ದುಬಾರಿ ಟಿಕೆಟ್ ದರ : ವಿಮಾನ ಸಂಸ್ಥೆ ವಿರುದ್ಧ ಪ್ರಯಾಣಿಕರ ಆಕ್ರೋಶ

ಬೆಂಗಳೂರು:
    ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ಮರಳಿಕರೆತರಲು ಪ್ರಯಾಣಿಕರಿಂದ ದುಬಾರಿ ವಿಮಾನ ಪ್ರಯಾಣದ ದರ ಭಾರಿ ಬರೆ ಹಾಕಿದೆ. ಅದರ ಜೊತೆಗೆ ಕ್ವಾರಂಟೈನ್‌ ಶುಲ್ಕ ಭರಿಸಬೇಕಿರುವುದು ಪ್ರಯಾಣಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

    ಬೆಂಗಳೂರಿನಿಂದ ಕೌಲಾಲಂಪುರಕ್ಕೆ ತೆರಳುವಾಗ ಸುಮಾರು 6 ಸಾವಿರ ರೂ. ದಿಂದ 10 ಸಾವಿರ ರೂ. ಟಿಕೆಟ್‌ ದರ ಇತ್ತು. ಇದೀಗ ವಾಪಸ್‌ ಬರಲು ಏರ್‌ ಇಂಡಿಯಾ ಸಂಸ್ಥೆಯು 33 ಸಾವಿರ ರೂ. ಟಿಕೆಟ್‌ ದರ ವಿಧಿಸಿದೆ. ನಾಲ್ಕು ತಾಸಿನ ಪ್ರಯಾಣಕ್ಕೆ ಇಷ್ಟು ಪ್ರಮಾಣದ ಶುಲ್ಕ ವಿಧಿಸಿರುವ ಬಗ್ಗೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕೊಚ್ಚಿಗೆ ಬರುವ ಪ್ರಯಾಣಿಕರಿಗೆ 18 ಸಾವಿರ ರೂ. ಟಿಕೆಟ್‌ ದರ ವಿಧಿಸಲಾಗಿದೆ. ಈ ತಾರತಮ್ಯದ ಬಗ್ಗೆಯೂ ಪ್ರಯಾಣಿಕರು ಆಕ್ಷೇಪಿಸಿದ್ದಾರೆ. 

     ಮಲೇಶಿಯಾದಿಂದ ಬೆಂಗಳೂರಿಗೆ ಬಂದ ವಿದ್ಯಾರ್ಥಿ ಭಾರ್ಗವ್‌ ಈ ಬಗ್ಗೆ ಪ್ರತಿಕ್ರಿಯಿಸಿ ‘‘ವಿಮಾನ ವ್ಯವಸ್ಥೆ ಮಾಡಲು 2 ತಿಂಗಳಿಗೂ ಹೆಚ್ಚು ಕಾಲ ತೆಗೆದುಕೊಳ್ಳಲಾಯಿತು. ಇರುವ ಹಣವೆಲ್ಲ ಖರ್ಚು ಮಾಡಿಕೊಂಡವರಿಂದ ದುಬಾರಿ ಟಿಕೆಟ್‌ ದರ ಪಡೆಯಲಾಗಿದೆ. ಬೆಂಗಳೂರಿಗೆ ಬರುವವರಿಗೆ ಒಂದು ದರವಿದ್ದರೆ, ಕೊಚ್ಚಿಗೆ ಮರಳುವವರಿಗೆ ದರ ಅರ್ಧಕ್ಕರ್ಧ ಕಮ್ಮಿ ಇದೆ. ಈ ತಾರತಮ್ಯ ಏಕೆ ? ನಾವು ಬೆಂಗಳೂರಿಗೆ ಬಂದ ಬಳಿಕ ಹೊಟೇಲ್‌ ಕ್ವಾರಂಟೈನ್‌ನಲ್ಲಿರಬೇಕು. ಅದಕ್ಕೆ ಮತ್ತೆ 14 ದಿನ ಸಾವಿರಾರು ರೂ. ಖರ್ಚು ಮಾಡಬೇಕು,’’ ಎಂದರು.

      ಮಲೇಶಿಯಾದಲ್ಲಿ ಹೆಸರು ನೋಂದಾಯಿಸಿಕೊಂಡಿರುವ ಕನ್ನಡಿಗರ ಪೈಕಿ ಅರ್ಧದಷ್ಟು ಜನರು ಮಾತ್ರ ಬೆಂಗಳೂರಿಗೆ ಮರಳಿದ್ದಾರೆ. ಉಳಿದವರಿಗೆ ವಾಪಸ್‌ ಬರಲು ಅವಕಾಶ ಸಿಕ್ಕಿಲ್ಲ. ಈ ಸಂಬಂಧ ಜಾಲತಾಣಗಳ ಮೂಲಕ ಹೈಕಮಿಷನರ್‌ ಕಚೇರಿಗೆ ಮನವಿ ಮಾಡುತ್ತಿದ್ದಾರೆ.

      ಮಲೇಶಿಯಾದಲ್ಲಿ ಸಿಲುಕಿದ್ದ 60ಕ್ಕೂ ಹೆಚ್ಚು ಕನ್ನಡಿಗರು ಮಂಗಳವಾರ ಸಂಜೆ ವಂದೇ ಭಾರತ್‌ ಮಿಷನ್‌ ಅಡಿ ವ್ಯವಸ್ಥೆ ಮಾಡಲಾಗಿದ್ದ ವಿಮಾನದಲ್ಲಿ ಕೌಲಾಲಂಪುರದಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿದರು. 142 ಪ್ರಯಾಣಿಕರೊಂದಿಗೆ ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್‌ ಆಯಿತು. 60ಕ್ಕೂ ಹೆಚ್ಚು ಪ್ರಯಾಣಿಕರನ್ನು ಇಳಿಸಿ ಗುಜರಾತ್‌ನ ಅಹಮದಾಬಾದ್‌ಗೆ ಪ್ರಯಾಣ ಮುಂದುವರಿಸಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap