ಸ್ಪರ್ಧೆ ಮುಖ್ಯವೆ ಹೊರತು- ಸೋಲು ಗೆಲುವು ಅಲ್ಲವೇ ಅಲ್ಲ..!

ತುಮಕೂರು
    ಸ್ಪರ್ಧೆಗಳಲ್ಲಿ ಸೋಲು ಗೆಲುವು ಎಂಬದು ಸರ್ವೇ ಸಾಮಾನ್ಯ. ಆದರೆ ಇಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ ಎಂದು ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಡೆಪ್ಯುಟಿ ಡೈರೆಕ್ಟರ್ ಜನರಲ್ ಏರ್ ಕಮಾಂಡರ್ ಲಲಿತ್‍ಕುಮಾರ್ ಜೈನ್ ತಿಳಿಸಿದರು.
    ಅವರು ನಗರದ ವಿಶ್ವವಿದ್ಯಾಲಯದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಎನ್‍ಸಿಸಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ವತಿಯಿಂದ ತುಮಕೂರಿನಲ್ಲಿ ಆಯೋಜಿಸಲಾಗಿದ್ದ ಅಂತರ್ ಗ್ರೂಪ್ ಬಾಲಕಿಯರ ಥಲ್ ಸೈನಿಕ್ ಶಿಬಿರ್ ಬಹುಮಾನ ವಿತರಣಾ ಸಮಾರಂಭದಲ್ಲಿ ಎನ್‍ಸಿಸಿ ವಿದ್ಯಾರ್ಥಿಗಳಿಗೆ ಬೆಳ್ಳಿ ಹಾಗೂ ಬಂಗಾರದ ಪದಕ ಸೇರಿದಂತೆ ಬಹುಮಾನಗಳನ್ನು ವಿತರಣೆ ಮಾಡಿ ಮಾತನಾಡಿದರು.
    ಯಾವುದೇ ಸ್ಪರ್ಧೆಯಲ್ಲಿ ಸೋಲುತ್ತೇವೊ, ಗೆಲ್ಲುತ್ತೇವೊ ಎಂಬುದಕ್ಕಿಂತ ಆ ಸ್ಪರ್ಧೆಯಲ್ಲಿ ಭಾಗವಹಿಸುವುದು ಬಹಳ ಮುಖ್ಯ. ಗೆಲುವು ಒಬ್ಬರಿಗೆ ಬರುತ್ತೆ, ಇನ್ನೊಬ್ಬರಿಗೆ ಬರುವುದಿಲ್ಲ. ಆದರೆ ಸ್ಪರ್ಧೆಯಲ್ಲಿ ಸಿಗುವ ಅನುಭವ, ತಿಳಿವಳಿಕೆ ಬಹಳ ಪ್ರಮುಖವಾಗುತ್ತದೆ.  ಎನ್‍ಸಿಸಿಗೆ  ಸೇರುವ ಅಭ್ಯರ್ಥಿಗಳಿಗೆ ದೇಶ ಸೇವೆ, ಸಮಾಜ ಸೇವೆ, ರಕ್ಷಣೆ ಸೇರಿದಂತೆ ಮುಂತಾದವುಗಳ ಬಗ್ಗೆ ತರಬೇತಿ ನೀಡುವುದರ ಜೊತೆಗೆ ಅವರಿಗೆ ಆತ್ಮಸ್ಥೈರ್ಯ ತುಂಬಲಾಗುತ್ತದೆ. ಮನೆಯ ಜವಾಬ್ದಾರಿಯನ್ನು ಹೆಗಲ ಮೇಲೆ ಹಾಕಿಕೊಂಡು ಮುನ್ನಡೆಸುವ ಮಹಿಳೆಯರು ಇಂದು ದೇಶ ಕಾಯುವ ಕೆಲಸದಲ್ಲಿ ಇದ್ದಾರೆ. ಇಂದು ಮಹಿಳೆ ಏನನ್ನಾದರೂ ಸಾಧಿಸಬಲ್ಲ ಶಕ್ತಿಯನ್ನು ಹೊಂದಿದ್ದಾಳೆ ಎಂದರು.
     ಎನ್‍ಸಿಸಿಗೆ ಸೇರುವವರ ದೃಷ್ಟಿಕೋನ ತರಬೇತಿ ಪಡೆಯುತ್ತಾ ಬದಲಾಗುತ್ತದೆ. ಅದೇ ರೀತಿ ಸಮಾಜದಲ್ಲಿ ಬದಲಾವಣೆ ಆಗಬೇಕಿದೆ. ಕೇವಲ ಒಬ್ಬಿಬ್ಬರು ಸೇರಿ ಬದಲಾವಣೆ ಮಾಡುತ್ತೇವೆ ಎನ್ನುವುದರ ಬದಲಾಗಿ ಒಬ್ಬರಿಗೊಬ್ಬರು ಕೈ ಜೋಡಿಸಿದರೆ ಸಮಾಜ ಬದಲಾಗುತ್ತದೆ ಎಂಬುದನ್ನು ಸಣ್ಣ ಕಥೆಯ ಉದಾಹರಣೆ  ಮೂಲಕ ತಿಳಿಸಿದರು.
      ಸಮಾರಂಭದಲ್ಲಿ ಮಾತನಾಡಿದ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ದೇಶ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಎನ್‍ಸಿಸಿ ಸೇರುವ  ವಿದ್ಯಾರ್ಥಿಗಳು ನಿರ್ದಿಷ್ಠ ಗುರಿಯನ್ನು ಇಟ್ಟುಕೊಂಡಾಗ ಮಾತ್ರ ಅದು ಸಾಧ್ಯವಾಗುತ್ತದೆ. ಇಂದು ಮಹಿಳೆಯರು ಕೂಡ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಮೆಚ್ಚುವಂತಹದ್ದು, ಜೊತೆಗೆ ನಮ್ಮ ದೇಶದ ಜನಸಂಖ್ಯೆಯಲ್ಲಿ ಶೇ. 6.5 ಮಿಲಿಯನ್‍ನಷ್ಟು ಯುವ ಪೀಳಿಗೆ ಇದೆ. ಯುವ ಪೀಳಿಗೆಯು ಸೇನೆಯಂತೆ ಸೇವೆ ಮಾಡಿದರೆ ನಮ್ಮ ದೇಶ ವಿಶ್ವಗುರು ಆಗುವುದರಲ್ಲಿ ಸಂಶಯವಿಲ್ಲ ಎಂದರಲ್ಲದೆ, ಎನ್‍ಸಿಸಿಗೆ ಸಂಬಂಧಿಸಿದಂತೆ ಶಾಸಕರ ಸಹಾಯ ಹಸ್ತ ಎಂದಿಗೂ ಇರುತ್ತದೆ ಎಂದು ತಿಳಿಸಿದರು.
      ಆಗಸ್ಟ್ 12ರಿಂದ ತುಮಕೂರಿನಲ್ಲಿ ನಡೆಯುತ್ತಿರುವ ಥಲ್ ಸೈನಿಕ್ ಶಿಬಿರದಲ್ಲಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪದಕಗಳನ್ನು ಹಾಗೂ ಬಹುಮಾನವನ್ನು ವಿತರಣೆ ಮಾಡಲಾಯಿತು. ಹೆಚ್ಚಿನ ಅಂಕಗಳಿಂದ ಬೆಂಗಳೂರು ಎ ತಂಡ ಪ್ರಥಮ ಬಹುಮಾನವನ್ನು ಮುಡಿಗೇರಿಸಿಕೊಂಡರೆ, ಮಂಗಳೂರು ತಂಡ ರನ್ನರ್ ಆಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಅಲ್ಲದೆ, ಬೆಸ್ಟ್ ಕೇಡೆಟ್  ಪ್ರಶಸ್ತಿಯನ್ನು ಮಾನಸಿ ಮತ್ತು ಅಸ್ಮಿತಾ ಎಂಬ ವಿದ್ಯಾರ್ಥಿಗಳು ಪಡೆದರು.ಕಾರ್ಯಕ್ರಮದಲ್ಲಿ ಶಾಲಿನಿ ಜೈನ್, ಕ್ಯಾಂಪ್ ಕಮಾಂಡೆಂಟ್ ಶೈಲೇಶ್ ಶರ್ಮಾ, ಮುಖ್ಯ ತರಬೇತಿ ಅಧಿಕಾರಿ ರಾಜೇಶ್ ವರ್ಮಾ ಸೇರಿದಂತೆ ವಿವಿಧ ಬೆಟಾಲಿಯನ್‍ಗಳ ಅಧಿಕಾರಿಗಳು, ಪಿಐ ಸಿಬ್ಬಂದಿ, ಎಎನ್‍ಓ ಅಧಿಕಾರಿಗಳು ಹಾಗೂ ಎನ್‍ಸಿಸಿ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link