ತುಮಕೂರು
ಗುಡಿ ಗೋಪುರ ಕಟ್ಟಿಲ್ಲ ಎಂದು ದೇವರು ಮುನಿಸಿಕೊಂಡಿದ್ದಾನೆ. ಸಿಟ್ಟು ಮಾಡಿಕೊಂಡು ಹುಲ್ಲಿನ ಬಣವೆಗಳಿಗೆ ಬೆಂಕಿ ಹಚ್ಚುತ್ತಿದ್ದಾನೆ. ಅಷ್ಟೇ ಅಲ್ಲ, ಇಡೀ ಊರಿಗೆ ಬೆಂಕಿ ಹಚ್ಚಿ ಭಸ್ಮ ಮಾಡಲು ಹೊರಟಿದ್ದಾನೆ…
ಇದು ತುರುವೇಕೆರೆ ತಾಲ್ಲೂಕಿನ ಸಂಗಲಾಪುರ ಗ್ರಾಮದ ಜೀವಂತವಾಗಿರುವ ಕಟ್ಟು ಕಥೆ! ಈ ದೇವರ ಕಥೆ ಕೇಳಿ ಜನ ಹೆದರಿದ್ದಾರೋ ಇಲ್ಲವೊ ಗೊತ್ತಿಲ್ಲ. ಆದರೆ, ಹೆದರಿಸುವ ಪ್ರಯತ್ನವನ್ನು ಅಲ್ಲಿನ ಕೆಲವರು ಮಾಡುತ್ತಿದ್ದಾರೆ. ಇಲ್ಲಿನ ಈ ದೇವರ ಪವಾಡವನ್ನು ಪವಾಡ ರಹಸ್ಯ ಬಯಲು ಖ್ಯಾತಿಯ ಹುಲಿಕಲ್ ನಟರಾಜು ಅವರು ಬಟಾಬಯಲು ಮಾಡಿದ್ದಾರೆ.
ದೇವರ ಪ್ರಸಾದಕ್ಕೆ ವಿಷ ಹಾಕಿದ, ದೇವಸ್ಥಾನದ ವಿಚಾರವಾಗಿ ತಮ್ಮವರಿಗೇ ವಿಷ ಹಾಕಿ ದೇವರ ಕೋಪ ಎಂದು ಬಿಂಬಿಸಲು ಹೋಗಿದ್ದ ಪ್ರಕರಣಗಳ ಹಿಂದಿನ ದುಷ್ಟ ಮನಸ್ಥಿತಿಗಳು ಬಹಿರಂಗವಾದ ಸಂದರ್ಭದಲ್ಲಿ ಸಂಗಲಾಪುರದಲ್ಲಿ ಇದೇ ಮಾದರಿಯ ದೇವರ ಮಹಿಮೆ ಮುಂದುವರೆದಿದ್ದು, ಶೀಘ್ರ ಬಯಲಿಗೆ ಬರಲಿದೆ.
ಗ್ರಾಮದಲ್ಲಿ ಮೂರು ದಿನದಲ್ಲಿ 12 ಹುಲ್ಲಿನ ಬಣವೆಗಳು ನಿಗೂಢವಾಗಿ ಭಸ್ಮವಾಗಿವೆ. ಗ್ರಾಮದ ಪಶ್ಚಿಮ ಭಾಗದ ಬಣವೆಗಳಿಗೆ ಇದ್ದಕ್ಕಿದ್ದಂತೆ ಬೆಂಕಿ ಬೀಳುತ್ತದೆ, ಆಮೇಲೆ ಅದನ್ನು ಕಂಡ ಕೆಲವರು ಹೋಗಿ ಆರಿಸಿ ಹೆಚ್ಚಿನ ನಷ್ಟ ತಪ್ಪಿಸುತ್ತಾರೆ. ಅಲ್ಲಿ ಮೆದೆ ಹತ್ತಿಕೊಂಡಿತಂತೆ, ಅವರ ಬಣವೆ ಹೊತ್ತಿ ಉರಿಯಿತಂತೆ, ಅಯ್ಯೋ ನಮ್ಮ ಬಣವೆಗೆ ಯಾವಾಗ ಬೆಂಕಿ ಬೀಳುತ್ತದೋ ಎಂಬ ಆತಂಕ, ಆಕ್ರಂದನ ಸಂಗಲಾಪುರದಲ್ಲಿ ಮೂರು ದಿನಗಳಿಂದ ಕೇಳಿಬಂದಿದೆ.
ಇದರ ಜೊತೆಗೆ ಗ್ರಾಮದ ಮಹಿಳೆಗೆ ದೇವರು ಮೈಮೇಲೆ ಬಂದು ಬೆಂಕಿಗೆ ಭಯಾನಕ ಕಾರಣ ಹೇಳುತ್ತಾರೆ. ಭೈರವೇಶ್ವರನಿಗೆ ಗುಡಿ ಕಟ್ಟಿಲ್ಲ, ಅದಕ್ಕೆ ಅವನು ಸಿಟ್ಟಿಗೆದ್ದು ಮೆದೆಗಳಿಗೆ ಬೆಂಕಿ ಬೀಳುವಂತೆ ಮಾಡುತ್ತಾನೆ ಎಂದು ಆಕೆ ಹೇಳಿ ಗ್ರಾಮಸ್ಥರನ್ನು ಇನ್ನಷ್ಟು ಭಯ ಬೀಳಿಸುತ್ತಾಳೆ.
ಯಾವುದು ನಿಜ, ಯಾವುದು ಸುಳ್ಳು ಎನ್ನವ ಪರಿಸ್ಥಿತಿಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ವಿಷಯ ತಿಳಿದು ಹುಲಿಕಲ್ ನಟರಾಜು ಅವರು ಗ್ರಾಮದಲ್ಲಿ ಬೀಡು ಬಿಟ್ಟು ಜನರ ಅಭಿಪ್ರಾಯ, ವೈಜ್ಞಾನಿಕ ವಿಶ್ಲೇಶಣೆ ನಡಿಸಿ ಬಣವೆ ಬೆಂಕಿ ಪ್ರಕರಣ ಭೇದಿಸುವ ಪ್ರಯತ್ನ ಮಾಡಿದ್ದಾರೆ. ಉದ್ದೇಶಪೂರಕವಾಗಿ ವಿದ್ಯಾವಂತ, ಸ್ವಾರ್ಥ ಮನಸ್ಸಿನ ವ್ಯಕ್ತಿಗಳು ಅಮಾಯಕ ವ್ಯಕ್ತಿಗಳ ಸಹಾಯದಿಂದ ಈ ಕೃತ್ಯ ನಡೆಸುತ್ತಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಈ ಸಂಬಂದ ನಟರಾಜು ತುರುವೇಕರೆ ಠಾಣೆ ಪೊಲೀಸರಿಗೂ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ಜೊತೆಗೆ, ತಹಶೀಲ್ದಾರರು, ಪೊಲೀಸರು ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ. ಬಣವೆ ಬೆಂಕಿ ಬಿದ್ದರೆ ಆರಿಸಲೆಂದು ಎರಡು ಅಗ್ನಿ ಶಾಮಕ ದಳ ಊರಲ್ಲಿ ಸಜ್ಜಾಗಿ ನಿಂತಿವೆ.
ದೇವರು ಮೈ ಮೇಲೆ ಬರುವ ಮಹಿಳೆಯನ್ನು ಪೊಲೀಸರು ವಿಚಾರಣೆ ನಡೆಸಿದರೆ ದೇವರ ಹೆಸರಿನಲ್ಲಿ ನಡೆದಿರುವ ಬೆಂಕಿ ಅನಾಹುತ ಪ್ರಕರಣ ಬಯಲಿಗೆ ಬರಲಿದೆ ಎಂದು ಹುಲಿಕಲ್ ನಟರಾಜು ಅಭಿಪ್ರಾಯ ಪಡುತ್ತಾರೆ.
ಯಾಮಾರಿಸಿ ಬೆಂಕಿ
ನಾಲ್ಕೈದು ದಿನಗಳ ಹಿಂದೆ ಸಂಗಲಾಪುರದಲ್ಲಿ ಬೆಂಕಿ ಆತಂಕವಿರಲಿಲ್ಲ. ನಂತರ ಒಂದೊಂದಾಗಿ ಬಣವೆಗಳಿಗೆ ಬೆಂಕಿ ಹೊತ್ತಿಕೊಳ್ಳಲು ಶುರುವಾಯಿತು. ಆಗ್ನಿ ಆಕಸ್ಮಿಕ ಅಥವಾ ಕಿಡಿಗೇಡಿಗಳ ಕೃತ್ಯ ಎಂದು ಗ್ರಾಮಸ್ಥರು ಆರಂಭದಲ್ಲಿ ಸುಮ್ಮನಾದರು. ಬರುಬರುತ್ತಾ ಅದು ನಿರಂತರವಾಗತೊಡಗಿತು. ಇಲ್ಲಿ ಆರಿಸಿ ಬರುವ ವೇಳೆಗೆ ಇನ್ನೊಂದು ಬಣವೆಗೆ ಬೆಂಕಿ ಬೀಳುತ್ತಿತ್ತು. ಈ ನಡುವೆ, ಮಹಿಳೆಗೆ ದೇವರು ಮೈಮೇಲೆ ಬಂದು ಬೆಂಕಿ ಅನಾಹುತ ಮಾಡುತ್ತಿರುವವನು ಭೈರವೇಶ್ವರ ದೇವರು. ಅವನಿಗೆ ಗುಡಿ ಕಟ್ಟದೆ ಬೀದಿಪಾಲು ಮಾಡಿದ್ದಕ್ಕೆ ಅವನಿಗೆ ಕೋಪ ಬಂದು ಹೀಗೆ ಮಾಡುತ್ತಿದ್ದಾನೆ ಎಂದು ಹೇಳಿದಳು. ದೇವರೇ ಮುನಿದರೆ ನರಮಾನವ ಅವನ ಎದುರು ನಿಲ್ಲಲು ಸಾಧ್ಯವೇ, ಗುಡಿ ಕಟ್ಟಬೇಕು ಭೈರವನಿಗೆ ಪೂಜೆ ಪುನಸ್ಕಾರ ನಡೆಸಬೇಕು ಎಂದು ಕೆಲವರು ಅಭಿಪ್ರಾಯ ಬಿತ್ತಿದರು.
ಮೆದೆ ಹೊತ್ತಿ ಉರಿಯುವುದು ಮುಂದುವರೆದಿತ್ತು. ಬೆಂಕಿಗೆ ದೇವರು ಕಾರಣ ಎಂಬ ವಿಷಯದ ಬಗ್ಗೆ ಹುಲಿಕಲ್ ನಟರಾಜು ಆ ಮಹಿಮೆ ತಿಳಿಯಲು ಪ್ರಯತ್ನ ಆರಂಭಿಸಿದಾಗ, ಗ್ರಾಮದ ತಂಡವೊಂದು ಈ ಕೆಲಸ ಮಾಡುತ್ತಿರುವುದು ಅವರಿಗೆ ದೃಢಪಟ್ಟಿತು. ಆ ಗುಂಪಿನಲ್ಲಿ ಯಾರ್ಯಾರು ಇದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಮಾಡಬೇಕು ಎಂದು ದೂರು ನೀಡಿದರು.
ಬಣವೆ ಹೊತ್ತಿಕೊಂಡ ಜಾಗಲ್ಲಿ ಅರ್ಧ ಉರಿದ ಬೆಂಕಿಕಡ್ಡಿ ಸಿಕ್ಕಿದೆ, ಅಂದರೆ ಯಾರೋ ಬೆಂಕಿ ಹಚ್ಚಿ ಹೋಗಿರುವುದು ಖಚಿತ ಎಂಬುದು ಹುಲಿಕಲ್ ನಟರಾಜು ಅವರಿಗೆ ತಿಳಿಯಿತು. ಇದರ ಜೊತೆಗೆ, ಕೆಲವು ಬೆಂಕಿ ಪ್ರಕರಣಗಳಲ್ಲಿ ಪೊಟಾಶಿಯಂ ಪರ್ಮಾಂಗನೇಟ್ ಹಾಗೂ ಗ್ಲಿಸರಿನ್ ಬಳಸಲಾಗಿದೆ. ಈ ಎರಡೂ ದ್ರಾವಕಗಳು ನಿರ್ಧಿಷ್ಟ ಪ್ರಮಾಣದಲ್ಲಿ ಸೇರಿದಾಗ ನಡೆಯುವ ರಾಸಾಯನಿಕ ಕ್ರಿಯೆಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ. ಕೆಲವೆಡೆ ಸೋಡಿಯಂ ಬಳಸಿ ಬೆಂಕಿ ಹಚ್ಚಲಾಗಿದೆ. ಒಣ ಹುಲ್ಲಿಗೆ ಸೋಡಿಯಂ ಹಾಕಿದರೆ ಬೆಂಕಿ ಹೊತ್ತುತ್ತದೆ, ಜೊತೆ ನೀರು ಹಾಕಿದರೆ ಸೊಡಿಯಂ ಜೊತೆ ನೀರು ಸೇರಿದರೆ ಬೆಂಕಿ ಧಗ್ಗನೆ ಹೊತ್ತಿ ದೊಡ್ಡ ಜ್ವಾಲೆ ಏಳುತ್ತದೆ. ನೀರು ಹಾಕಿದರೆ ಆರಬೇಕಾದ ಬೆಂಕಿ ಇನ್ನೂ ಹೆಚ್ಚಾಗುತ್ತದೆ ಎಂದರೆ ಅದು ದೇವರ ಸಿಟ್ಟಿನ ಲೀಲೆ ಎಂದು ಜನ ಭಾವಿಸುವಂತಾಗುತ್ತದೆ. ರಾಸಾಯನಿಕ ವಸ್ತುಗಳನ್ನು ಬೆಂಕಿ ಹಚ್ಚಲು ಬಳಸಲಾಗಿದೆ ಎಂದ ಮೇಲೆ ಅದರಲ್ಲಿ ವಿದ್ಯಾವಂತರ ಕೈವಾಡವಿರುವುದು ಸತ್ಯ ಎಂದು ನಟರಾಜು ಹೇಳಿದರು.
ದೇವಸ್ಥಾನ ನಿರ್ಮಾಣ ಮೂಲ ಕಾರಣ
ಸಂಗಲಾಪುರದಲ್ಲಿ ಭೈರವೇಶ್ವರ ಹಾಗೂ ಚನ್ನಕೇಶ್ವರ ದೇವರ ಮೂರ್ತಿ ಇದ್ದ ದೇವಸ್ಥಾನ ಶಿಥಿಲಗೊಂಡಿತ್ತು. ಹೊಸ ದೇವಸ್ಥಾನ ಕಟ್ಟಲೆಂದು ಹಳೆಯದನ್ನು ಕೆಡವಲಾಗಿದೆ. ದೇವಸ್ಥಾನದಲ್ಲಿದ್ದ ಮೂರ್ತಿಗಳನ್ನು ತಾತ್ಕಾಲಿಕವಾಗಿ ಬೇರೆ ಕಡೆ ಪ್ರತಿಷ್ಠಾಪಿಸಲಾಗಿದೆ. ಕೆಲವರ ಪ್ರಕಾರ ಮೂರ್ತಿಗಳನ್ನು ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸದಿದ್ದರೆ, ಅವುಗಳನ್ನು ನೀರಿನಲ್ಲಿ ಇಡಬೇಕಂತೆ, ಅಲ್ಲಿ ಲೋಪವಾಗಿದೆ ಎನ್ನಲಾಗಿದೆ.
ಅಲ್ಲದೆ ದೇವಸ್ಥಾನ ಕೆಡವಿದ ಕಲ್ಲುಗಳನ್ನು ತಿಪ್ಪಗೆ ಹಾಕಿ ಅದರ ಪಾವಿತ್ರತೆ ಹಾಳು ಮಾಡಲಾಗಿದೆ. ಹೀಗೆ ಮಾಡಿರುವುದು ಭೈರವೇಶ್ವರನಿಗೆ ಕೋಪ ಬಂದಿದೆ, ತುರ್ತಾಗಿ ಹೊಸ ದೇವಸ್ಥಾನ ಕಟ್ಟಿ ಮೂರ್ತಿಗಳನ್ನು ವಿಧಿವತ್ತಾಗಿ ಪ್ರತಿಷ್ಠಾಪಿಸಿ ಪೂಜೆ ಮಂದುವರೆಸಬೇಕು. ಆ ಕಾರ್ಯ ವಿಳಂಬವಾಗುತ್ತಿರುವುದರಿಂದಲೇ ದೇವರು ಬಣವೆಗೆ ಬೆಂಕಿ ಬೀಳುವಂತೆ ಮಾಡಿ ತನ್ನ ಕೋಪ ತೋರಿಸುತ್ತಿದ್ದಾನೆ ಎಂದು ದೇವರು ಮೈಮೇಲೆ ಬಂದಾಗ ಆ ಹೆಂಗಸು ಹೇಳಿದ್ದರು.
ಆದರೆ ವಾಸ್ತವ ಬೇರೆ ಇದೆ. ದೇವಸ್ಥಾನ ಕಟ್ಟಬೇಕು ಎಂಬ ಒಂದು ಗುಂಪು ಹಾಗೂ ಕಟ್ಟಲು ಹಣವಿಲ್ಲ, ಹಣ ಹೊಂದಿಕೆಯಾದ ನಂತರ ಕಟ್ಟಿದರಾಯಿತು ಎನ್ನುವ ಇನ್ನೊಂದು ಗುಂಪಿನ ನಡುವಿನ ದ್ವೇಷವೇ ಈ ಬೆಂಕಿ ಅವಘಡಕ್ಕೆ ಕಾರಣ ಎಂದು ಹುಲಿಕಲ್ ನಟರಾಜು ಅಭಿಪ್ರಾಯ ಪಡುತ್ತಾರೆ. ದೇವರು ಮೈಮೇಲೆ ಬಂದ ಹೆಂಗಸು ಬೆಂಕಿ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದನ್ನು ತಾವು ಆಕೆಯನ್ನು ಪ್ರಶ್ನೆ ಮಾಡಿದ್ದಾಗ ಈ ವಿಚಾರ ಒಡೆದು ಹೇಳಲ್ಲ ಎಂದಿದ್ದರು. ಆಕೆಯನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದರೆ ಸತ್ಯ ಹೊರಬರುತ್ತದೆ ಎಂದರು.
ಊರಿನ ಕೆಲವರ ನಡುವಿನ ಮನಸ್ತಾಪವೇ ಈ ಬೆಂಕಿ ಪ್ರಕರಣಕ್ಕೆ ಕಾರಣ ಹೊರತು ಇದರಲ್ಲಿ ದೇವರ ಕೈವಾಡಲಿಲ್ಲ. ಹುಲ್ಲಿನ ಮೆದೆಗೆ ಬೆಂಕಿ ಹಾಕಿ ಪಶುಗಳ ಆಹಾರ ಕಿತ್ತುಕೊಳ್ಳುವುದಿಲ್ಲ. ದೇವರ ಹೆಸರಿನಲ್ಲಿ ಪ್ರಸಾದಕ್ಕೆ ವಿಷ ಹಾಕುತ್ತಾರೆ, ದೇವಸ್ಥಾನ ಕಟ್ಟುವ ಗಲಾಟೆಯಲ್ಲಿ ಎರಡು ಮನಸುಗಳ ನಡುವೆ ದ್ಷೇಷ ಉಂಟಾಗಿ ತಮ್ಮವರಿಗೇ ವಿಷ ಹಾಕುತ್ತಾರೆ ಇಂತಹ ಪ್ರಕರಣ ನಡೆದಿವೆ
ದೇವರನ್ನು ಮುಂದಿಟ್ಟುಕೊಂಡು ಮನುಷ್ಯ ತನ್ನ ದ್ವೇಷದ ಕಿಡಿಯನ್ನು ಸಾವಿನ ಅಂತ್ಯಕ್ಕೆ ಕರೆದೊಯ್ಯುತ್ತಿದ್ದಾನೆ. ದೇವರ ಹೆಸರಿನಲ್ಲಿ ಕಾಣದ ಕೈಗಳು, ಕೆಟ್ಟ ಮನಸುಗಳು ಹಾಗೂ ದೇವ ಮಾನವರು ಎಂದುಕೊಂಡವರು ಸಂಗಲಾಪುರದಲ್ಲಿ ಬಣವೆಗೆ ಬೆಂಕಿ ಹಚ್ಚಿ ಆತಂಕ ಸೃಷ್ಠಿ ಮಾಡುತ್ತಿದ್ದಾರೆ. ಪೊಲೀಸರು ಸಮಗ್ರ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಂಡು ಸತ್ಯ ಬಹಿರಂಗಪಡಿಸಬೇಕು ಎಂದು ಹುಲಿಕಲ್ ನಟರಾಜು ಒತ್ತಾಯ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ