ಪಾಲಿಕೆಯ ಮತ್ತೊಂದು ನಿರ್ಧಾರ: ದಂಡ ಕಟ್ಟಿದ ಕಟ್ಟಡಕ್ಕಷ್ಟೇ ವಿದ್ಯುತ್

ತುಮಕೂರು

        ಮಹತ್ವದ ಬೆಳವಣಿಗೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯು ಮತ್ತೊಂದು ಗಮನಾರ್ಹ ನಿರ್ಣಯವನ್ನು ಕೈಗೊಂಡಿದ್ದು, ಕಂದಾಯ ಭೂಮಿಯಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ದುಪ್ಪಟ್ಟು ದಂಡ ವಿಧಿಸಿ ವಿದ್ಯುತ್ ಸಂಪರ್ಕ ನೀಡಲು ಅನುಮೋದನೆ ನೀಡಿದೆ. ಹಾಗೂ ವಾಣಿಜ್ಯ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ನೀಡಬಾರದೆಂದು ಸೂಚಿಸಿದೆ.

       ಮಹಾನಗರ ಪಾಲಿಕೆ ಆಯುಕ್ತ ಐ.ಎ.ಎಸ್. ಅಧಿಕಾರಿ ಟಿ.ಭೂಪಾಲನ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಪಾಲಿಕೆಯ ಹಿರಿಯ ಅಧಿಕಾರಿಗಳು ಮತ್ತು ಬೆಸ್ಕಾಂನ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಇಂತಹುದೊಂದು ಮಹತ್ವದ ನಿರ್ಣಯವನ್ನು ಸ್ವೀಕರಿಸಲಾಗಿದೆ.
ಸಭೆಯಲ್ಲಿ ಈ ಬಗ್ಗೆ ಪಾಲಿಕೆಯ ಉಪ ಆಯುಕ್ತ (ಕಂದಾಯ) ಯೋಗಾನಂದ್ ಅವರು ವಿಷಯ ಮಂಡಿಸಿದಾಗ ಈ ಬಗ್ಗೆ ಆಮೂಲಾಗ್ರ ಚರ್ಚೆ ನಡೆಯಿತು. ಅಂತಿಮವಾಗಿ ಈ ನಿರ್ಧಾರಕ್ಕೆ ಬರಲಾಯಿತು.

      ಪಾಲಿಕೆ ವ್ಯಾಪ್ತಿಯಲ್ಲಿ ದಿನಾಂಕ 31-03-2019 ರ ಮುಂಚಿತವಾಗಿ ಕಂದಾಯ ಭೂಮಿಯಲ್ಲಿ ನಿರ್ಮಿಸಿರುವ ನಿಯಮ ಬಾಹಿರ ಕಟ್ಟಡಗಳಿಗೆ ಆರ್.ಟಿ.ಸಿ. ಪಡೆದು ವಿದ್ಯುತ್ ಸಂಪರ್ಕ ನೀಡಬಾರದು. ಸದರಿ ಕಟ್ಟಡಗಳಿಗೆ ಕರ್ನಾಟಕ ಪೌರ ನಿಗಮಗಳ ಅಧಿನಿಯಮ -1976 ರ ಪ್ರಕರಣ 112 (ಸಿ) ರಂತೆ ನಿಯಮ ಬಾಹಿರ ಕಟ್ಟಡಗಳಿಗೆ ಆಸ್ತಿ ತೆರಿಗೆಯ ಎರಡರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಿಕೊಂಡು ನಮೂನೆ-2 ಮತ್ತು ಆಸ್ತಿ ತೆರಿಗೆ/ ದಂಡ ಪಾವತಿ ರಸೀದಿಯನ್ನು ಮಹಾನಗರ ಪಾಲಿಗೆಯಿಂದ ಬೆಸ್ಕಾಂಗೆ ಒದಗಿಸಿದಲ್ಲಿ ಮಾತ್ರ, ವಸತಿ ಕಟ್ಟಡಗಳಿಗೆ ಮಾತ್ರ ವಿದ್ಯುತ್ ಸಂಪರ್ಕವನ್ನು ನೀಡಬೇಕೆಂದು ಮತ್ತು ವಾಣಿಜ್ಯ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕವನ್ನು ನೀಡಬಾರದು” ಎಂಬ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಸಕ್ರಮವಿದ್ದಲ್ಲಿ ಎನ್.ಓ.ಸಿ.

   “ಪಾಲಿಕೆ ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ನಿವೇಶನ ವಿನ್ಯಾಸ ಮಂಜೂರಾತಿ ಪಡೆದು, ನಂತರ ಮಹಾನಗರ ಪಾಲಿಕೆ ಕಚೇರಿಯಿಂದ ಕಟ್ಟಡ ಪರವಾನಗಿಯನ್ನು ಪಡೆದು, ಪರವಾನಗಿಯಲ್ಲಿ ತಿಳಿಸಿರುವಂತೆ ನಿಯಮಾನುಸಾರ ನಿರ್ಮಿಸಿರುವ ಕಟ್ಟಡಗಳಿಗೆ ವಿದ್ಯುತ್ ಎನ್.ಓ.ಸಿ. ಯನ್ನು ನೀಡಬಹುದು” ಎಂದು ನಿರ್ಣಯಿಸಲಾಗಿದೆ.

ವಸತಿ ಕಟ್ಟಡಕ್ಕಷ್ಟೇ ವಿದ್ಯುತ್

        ತುಮಕೂರು ನಗರದಲ್ಲಿ ನಿಯಮಬಾಹಿರವಾಗಿ ನಿರ್ಮಾಣವಾಗಿರುವ ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ವಿದ್ಯುತ್ ಎನ್.ಓ.ಸಿ. (ನಿರಾಕ್ಷೇಪಣಾ ಪತ್ರ) ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

        ಮೊದಲಿಗೆ, ನಿಯಮಬಾಹಿರ ಕಟ್ಟಡ ಎಂದರೇನೆಂಬ ಬಗ್ಗೆ ಕಾನೂನಿನಲ್ಲಿರುವ ವಿವರಣೆಗಳನ್ನು ಉಪ ಆಯುಕ್ತ ಯೋಗಾನಂದ್ ಅವರು ಸಭೆಯ ಮುಂದೆ ವಿವರಿಸಿದರು.

       ಪಾಲಿಕೆಯ ನಗರ ಯೋಜನಾಧಿಕಾರಿ ಚನ್ನಬಸಪ್ಪ ಅವರು ಟೂಡಾದಿಂದ ನಿವೇಶನ ವಿನ್ಯಾಸ ಅನುಮೋದನೆಯಾಗದಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ದಾಖಲಾಗಿರುವ ನಿವೇಶನಗಳಿಗೆ ಕಟ್ಟಡ ಪರವಾನಗಿಯನ್ನು ನೀಡಬಾರದೆಂದು ಸರ್ಕಾರ ಹೊರಡಿಸಿರುವ `ಸುತ್ತೋಲೆ’ (2015-16, ದಿನಾಂಕ 04-05-2017) ಯಲ್ಲಿ ನಿರ್ದೇಶನವಿದೆ ಎಂಬುದನ್ನು ಸಭೆಯ ಗಮನಕ್ಕೆ ತಂದರು.

       ಬೆಂಗಳೂರು ನಗರದಲ್ಲಿ ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ಇಂತಹ ಸಮಸ್ಯೆಗಳನ್ನು ಪರಿಹರಿಸಲು ಬೆಸ್ಕಾಂ, ಬಿಬಿಎಂಪಿ,ಪೊಲೀಸ್ ಮತ್ತಿತರ ಇಲಾಖೆಗಳನ್ನೊಳಗೊಂಡ ಟಾಸ್ಕ್ ಪೋರ್ಸ್  ರಚನೆ ಮಾಡಲಾಗಿದೆ. ಸದರಿ ತಂಡವು ನಿಯಮಬಾಹಿರ ಕಟ್ಟಡಗಳ ಸಮೀಕ್ಷೆ ಮಾಡಿ ಕ್ರಮ ಕೈಗೊಳ್ಳುತ್ತಿದೆ. ಅದರಂತೆ ತುಮಕೂರಿನಲ್ಲೂ ಟಾಸ್ಕ್ ಪೋರ್ಸ್ ರಚಿಸಬಹುದೆಂದು ಬೆಸ್ಕಾಂನ ಸೂಪರಿಂಟೆಂಡೆಂಟ್ ಇಂಜಿನಿಯರ್ ನಾಗೇಂದ್ರ ಅವರು ಸಲಹೆಯಿತ್ತರು.

      ಮತ್ತೆ ಮಾತನಾಡಿದ ಯೋಗಾನಂದ್ ಅವರು, ಕರ್ನಾಟಕ ಪೌರನಿಗಮಗಳ ಅಧಿನಿಯಮ-1976 ರ ಪ್ರಕರಣ 112 (ಸಿ) ಪ್ರಕಾರ ನಿಯಮ ಬಾಹಿರ ಕಟ್ಟಡಗಳಿಗೆ ಆಸ್ತಿ ತೆರಿಗೆಯ ಎರಡರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ಸಂಗ್ರಹಿಸಲು ಅವಕಾಶವಿರುತ್ತದೆ ಎಂಬುದನ್ನು ವಿವರಿಸಿದರು.

    ಹೀಗೆ ವಿವಿಧ ರೀತಿಯಲ್ಲಿ ಚರ್ಚಿಸಿದ ಬಳಿಕ ಅಂತಿಮವಾಗಿ –

      “ಕೆ.ಇ.ಆರ್.ಸಿ.ಯಲ್ಲಿ ವಿವರಿಸಿರುವಂತೆ ಆಸ್ತಿಯ ಮಾಲೀಕತ್ವ ವಿವರವನ್ನು ಪಡೆದು ಹಾಗೂ ಪ್ರಸಕ್ತ ಸಾಲಿನ ನಮೂನೆ-2 ಮತ್ತು ಆಸ್ತಿ ತೆರಿಗೆ/ ದಂಡ ಪಾವತಿ ರಸೀದಿಯನ್ನು ಮಹಾನಗರ ಪಾಲಿಕೆಯಿಂದ ಪಡೆದು ಬೆಸ್ಕಾಂಗೆ ಸಲ್ಲಿಸಿದಲ್ಲಿ ವಸತಿ ಕಟ್ಟಡಗಳಿಗೆ ಮಾತ್ರ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗುವುದು ಹಾಗೂ ನಿಯಮಬಾಹಿರ ಕಟ್ಟಡಗಳಿಗೆ ಪಾಲಿಕೆಯಿಂದ ವಿದ್ಯುತ್ ಎನ್.ಓ.ಸಿ.ಯನ್ನು ನೀಡಬಾರದು” ಎಂದು ಸಭೆಯು ನಿರ್ಣಯ ಕೈಗೊಂಡಿದೆ.

       ಇದರ ಜೊತೆಗೆ, ದಿನಾಂಕ 31-03-2019 ರ ನಂತರ ಈ ರೀತಿಯ ನಿಯಮಬಾಹಿರ ಕಟ್ಟಡಗಳು ನಿರ್ಮಾಣವಾಗದಂತೆ ಎಚ್ಚರ ವಹಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ಪಾಲಿಕೆಯ ತಾಂತ್ರಿಕ ಶಾಖೆಯ ಇಂಜಿನಿಯರ್‍ಗಳಿಗೆ ಸೂಚನೆ ನೀಡಲಾಗಿದೆ.

       ನಿಯಮಬಾಹಿರವಾಗಿ ನಿರ್ಮಿಸಿರುವ ವಾಣಿಜ್ಯ ಕಟ್ಟಡಗಳಿಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯಿಂದ ದಂಡ ಸ್ವರೂಪದಲ್ಲಿ ತೆರಿಗೆಯನ್ನು ಪಾವತಿಸಿಕೊಳ್ಳಬಹುದು. ಆದರೆ ವಿದ್ಯುತ್ ಎನ್.ಓ.ಸಿ.ಯನ್ನು ನೀಡಬಾರದು ಹಾಗೂ ಬೆಸ್ಕಾಂನಿಂದ ಶಾಶ್ವತ ವಿದ್ಯುತ್ ಸಂಪರ್ಕವನ್ನು ನೀಡಬಾರದು” ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಸಬ್ ಮೀಟರ್ ವಿವರ

       ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಿರುವ ವಿದ್ಯುತ್ ಸಬ್ ಮೀಟರ್‍ಗಳ ವಿವರಗಳನ್ನು ಪ್ರತಿ ತಿಂಗಳೂ ಪಾಲಿಕೆಗೆ ಒದಗಿಸಬೇಕೆಂದು ಆಯುಕ್ತ ಭೂಪಾಲನ್ ಅವರು ಕೋರಿದಾಗ, ಬೆಸ್ಕಾಂ ಅಧಿಕಾರಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದರು.

ಫುಟ್‍ಪಾತ್ ಅಂಗಡಿಗಳಿಗೆ  ವಿದ್ಯುತ್ ಸಂಪರ್ಕ ಕಟ್

      ತುಮಕೂರು ನಗರದ ವಿವಿಧೆಡೆ ಪಾದಚಾರಿ ರಸ್ತೆಗಳಲ್ಲಿ ಅಕ್ರಮವಾಗಿ ಇರುವ ಅಂಗಡಿಗಳಿಗೆ ವಿದ್ಯುತ್ ಸಂಪರ್ಕ ನೀಡಿರುವುದನ್ನು ಪ್ರಸ್ತಾಪಿಸಿದ ಆಯುಕ್ತ ಭೂಪಾಲನ್ ಅವರು, ಇಂತಹ ಅಂಗಡಿಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕೆಂದು ಹಾಗೂ ಇನ್ನು ಮುಂದೆ ಇಂತಹ ಅಂಗಡಿಗಳಿಗೆ ವಿದ್ಯುತ್ ಸಂಪರ್ಕವನ್ನು ನೀಡಬಾರದೆಂದು ಬೆಸ್ಕಾಂ ಅಧಿಕಾರಿಗಳನ್ನು ಕೋರಿದರು.

     ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು, ಇಂತಹ ಅಕ್ರಮ ಮಳಿಗೆಗಳ ಬಗ್ಗೆ ಪಾಲಿಕೆಯಿಂದ ಪಟ್ಟಿ ಮಾಡಿ ನೀಡಿದರೆ ಅವುಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕೆಂದು ಹಾಗೂ ಇನ್ನು ಮುಂದೆ ಇಂಥ ಮಳಿಗೆಗಳಿಗೆ ವಿದ್ಯುತ್ ಸಂಪರ್ಕ ನೀಡಬಾರದೆಂದು ನಿರ್ಣಯಿಸಲಾಯಿತು.

ಶಿಥಿಲ ಕಂಬಗಳನ್ನು ಬದಲಿಸಿ

       ನಗರದ ಅನೇಕ ಬಡಾವಣೆಗಳಲ್ಲಿ ವಿದ್ಯುತ್ ಕಂಬಗಳು ಶಿಥಿಲವಾಗಿದ್ದು ಇದರಿಂದ ಪ್ರಾಣಾಪಾಯವಾಗುವ ಸಂಭವವಿದೆ. ಇಂತಹ ಕಂಬಗಳನ್ನು ಬೆಸ್ಕಾಂ ತಕ್ಷಣವೇ ಗುರುತಿಸಿ ಅವುಗಳ ಬದಲಾವಣೆಗೆ ಕ್ರಮ ಕೈಗೊಳ್ಳಬೇಕೆಂದು ಪಾಲಿಕೆಯ ನೀರು ಪೂರೈಕೆ ವಿಭಾಗದ ಸಹಾಯಕ ಎಕ್ಸಿಕ್ಯುಟೀವ್ ಇಂಜಿನಿಯರ್ ವಸಂತ್ ಅವರು ಸಭೆಯಲ್ಲಿ ಬೆಸ್ಕಾಂ ಅಧಿಕಾರಿಗಳ ಗಮನ ಸೆಳೆದಾಗ, ಬೆಸ್ಕಾಂ ಇದಕ್ಕೆ ಒಪ್ಪಿಕೊಂಡಿತು.

         ನಗರದಲ್ಲಿ ಬೆಸ್ಕಾಂನಿಂದ ಹೊಸದಾಗಿ ವಿದ್ಯುತ್ ಕಂಬಗಳನ್ನು ಅಳವಡಿಸುವಾಗ ಅಥವಾ ಸ್ಥಳಾಂತರಿಸುವಾಗ ಪಾಲಿಕೆಯ ಎಕ್ಸಿಕ್ಯುಟೀವ್ ಇಂಜಿನಿಯರ್‍ರ ಗಮನಕ್ಕೆ ತರಬೇಕು ಎಂಬ ಬಗ್ಗೆಯೂ ವಸಂತ್ ಅವರು ಸಭೆಯಲ್ಲಿ ಬೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿದರು. ಈ ರೀತಿ ಮಾಡಿದರೆ ಎಕ್ಸಿಕ್ಯುಟೀವ್ ಇಂಜಿನಿಯರ್ ಅವರು ತಕ್ಷಣವೇ ಆಯಾ ವಾರ್ಡ್ ಇಂಜಿನಿಯರ್ ಮೂಲಕ ಸೂಕ್ತ ಸ್ಥಳವನ್ನು ಗುರುತಿಸಿ ಸ್ಥಳಾವಕಾಶ ಮಾಡಿಕೊಡುತ್ತಾರೆ. ಇಲ್ಲದಿದ್ದರೆ ಬೆಸ್ಕಾಂನವರು ರಸ್ತೆ ಜಾಗದಲ್ಲೇ ಕಂಬ ಅಳವಡಿಸುವಂತಾಗಿ, ಅದರಿಂದ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ತೊಡಕಾಗುತ್ತಿದೆ. ಜನ ಮತ್ತು ವಾಹನ ಸಂಚಾರಕ್ಕೂ ತೊಂದರೆ ಉಂಟಾಗುತ್ತಿದೆ. ಅಲ್ಲದೆ ಸದರಿ ಕಂಬಗಳ ಸ್ಥಳಾತರಕ್ಕೆ ಪಾಲಿಕೆಯೇ ಶುಲ್ಕ ಭರಿಸಬೇಕಾಗುತ್ತದೆ ಎಂದು ವಿವರಿಸಿದರು.

        ಈ ಬಗ್ಗೆ ಚರ್ಚೆ ನಡೆದು, ಇನ್ನು ಮುಂದೆ ವಿದ್ಯುತ್ ಕಂಬ ಅಳವಡಿಸುವಾಗ ಅಥವಾ ಸ್ಥಳಾಂತರಿಸುವಾಗ ಬೆಸ್ಕಾಂ ಮತ್ತು ಪಾಲಿಕೆ ಅಧಿಕಾರಿಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲು ತೀರ್ಮಾನ ಕೈಗೊಳ್ಳಲಾಯಿತು.ರಸ್ತೆ ಬದಿಯ ಮರಗಳ ಕೊಂಬೆಗಳು ವಿದ್ಯುತ್ ತಂತಿಗೆ ತಾಗುತ್ತದೆಂಬ ಕಾರಣದಿಂದ ಅವುಗಳನ್ನು ಬೆಸ್ಕಾಂ ಸಿಬ್ಬಂದಿ ಕಡಿದು ಹಾಕಿದ ಬಳಿಕ ಅದನ್ನು ರಸ್ತೆಯಲ್ಲೇ ಬಿಟ್ಟು ಹೋಗುತ್ತಿರುವುದರ ಬಗ್ಗೆ ಪಾಲಿಕೆಯ ಪರಿಸರ ಇಂಜಿನಿಯರ್ ಮೃತ್ಯುಂಜಯ ಅವರು ಆಕ್ಷೇಪಿಸಿದಾಗ, ಬೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

      ಈ ಸಭೆಯಲ್ಲಿ ಪಾಲಿಕೆಯ ಪ್ರಭಾರ ಉಪ ಆಯುಕ್ತ (ಅಭಿವೃದ್ಧಿ) ತಿಪ್ಪೇರುದ್ರಪ್ಪ, ಎಕ್ಸಿಕ್ಯುಟೀವ್ ಇಂಜಿನಿಯರ್ ಬಿ.ಕೆ.ಆಶಾ, ಬೆಸ್ಕಾಂನ ಸಹಾಯಕ ಎಕ್ಸಿಕ್ಯುಟೀವ್ ಇಂಜಿನಿಯರ್‍ಗಳಾದ ಎಚ್.ಸಿ.ಧನ್ಯಕುಮಾರ್ ಮತ್ತು ಶ್ರೀನಿವಾಸ್ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap