ಪತಿಯ ಕಿರುಕುಳದಿಂದ ಬೇಸತ್ತು ಪತ್ನಿ ಆತ್ಮಹತ್ಯೆ..!!

ಬೆಂಗಳೂರು

    ಪತಿಯು ಕುಡಿದು ಬಂದು ಜಗಳ ಮಾಡಿ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತು ಪತ್ನಿ ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಸಂದ್ರದಲ್ಲಿ ಸೋಮವಾರ ರಾತ್ರಿ ನಡೆದಿದೆ.

    ಮಲ್ಲಸಂದ್ರದ 5ನೇ ಕ್ರಾಸ್‍ನ ಗೀತಾ (35)ಎಂದು ಆತ್ಮಹತ್ಯೆ ಮಾಡಿಕೊಂಡವರನ್ನು ಗುರುತಿಸಲಾಗಿದೆ.ರಾಜ್ಯ ರಸ್ತೆ ಸಾರಿಗೆ ಸಂಸ್ಥ(ಕೆಎಸ್‍ಆರ್‍ಟಿಸಿ)ಬಸ್ ಕಂಡಕ್ಟರ್ ಆಗಿದ್ದ ಭೀಮಪ್ಪ ಎಂಬುವರನ್ನು 14 ವರ್ಷಗಳ ಹಿಂದೆ ವಿವಾಹವಾಗಿದ್ದರು.
ಗೀತಾ ದಂಪತಿಗೆ ಆಕಾಶ್ (12) ಹಾಗೂ ಕೈಲಾಶ್ (6) ಎಂಬ ಇಬ್ಬರು ಮಕ್ಕಳಿದ್ದು ಆರಂಭದಲ್ಲಿ ಸುಖ ಸಂಸಾರ ನಡೆಸುತ್ತಿದ್ದ ಕುಟುಂಬದಲ್ಲಿ ಕುಡಿತದ ಮಾರಿ ಪ್ರವೇಶಿಸಿ ನೆಮ್ಮದಿಯಿಲ್ಲದಂತೆ ಮಾಡಿತ್ತು.

    ಮೂರ್ನಾಲ್ಕು ವರ್ಷದಿಂದ ಕುಡಿತದ ಚಟ ಅಂಟಿಸಿಕೊಂಡಿದ್ದ ಭೀಮಪ್ಪ ಕೆಲಸ ಮುಗಿಸಿಕೊಂಡು ಬಂದ ಕೂಡಲೇ ಕಂಠಪೂರ್ತಿ ಕುಡಿದು ಮನೆಗೆ ಬಂದು ಜಗಳ ಮಾಡಿ ಗೀತಾಗೆ ಕಿರುಕುಳ ನೀಡುತ್ತಿದ್ದ. ಹಲವು ಬಾರಿ ಬುದ್ಧಿ ಹೇಳಿದರೂ ಭೀಮಪ್ಪನ ವರ್ತನೆ ಸರಿ ಹೋಗಿರಲಿಲ್ಲ.

     ಗೀತಾ ಅವರ ಪೋಷಕರು, ಸಹೋದರರು ಬಂದು ಬುದ್ಧಿವಾದ ಹೇಳಿದ್ದರೂ ವರ್ತನೆ ಬದಲಿಸಿಕೊಳ್ಳದ ಭೀಮಪ್ಪ, ಕುಡಿದು ಬಂದು ಕಿರುಕುಳನೀಡುವುದನ್ನು ಮುಂದುವರೆಸಿದ್ದ. ಐದು ದಿನಗಳ ಹಿಂದೆ ಕುಡಿದು ಬಂದು ಜಗಳ ಮಾಡಿ ಹಿಂಸೆ ನೀಡಿದ್ದರಿಂದ ಬೇಸತ್ತ ಗೀತಾ ಹತ್ತಿರದಲ್ಲೇ ಇದ್ದ ತಮ್ಮನ ಮನೆಗೆ ಹೋಗಿದ್ದರು.

      ಪತ್ನಿ ಹೋದ ನಂತರ ಬೀದರ್ ಕಡೆ ಭೀಮಪ್ಪ ಕೆಲಸಕ್ಕೆ ಹೋಗಿದ್ದು, ರಾತ್ರಿ 7ರ ವೇಳೆ ತಮ್ಮನ ಮನೆಯವರು ಹೊರಗಡೆ ಹೋಗಿದ್ದಾಗ ಗೀತಾ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಬಾಗಲಗುಂಟೆ ಪೊಲೀಸರು ಭೀಮಪ್ಪನ ಬಂಧನಕ್ಕೆ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link