ದಾವಣಗೆರೆ:
ಕ್ರೀಡೆಯಲ್ಲಿ ಭಾಗವಹಿಸುವಿಕೆ ಅತೀ ಮುಖ್ಯವಾಗಿದೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಭಿಪ್ರಾಯಪಟ್ಟರು.
ಸಮೀಪದ ತೋಳಹುಣಸೆಯಲ್ಲಿನ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿಯುತ ಶಾಲೆಯಲ್ಲಿ 12 ಮತ್ತು 15 ವರ್ಷದ ಬಾಲಕ, ಬಾಲಕಿಯರ ಹ್ಯಾಂಡ್‍ಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ, ಅದರಲ್ಲಿ ಭಾಗವಹಿಸುವಿಕೆ ಅತಿಮುಖ್ಯ.
ಕ್ರೀಡೆ ಎಂದರೆ ಒಬ್ಬರೂ ಸೋಲಬೇಕು, ಮತ್ತೊಬ್ಬರು ಗೆಲ್ಲಬೇಕು. ಇದು ನಿಯಮ. ಹೀಗಾಗಿ, ಕ್ರೀಡಾಪಟುಗಳು ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಬೇಕಿದೆ ಎಂದರು.
ನವೆಂಬರ್ 12 ರಂದು ಸಿಬಿಎಸ್‍ಸಿ ರಾಷ್ಟ್ರೀಯ ಮಟ್ಟದ ಅಥ್ಲೇಟಿಕ್ ಸಭೆ ಪಿಎಸ್‍ಎಸ್‍ಇಆರ್ ಶಾಲೆಯಲ್ಲಿ ನಡೆಯಲಿದ್ದು, ಈ ವೇಳೆ ಕರ್ನಾಟಕ ಜಾನಪದ ಕಲೆಗಳನ್ನು ಪ್ರದರ್ಶಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.ಪಂದ್ಯಾವಳಿಯಲ್ಲಿ ಪಿಎಸ್‍ಎಸ್‍ಇಎಂಆರ್ ಶಾಲೆ 12 ವರ್ಷದ ಬಾಲಕರು ಸಮಿಫೈನಲ್ ಪ್ರವೇಶಿಸಿದರು.
ಪಿಎಸ್‍ಎಸ್‍ಇಎಂಆರ್ ಮತ್ತು ಮೈಸೂರು ತಂಡಗಳ ನಡುವೆ ಮೊದಲ ಪಂದ್ಯಾ ನಡೆಯಿತು. ಅದರಲ್ಲಿ 5-3 ಗೋಲುಗಳಿಂದ ಪಿಎಸ್‍ಎಸ್‍ಇಎಂಆರ್ ಗೆಲುವು ಸಾಧಿಸಿತು. ನಂತರ ರಾಣೇಬೆನ್ನೂರು ಓಂ ಪಬ್ಲಿಕ್ ಸ್ಕೂಲ್ ತಂಡದ ವಿರುದ್ಧ 5-1 ಗೋಲಗಳಿಂದ ಜಯಗಳಿಸಿ ಸಮಿಫೈನಲ್ ಪ್ರವೇಶಿಸಿತು.
ಪಿಎಸ್‍ಎಸ್‍ಇಎಮ್‍ಆರ್ ಶಾಲೆಯ ಪರವಾಗಿ ಆದರ್ಶ ಮತ್ತು ಸಂಪ್ರೀತ್ ಅತ್ಯುತ್ತಮವಾಗಿ ಆಟವಾಡಿದರು.15 ವರ್ಷದ ಬಾಲಕ-ಬಾಲಕಿಯರ ಲೀಗ್ ಪಂದ್ಯಗಳು ನಡೆಯುತ್ತಲಿವೆ. ನಾಳೆ ಉಪಾಂತ್ಯ ಮತ್ತು ಅಂತಿಮ ಪಂದ್ಯಗಳು ಜರಗಲಿವೆ.ಪಿಎಸ್‍ಎಸ್‍ಇಎಂಆರ್ ಶಾಲೆಯ ನಿರ್ದೇಶಕ ಕೆ.ಇಮಾಂ ಅವರು ಕ್ರೀಡಾಪಟುಗಳಿಗೆ ಪ್ರಮಾಣ ವಚನ ಬೋಧಿಸಿದರು. ಕರ್ನಾಟಕ ರಾಜ್ಯ ಹ್ಯಾಂಡ್‍ಬಾಲ್ ಸಂಸ್ಥೆಯ ಕಾರ್ಯದರ್ಶಿ ಎನ್.ಕೆ. ನಾಗೇಂದ್ರಪ್ಪ ಭಾಗವಹಿಸಿದ್ದರು. ಬಿ.ಎಂ. ಅಮೂಲ್ಯ ಪ್ರಾರ್ಥಿಸಿದರು. ಮುಂಜುನಾಥ ರಂಗರಾಜು ಸ್ವಾಗತಿಸಿದರು. ಎ.ಪಿ. ವಂಶ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲರಾದ ಜೆ.ಎಸ್. ವನಿತಾ ವಂದಿಸಿದರು.