ಕೊರೋನಾ ಎಫೆಕ್ಟ್ : ಶೇ.20ರಷ್ಟು ಕಡಿಮೆಯಾದ ಪ್ರಯಾಣಿಕರ ಸಂಖ್ಯೆ

ಬೆಂಗಳೂರು

    ಕರೋನಾ ವೈರಸ್ ನಿಂದ ಐಟಿ-ಬಿಟಿ ಮತ್ತು ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ವಾಹನಗಳಿಗೆ ಭಾರೀ ನಷ್ಟವಾಗುತ್ತಿದ್ದು, ಶೇ 50 ರಷ್ಟು ಚಾಲಕರು ಕೆಲಸವಿಲ್ಲದೇ ಆತಂಕಕ್ಕೆ ಒಳಗಾಗಿದ್ದಾರೆ.ರಾಜ್ಯದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಾಹನಗಳ ಪ್ರಯಾಣಿಕರ ಸಂಖ್ಯೆಯಲ್ಲೂ ಸಹ ಶೇ 15 ರಿಂದ 20 ರಷ್ಟು ಕಡಿಮೆಯಾಗಿದೆ. ಇದರ ಪರಿಣಾಮ ಪ್ರವಾಸೋದ್ಯಮದ ಮೇಲೂ ಆಗಿದ್ದು, ಪ್ರವಾಸಿ ಟ್ಯಾಕ್ಸಿಗಳು ಸಹ ಕೆಲಸವಿಲ್ಲದೇ ತೊಂದರೆಗೀಡಾಗಿವೆ. ಇದರಿಂದ ಸಾರಿಗೆ ನಿಗಮಕ್ಕೂ ಭಾರೀ ನಷ್ಟವಾಗಿದೆ.

   ಹೆಚ್ಚಿನ ಪ್ರಮಾಣದಲ್ಲಿ ಎ.ಸಿ. ಬಸ್ ಗಳ ಖಾಲಿ ಹೊಡೆಯುತ್ತಿವೆ. ಬಿಎಂಟಿಸಿ ಬಸ್ ಗಳಲ್ಲೂ ಪ್ರಯಾಣಿಕರ ಕೊರತೆ ಕಂಡು ಬಂದಿದೆ. ಬಸ್ ಗಳಲ್ಲಿ ಓಡಾಡಲು ಜನತೆ ಹಿಂಜರಿಯುತ್ತಿದ್ದಾರೆ.

   ಕರೋನಾ ವೈರಸ್ ನಿಂದ ಬೆಂಗಳೂರಿನಲ್ಲಿ ಐಟಿ-ಬಿಟಿ, ಕಾಲ್ ಸೆಂಟರ್ ಮತ್ತು ಓಲಾ, ಊಬರ್ ನಲ್ಲಿ 1.82 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿದ್ದು, ಈ ಪೈಕಿ ಶೇ 50 ರಷ್ಟು ಕರೋನಾ ವೈರಸ್ ನಿಂದ ವ್ಯವಹಾರದಲ್ಲಿ ಭಾರೀ ಇಳಿಕೆಯಾಗಿದೆ. ಇದರ ಪರಿಣಾಮ ನಗರದಲ್ಲಿ ಸಂಚಾರಿ ದಟ್ಟಣೆ ಸಹ ಕಡಿಮೆಯಾಗಿದೆ.

   ಅಲ್ಲದೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆಯೂ ಕ್ಷೀಣಿಸಿದ್ದು, ಇದರಿಂದ ಟ್ಯಾಕ್ಸಿ ಮತ್ತು ಓಲಾ, ಊಬರ್ ಟ್ಯಾಕ್ಸಿ ಚಾಲಕರು ಸಂಕಷ್ಟದಲ್ಲಿದ್ದಾರೆ.ಈ ಬೆಳವಣಿಗೆ ನಡುವೆಯೇ ಚಾಲಕರಿಗೆ ಉಂಟಾಗುತ್ತಿರುವ ನಷ್ಟವನ್ನು ಕಟ್ಟಿಕೊಡಲು ಕಂಪನಿಗಳಿಗೆ ಆದೇಶ ಹೊರಡಿಸಬೇಕು ಎಂದು ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಆಗ್ರಹಿಸಿದ್ದಾರೆ.

   ಐಟಿ-ಬಿಟಿ ಕಂಪನಿಯವರು ಮನೆಯಿಂದಲೇ ಕಾರ್ಯನಿರ್ವಹಿಸಿ ಎಂದು ಆದೇಶ ಹೊರಡಿಸಿರುವುದರಿಂದ ಚಾಲಕರು ಬೀದಿಗೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಒಬ್ಬ ಚಾಲಕನಿಗೆ ದಿನಕ್ಕೆ 3 ರಿಂದ 4 ಸಾವಿರ ಮಾತ್ರ ಬಾಡಿಗೆ ಸಿಗುತ್ತಿತ್ತು. ಇದರಲ್ಲಿ ಡೀಸೆಲ್, ಇಎಂಐ, ಇನ್ನಿತರೆ ಖರ್ಚುಗಳು ಕಳೆದು ಕೇವಲ 500 ರಿಂದ 600 ರೂ. ಉಳಿಸುವುದೇ ಕಷ್ಟವಾಗಿತ್ತು. ಈಗ ಅದೂ ಇಲ್ಲದೇ ಚಾಲಕರು ಸಂಕಷ್ಟದಲ್ಲಿದ್ದಾರೆ ಎಂದರು.

    ಹಾಗಾಗಿ ವಾಹನಗಳ ಮೇಲೆ ಸಾಲ ತೆಗೆದುಕೊಂಡಿರುವ ಬ್ಯಾಂಕ್ಗಳಿಗೆ ಸಾಲ ಮರುಪಾವತಿ ಮಾಡಲು ಸಮಯಾವಕಾಶ ಕಲ್ಪಿಸಲು ಆದೇಶ ಹೊರಡಿಸಬೇಕು. ಹಾಗೂ ಐಟಿ-ಬಿಟಿ ಕಂಪನಿಗಳಲ್ಲಿ ವಾಹನಗಳನ್ನು ಸಂಪೂರ್ಣವಾಗಿ ನಿಲ್ಲಿಸಿರುವುದರಿಂದ ಇದರ ನಷ್ಟವನ್ನು ಕಟ್ಟಿಕೊಡಲು ಕಂಪನಿಗಳಿಗೆ ಆದೇಶ ಹೊರಡಿಸಬೇಕು ಎಂದು ಸರ್ಕಾರವನ್ನು ಗಂಡಸಿ ಸದಾನಂದ ಸ್ವಾಮಿ ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

 

Recent Articles

spot_img

Related Stories

Share via
Copy link