರೋಗ್ಯಕ್ಕೂ ನೀಡಬೇಕು. ಯಾವುದೇ ಹಂತದಲ್ಲೂ ಪೋಷಕರು ತಮ್ಮ ಮಕ್ಕಳಿಗೆ ಆಹಾರ ನೀಡುವಾಗ ಹೆಚ್ಚು ಜಾಗೃತೆ ವಹಿಸಬೇಕೆಂದು ಇಲ್ಲಿನ ಮಕ್ಕಳ ತಜ್ಞ ಡಾ.ಜಿ.ತಿಪ್ಪೇಸ್ವಾಮಿ ತಿಳಿಸಿದರು.

          ಅವರು, ಭಾನುವಾರ ಇಲ್ಲಿನ ಅಭ್ಯುದಯ ಎಜುಕೇಷನ್ ಟ್ರಸ್ಟ್, ಇಂಡಸ್ ವ್ಯಾಲಿ ಪಬ್ಲಿಕ್ ಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿ ಹಮ್ಮಿಕೊಂಡಿದ್ದ ಒಂದು ದಿನದ ಪೋಷಕರ ವಿಶೇಷ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿನಿತ್ಯ ಶಾಲೆಗೆ ಮಕ್ಕಳನ್ನು ಕಲಿಸುವ ಸಂದರ್ಭದಲ್ಲಿ ಅವನ ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಗಮನಹರಿಸುವ ಪೋಷಕರು ಅವನ ಆರೋಗ್ಯದ ಬಗ್ಗೆಯೂ ಸಹ ಜಾಗೃತರಾಗಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಅತಿಬೇಗನೆ ವಿವಿಧ ರೋಗಗಳು ದಿಢೀರನೆ ಆಕ್ರಮಿಸಿಕೊಂಡು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಮಕ್ಕಳ ಆರೋಗ್ಯ ಸೂಕ್ಷ್ಮವಾಗಿದ್ದು, ಪೋಷಕರು ಹೆಚ್ಚು ಜಾಗೃತಿ ವಹಿಸುವುದು ಅವಶ್ಯಕವೆಂದರು.

         ಆಂಗ್ಲ ಉಪನ್ಯಾಸಕ ಕೆ.ವಿ.ವೆಂಕಟೇಶಮೂರ್ತಿ ಮಾತನಾಡಿ, ಶಾಲೆಗೆ ಮಕ್ಕಳನ್ನು ಕಳುಹಿಸುವ ಸಂದರ್ಭದಲ್ಲಿ ಪೋಷಕರು ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಕೊಳ್ಳಬೇಕಾಗುತ್ತದೆ. ಪ್ರತಿನಿತ್ಯ ಶಾಲೆಗೆ ತೆಗೆದುಕೊಂಡು ಹೋಗುವ ಪುಸ್ತಕಗಳ ಬಗ್ಗೆ ಗಮನವಿಡಬೇಕು. ಉತ್ತಮ ಆಹಾರವನ್ನು ತಯಾರಿಸಿಕೊಡಬೇಕು. ಮಕ್ಕಳು ಎಲ್ಲರಲ್ಲೂ ಪ್ರೀತಿ ವಿಶ್ವಾಸದಿಂದ ಬೆರೆಯುವಂತೆ ನೋಡಿಕೊಳ್ಳಬೇಕು. ಅನೇಕ ರಾಷ್ಟ್ರ ನಾಯಕರ, ದಾರ್ಶನಿಕರ, ದೇಶಪ್ರೇಮಿಗಳ, ಕಥೆಗಳನ್ನು ಹೇಳುವ ಮೂಲಕ ಮಕ್ಕಳಲ್ಲಿ ರಾಷ್ಟ್ರ ಪ್ರೇಮವನ್ನು ಜಾಗೃತಿಗೊಳಿಸಬೇಕು ಎಂದರು.

         ಸಂಸ್ಥೆಯ ಕಾರ್ಯದರ್ಶಿ ಟಿ.ಚಿಕ್ಕಣ್ಣ ಮಾತನಾಡಿ, ಶಾಲೆಯಲ್ಲಿ ಪೋಷಕರಿಗಾಗಿ ವಿಶೇಷ ಸಭೆಯನ್ನು ಏರ್ಪಡಿಸಿ ವಿವಿಧ ವಿಷಯಗಳ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಇದಾಗಿದೆ. ಮಕ್ಕಳನ್ನು ಪ್ರತಿನಿತ್ಯ ಶಾಲೆಗೆ ಕಳುಹಿಸುವ ಸಂದರ್ಭದಲ್ಲಿ ಪೋಷಕರು ಸಾಮಾನ್ಯವಾಗಿ ಗಲಿಬಿಲಿಗೆ ಒಳಗಾಗಿರುತ್ತಾರೆ. ಮಕ್ಕಳು ಶಿಸ್ತು ಬದ್ದವಾಗಿ ಬೆಳೆಯಲು ಶಿಕ್ಷಣದಲ್ಲಿ ಆಸಕ್ತಿ ತೋರಲು ಪೋಷಕರು ಪ್ರಧಾನ ಪಾತ್ರವಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

          ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪ್ರಿಯಾಂಕ, ಲಾವಣ್ಯ, ಕವಿತಾ, ಜಿ.ಟಿ.ಶಶಿಧರ, ಬಾನುವೀರೇಶ್, ರೆಡ್ಡಿಹಳ್ಳಿ ಮಂಜುನಾಥ, ಎಚ್.ಮಹಲಿಂಗಪ್ಪ, ಸಿದ್ದವೀರಮ್ಮ ಮುಂತಾದವರು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link