ತುಮಕೂರು
ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಕ್ರೀಡಾಪಟುಗಳು ಕ್ರೀಡಾ ಮನೋಭಾವನೆಯಿಂದ ಸ್ಪರ್ಧಿಸಬೇಕೆಂದು ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಜಿಲ್ಲಾ ಉಸ್ತವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲೆಯ ಎಲ್ಲಾ ಕ್ರೀಡಾ ಸಂಸ್ಥೆಗಳ ಸಹಯೋಗದಲ್ಲಿಂದು ನಗರದ ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ “ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ”ವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆಗಳು ಮನುಷ್ಯನ ಅವಿಭಾಜ್ಯ ಅಂಗ. ಕ್ರೀಡೆಯಿಂದ ದೇಹ ಹಾಗೂ ಮನಸ್ಸಿನ ಆರೋಗ್ಯ ವೃದ್ಧಿಯಾಗುತ್ತದೆ. ಆರೋಗ್ಯಯುತ ಜೀವನಕ್ಕೆ ಕ್ರೀಡೆ ಸಹಕಾರಿ ಎಂದು ತಿಳಿಸಿದರು.
ಬೇಡದ ಚಿಂತೆಗಳಿಂದ ಆರೋಗ್ಯವನ್ನು ಕಳೆದುಕೊಳ್ಳಬಾರದು. ಆರೋಗ್ಯ ಕೈಕೊಟ್ಟಾಗ ನಿದ್ರೆ ಮಾಡುವ ಆಸೆಯಿದ್ದರೂ, ನಿದ್ರೆ ಬರುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿನಿತ್ಯ ವ್ಯಾಯಾಮ, ಯೋಗಾಭ್ಯಾಸ ರೂಢಿಸಿಕೊಳ್ಳಬೇಕು. ಕ್ರೀಡೆಯಲ್ಲಿ ಪಾಳ್ಗೊಳ್ಳುವುದರಿಂದ ದೈಹಿಕ ಸಾಮಥ್ರ್ಯ ಮತ್ತು ಸ್ಪರ್ಧಾ ಮನೋಭಾವ ಇಮ್ಮಡಿಯಾಗುವುದರ ಜೊತೆಗೆ ಉತ್ತಮ ಸಾಮಾಜಿಕ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ ಕ್ರೀಡಾಕೂಟದಲ್ಲಿ ಯುವಕರು ಹೆಚ್ಚು ಉತ್ಸುಕರಾಗಿ ಭಾಗವಹಿಸಿ ಜಿಲ್ಲೆಗೆ ಹೆಸರು ತರಬೇಕೆಂದು ಕರೆ ನೀಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಮಾತನಾಡಿ ಯುವ ಜನತೆಯಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು ಇಂತಹ ಕ್ರೀಡಾಕೂಟಗಳು ವೇದಿಕೆಯಾಗಿದ್ದು, ಸ್ಪರ್ಧಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವಂತಾಗಲಿ ಎಂದು ಕ್ರೀಡಾಪಟುಗಳಿಗೆ ಹಾರೈಸಿದರು.
ಕ್ರೀಡಾಕೂಟದಲ್ಲಿ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ|| ನವ್ಯಬಾಬು, ಉಪವಿಭಾಗಾಧಿಕಾರಿ ಶಿವಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ರುದ್ರಪ್ಪ, ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯದ ಶಿವಕುಮಾರ್ ಸೇರಿದಂತೆ ಕ್ರೀಡಾಪಟುಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ