ಚಿತ್ರದುರ್ಗ:
ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಇವರುಗಳ ಸಹಯೋಗದೊಂದಿಗೆ ರೋಟರಿ ಬಾಲಭವನದ ಮುಂಭಾಗ ಪರಿಸರ ಸಂರಕ್ಷಣೆ ಕುರಿತ ವಿವಿಧ ಘೋಷಣೆಗಳುಳ್ಳ ಸ್ಟಿಕರ್‍ಗಳನ್ನು ಆಟೋಗಳಿಗೆ ಅಂಟಿಸುವ ಮೂಲಕ ಚಾಲಕರುಗಳಲ್ಲಿ ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಮುರಳಿಧರ ಆಟೋಗಳಿಗೆ ಸ್ಟಿಕರ್‍ಗಳನ್ನು ಅಂಟಿಸುವ ಮೂಲಕ ಪರಿಸರ ಉಳಿಸುವ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತ ಗಿಡ-ಮರಗಳನ್ನು ಕಡಿದು ನಾಶಪಡಿಸುವುದರಿಂದ ಪರಿಸರದಲ್ಲಿ ಅಸಮೋತಲನವಾಗುತ್ತದೆ. ಗಾಳಿ, ನೀರು, ಭೂಮಿಯನ್ನು ಕಲುಷಿತಗೊಳಿಸುವುದರಿಂದ ಸಕಲ ಜೀವರಾಶಿಗಳು ಪರಿತಪಿಸುತ್ತವೆ. ಇಂಧನವನ್ನು ಮಿತವಾಗಿ ಬಳಸಿ ಪರಿಸರವನ್ನು ಕಾಪಾಡಿ ಎಂದು ಆಟೋ ಚಾಲಕರುಗಳಿಗೆ ಕರೆ ನೀಡಿದರು.
ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷ ಜೆ.ವಿ.ಮಂಜುನಾಥ್ ಮಾತನಾಡುತ್ತ ಸರಳತೆಯ ಬದುಕು ಪರಿಸರಕ್ಕೆ ಪೂರಕವಾಗಿರುತ್ತದೆ. ನೈಸರ್ಗಿಕ ಸಂಪತ್ತನ್ನು ಮಿತವಾಗಿ ಬಳಸಿ. ಮನೆಗೊಂದು ಮರ, ಊರಿಗೊಂದು ವನ ಎನ್ನುವ ಪರಿಕಲ್ಪನೆ ಎಲ್ಲರಲ್ಲಿಯೂ ಇದ್ದಾಗ ಮಾತ್ರ ಪರಿಸರಕ್ಕೆ ಏನಾದರೂ ಕೊಡುಗೆ ನೀಡಬಹುದು. ಇರುವುದೊಂದೆ ಭೂಮಿ ಹಾಗಾಗಿ ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಎಂದು ಆಟೋ ಚಾಲಕರುಗಳಲ್ಲಿ ಮನವಿ ಮಾಡಿದರು.
ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಕಾರ್ಯದರ್ಶಿ ರೇವಣಸಿದ್ದಪ್ಪ, ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷೆ ರೇಖ ಸಂತೋಷ್, ಕಾರ್ಯದರ್ಶಿ ಶೈಲಜ ಸತ್ಯನಾರಾಯಣ, ಇನ್ನರ್‍ವೀಲ್ ಚೇರ್ಮನ್ ಶ್ರೀಲತ ದೊಂತಿ, ಪರಿಸರ ತಜ್ಞ ಹೆಚ್.ಎಸ್.ಸ್ವಾಮಿ, ರೊಟೇರಿಯನ್ ಬಿ.ಎಸ್.ಗಿರೀಶ್, ಮಾರುತಿ ಮೋಹನ್, ಆರತಿ ಮಹಡಿ ಶಿವಮೂರ್ತಿ, ಅಶೋಕ್, ರಾಘವೇಂದ್ರ, ಮಹಡಿ ಶಿವಮೂರ್ತಿ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
