ಹುಳಿಯಾರು
ಪೋಲೀಸ್ ಸರ್ಪಗಾವಲಿಟ್ಟು ಬೀದಿಬದಿ ವ್ಯಾಪಾರಿಗಳನ್ನು ಏಕಾಏಕಿ ತೆರವು ಮಾಡುವ ಮೂಲಕ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳು ತುಘಲಕ್ ದರ್ಬಾರ್ ನಡೆಸಿದ್ದಾರೆ ಎಂದು ತುಮಕೂರು ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಅಲ್ತಾಫ್ ಕುಟುಕಿದ್ದಾರೆ.
ಹುಳಿಯಾರಿನ ಪರಿವೀಕ್ಷಣಾ ಮಂದಿರದಲ್ಲಿ ಶನಿವಾರ ನಡೆದ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಪಪಂನಿಂದ ತೆರವುಗೊಂಡ ಗೂಡಂಗಡಿ ಮಾಲೀಕರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹುಳಿಯಾರು ಬಸ್ ನಿಲ್ದಾಣದಲ್ಲಿ ಸರಿಸುಮಾರು 30 ವರ್ಷಗಳಿಂದ ಗೂಡಂಗಡಿಗಳನ್ನಿಟ್ಟು ವ್ಯಾಪಾರ ಮಾಡುತ್ತಿರುವವರಿಂದ ಈ ಹಿಂದೆ ಗ್ರಾಮ ಪಂಚಾಯ್ತಿ, ಈಗ ಪಟ್ಟಣ ಪಂಚಾಯ್ತಿ ಸುಂಕ ಸಂಗ್ರಹಿಸಿದೆ. ಇವರಿಂದ ಸುಂಕ ಸಂಗ್ರಹಿಸಿ ಆದ ಮೇಲೆ ತೆರವುಗೊಳಿಸುವ ಮುಂಚೆ ತಿಳಿವಳಿಕೆ ನೋಟಿಸ್ ನೀಡಬೇಕಿತ್ತು. ತೆರವು ಮುಂಚೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಅಲ್ಲಿಗೆ ಶಿಫ್ಟ್ ಮಾಡಬೇಕಿತ್ತು. ಆದರೆ ಏಕಾಏಕಿ ಪೋಲೀಸರನ್ನು ಕರೆತಂದು ನೂರಾರು ಕುಟುಂಬಗಳನ್ನು ಬೀದಿಗೆ ತಳ್ಳಿದ್ದಾರೆ. ಇದು ಮಾನವೀಯತೆ ದೃಷ್ಟಿಯಿಂದಲೂ, ಕಾನೂನಾತ್ಮ ಕವಾಗಿಯೂ ಅಕ್ಷಮ್ಯ ಅಪರಾಧವಾಗಿದ್ದು, ತೆರವು ಮಾಡಿಸಿರುವ ಮುಖ್ಯಾಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.
30 ವರ್ಷಗಳಿಂದ ಬೀದಿ ಬದಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರೂ ಇವರಿಗೆ ಇಷ್ಟು ವರ್ಷವಾದರೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸದಿರುವುದು ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯ ಸಂಕೇತವಾಗಿದೆ. ಸುಂಕ ಸಂಗ್ರಹಿಸುತ್ತಿದ್ದರೂ ಗುರುತಿನ ಚೀಟಿ ನೀಡಿ, ವ್ಯಾಪಾರ ವಲಯ ನಿಗಧಿ ಮಾಡಿ ಮೂಲ ಸೌಕರ್ಯ ನೀಡದಿರುವುದು ಅಧಿಕಾರಿಗಳ ನಿಷ್ಕ್ರೀಯತೆಗೆ ನಿದರ್ಶನವಾಗಿದೆ.
ಈಗಲಾದರೂ ಎಚ್ಚೆತ್ತುಕೊಂಡು ಪಟ್ಟಣದಲ್ಲಿನ ಸರ್ಕಾರಿ ಜಾಗಕ್ಕೆ ಇವರನ್ನು ಸ್ಥಳಾಂತರಿಗೆ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಿ ವ್ಯಾರಾಪ ಮಾಡಲು ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ಪುನಃ ಬಸ್ ನಿಲ್ದಾಣದಲ್ಲೇ ಮೊದಲಿನಂತೆ ವ್ಯಾಪಾರ ಮಾಡಲು ಬೀದಿಬದಿ ವ್ಯಾಪಾರಸ್ಥರಿಗೆ ಕರೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ತುಮಕೂರು ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಭದ್ರೇಗೌಡ ಅವರು ಮಾತನಾಡಿ ಪಟ್ಟಣ ಪಂಚಾಯ್ತಿಯಿಂದ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ಮಾಡಿ ಗುರುತಿನ ಚೀಟಿ, ಪ್ರಮಾಣ ಪತ್ರ ನೀಡಬೇಕು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಮೃದ್ಧಿ ಯೋಜನೆಯಿಂದ ಮಹಿಳೆಯರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ಟಿವಿಸಿ ಕಮಿಟಿ ರಚಿಸಬೇಕು. ಸರ್ಕಾರದಿಂದ ಬೀದಿಬದಿ ವ್ಯಾಪಾರಿಗಳಿಗೆ ಸಿಗುವ ಪರಿಕರ, ಯಂತ್ರೋಪಕರಣ, ಶೆಡ್ ಮುಂತಾದ ಸೌಲಭ್ಯಗಳನ್ನು ಕೊಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಕೋಳಿಶ್ರೀನಿವಾಸ್, ಜಯಕರ್ನಾಟಕ್ ಮೋಹನ್ ಕುಮಾರ್ ರೈ, ಫುಟ್ ಪಾತ್ ವ್ಯಾಪಾರಿಗಳಾದ ಹೂವಿನ ಬಸವರಾಜು, ಜಯಕಾಂತ್, ಬೀಡದಯಾನಂದ್, ರೇಣುಕಪ್ರಸಾದ್, ರಾಮಣ್ಣ, ಶಿವಪ್ಪ, ಲಕ್ಷ್ಮೀಕಾಂತ್, ಜಮೀರ್, ಚಿರುಮುರಿ ಶ್ರೀನಿವಾಸ್, ರಾಮಚಂದ್ರಪ್ಪ, ಉಮಕ್ಕ, ಗಂಗಮ್ಮ, ರಾಜಣ್ಣ, ರಘು, ನವೀನ್, ಹೋಟೆಲ್ ನಾಗರಾಜು, ಜಿಲೇಬಿರಾಜಣ್ಣ, ಶಿವಣ್ಣ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
