ಪಾವಗಡ
ವಿದ್ಯಾರ್ಥಿನಿಯರನ್ನು ಅವಾಚ್ಯ ಶಬ್ದದಿಂದ ನಿಂದಿಸುತ್ತಾ, ವಿನಾಕಾರಣ ತೊಂದರೆ ಕೊಡುತ್ತಿರುವ ಪ್ರಾಂಶುಪಾಲರ ವಿರುದ್ದ ಪೋಷಕರು “ನಮ್ಮ ಮಕ್ಕಳ ಟಿ.ಸಿ. ಯನ್ನು ಕೊಡಿ’’ ಎಂದು ಒತ್ತಾಯಿಸಿ, ಸೋಮವಾರ ಪ್ರಾಂಶುಪಾಲರ ನಡವಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ತುಮಕೂರು ರಸ್ತೆಯ ಕಣೆವೇನಹಳ್ಳಿ ಗೇಟ್ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಧನಂಜಯ ವಿರುದ್ದ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿರುವ ಅರೋಪ ಅಲ್ಲಿನ ವಿದ್ಯಾರ್ಥಿನಿಯರಿಂದಲೆ ಕೇಳಿ ಬಂದಿದೆ.ವಸತಿ ಶಾಲೆಯ ಪ್ರಾಂಶುಪಾಲ ಧನಂಜಯ ವಿದ್ಯಾರ್ಥಿನಿಯರ ಹುಟ್ಟಿನ ಬಗ್ಗೆಯೆ ತುಂಬಾ ತುಚ್ಛವಾಗಿ, ಅಸಂಸ್ಕೃತ ಶಬ್ದಗಳಿಂದ ನಿಂದಿಸಿ, ಅಸಹ್ಯವಾದ ಬೈಗುಳಗಳಿಂದ ಮಾನಸಿಕವಾಗಿ ನೋವುಂಟು ಮಾಡುತ್ತಾರೆ. ಈ ವಿಷಯ ಪೋಷಕರಿಗೆ ತಿಳಿಸದಂತೆ ಬೆದರಿಸುತ್ತಾರೆ ಎಂದು ವಿದ್ಯಾರ್ಥಿನಿಯರು ಮಾಧ್ಯಮಗಳೊಂದಿಗೆ ತಿಳಿಸುತ್ತಾ ಕಣ್ಣೀರುಗರೆದಿದ್ದಾರೆ.
ಅಸಭ್ಯವಾಗಿ ವರ್ತಿಸುತ್ತಾ ಮನ ಬಂದಂತೆ ಮಕ್ಕಳನ್ನು ಬೈಯುವ ಪ್ರಾಂಶು ಪಾಲರಿಗೆ ಇಷ್ಟ ಬಂದಂತೆ ವಿದ್ಯಾರ್ಥಿನಿಯರು ನಡೆಯದಿದ್ದರೆ, ನರಕಯಾತನೆ ತಪ್ಪದು. ಅಷ್ಟೆ ಅಲ್ಲದೆ ಇಲ್ಲಿರುವ ಎಲ್ಲಾ ಶಿಕ್ಷಕರಿಗೆ ಕಿರುಕುಳ ನೀಡಿ ಅವರನ್ನು ಖಾಲಿ ಮಾಡಿಸಲಾಗುತ್ತಿದೆ. ಕನ್ನಡ, ಇಂಗ್ಲೀಷ್ ಮತ್ತು ಸಮಾಜ ವಿಷಯಗಳ ಶಿಕ್ಷಕರೆ ಇಲ್ಲ. ಎಲ್ಳ ವಿಷಯಗಳ ಪಾಠಗಳನ್ನೂ ನಾನೊಬ್ಬನೆ ಮಾಡುತ್ತೇನೆ ಎಂದು ವಿದ್ಯಾರ್ಥಿನಿಯರ ಮೇಲೆ ನಿರಂತರವಾಗಿ ದರ್ಪ ತೋರುವ ಪ್ರಾಂಶುಪಾಲ ಮೊದಲು ತೊಲಗಲಿ ಎಂಬುದು ಇಲ್ಲಿನ ವಿದ್ಯಾರ್ಥಿನಿಯರ ಒಕ್ಕೊರಲ ಕೂಗಾಗಿದೆ. .
ಬಾಲಕಿಯರ ವಸತಿ ಶಾಲೆಯಲ್ಲಿನ ನಿಯಮದ ಪ್ರಕಾರ ಉಟೋಪಚಾರ ನೀಡದ ನಿಲಯಪಾಲಕ ಕೂಡ ಪ್ರಾಂಶುಪಾಲರ ಜೊತೆ ಸೇರಿ ಗುಣಮಟ್ಟದ ಆಹಾರ ವಿತರಣೆ ಮಾಡುತ್ತಿಲ್ಲ. ಕೇಳಿದರೆ ನಿಮ್ಮ ಕಥೆ ಮುಗಿಯಿತು ಎಂದು ಹೆದರಿಸುತ್ತಾರೆ. ಇಲ್ಲಿನ ಸಮಸ್ಯೆಯನ್ನು ಕೇಳಲು ಮತ್ತು ಮಕ್ಕಳನ್ನು ಭೇಟಿಯಾಗಲು ಪೋಷಕರು ಬಂದರೆ ಸೆಕ್ಯೂರಿಟಿಯಿಂದ ಮಕ್ಕಳನ್ನು ಪೋಷಕರು ಭೇಟಿಯಾಗದಂತೆ ತಡೆಯಲಾಗುತ್ತಿರುವುದನ್ನು ಕಂಡರೆ ವ್ಯವಸ್ಥೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ನಾವಿಲ್ಲಿ ಕಾಣಬಹುದಾಗಿದೆ.
ಸರ್ಕಾರ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಾರಂಭಿಸಿದೆ. ಕಳೆದ 10 ವರ್ಷಗಳಿಂದ ಪಾವಗಡದ ಕಣಿವೇನಹಳ್ಳಿ ಗೇಟ್ ಬಳಿ ಇರುವ ಶೇಂಗಾ ಮಿಲ್ ನ್ನು ಬಾಡಿಗೆ ಪಡೆದು ವಸತಿ ಶಾಲೆಯನ್ನು ನಡೆಸಲಾಗುತ್ತಿದೆ. ಇಲ್ಲಿ 6 ನೆ ತರಗತಿಗೆ ಪ್ರವೇಶ ಪಡೆದುಕೊಂಡು 10 ನೆ ತರಗತಿಯವರೆಗೂ ಅಭ್ಯಾಸ ಮಾಡಲು ಅವಕಾಶ ಇದೆ. ಒಟ್ಟು 250 ವಿದ್ಯಾರ್ಥಿನಿಯರು ಈ ಶಾಲೆಯಲ್ಲಿದ್ದಾರೆ.
ಪ್ರಾಂಶುಪಾಲರನ್ನು ಪೋಷಕರು ಈಬಗ್ಗೆ ಕೇಳಲು ಬಂದರೆ ಪ್ರಾಂಶುಪಾಲರು ನಾಪತ್ತೆಯಾಗಿದ್ದರು. ಪ್ರಾಂಶುಪಾಲರನ್ನು ಕಾಣಲಾಗದೆ ಪೋಷಕರು ತಮ್ಮ ಹಳ್ಳಿಗಳಿಗೆ ವಾಪಸ್ ತೆರಳುತ್ತಿದ್ದ ದೃಶ್ಯ ಕಂಡು ಬಂದಿತು.ಪೋಷಕರಾದ ಅಮ್ಮಾಜಮ್ಮ ಮತ್ತು ಸುಬ್ಬರಾಯಪ್ಪ ದಂಪತಿ ಮಾತನಾಡಿ, ನಮ್ಮ ಮಕ್ಕಳು 10 ನೆ ತರಗತಿ ಓದುತ್ತಿದ್ದು, ಪಾಠ ಮಾಡಲು ಶಿಕ್ಷಕರೆ ಇಲ್ಲ.
ಮಕ್ಕಳ ಭವಿಷ್ಯ ರೂಪಿಸುವ ಪ್ರಾಂಶುಪಾಲರೆ ಮಕ್ಕಳನ್ನು ಹೀನಾಯವಾಗಿ ನಡೆಸಿಕೊಂಡರೆ ಮಕ್ಕಳ ಗತಿ ಏನು? ಕನ್ನಡ, ಇಂಗ್ಲೀಷ್ ಮತ್ತು ಸಮಾಜ ಶಾಸ್ತ್ರದ ಶಿಕ್ಷಕರೆ ಇಲ್ಲವೆಂದರೆ ಮಕ್ಕಳ ಭವಿಷ್ಯದ ಗತಿ ಹೇಗೆ ಎಂದು ಪ್ರಶ್ನಿಸಿ, ಕೂಡಲೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಅಧಿಕಾರಿಗಳು ಈ ಪುರುಷ ಪ್ರಾಂಶುಪಾಲರನ್ನು ಬದಲಾಯಿಸಿ, ಮಹಿಳಾ ಪ್ರಾಂಶುಪಾಲರನ್ನು ನೇಮಿಸಲಿ. ಇಲ್ಲವಾದ ಪಕ್ಷದಲ್ಲಿ ಶಾಲೆಯ ಮುಂಭಾಗ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಪೋಷಕರಾದ ಶಿವಣ್ಣ, ನಾಗರಾಜು, ಕೃಷ್ಣನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ