ಪಾವಗಡ :
ಎಚ್.ರಾಮಾಂಜಿನಪ್ಪ
ಕರ್ನಾಟಕ ರಾಜ್ಯದ ತುಮಕೂರು ಜಿಲ್ಲಾ ವ್ಯಾಪ್ತಿಯ ಪಾವಗಡ ತಾಲ್ಲೂಕು ಆಂಧ್ರದ ಗಡಿಭಾಗದಲ್ಲಿ ಇದೆ. ನಂಜುಂಡಪ್ಪ ವರದಿ ಪ್ರಕಾರ ಅತಿ ಹಿಂದುಳಿದ ತಾಲ್ಲೂಕು ಎಂದು ಸಹ ಘೋಷಣೆಯಾಗಿತ್ತು.
ಅಂದಿನಿಂದಲೂ ಇಂದಿನವರೆಗೂ ಬರ ಪೀಡಿತ ಪ್ರದೇಶವಾಗಿ ಉಳಿದಿದೆ. ತಾಲ್ಲೂಕಿನಲ್ಲಿ ಸರಿಯಾಗಿ ಮಳೆಯಿಲ್ಲದೆ ಕೆರೆ ಕುಂಟೆಗಳು ಬತ್ತಿ ಹೋಗಿವೆ. 1200 ಅಡಿಗಳಷ್ಟು ಆಳದವರೆಗೂ ಕೊಳವೆ ಬಾವಿಗಳನ್ನು ಕೊರೆಸಿದರೂ ನೀರು ಸಿಗುತ್ತಿಲ್ಲ. ನೀರು ಸಿಕ್ಕಿದರೂ ಅದು ಫ್ಲೋರೈಡ್‍ಯುಕ್ತ ನೀರಾಗಿದೆ. ಈ ನೀರು ಕುಡಿದು ಜನರು ರೋಗರುಜಿನಗಳಿಗೆ ತುತ್ತಾಗಿದ್ದಾರೆ.
ಸ್ವಾತಂತ್ರ್ಯ ಬಂದ ನಂತರ ಎಷ್ಟೋ ಸರ್ಕಾರಗಳು ಆಶ್ವಾಸನೆ ನೀಡಿ ಕೈತೊಳೆದುಕೊಂಡಿವೆ. ಪಾವಗಡ ತಾಲ್ಲೂಕಿಗೆ ಯಾವುದೇ ನದಿಯ ಮೂಲಗಳಿಂದ ನೀರು ಹರಿಸದ ಕಾರಣ, ಈ ಹಿಂದೆ ತಾಲ್ಲೂಕಿನ ಸಂಘ ಸಂಸ್ಥೆಗಳು ತಾಲ್ಲೂಕು ಕಚೆರಿ ಮುಂದೆ 35 ದಿನಗಳ ಕಾಲ ಅನಿರ್ದಿಷ್ಟ ಮುಷ್ಕರದ ಹೋರಾಟ ನಡೆಸಿದ್ದವು. ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಹಂತ ಹಂತವಾಗಿ ನೀರಿಗಾಗಿ ಹೋರಾಟ ಮಾಡಿದ್ದಾರೆ.
ಪ್ರತಿಫಲವಾಗಿ 2017 ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಜೊತೆ ಅಂದಿನ ಕಾನೂನು ಸಚಿವ ಜಯಚಂದ್ರ, ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಹಾಗೂ ಶಾಸಕರಾಗಿದ್ದ ಕೆ.ಎಂ. ತಿಮ್ಮರಾಯಪ್ಪ ಚರ್ಚಿಸಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯ ಬಯಲು ಸೀಮೆ ಪ್ರದೇಶಗಳಿಗೆ ಕುಡಿಯುವ ನೀರಿಗಾಗಿ ಬಜೆಟ್‍ನಲ್ಲಿ 2,350 ಕೋಟಿ ರೂ. ಮೀಸಲಿರಿಸಲು ಕಾರಣೀಭೂತರಾಗಿದ್ದರು.
ಕಾರ್ಮಿಕ ಸಚಿವ ವೆಂಕಟರವಣಪ್ಪ ತಮ್ಮ ಅವಧಿಯಲ್ಲಿ ಪಾವಗಡಕ್ಕೆ ನೀರು ಹರಿಸಲೇ ಬೇಕೆಂಬ ವಿಶ್ವಾಸದೊಂದಿಗೆ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಭದ್ರಾ ಮೇಲ್ದಂಡೆ ಕುಡಿಯುವ ನೀರಿನ ಯೋಜನೆ ಕುಂಟಿತವಾಗ ಬಾರದೆಂದು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕಂಕಣಬದ್ದರಾಗಿದ್ದಾರೆ. 2,350 ಕೋಟಿ ರೂ. ಅಂದಾಜು ವೆಚ್ಚದ ತುಂಗಭದ್ರಾ ಸಿಹಿ ನೀರು ಯೋಜನೆಯ ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಿ, ಅಲ್ಲಿಂದ ಪಾವಗಡ ಕೆರೆಗಳಿಗೆ ನೀರು ಹರಿಸಲು ಶತಪ್ರಯತ್ನ ಮಾಡುತ್ತಿದ್ದಾರೆ.
ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕೆಲ ತಾಂತ್ರಿಕ ದೋಷದಿಂದ ಕಾಮಗಾರಿ ತಡವಾಗಿದೆ. ಆದ್ದರಿಂದ ತುರ್ತಾಗಿ ಪಾವಗಡ ತಾಲ್ಲೂಕಿಗೆ ಕುಡಿಯುವ ನೀರು ಕಲ್ಪಿಸಲು ಬಹು ಗ್ರಾಮ ಶುದ್ದ ಕುಡಿಯುವ ನೀರಿನ ಯೋಜನೆ ಮೂಲಕ 650 ಕೋಟಿ ರೂ. ಬಿಡುಗಡೆ ಗೊಳಿಸಿ, ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.
ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಬಯಲು ಸೀಮೆ ಪ್ರದೇಶಗಳಾದ ಕೂಡ್ಲಿಗಿ, ಮೊಳಕಾಲ್ಮೂರು, ತುರುವನೂರ್ ಹೋಬಳಿ, ಚಳ್ಳಕೆರೆ, ಪರಶುರಾಂಪುರ, ಪಾವಗಡ ತಾಲ್ಲೂಕುಗಳ ನೀರಿಗಾಗಿ ತುಂಗಭದ್ರಾ ಯೋಜನೆಗೆ 2,135 ಕೋಟಿ ರೂ. ಕಾಮಗಾರಿಗೆ ತ್ವರಿತವಾಗಿ ಚಾಲನೆ ದೊರೆಯಲಿದೆ. ಇದರಲ್ಲಿ ಪಾವಗಡ ತಾಲ್ಲೂಕಿನಲ್ಲಿ ನಡೆಯುವ ಕಾಮಗಾರಿ ಯೋಜನೆಗೆ 600 ರಿಂದ 700 ಕೋಟಿ ರೂ. ವೆಚ್ಚ ಆಗಬಹುದೆಂದು ಅಂದಾಜಿಸಲಾಗಿದೆ ಎಂಬುದಾಗಿ ಅಧಿಕಾರಿಗಳಿಂದ ಮಾಹಿತಿ ತಿಳಿದು ಬಂದಿದೆ.
ರೈತರಿಂದ ಭೂಸ್ವಾಧೀನ ಸರ್ವೆ ಪಕ್ರಿಯೆ ನಡೆದಿದ್ದು, ಶುದ್ದ ಕುಡಿಯುವ ನೀರು ಯೋಜನೆಗೆ ಕಾಮಗಾರಿ ಪ್ರಾರಂಭವಾಗಿದೆ ಎಂದು ಸಚಿವರು ಕಾರ್ಯಕ್ರಮಗಳಲ್ಲಿ ತಿಳಿಸಿದ್ದಾರೆ. ತುಂಗಭದ್ರಾ ಕುಡಿಯುವ ನೀರಿನ ಯೋಜನೆಗೆ 2,150 ಕೋಟಿ ರೂ.ಅನುದಾನದಲ್ಲಿ ಪಾವಗಡ ತಾಲ್ಲೂಕಿನ ಕಾಮಗಾರಿಗೆ ಸುಮಾರು 600 ರಿಂದ 700 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆ ಇಟ್ಟಿಕೊಂಡಿದೆ. ತಾಲ್ಲೂಕಿನಲ್ಲಿ 100 ರಿಂದ 400 ಲಕ್ಷ ಲೀಟರ್ ಸಾಮಥ್ರ್ಯವುಳ್ಳ 15 ದೊಡ್ಡ ಟ್ಯಾಂಕ್(ಜೋನ್)ಗಳು ಮಂಜೂರಾಗಿವೆ.
ಲಿಂಗದಹಳ್ಳಿ, ಹೊಟ್ಟೆಬೊಮ್ಮನಹಳ್ಳಿ,ಕಾಕಿಪುರ, ಮರಿದಾಸನಹಳ್ಳಿ, ಕೆ.ಟಿ.ಹಳ್ಳಿ, ಉದ್ದಗಟ್ಟೆ, ಸಿಂಗರೆಡ್ಡಿಹಳ್ಳಿ, ಮೇಗಲಪಾಳ್ಯ, ನಾಗಲಮಡಿಕೆ ಕ್ರಾಸ್, ಬುಡ್ಡಾರೆಡ್ಡಿಹಳ್ಳಿ, ಹುಸೇನ್‍ಪುರ, ತಿರುಮಣಿ, ವೀರ್ಲಗೊಂದಿ, ರಾಜವಂತಿ, ಕಣಿವೇನಹಳ್ಳಿ ಗ್ರಾಮಗಳಲ್ಲಿ 100 ರಿಂದ 200 ಮತ್ತು 300 ರಿಂದ 400 ಲಕ್ಷ ಲೀಟರ್ ಸಾಮಥ್ರ್ಯವುಳ್ಳ ದೊಡ್ಡ ವಾಟರ್ ಟ್ಯಾಂಕ್ ನಿರ್ಮಾಣ ಮಾಡುವ ಕಾಮಗಾರಿಗಳಿಗೆ ಚಾಲನೆ ದೊರೆತಿದೆ.
ಈಗಾಗಲೆ ಕೆ.ಟಿ.ಹಳ್ಳಿ ಗ್ರಾಮವೊಂದರ ಅರಣ್ಯ ಪ್ರದೇಶದ ಬೆಟ್ಟದ ತುದಿಯ ಎತ್ತರದಲ್ಲಿ ಕಾಮಗಾರಿ ನಡೆಯುತ್ತಿದೆ. ಟ್ಯಾಂಕ್ ನಿರ್ಮಾಣ ಮಾಡಿದ ಗ್ರಾಮದಿಂದ 10 ರಿಂದ 15 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಶುದ್ದ ಕುಡಿಯುವ ನೀರು ಸರಬರಾಜು ಮಾಡಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಪಾವಗಡ ತಾಲ್ಲೂಕಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 200 ರಿಂದ 400 ಲಕ್ಷ ಲೀಟರ್ ಸಾಮಥ್ರ್ಯವುಳ್ಳ 15 ಟ್ಯಾಂಕ್ ನಿರ್ಮಾಣವಾಗಲಿವೆ. ನಿರ್ಮಾಣ ಗೊಂಡ ಟ್ಯಾಂಕ್ ಸುತ್ತ ಮುತ್ತಲಿನ 10 ರಿಂದ 15 ಗ್ರಾಮಗಳಿಗೆ ನೀರು ಸರಬರಾಜಾಗಲಿದೆ.
ಈಗಾಗಲೇ ಗ್ರಾಮಗಳಲ್ಲಿ ಜಿ.ಪಂ ನಿಂದ ಹಾಗೂ ಇತರೆ ಯೋಜನೆಯಲ್ಲಿ ನಿರ್ಮಾಣಗೊಂಡ 150 ಹಳೆ ಓವರ್ ಹೆಡ್ ಟ್ಯಾಂಕ್, ಸಣ್ಣ ಟ್ಯಾಂಕ್‍ಗಳು 176 ಸೇರಿ, ಓಟ್ಟು 362 ಟ್ಯಾಂಕ್‍ಗಳಿವೆ. ದೊಡ್ಡ ಟ್ಯಾಂಕ್‍ಗಳಿಂದ ಗ್ರಾಮಗಳಲ್ಲಿ ಇರುವ ಪೈಪ್ ಲೈನ್‍ಗಳಿಗೆ ಸಂಪರ್ಕಿಸಿ ತುರ್ತಾಗಿ ಕುಡಿಯಲು ನೀರು ಸರಬರಾಜು ಮಾಡಲು ಯೋಜನೆ ರೂಪಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಪ್ರಥಮವಾಗಿ ತಾಲ್ಲೂಕಿನ ಕೆ.ಟಿ.ಹಳ್ಳಿ ಗ್ರಾಮದ ಹತ್ತಿರ ಟ್ಯಾಂಕ್ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದೆ. ಈ ಯೋಜನೆಯ ಕಾಮಗಾರಿ ಟೆಂಡರ್ ಆಂಧ್ರ ಪ್ರದೇಶದ ಮೆಗಾ ಎಂಜಿನಿಯರಿಂಗ್ ಅಂಡ್ ಇನ್ ಫ್ರಾಸ್ಟ್ರ್ವಕ್ಚರ್ಸ್ ಕಂಪನಿ ಗುತ್ತಿಗೆದಾರರು ಪಡೆದಿದೆ. ಇದರ ಜೊತೆಗೆ ಸೇತುವೆ ಮತ್ತು ಪೈಪ್ ಲೈನ್ ಕಾಮಗಾರಿ ಚಾಲನೆ ಮಾಡಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ತಾಲ್ಲೂಕಿನಲ್ಲಿ ಸುಮಾರು 30 ವರ್ಷಗಳಿಂದ ನೀರಿಗಾಗಿ ಹೋರಾಟ ಮಾಡಿದ ಸಂಘ ಸಂಸ್ಥೆಗಳ ವಿವರ :
45 ದಿನಗಳಕಾಲ ತಾಲ್ಲೂಕು ಕಚೆರಿ ಮುಂದೆ ಮದಕರಿ ನಾಯಕ ಸೇನೆ ಅಧ್ಯಕ್ಷ ಡಾ,ಓಂಕಾರ್‍ನಾಯಕ ಮತ್ತು ಸದಸ್ಯರಿಂದ ಅನಿರ್ದಿಷ್ಟ ಮುಷ್ಕರ. ಜನವೇದಿಕೆ ಅಧ್ಯಕ್ಷರಾದ ಸ್ವಾಮಿ ಜಪಾನಂದಜಿ ನೇತೃತ್ವದಲ್ಲಿ ಪಾವಗಡ ಬಂದ್ ಮಾಡಲಾಗಿತ್ತು. ರಾಜಕೀಯ ಮುಖಂಡರಿಂದ ಪಕ್ಷಾತೀತವಾಗಿ ನೀರಿಗಾಗಿ ಹೋರಾಟ. ರೈತ ಸಂಘದ ರಾಜ್ಯಾಧ್ಯಕ್ಷ ವಿ.ನಾಗಭೂಷಣರೆಡ್ಡಿರವರು ಫ್ಲೋರೈಡ್ ರಹಿತ ಕುಡಿಯುವ ನೀರಿಗಾಗಿ ಹೈಕೋರ್ಟ್ ಮೆಟ್ಟಿಲು ಏರಿದ್ದರು. ತಾಲ್ಲೂಕು ಅಧ್ಯಕ್ಷ ನರಸಿಂಹರೆಡ್ಡಿ, ಪೂಜಾರಪ್ಪ ಹಾಗೂ ರೈತರು ಸೇರಿದಂತೆ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಸೇರಿದಂತೆ 35 ದಿನಗಳ ಪ್ರತಿಭಟನೆ.