ಅಂಬೇಡ್ಕರ್‍ಗೆ ಭಾರತ ರತ್ನ ನೀಡದ ಪಕ್ಷಕ್ಕೆ ಸಂವಿಧಾನದ ಬಗ್ಗೆ ಮಾತನಾಡುವ ಹಕ್ಕಿಲ್ಲ..!

ಶಿರಾ

     ಸರ್ವರಿಗೂ ಸಮಪಾಲು, ಸಮಬಾಳು ಎಂಬಂತಹ ಸಂವಿಧಾನ ರಚಿಸಿ ದೀನ ದಲಿತರು ಹಾಗೂ ಅಲ್ಪಸಂಖ್ಯಾತರ ಬಾಳಿಗೆ ಜ್ಯೋತಿಯಾಗಿದ್ದ ಅಂಬೇಡ್ಕರ್ ಅವರು ಜೀವಂತವಿದ್ದಾಗಿನಿಂದಲೂ ದೇಶದಲ್ಲಿ ಕಾಂಗ್ರೆಸ್ ಪಕ್ಷ 56 ವರ್ಷಗಳವರೆಗೂ ದೇಶವನ್ನಾಳಿದ್ದು ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡದ ಕಾಂಗ್ರೆಸ್ ಪಕ್ಷಕ್ಕೆ ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕೂಡ ಇಲ್ಲ ಎಂದು ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಹೇಳಿದರು.

    ಬಿ.ಜೆ.ಪಿ. ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‍ಗೌಡ ಅವರ ಜೊತೆಯಲ್ಲಿ ಚುನಾವಣಾ ಕಚೆರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದ ನಂತರ ಸೇವಾ ಸದನದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

   ಶಿರಾ ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಜುಂಜಪ್ಪನ ಆಶೀರ್ವಾದ ಪಡೆದು ಡಾ.ಸಿ.ಎಂ.ರಾಜೇಶ್‍ಗೌಡ ಬಿ.ಜೆ.ಪಿ. ಪಕ್ಷದ ಪರವಾಗಿ ನಾಮಪತ್ರ ಸಲ್ಲಿಸಿದ್ದಾರೆ. ದೇಶ ಮೆಚ್ಚುವ ಆಡಳಿತ ನೀಡಿದ ನರೇಂದ್ರ ಮೋದಿಯವರ ಕೈ ಬಲಪಡಿಸುವ ಸಲುವಾಗಿ ರಾಜೇಶ್‍ಗೌಡ ಈ ಕ್ಷೇತ್ರದ ಶಾಸಕರಾಗಿ ಹೊರ ಹೊಮ್ಮುತ್ತಾರೆ. ಶಿರಾ ಹಾಗೂ ಆರ್.ಆರ್.ನಗರ ಈ ಎರಡೂ ಕ್ಷೇತ್ರಗಳಲ್ಲಿ ಬಿ.ಜೆ.ಪಿ. ಜಯಭೇರಿ ಬಾರಿಸುತ್ತದೆ ಎಂದು ಕಾರಜೋಳ ತಿಳಿಸಿದರು.

    ಮಂಗಳವಾರ ಶಿರಾದಲ್ಲಿ ಕಾಂಗ್ರೆಸ್ ಸಭೆಯೊಂದರಲ್ಲಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಬಿ.ಜೆ.ಪಿ. ಪಕ್ಷವನ್ನು ಸಂವಿಧಾನ ವಿರೋಧಿ ಎಂದು ಟೀಕೆ ಮಾಡಿದ್ದಾರೆ. 70 ವರ್ಷಗಳ ಕಾಲ ಅಂಬೇಡ್ಕರ್ ಹೆಸರೇಳಿಕೊಂಡು ಬಂದು ಪ.ಜಾತಿ ಹಾಗೂ ಪ.ಪಂಗಡಗಳ ಮತ ಪಡೆದ ಕಾಂಗ್ರೆಸ್ ದಲಿತರ ಜೀವನವನ್ನು ಹಸನುಗೊಳಿಸಲೇ ಇಲ್ಲ. ಬಿಜೆಪಿ ಹಾಗೂ ಕಮ್ಯುನಿಸ್ಟರ ಬೆಂಬಲದೊಂದಿಗೆ ಜನತಾದಳ ವಿ.ಪಿ.ಸಿಂಗ್ ನೇತೃತ್ವದಲ್ಲಿ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಿದಾಗ ಅಂಬೇಡ್ಕರ್‍ಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಲು ಮುಂದಾಯಿತು. ಇಷ್ಟು ವರ್ಷ ಕಾಂಗ್ರೆಸ್ ಅಂಬೇಡ್ಕರ್‍ಗೆ ಸಲ್ಲಿಸಿದ ಗೌರವವೇನು ಎಂದು ಗೋವಿಂದ ಕಾರಜೋಳ ಪರಮೇಶ್ವರ್ ಅವರ ಹೇಳಿಕೆಗೆ ಕಿಡಿ ಕಾರಿದರು.

    ಬಾಬು ಜಗಜೀವನರಾಮ್ ಅವರನ್ನು ಪ್ರಧಾನ ಮಂತ್ರಿಗಳನ್ನಾಗಿ ಮಾಡ ಹೊರಟಾಗ ಇದೇ ಕಾಂಗ್ರೆಸ್ ಪಕ್ಷ ಮೋಸ ಮಾಡಿ ಅವರನ್ನು ಪರಾಜಯಗೊಳಿಸಿದ್ದು ಇತಿಹಾಸವೇ ಆಗಿದೆ. ಇಂತಹ ಹಲವು ಪ್ರಶ್ನೆಗಳಿಗೆ ಕಾಂಗ್ರೆಸ್ ಉತ್ತರ ಕೊಡಬೇಕಾಗಿದೆ. ಸಂವಿಧಾನವೆಂಬುದು ಭಾರತದ ಪವಿತ್ರ ಗ್ರಂಥವೆಂದು ಕಾಂಗ್ರೆಸ್ ಎಲ್ಲೂ ಕೂಡ ಹೇಳಿಕೊಳ್ಳಲಿಲ್ಲ ಆದರೆ ಮೋದಿ ಅವರು ಅದನ್ನು ಪವಿತ್ರ ಎಂದು ಭಾವಿಸಿದ್ದಾರೆ. ತಮ್ಮಂತಹ ಒಬ್ಬ ಸಾಮಾನ್ಯ ವ್ಯಕ್ತಿ ಪ್ರಧಾನಿಯಾಗಲು ಅಂಬೇಡ್ಕರ್ ಸಂವಿಧಾನ ಕಾರಣ ಎಂದು ಮೋದಿ ಒಪ್ಪಿಕೊಂಡಿದ್ದಾರೆ ಎಂದರು.
ಬಿ.ಜೆ.ಪಿ. ಪಕ್ಷವು ದೇಶದ ಸಂವಿಧಾನವನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ. ಸೂರ್ಯ-ಚಂದ್ರರು ಇರುವವರೆಗೂ ಈ ಸಂವಿಧಾನ ಹಾಗೆಯೇ ಇರುತ್ತದೆ.

     ಅಸೃಷ್ಯತೆಯು ಎಲ್ಲಿಯತನಕ ಜೀವಂತವಾಗಿರುತ್ತದೆಯೋ ಅಲ್ಲಿಯವರೆಗೂ ಮೀಸಲಾತಿ ಬದಲಾವಣೆಯಾಗುವುದಿಲ್ಲ. ಕೇಂದ್ರ ಸರ್ಕಾರದ ಅಭಿವೃದ್ಧಿ ಪರ ಯೋಜನೆಗಳನ್ನು ಮೆಚ್ಚಿ ಶಿರಾ ಹಾಗೂ ಆರ್.ಆರ್.ನಗರ ಈ ಎರಡೂ ಕ್ಷೇತ್ರಗಳಲ್ಲಿ ಬಿ.ಜೆ.ಪಿ. ಜಯಗಳಿಸುತ್ತದೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿ.ಜೆ.ಪಿ.ಯಿಂದ ಚಿದಾನಂದ ಎಂ.ಗೌಡ ಅಭ್ಯರ್ಥಿಯಾಗಿದ್ದು ಅವರಿಗೆ ಮತ ನೀಡುವಂತೆ ಪದವೀಧರ ಬಂಧುಗಳಿಗೆ ಕಾರಜೋಳ ಮನವಿ ಮಾಡಿದರು.

    ಸಂಸದ ನಾರಾಯಣಸ್ವಾಮಿ, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸುರೇಶ್‍ಗೌಡ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ಎಸ್.ಸಿ. ಮೋರ್ಚಾ ಅಧ್ಯಕ್ಷ ಎನ್.ಹುಚ್ಚಯ್ಯ, ನಗರ ಘಟಕದ ಅಧ್ಯಕ್ಷ ವಿಜಯರಾಜ್, ಲಕ್ಷ್ಮೀನಾರಾಯಣ್, ಹನುಮಂತನಾಯ್ಕ, ಕಗ್ಗಲಡು ರಾಜಶೇಖರ್, ಸುಧಾಕರಗೌಡ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap