ಸೋಲು ಗೆಲುವುಗಿಂತ ಭಾಗವಹಿಸುವುದು ಮುಖ್ಯ :ವೀರೇಶಾನಂದ ಸರಸ್ವತಿ ಸ್ವಾಮೀಜಿ

ತುಮಕೂರು   ಯಾವುದೇ ಆಟದಲ್ಲಿ ಸೋಲು ಗೆಲುವು ಎಂಬುದನ್ನು ಬದಿಗಿಟ್ಟರೆ ಮೊದಲು ಆಟದಲ್ಲಿ ಭಾಗವಹಿಸುವಿಕೆ ಮುಖ್ಯ ಎಂದು ಶ್ರೀ ರಾಮಕೃಷ್ಣಾಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮಿಗಳು ನುಡಿದರು,

  ನಗರದ ಹನುಮಂತಪುರದ ಕೋಲ್ಹಾಪುರದಮ್ಮ ಸಮುದಾಯ ಭವನದಲ್ಲಿ ನ್ಯೂ ತುಮಕೂರು ಡಿಸ್ಟ್ರಿಕ್ಟ್ ಚೆಸ್ ಅಕಾಡೆಮಿಯಿಂದ ದ ಯುನೈಟೆಡ್ ಕರ್ನಾಟಕ ಚೆಸ್ ಅಕಾಡೆಮಿ ಸಹಭಾಗಿತ್ವದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.

   ರಾಜ್ಯಮಟ್ಟದಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತುಮಕೂರಿನಲ್ಲಿ ಚೆಸ್ ಅಕಾಡೆಮಿ ಪ್ರಾರಂಭವಾಗಿರುವುದು ಸಂತಸದ ವಿಷಯ. ಚೆಸ್ ಎಂಬುದು ಭಾರತೀಯ ಪುರಾತಕ ಒಳಾಂಗಣ ಕ್ರೀಡೆಯಾಗಿದೆ. ರಾಜ ಮಹಾರಾಜರು ತಮ್ಮ ಬುದ್ದಿಗೆ ಚುರುಕು ನೀಡುವ ನಿಟ್ಟಿನಲ್ಲಿ ಚದರುಂಗ ಆಟ ಆಡುತ್ತಿದ್ದರು. ಅಂತಹ ಕ್ರೀಡೆಯನ್ನು ಭಾರತವು ಇಡೀ ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದೆ ಎಂದರು.

   ಭಾರತೀಯ ಚೆಸ್ ಕ್ರೀಡಾಪಟು ವಿಶ್ವನಾಥ್ ಆನಂದ್ ಭಾರತಕ್ಕೆ ರಾಹುಲ್ ದ್ರಾವಿಡ್‍ನಂತಹ ನಾಯಕರು ಚೆಸ್‍ಗೆ ಬೇಕಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅಂದರೆ ರಾಹುಲ್ ದ್ರಾವಿಡ್ ಭಾರತ ತಂಡದ ನಾಯಕನಾಗಿ ದೃಢ ನಿರ್ಧಾರ ತೆಗೆದುಕೊಂಡು ಗೆಲುವಿನ ದಡ ಸೇರಿಸಿದಂತೆ ಚೆಸ್‍ಗೂ ಅಂತಹ ನಾಯಕರ ಅವಶ್ಯಕವಿದೆ ಎಂದು ವೀರೇಶಾನಂದ ಶ್ರೀಗಳು ತಿಳಿಸಿದರು.

   ಚೆಸ್ ಪಂದ್ಯಾವಳಿ ಮನಸ್ಸಿಗೆ ಕಸರತ್ತು ನೀಡುತ್ತದೆ. ಶರೀರವನ್ನು ಅವಲಂಬಿಸಿ ಆಡುವ ಕ್ರೀಡೆಗಳ ನಡುವೆ ಮನಸ್ಸಿನ ಕಸರತ್ತನ್ನು ಅವಲಂಬಿಸಿ ಆಡುವ ಕ್ರೀಡೆಗಳಲ್ಲಿ ಚೆಸ್‍ಗೆ ಪ್ರಾಮುಖ್ಯತೆ ಇದೆ. ಶರೀರದ ಪರಿಶ್ರಮಕ್ಕಿಂತ ಮನಸ್ಸಿನ ಪರಿಶ್ರಮಕ್ಕೆ ಹೆಚ್ಚಿನ ಆಲೋಚನಾ ಶಕ್ತಿಯಿದೆ. ಶಾರೀರಕವಾಗಿ ಕೆಲಸ ಮಾಡುವವರನ್ನು ನಿರ್ವಹಿಸುವವನು, ನಿಯಂತ್ರಿಸುವವನು ಮಾನಸಿಕವಾಗಿ ಯೋಜಿಸುವವನಿರುತ್ತಾನೆ. ಯಾವುದೇ ಮಕ್ಕಳು ಚೆಸ್‍ನಂತಹ ಕ್ರೀಡೆಯಲ್ಲಿ ಭಾಗವಹಿಸುತ್ತಾರೆ ಎಂದರೆ ಅವರು ಶೈಕ್ಷಣಿಕವಾಗಿಯೂ ಚರುಕಾಗಿರುತ್ತಾರೆ. ಓದಿನಲ್ಲಿ ಏಕಾಗ್ರತೆ ಸಿಗುತ್ತದೆ ಎಂದರು.

   ಆಟದಲ್ಲಿ ಫಲಿತಾಂಶದ ಬಗ್ಗೆ ತಲೆಕೆಡೆಸಿಕೊಳ್ಳದೆ ಭಾಗವಹಿಸುವುದು ಪ್ರತಿಸ್ಪಂಧನೆ. ಆಸ್ಟ್ರೇಲಿಯಾದ ಥಾಮಸ್ ಮಸ್ಟರ್ಡ್ ಎಂಬ ಲಾಂಗ್ ಟೆನ್ನಿಸ್ ಚಾಂಪಿಯನ್ ರಸ್ತೆ ಅಪಘಾತದಲ್ಲಿ ಮಾರಣಾಂತಿಕವಾಗಿ ಗಾಯಗಳಾಗಿ ಆಸ್ಪತ್ರೆಪಾಲಾದ. ವಿಶ್ವವಿಖ್ಯಾತ ಶಸ್ತ್ರಚಿಕಿತ್ಸಕರು ಆಪರೇಷನ್ ಮಾಡಿ ಆತನನ್ನು ಬದುಕಿಸುತ್ತಾರೆ. ಆದರೆ ಜೀವನದಲ್ಲಿ ಆಟ ಆಡಲು ಆಗುವುದಿಲ್ಲ ಎಂಬುದಾಗಿ ಅವರು ಮಾತನಾಡಿಕೊಳ್ಳುತ್ತಾರೆ. ಆ ಮಾತುಗಳನ್ನು ಕೇಳಿಸಿಕೊಂಡಿದ್ದ ಥಾಮಸ್ 2 ತಿಂಗಳ ನಂತರ ಮನೆಗೆ ಬಂದು ಮುಷ್ಠಿ ಹಿಡಿದು ಯೋಚನೆ ಮಾಡುತ್ತಾನೆ.

   ಇದನ್ನೇ ಛಲವಾಗಿಟ್ಟುಕೊಂಡು 6 ತಿಂಗಳಲ್ಲಿ ನಡೆಯಲು ಪ್ರಾರಂಭ ಮಾಡಿದ. 2 ವರ್ಷದಲ್ಲಿ ಆಟ ಆಡಲು ಪ್ರಾರಂಭಿಸಿದ. 5 ವರ್ಷದಲ್ಲಿ ಮತ್ತೆ ಚಾಂಪಿಯನ್ ಆಗಿ ಗೆದ್ದು ಬಂದ. ಆಗ ಅವರನ್ನು ಮಾತನಾಡಿಸಿದ ಮಾಧ್ಯಮದವರಿಗೆ ಈ ಹಿಂದೆ ವೈದ್ಯರು ಹೇಳಿದ್ದ ಮಾತುಗಳಿಗೆ ಸೆಡ್ಡು ಹೊಡೆದು ನಿಂತಿದ್ದೇನೆ. ನನಗೆ ವೈದ್ಯರ ಮಾತುಗಳೇ ನನ್ನ ಈ ಸ್ಥಾನಕ್ಕೆ ಕರೆದೊಯ್ದಿದೆ ಎಂದು ಹೇಳುತ್ತಾನೆ. ಹೀಗೆ ಪ್ರತಿಯೊಬ್ಬರಿಗೂ ಛಲ ಇದ್ದರೆ ಏನನ್ನಾದರೂ ಸಾಧನೆ ಮಾಡಬಹುದು ಎಂಬ ಸಂದೇಶವನ್ನು ಚಿಕ್ಕ ಕಥೆಯ ಮೂಲಕ ತಿಳಿಸಿದರು.

    ಶ್ರೀದೇವಿ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ನಗರದಲ್ಲಿ ಉತ್ತಮವಾದ ವೇದಿಕೆ ಸೃಷ್ಟಿ ಮಾಡಲಾಗಿದೆ. ತುಮಕೂರಿನಲ್ಲಿ ಹೊಸದಾದ ಚೆಸ್ ಆರ್ಗನೈಸೇಷನ್ ಪ್ರಾರಂಭ ಮಾಡಲಾಗಿದೆ. ಇದು ತುಮಕೂರು ಭಾಗದ ಮಕ್ಕಳಿಗೆ ಒಂದು ಭಾಗ್ಯವೇ ಸರಿ. ಚೆಸ್ ಆಟ ಭಾರತದ ಪ್ರಾಚೀನ ಕಾಲದಿಂದಲೂ ಬಂದ ಕ್ರೀಡೆಯಾಗಿದೆ. ಕಾಲ ಕಾಲಕ್ಕೆ ಇದು ಬದಲಾವಣೆಯಾದರೂ ಈ ಶತಮಾನದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದಿದೆ ಎಂದು ತಿಳಿಸಿದರು.

   ವಿದ್ಯಾನಿಕೇತನ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಜಯರಾಮರಾವ್ ಮಾತನಾಡಿ, ಚದುರಂಗ ಇತ್ತೀಚೆಗೆ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ತುಮಕೂರಿನಲ್ಲಿ ಚೆಸ್ ಅಕಾಡೆಮಿ ಪ್ರಾರಂಭ ಮಾಡಿರುವುದು ಸಂತಸದ ವಿಷಯ. ಸೋಲು ಗೆಲುವು ಎಂಬುದು ಮುಖ್ಯವಲ್ಲ ಎಂದು ಶ್ರೀಗಳು ಹೇಳಿದರು. ಆದರೆ ಕಲಾಂ ಹೇಳಿದಂತೆ ಇಂದು ಸೋತವನು ನಾಳೆ ಗೆಲ್ಲಲು ಪ್ರಯತ್ನಿಸುತ್ತಾರೆ. ಸೋಲೆ ಗೆಲುವಿನ ಸೋಪಾನ ಎಂಬಂತೆ ಗೆಲುವಿಗೆ ಪಾಠವಾಗುತ್ತದೆ ಎಂದು ತಿಳಿಸಿದರು.

   ವಿದ್ಯಾವಾಹಿನಿ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್ ಮಾತನಾಡಿ, ತುಮಕೂರಿನಲ್ಲಿ ಮೊದಲನೆ ಹೆಜ್ಜೆಯಾಗಿ ಚೆಸ್ ಅಕಾಡೆಮಿ ಪಂದ್ಯವನ್ನು ಆಯೋಜಿಸಿದ್ದರೂ ಇಲ್ಲಿಂದ ಮುಂದಿನ ದಿನಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಹೊರಬರಲಿ ಎಂದು ಆಶಿಸಿದರು.ಸೇಂಟ್ ಮೇರಿಸ್ ಶಾಲೆಯ ಮುಖ್ಯೋಪಾಧ್ಯಾಯಿನಿ ಮೇರಿ ಕ್ರಿಸ್ಟೀನ ಮಾತನಾಡಿ, ದೈನಂದಿನ ಜೀವನದಲ್ಲಿ ಚದುರಂಗ ಆಟ ಆಡುವುದರಿಂದ ಕಲಿಕೆ, ಆಲೋಚನಾ ಶಕ್ತಿ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಬರುತ್ತದೆ. ಚೆಸ್ ಆಡುವ ಮಕ್ಕಳಲ್ಲಿ ಮುಂದಾಲೋಚನೆ ಇರುತ್ತದೆ. ನಾವು ಏನು ಮಾಡಬೇಕು ಏನು ಮಾಡಬಾರದು ಎಂಬ ಯೋಚನೆಗಳನ್ನು ಮಾಡುತ್ತಾರೆ. ಹೇಗೆ ಜೀವನದಲ್ಲಿ ಬರುವ ತಡಕುಗಳನ್ನು ಎದುರಿಸಬೇಕು ಎಂಬುದನ್ನು ಕಲಿಯಬಹುದಾಗಿದೆ ಎಂದು ತಿಳಿಸಿದರು.

    ಇದೇ ಸಂದರ್ಭದಲ್ಲಿ ನ್ಯೂ ತುಮಕೂರು ಡಿಸ್ಟ್ರಿಕ್ಟ್ ಚೆಸ್ ಅಕಾಡೆಮಿಯನ್ನು ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು ಉದ್ಘಾಟಿಸಿದರು. ಗ್ರ್ಯಾಂಡ್ ಚೆಸ್ ಅಕಾಡೆಮಿಯನ್ನು ಮೇರಿ ಕ್ರಿಸ್ಟೀನಾ ಅವರು ಉದ್ಘಾಟಿಸಿದರು. ಮುಂದಿನ ಜುಲೈ ತಿಂಗಳಲ್ಲಿ ಆಯೋಜಿಸಿದ ಚೆಸ್ ಪಂದ್ಯಾವಳಿಯ ಫಲಕವನ್ನು ಉದ್ಘಾಟನೆ ಮಾಡಲಾಯಿತು. ಈ ಪಂದ್ಯದಲ್ಲಿ ಭಾಗವಹಿಸಲು ಈಗಿನಿಂದಲೇ ನೋಂದಣಿ ಮಾಡಿಸಿಕೊಳ್ಳಲು ತಿಳಿಸಿದರು. ಸ್ನೇಹ ಮನೋವಿಕಾಸ ಕೇಂದ್ರದ ಮನೋವೈದ್ಯ ಲೋಕೇಶ್‍ಬಾಬು ಚದುರಂಗದ ಕಾಲಾಳುಗಳನ್ನು ಮುಂದಕ್ಕೆ ಸರಿಸುವ ಮೂಲಕ ಚೆಸ್ ಪಂದ್ಯಕ್ಕೆ ಚಾಲನೆ ನೀಡಿದರು.

    ಕಾರ್ಯಕ್ರಮದಲ್ಲಿ ಎನ್‍ಟಿಡಿಸಿಎ ಅಧ್ಯಕ್ಷ, ಪ್ರಜಾಪ್ರಗತಿ ಸಹ ಸಂಪಾದಕ ಟಿ.ಎನ್.ಮಧುಕರ್, ಯುಕೆಸಿಎ ಪ್ರಧಾನ ಕಾರ್ಯದರ್ಶಿ ಮಂಜುನಾಥ್‍ಜೈನ್, ಕಾರ್ಯಕ್ರಮ ಆಯೋಜಕಿ ಹಾಗೂ ಚದುರಂಗ ತರಬೇತುಗಾರ್ತಿ ಮಾಧುರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವಾಗತ, ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಡಾ.ಪದ್ಮಾಕ್ಷಿ ಲೋಕೇಶ್ ನೆರವೇರಿಸಿಕೊಟ್ಟರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap