ಅಶುದ್ದ ನೀರು : ಪಪಂ ಕಚೇರಿಗೆ ಮುತ್ತಿಗೆ

ಗುಬ್ಬಿ

     ಕಳೆದ ಮೂರು ತಿಂಗಳಿಂದ ಕೆಂಪು ಬಣ್ಣದಿಂದ ಕೂಡಿದ ನೀರು ಸಾರ್ವಜನಿಕರಿಗೆ ಸರಬರಾಜು ಆಗುತ್ತಿದೆ. ಇತ್ತೀಚೆಗೆ ಸಂಪೂರ್ಣ ಅಶುದ್ದ ನೀರು ಕಂಡು ಹೌಹಾರಿದ ಸ್ಥಳೀಯರು ವಾಟ್ಸ್‍ಪ್ ಮೂಲಕ ತಮ್ಮ ಮನೆಯ ಸಂಪಿನ ನೀರಿನ ಫೋಟೋ ಹಾಕಿ ಸಿಡಿಮಿಡಿ ವ್ಯಕ್ತಪಡಿಸಿದ್ದರು. ಈ ಅಶುದ್ದ ನೀರು ಬಳಸಿದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ ಎಂದು ಆರೋಪಿಸಿ ಪಟ್ಟಣದ ಕೆಲ ಪ್ರಜ್ಞಾವಂತ ನಾಗರಿಕರು ಸಾಮಾಜಿಕ ಜಾಲತಾಣದಲ್ಲೇ ಇಡೀ ದಿನ ಚಾಟಿಂಗ್ ಮೂಲಕ ವಿನೂತನ ರೀತಿ ಆಕ್ರೋಶ ಹೊರ ಹಾಕಿದ್ದರು. ಸೂಕ್ತ ಉತ್ತರ ಸಿಗದ ಕಾರಣ ಮುಂದುವರೆದು ಸೋಮವಾರ ಬೆಳಗ್ಗೆ ಪಪಂ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿದ ನಾಗರಿಕರ ದಂಡು ಮುಖ್ಯಾಧಿಕಾರಿಗಳಿಗೆ ಮುತ್ತಿಗೆ ಹಾಕಿ ಪ್ರಶ್ನಿಸಿದರು.

     ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಹೇರೂರು ಕೆರೆಯ ನೀರು ಯಾವುದೆ ಶುದ್ದೀಕರಣವಾಗದೆ ನೇರ ಸಾರ್ವಜನಿಕರಿಗೆ ತಲುಪುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಪಟ್ಟಣದ ನಾಗರಿಕರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆಯಿತು. ಜಲ ಶುದ್ದೀಕರಣ ಘಟಕ ಬಹಳ ತಿಂಗಳಿಂದ ಕೆಲಸ ಮಾಡುತ್ತಿಲ್ಲ. ನೀರು ಶುದ್ದಗೊಳಿಸದೆ ಕೆರೆಯ ನೀರು ನೇರವಾಗಿ ಸಾರ್ವಜನಿಕರ ಸಂಪು ಸೇರುತ್ತಿದೆ. ಕ್ಲೋರಿನ್ ಮತ್ತು ಆಲಂ ಬಳಕೆ ಕೂಡ ವೈಜ್ಞಾನಿಕವಾಗಿ ನಡೆದಿಲ್ಲ.

    ಈ ನೀರು ಕುಡಿದರೆ ಕೊರೋನಾಗಿಂತ ಭಯಾನಕ ರೋಗಕ್ಕೆ ತುತ್ತಾಗುತ್ತೇವೆ ಎಂದು ಕಿಡಿಕಾರಿದರು. ಈ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ ಎಂಬ ಕಿಡಿನುಡಿ ಅಲ್ಲಿ ವ್ಯಕ್ತವಾಯಿತು. ಪ್ರತಿ ತಿಂಗಳು 125 ರೂ.ಗಳ ನೀರಿನ ತೆರಿಗೆ ಕಟ್ಟಿಸಿಕೊಳ್ಳುವ ಸ್ಥಳೀಯ ಪಟ್ಟಣ ಪಂಚಾಯಿತಿ ಶುದ್ದ ನೀರು ಕೊಡಲು ಮಾತ್ರ ನಿರ್ಲಕ್ಷ್ಯ ವಹಿಸಿದರೆ ಯಾರನ್ನು ಕೇಳುವುದು? ಈ ನೀರಿನ ಘಟಕ ದುರಸ್ಥಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ನಾಮಕಾವಸ್ಥೆ ಭೇಟಿ ನೀಡಿರುವುದು ಎಲ್ಲರಿಗೂ ತಿಳಿದಿದೆ ಎಂದು ದೂರಿದರು.

   ನಾಗರಿಕರು ಹಾಗೂ ಮುಖಂಡರ ಪ್ರಶ್ನೆ ಆಲಿಸಿದ ಪಪಂ ಮುಖ್ಯಾಧಿಕಾರಿ ತೀರ್ಥಪ್ರಸಾದ್, ಜಲ ಶುದ್ದೀಕರಣ ಘಟಕದಲ್ಲಿ ತಾಂತ್ರಿಕ ಸಮಸ್ಯೆಯನ್ನು ತಂತ್ರಜ್ಞರಿಂದ ತಿಳಿದುಕೊಂಡಿದ್ದೇನೆ. ಕಳೆದ 20 ವರ್ಷದಿಂದ ಈ ಸಮಸ್ಯೆ ಹಾಗೆಯೇ ಇದ್ದು, ಸಂಪೂರ್ಣ ದುರಸ್ಥಿಗೆ ಕ್ರಿಯಾಯೋಜನೆ ಸಿದ್ದಗೊಳಿಸಿ 7.19 ಲಕ್ಷ ರೂ.ಗಳಲ್ಲಿ ಫಿಲ್ಟರ್ ಮೀಡಿಯಾ ಬದಲಾವಣೆ ಕಾಮಗಾರಿಗೆ ಜಿಲ್ಲಾಧಿಕಾರಿಗಳ ಮೂಲಕ ಅನುಮೋದನೆ ದೊರಕಿದೆ. ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ 5 ರೊಳಗೆ ಕಾಮಗಾರಿ ಆರಂಭ ಮಾಡಿ, ನೀರಿನ ಘಟಕ ಸರಿಪಡಿಸಲಾಗುವುದು. ಜತೆಗೆ ಅಲ್ಲಿಯವರೆಗೆ ಪಟ್ಟಣಕ್ಕೆ ಶುದ್ದ ನೀರು ಕೊಡಲು ಕ್ರಮ ವಹಿಸಲಾಗುವುದು. ಬೋರ್ ನೀರು ಬಳಕೆಗೆ ಆದ್ಯತೆ ನೀಡಿ ಸದ್ಯದ ಪರಿಸ್ಥಿತಿ ಸರಿ ದೂಗಿಸುವ ಭರವಸೆ ನೀಡಿದರು.

   ಈ ಸಂದರ್ಭದಲ್ಲಿ ಮುಖಂಡರಾದ ಎಚ್.ಟಿ.ಭೈರಪ್ಪ, ಸಿ.ಆರ್.ಶಂಕರ್‍ಕುಮಾರ್, ಜಿ.ಎಸ್.ಮಂಜುನಾಥ್, ನಾಗಸಂದ್ರ ವಿಜಯ್‍ಕುಮಾರ್, ಹನುಮಂತಯ್ಯ, ಬಿ.ಲೋಕೇಶ್, ಜಿ.ಆರ್.ರಮೇಶ್, ಪಪಂ ಸದಸ್ಯರಾದ ರೇಣುಕಾ ಪ್ರಸಾದ್, ಶೌಕತ್ ಅಲಿ, ಕುಮಾರ್ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link