ಹೊರ ಜಿಲ್ಲೆಗಳಿಗೆ ಉಚಿತ ಬಸ್: ಪರದಾಡಿದ ಜನರು

ತುಮಕೂರು

    ತುಮಕೂರು ನಗರದಿಂದ ಹೊರ ಜಿಲ್ಲೆಗಳಿಗೆ ತೆರಳಲು ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ತುಮಕೂರು ನಗರದ ಬಸವೇಶ್ವರ ರಸ್ತೆಯಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಸೋಮವಾರ ರಾಜ್ಯದ ವಿವಿಧೆಡೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ಗಳು ಪ್ರಯಾಣಿಕರನ್ನು ಉಚಿತವಾಗಿ ಹೊತ್ತು ಸಾಗಿದವು.

     ಒಂದೆಡೆ ಬಸ್ ಗಳ ಸಂಚಾರ ವಲಸಿಗರಿಗಾಗಿ ಆರಂಭಗೊಂಡರೆ, ಮತ್ತೊಂದೆಡೆ ಸ್ವಂತ ವಾಹನವಿರುವವರು (ಬೈಕ್ ಮತ್ತು ಕಾರು) ಹೊರ ಜಿಲ್ಲೆಗೆ ತಮ್ಮ ಸ್ವಂತ ವಾಹನದಲ್ಲಿ ತೆರಳಲು ತಹಸೀಲ್ದಾರರಿಂದ ಅನುಮತಿಪತ್ರ ಪಡೆದುಕೊಳ್ಳಲು ನಗರದ ಮಿನಿ ವಿಧಾನಸೌಧದಲ್ಲಿರುವ ತುಮಕೂರು ತಾಲ್ಲೂಕು ಕಚೇರಿಯಲ್ಲಿ ಪರದಾಡಿದ ಪ್ರಸಂಗ ಜರುಗಿತು.

     ಸರ್ಕಾರದ ಅನುಮತಿಯಂತೆ ಭಾನುವಾರವೇ ವಲಸಿಗರ ಅನುಕೂಲಕ್ಕಾಗಿ ತುಮಕೂರು ನಗರದಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಗಳ ಉಚಿತ ಸೇವೆಯನ್ನು ಆರಂಭಿಸಿದ್ದು, ಸುಮಾರು 30 ಬಸ್‍ಗಳು ಜನರ ಬೇಡಿಕೆಗನುಗುಣವಾಗಿ ತೆರಳಿದವು. ಅದೇ ಕಾರ್ಯ ಸೋಮವಾರ ಮುಂದುವರೆಯಿತು.

      ಸೋಮವಾರ ನಗರದಿಂದ ಯಾದಗಿರಿ, ಮುದ್ದೆಬಿಹಾಳ, ಶಿವಮೊಗ್ಗ, ರಾಯಚೂರು, ಹಾವೇರಿ, ಬೆಂಗಳೂರು, ಕುಂದಾಪುರದ ಕಡೆಗೆ ಬೇಡಿಕೆಗೆ ಅನುಗುಣವಾಗಿ ತಲಾ ಒಂದೊಂದು ಬಸ್‍ಗಳು ತೆರಳಿದವು. ಶಿವಮೊಗ್ಗಕ್ಕೆ ಮಾತ್ರ ಪ್ರಯಾಣಿಕರು ಅಧಿಕವಾಗಿದ್ದ ಕಾರಣ ಎರಡು ಬಸ್ ಗಳು ತೆರಳಿದವು.

30 ಪ್ರಯಾಣಿಕರಿಗೊಂದು ಬಸ್

    “ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ಒಂದು ಬಸ್ ನಲ್ಲಿ 30 ಪ್ರಯಾಣಿಕರಿಗೆ ಅವಕಾಶ ಕೊಡಲಾಗುತ್ತಿದೆ. ಎರಡು ಸೀಟ್ ಇರುವೆಡೆ ಒಬ್ಬ ಪ್ರಯಾಣಿಕ ಹಾಗೂ ಮೂರು ಸೀಟ್ ಇರುವೆಡೆ ಇಬ್ಬರು ಪ್ರಯಾಣಿಕರು ಕುಳಿತುಕೊಳ್ಳುವಂತೆ ಸೂಚಿಸಲಾಗಿದೆ. ಪ್ರಯಾಣಿಕರ ಸ್ಥಳೀಯ ಐ.ಡಿ. ಇತ್ಯಾದಿ ದಾಖಲಾತಿ ನೋಡಿ ಬಳಿಕ ಅವರನ್ನು ಬಸ್ ಗೆ ಹತ್ತಿಸಿಕೊಳ್ಳಲಾಗುತ್ತಿದೆ.

    ಪ್ರಯಾಣಿಕರ ಪೈಕಿ ಶೇ.50 ರಷ್ಟು ಮಹಿಳೆಯರು ಮತ್ತು ಮಕ್ಕಳು ಇದ್ದಾರೆ. ಸರ್ಕಾರದ ನಿರ್ದೇಶನದಂತೆ ಉಚಿತವಾಗಿ ಕರೆದೊಯ್ಯಲಾಗುತ್ತಿದೆ. ಮಂಗಳವಾರವೂ ಬೆಳಗ್ಗೆ 7-30 ರಿಂದ ಸಂಜೆ 5-30 ರವರೆಗೆ ವಲಸಿಗರಿಗೆ ಬಸ್ ಸೌಲಭ್ಯ ದೊರಕುತ್ತದೆ” ಎಂದು ಕೆ.ಎಸ್.ಆರ್.ಟಿ.ಸಿ. ತುಮಕೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ “ಪ್ರಜಾಪ್ರಗತಿ”ಯೊಡನೆ ಮಾತನಾಡುತ್ತ ತಿಳಿಸಿದರು.

ಊಟದ ಪ್ಯಾಕೆಟ್, ನೀರು

    ದೂರದ ಊರಿಗೆ ಹೊರಟಿರುವ ಈ ಪ್ರಯಾಣಿಕರ ಅನುಕೂಲಕ್ಕಾಗಿ ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರ ಪರವಾಗಿ ಕಾರ್ಯಕರ್ತರು ಪ್ರತಿ ಪ್ರಯಾಣಿಕರಿಗೆ ಎರಡು ಊಟದ ಪ್ಯಾಕೇಟ್ ಗಳು, ಎರಡು ನೀರಿನ ಬಾಟಲುಗಳು, ಎರಡು ಬಿಸ್ಕತ್ ಪ್ಯಾಕೆಟ್ ಗಳನ್ನು ವಿತರಣೆ ಮಾಡಿದರು.

ತಾಲ್ಲೂಕು ಕಚೇರಿಯಲ್ಲಿ ಪರದಾಟ

      ಹೊರ ಜಿಲ್ಲೆಗಳಿಗೆ ತಹಸೀಲ್ದಾರರ ಅನುಮತಿ ಪತ್ರ ಪಡೆದುಕೊಂಡು ಸ್ವಂತ ವಾಹನಗಳಲ್ಲಿ ತೆರಳಬಹುದೆಂಬ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ತುಮಕೂರು ನಗರದ ಮಿನಿವಿಧಾನಸೌಧದಲ್ಲಿರುವ ತುಮಕೂರು ತಾಲ್ಲೂಕು ಕಚೇರಿಯ ಪಡಸಾಲೆ ಮುಂದೆ ಉದ್ದನೆಯ ಸರತಿ ಸಾಲು ಕಂಡುಬಂದಿತು. ಹೊರ ಜಿಲ್ಲೆಗಷ್ಟೇ ಅಲ್ಲದೆ, ಹೊರರಾಜ್ಯಕ್ಕೆ ತೆರಳುವವರೂ ಈ ಸಾಲಿನಲ್ಲಿ ಇದ್ದುದು ಗಮನಾರ್ಹವಾಗಿತ್ತು.

     ಆದರೆ ಇಲ್ಲಿ ತಹಸೀಲ್ದಾರರೂ ಸೇರಿದಂತೆ ಪ್ರಮುಖ ಅಧಿಕಾರಿಗಳು ಇಲ್ಲದಿದ್ದುದರಿಂದ ಸ್ಪಷ್ಟವಾದ ಮಾಹಿತಿ ದೊರಕದೆ, ಸಾರ್ವಜನಿಕರು ಪರದಾಡುವಂತಾಯಿತು.

    ಬೆಳಗ್ಗೆ 11-30 ರ ಹೊತ್ತಿಗೆ ತುಮಕೂರು ಉಪವಿಭಾಗಾಧಿಕಾರಿ ಅಜಯ್ ಸ್ಥಳಕ್ಕೆ ಆಗಮಿಸಿ, ಸಮಸ್ಯೆ ಬಗ್ಗೆ ವಿಚಾರಿಸಿದರು. ತಮ್ಮ ವಾಹನದ ಮೈಕ್ ಮೂಲಕ ಅನುಮತಿ ಪತ್ರಕ್ಕೆ ಇರುವ ನಿಯಮವನ್ನು ಸ್ವತಃ ಉಪವಿಭಾಗಾಧಿಕಾರಿಗಳೇ ಬಿತ್ತರಿಸಿದರು. ಈ ವೇಳೆ ಕೆಲವು ಬಿಹಾರಿ ಮೂಲದ ವ್ಯಕ್ತಿಗಳು ಆಗಮಿಸಿ ವಿವರ ಕೇಳಿದ್ದರಿಂದ, ಸಿಬ್ಬಂದಿಯೊಬ್ಬರಿಂದ ಹಿಂದಿಯಲ್ಲೂ ಮಾಹಿತಿಯನ್ನು ಒದಗಿಸಿದರು.

    ಅಷ್ಟರಲ್ಲಿ ಹಿರಿಯ ನಾಗರಿಕರೊಬ್ಬರು ಬಂದು, ತಮ್ಮ ಮಗಳು ಮಧ್ಯಪ್ರದೇಶದ ಭೂಪಾಲ್ ನಲ್ಲಿ ತಾವು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಲಾಕ್ ಡೌನ್ ನಿಂದಾಗಿ ಏಕಾಂಗಿಯಾಗಿ ಉಳಿಯುವಂತಾಗಿದೆ. ತಾವು ಇಲ್ಲಿಂದ ಅಲ್ಲಿಗೆ ತೆರಳಿ ಮಗಳನ್ನು ಕರೆತರಬೇಕಾಗಿದೆಯೆಂದು ಅಲವತ್ತುಕೊಂಡರು. ಆಗ ಉಪವಿಭಾಗಾಧಿಕಾರಿಗಳು ಉತ್ತರಿಸುತ್ತ, ಹೊರರಾಜ್ಯಕ್ಕೆ ಅನುಮತಿ ಬೇಕಾದಲ್ಲಿ ಸೇವಾಸಿಂಧು ಎಂಬ ವೆಬ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಬಳಿಕ ಆಯಾ ರಾಜ್ಯದವರು ಸಮ್ಮತಿ ನೀಡಿದ ಬಳಿಕ ತೆರಳಬೇಕಾಗುತ್ತದೆ ಎಂದು ಮಾಹಿತಿ ನೀಡಿ ನಿರ್ಗಮಿಸಿದರು.

  ಇತ್ತ ತಾಲ್ಲೂಕು ಕಚೇರಿ ಸಿಬ್ಬಂದಿಗಳು ಸರತಿ ಸಾಲಿನಲ್ಲಿ ನಿಂತವರಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ತೆರಳಿದರೆ ಅಲ್ಲೇ ಅನುಮತಿ ಕೊಡುತ್ತಾರೆಂದು ತಿಳಿಸಿದರು. ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿ ಸ್ವಂತ ವಾಹನದಲ್ಲಿ ತೆರಳುವವರೂ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬಂದು ತಹಸೀಲ್ದಾರರಿಗಾಗಿ ಕಾಯತೊಡಗಿದರು. ಮಧ್ಯಾಹ್ನ 1-30 ಆದರೂ ತಹಸೀಲ್ದಾರರು ಬರದಿದ್ದರಿಂದ ಅವರಿಗಾಗಿ ಕಾಯುತ್ತ ಪರದಾಡುವಂತಾಯಿತು.

ಕಂದಾಯ ಸಿಬ್ಬಂದಿಯಿಂದ  ಪ್ರಯಾಣಿಕನ ಮೇಲೆ ಹಲ್ಲೆ

    ಕಂದಾಯ ಇಲಾಖೆಯ ಸಿಬ್ಬಂದಿಯೊಬ್ಬ ವಲಸೆ ಪ್ರಯಾಣಿಕನೊಬ್ಬನಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ ಅಹಿತಕರ ಪ್ರಸಂಗ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ ಸುಮಾರು 1 ಗಂಟೆಯಲ್ಲಿ ನಡೆಯಿತು. ವಲಸಿಗರಿಗಾಗಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಬಸ್ ಗಳು ಸಿದ್ಧವಿದ್ದವು. ಅವು ಮುಂದಕ್ಕೆ ಹೊರಡಬೇಕಾದರೆ ತಹಸೀಲ್ದಾರರ ಅನುಮತಿ ಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ತುಮಕೂರು ತಾಲ್ಲೂಕು ತಹಸೀಲ್ದಾರ್ ಮೋಹನ್ ಕುಮಾರ್ ಅವರ ಆಗಮನಕ್ಕಾಗಿ ಕಾಯಲಾಗುತ್ತಿತ್ತು. ಆದರೆ ಅವರು ಬೇರೊಂದು ತುರ್ತು ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದುದರಿಂದ ಇತ್ತ ಬರಲು ಆಗಿರಲಿಲ್ಲ.

     ಇದಲ್ಲದೆ ಹೊರಜಿಲ್ಲೆಗೆ ಸ್ವಂತ ವಾಹನದಲ್ಲಿ ತೆರಳುವವರು ಸಹ ಅನುಮತಿಪತ್ರಕ್ಕಾಗಿ ಇಲ್ಲಿಗೇ ಬಂದು ಕಾಯುತ್ತಿದ್ದರು.
ಈ ಮಧ್ಯೆ ಯಾದಗಿರಿ ಕಡೆಗೆ ತೆರಳಬೇಕಿದ್ದ ಯುವಕನೊಬ್ಬ ಯಾರೊಡನೆಯೋ ಫೋನ್ ನಲ್ಲಿ ಸಂಭಾಷಿಸುತ್ತ, “ಇಲ್ಲಿ ಇನ್ನೂ ತಹಸೀಲ್ದಾರ ಬಂದಿಲ್ಲ” ಎಂದು ಹೇಳುತ್ತಿದ್ದರು. ಪಕ್ಕದಲ್ಲೇ ನಡೆದು ಬರುತ್ತಿದ್ದ ತಾಲ್ಲೂಕು ಕಚೇರಿಯ ಸಿಬ್ಬಂದಿಯೊಬ್ಬರು (ಹಸಿರು ಅಂಗಿ ಧರಿಸಿದ್ದ ಇವರನ್ನು ಗ್ರಾಮಲೆಕ್ಕಾಧಿಕಾರಿ ಎಂದು ಗುರುತಿಸಲಾಗಿದೆ) ಇದನ್ನು ಕೇಳಿ, ಆ ಯುವಕನ ಮೇಲೆ ಮುಗಿಬಿದ್ದರು. ಅವಾಚ್ಯವಾಗಿ ಹಾಗೂ ಅನುಚಿತವಾಗಿ ಆ ಯುವಕನನ್ನು ನಿಂದಿಸಿದ್ದಲ್ಲದೆ, ಥಟ್ಟನೆ ಅವನಿಗೆ ಹೊಡೆದೂ ಬಿಟ್ಟರು. “ನೀವೆಲ್ಲ ಸಾಯಬೇಕು” ಎಂದು ಶಾಪವನ್ನೂ ಕೊಟ್ಟರು.

    ತಕ್ಷಣವೇ ಅಲ್ಲಿದ್ದವರು ಬಿಡಿಸಲು ಯತ್ನಿಸಿದರೂ, ತಾಲ್ಲೂಕು ಕಚೇರಿಯ ಆ ನೌಕರ ಏರಿದ ದನಿಯಲ್ಲಿ ಕೋಪಾವೇಶ ಪ್ರದರ್ಶಿಸಿದರು. ಗಾಬರಿಯಾದ ಆ ಯುವಕ ಅಲ್ಲಿಂದ ಎಲ್ಲಿಗೋ ಹೊರಟು ಹೋದ. ಈ ವಿಷಯ ತಿಳಿದು ಅಲ್ಲೇ ಇದ್ದ ಮಾಧ್ಯಮದವರು ಮತ್ತು ಕೆಲವು ಪ್ರಜ್ಞಾವಂತರು ಸ್ಥಳಕ್ಕೆ ಬರುತ್ತಿದ್ದಂತೆ, ತಾಲ್ಲೂಕು ಕಚೇರಿಯ ಆ ವ್ಯಕ್ತಿ ಅಲ್ಲಿಂದ ನಾಪತ್ತೆಯಾಗಿಬಿಟ್ಟರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap