ನಗರದಲ್ಲಿ ಕಾಡುತ್ತಿವೆ ನೂರೆಂಟು ಸಮಸ್ಯೆಗಳು : ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಪಾವಗಡ
   ಪುರಸಭೆ ವ್ಯಾಪ್ತಿಯಲ್ಲಿ ಆಡಳಿತ ಕುಂಠಿತವಾಗಿದ್ದು, ಒಂದಲ್ಲ, ಎರಡಲ್ಲ ನೂರೆಂಟ್ ಸಮಸ್ಯೆ ತಾಂಡವವಾಡುತ್ತಿವೆ.  ಆದರೆ ಆಡಳಿತಾಧಿಕಾರಿಗಳು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ.
 
    ಪುರಸಭೆ, ಪಟ್ಟಣ ಪಂಚಾಯಿತಿಗಳಂತಹ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ವರ್ಷ ಮುಗಿದರೂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಮಾಡಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ. ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದರೂ ರಾಜಕೀಯವಾಗಿ ತಡೆ ಹಿಡಿದು ಮೀಸಲಾತಿ ಬದಲಾವಣೆಗೆ ಕೆಲವರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಆದರೆ ಇದುವರೆಗೂ ಮೀಸಲಾತಿ ಬಗ್ಗೆ ಕೋರ್ಟ್‍ನಿಂದ ತೀರ್ಪು ಬಾರದ ಕಾರಣ ಸಮಿತಿಯಿಲ್ಲದೆ ಸ್ಥಳೀಯ ಸಂಸ್ಥೆಗಳ ಆಡಳಿತ ಕುಂಠಿತವಾಗಿದ್ದು, ಪಟ್ಟಣ ಮತ್ತು ನಗರದ ಸಾರ್ವಜನಿಕರಿಗೆ ಯಾವುದೇ ಕೆಲಸಗಳಾಗದೆ, ಪರಡಾಡುವಂತಾಗಿದೆ.
     ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಸುಮಾರು 6 ತಿಂಗಳು ಕಳೆದರು ಇದುವರೆಗೂ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಸಿಲ್ಲ. ಚುನಾವಣೆ ನಡೆದ 15 ದಿನದೊಳಗೆ ಸಮಿತಿ ರಚನೆ ಮಾಡಲು ಸರ್ಕಾರ ಕಟ್ಟು ನಿಟ್ಟಾಗಿ ಕಾನೂನು ತರಬೇಕು. ಇಲ್ಲದಿದ್ದರೆ ಸ್ಥಳೀಯ ಸಂಸ್ಥೆಗಳ ಆಡಳಿತ ಹದೆಗೆಟ್ಟು, ಸಾರ್ವಜನಿಕರು ತೊಂದರೆ ಅನುಭವಿಸ ಬೇಕಾಗುತ್ತದೆ ಎಂದು ಸಂಘ ಸಂಸ್ಥೆಯ ಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ.
      ಸ್ಲಂ ಬೋರ್ಡ್ ವತಿಯಿಂದ ಪಾವಗಡ ಪುರಸಭೆ ವ್ಯಾಪ್ತಿಯಲ್ಲಿ 300 ಮನೆಗಳು ನಿರ್ಮಾಣ ಮಾಡಲು ಯೋಜನೆ ರೂಪಿಸಿ, ಮನೆ ರಹಿತರಿಂದ ವಂತಿಕೆ ಹಣ ಕಟ್ಟಿಸಿಕೊಂಡು ಒಂದು ವರ್ಷ ಕಳೆದರೂ ಮನೆಗಳ ನಿರ್ಮಾಣ ಕಾರ್ಯ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತ ಪಡೆಸಿದ್ದಾರೆ.
    ಸ್ಲಂ ವಾರ್ಡ್‍ನ ಪಲಾನುಭವಿಗಳಿಗೆ ಎಸ್.ಸಿ, ಎಸ್.ಟಿಯವರಿಂದ 20 ಸಾವಿರ, ಸಾಮಾನ್ಯ ವರ್ಗದವರಿಂದ 40 ಸಾವಿರ ರೂ.ಗಳನ್ನು ವಂತಿಕೆ ರೂಪದಲ್ಲಿ ಸರ್ಕಾರ ಹಣ ಕಟ್ಟಿಸಿಕೊಂಡು ಮನೆ ನಿರ್ಮಾಣ ಮಾಡಲು ಒಪ್ಪಿಗೆ ನೀಡಿದ್ದರೂ ಸಹ ಇದುವರೆಗೂ ಯಾವೊಬ್ಬ ಪಲಾನುಭವಿಗೆ ವಾಸಿಸಲು ಮನೆ ನೀಡಿಲ್ಲ. ಎರಡು ವರ್ಷದವರೆಗೆ ಕಾಲಾವಕಾಶ ಇದೆ ಎಂಬುದು ಗುತ್ತಿಗೆದಾರರ ವಾದ ಆದರೂ, ಬಡವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ನಿರ್ದಿಷ್ಟ ಅವಧಿಯೊಳಗೆ ಸಿಗಲಿ ಎಂಬುದು ಪ್ರಜ್ಞಾವಂತ ನಾಗರಿಕರ ಆಶಯವಾಗಿದೆ.
     ನಾಗಲಮಡಿಕೆ ಉತ್ತರ ಪಿನಾಕಿನಿ ನದಿಗೆ ಅಡ್ಡಲಾಗಿ 13 ಕೋಟಿ ವೆಚ್ಚದಲ್ಲಿ ಜಾಕ್‍ವೇಲ್ (ಡ್ಯಾಂ) ನಿರ್ಮಾಣ ಮಾಡಿ ಪಾವಗಡ ಪಟ್ಟಣಕ್ಕೆ ಪೈಪ್‍ಲೈನ್ ಮುಖಾಂತರ ಕುಡಿಯುವ ನೀರಿನ ಯೋಜನೆ ಅನುಷ್ಟಾನಕ್ಕೆ ತಂದಿದ್ದು, ವೇಡ್ಸ್ ಹತ್ತಿರ ಕೇಶಿಪ್ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಪೈಪು ಲೈನ್ ಕಿತ್ತು ಹಾಕಿರುವುದರಿಂದ ಲಕ್ಷಾಂತರ ರೂ.ಗಳು ನಷ್ಟವಾಗಿದ್ದರೂ ಅಂದಿನ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರು ಗಮನ ಹರಿಸಿ ಹಾಳಾಗಿರುವ ಪೈಪ್‍ಲೈನ್ ಕಾಮಗಾರಿಯನ್ನು ಕೇಶಿಪ್‍ರವರಿಂದ ಜೋಡಣೆ ಮಾಡಬೇಕಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೈಪ್‍ಲೈನ್ ಮಾಡಿಸದ ಕಾರಣ ಈ ಕಾಮಗಾರಿಗೆ ಪುರಸಭೆಯು ಮತ್ತೆ ಹಣ ಖರ್ಚು ಮಾಡಬೇಕಾಗಿದೆ. ಇದರಿಂದ ಸರ್ಕಾರಕ್ಕೆ ಲಕ್ಷಾಂತರ ರೂ.ಗಳ ನಷ್ಟ ಸಂಭವಿಸುತ್ತಿದೆ. 
     ಇತ್ತೀಚೆಗೆ ಸುರಿದ ಮಳೆಗೆ ಉತ್ತರ ಪಿನಾಕಿನಿ ನದಿಯ ಜಾಕ್‍ವೇಲ್ (ಡ್ಯಾಂ)ತುಂಬಿದ್ದು, ಪಟ್ಟಣಕ್ಕೆ ನೀರು ತರಲು ಹಾಕಲಾಗಿದ್ದ ಪೈಪ್‍ಲೈನ್ ಕೇಶಿಪ್‍ರವರ ಕಾಮಗಾರಿಯಿಂದ ಹಾಳಾಗಿದ್ದು, ಪುರಸಭೆಯಿಂದ ಹೊಸದಾಗಿ ಅಳವಡಿಸಬೇಕಾಗಿದೆ. ರಸ್ತೆ ಕಾಮಗಾರಿ ವೇಳೆಯಲ್ಲಿ ಈ ಬಗ್ಗೆ ಗಮನ ಹರಿಸಿದ್ದರೆ, ಇಂದು  ಲಕ್ಷಾಂತರ ರೂ ಹಣ ಖರ್ಚು ಮಾಡುವ ಅವಶ್ಯಕತೆಯಿರಲಿಲ್ಲ. ಅಲ್ಲದೆ ಪಟ್ಟಣಕ್ಕೆ ಸರಾಗವಾಗಿ ಕುಡಿಯುವ ನೀರು ಸರಬರಾಜು ಮಾಡಬಹುದಾಗಿತ್ತು ಎಂಬುದು ಸಾರ್ವಜನಿಕರ ಆರೋಪವಾಗಿದೆ.
     ಪುರಸಭೆ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳನ್ನು ಅಧಿಕಾರಿಗಳು ತನಿಖೆ ಮಾಡದ ಕಾರಣ ಚರಂಡಿ ಮತ್ತು ಸಿ.ಸಿ.ರಸ್ತೆಗಳ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು, ಸರಾಗವಾಗಿ ನೀರು ಹರಿಯದೆ ಮನೆಗಳ ಪಕ್ಕದಲ್ಲಿ ನೀರು ನಿಂತು ಸೊಳ್ಳೆಗಳ ತಾಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
     ಹಳೇ ಬಸ್ ನಿಲ್ದಾಣ ಪಕ್ಕದಲ್ಲಿರುವ ಪುರಸಭೆಗೆ ಸೇರಿದ ಸುಮಾರು 40 ಬಾಡಿಗೆ ರೂಂಗಳಲ್ಲಿ ಕಟ್ಟಡದ ಎರಡನೇ ಮಹಡಿಯ 20 ರೂಂ ಗಳ ಮೇಲ್ಛಾವಣೆ ಹಾಳಾಗಿದೆ. ಈ ರೂಂಗಳಲ್ಲಿರುವ ಬಾಡಿಗೆದಾರರು ಅದನ್ನು ದುರಸ್ಥಿ ಮಾಡಿಸಿಕೊಡುವಂತೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ ದುರಸ್ಥಿ ಕಾರ್ಯ ಮಾಡಿಸಿಲ್ಲ. ಇದರಿಂದ ರೂಂ ಗಳಲ್ಲಿ ಇಟ್ಟಿರುವ ಸಾಮಾಗ್ರಿಗಳು ಹಾಳಾಗುತ್ತಿವೆ. ಪ್ರತಿ ತಿಂಗಳು ಬಾಡಿಗೆ ಮಾತ್ರ ಸರಿಯಾಗಿ ವಸೂಲಾತಿ ಮಾಡುತ್ತಿದ್ದಾರೆ.
     ಆದರೆ ಮಳೆ ಬಂದರೆ ರೂಂಗಳು ಸೋರುತ್ತಿವೆ. ಬಾಡಿಗೆ ರೂಂಗಳಲ್ಲಿ ಇರುವವರು ಕಡ ಬಡವರಾಗಿದ್ದು, ಜೀವನ ನಡೆಸುವುದು ಕೂಡ ಕಷ್ಟಕರವಾಗಿದೆ. ಆದರೆ ಅಧಿಕಾರಿಗಳು ಮಾತ್ರ ಸತತ 4 ವರ್ಷಗಳಿಂದ ರಿಪೇರಿ ಮಾಡಿಸುವುದಾಗಿ ಸುಳ್ಳು ಭರವಸೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 
     ಪುರಸಭೆ ಕಚೇರಿ ವೇಳೆಯಲ್ಲಿ ಅಧಿಕಾರಿಗಳಿಗೆ ನಿಗಧಿತ ಸಮಯವಿಲ್ಲದೆ ಇವರಿಗೆ ಇಷ್ಟ ಬಂದಂತೆ ಕಚೇರಿಗೆ ಬರುವುದು ಹಾಗೂ ಕಚೇರಿಯಿಂದ ಹೊರ ಹೋಗುವುದು ಮಾಡುತ್ತಾರೆ. ಇದರಿಂದ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕಚೇರಿ ಮುಂದೆ ದಿನವೆಲ್ಲ್ಲಾ ಕಾದು ಕುಳಿತರೂ ಕೊನೆಗೆ ಕೆಲಸವಾಗದೆ ಮನೆಗೆ ಹಿಂತಿರುಗುತ್ತಿದ್ದಾರೆ ಎಂಬುದಾಗಿ ಕೆಲವರು ಆರೋಪಿಸಿದ್ದಾರೆ. 
    ಪಾವಗಡ ಪುರಸಭೆಯಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಈಗಲಾದರೂ ವ್ಯವಸ್ಥಿತವಾಗಿ ಆಡಳಿತ ನಡೆಸಲುವಲ್ಲಿ ಆಡಳಿತಾಧಿಕಾರಿಗಳು ಗಮನಿಸುವವರೇ ಕಾದು ನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap