ಕುಡಿಯುವ ನೀರಿನ ಸಮಸ್ಯೆ : ಪಿಡಿಓಗಳು ಸ್ಥಳಕ್ಕೆ ಹೋಗಿ ಸಮಸ್ಯೆ ಬಗೆಹರಿಸಬೇಕು : ಶಾಸಕ

ಮಧುಗಿರಿ

      ಹಳ್ಳಿಗಳಲ್ಲಿ ಕುಡಿಯುವ ನೀರು ಸಮಸ್ಯೆ ಉಂಟಾದರೆ ಸಂಬಂಧಪಟ್ಟ ಪಿಡಿಓಗಳು ಸ್ಥಳಕ್ಕೆ ಹೋಗಿ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ಎಂ.ವಿ. ವೀರಭದ್ರಯ್ಯ ತಿಳಿಸಿದರು.

     ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪಿಡಿಓಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಎಲ್ಲಿಯೂ ಕೂಡ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳವಂತಹ ಜವಾಬ್ದಾರಿ ಪಿಡಿಓಗಳದ್ದಾಗಿದೆ. ಕ್ಷೇತ್ರದಲ್ಲಿ ಹಲವು ಕಡೆ 1200 ಮೀಟರ್‍ಗೂ ಹೆಚ್ಚು ಆಳಕ್ಕೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಆದ್ದರಿಂದ ಪರ್ಯಾಯ ವ್ಯವಸ್ಥೆಗಳನ್ನು ಬಳಸಿಕೊಂಡು ನೀರನ್ನು ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

    ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಇಲ್ಲಿಯವರೆಗೂ ಯಾವ ಅಧಿಕಾರಿಯೂ ಕೂಡ ಶಾಸಕರ ಗಮನಕ್ಕೆ ತರದಿರುವುದು ಅತ್ಯಂತ ಶೋಚನೀಯ ಸಂಗತಿ. ಜನರ ಸೇವೆ ಮಾಡುವುದು ನಮ್ಮ ಕರ್ತವ್ಯ. ಅದನ್ನು ಮರೆತರೆ ನಮ್ಮ ವೃತ್ತಿಗೆ ನ್ಯಾಯ ಒದಗಿಸಿದಂತೆ ಆಗುವುದಿಲ್ಲ ಎಂದು ಪಿಡಿಓ ಹಾಗೂ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

    ಕಂದಾಯ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಯವರು ಹೊಂದಾಣಿಕೆಯೊಂದಿಗೆ ಇಲ್ಲಿಯವರೆಗೂ ರೈತರ ಬೋರ್ ವೆಲ್‍ಗಳಿಂದ ನೀರು ಪಡೆದಿರುವ ಬಾಕಿ ಮೊತ್ತದ ಹಣವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಬೇಕು. ಮುಂದಿನ ದಿನಗಳಲ್ಲಿ ಪಿಡಿಓಗಳು ಪ್ರತಿ ತಿಂಗಳು ರೈತರಿಗೆ ತಲುಪಬೇಕಾದ ಹಣವನ್ನು ಆಯಾ ತಿಂಗಳನಲ್ಲಿಯೇ ಮೇಲಧಿಕಾರಿಗಳಿಗೆ ಸಲ್ಲಿಸುವಂತೆ ತಿಳಿಸಿದರು.

    ತಾಲ್ಲೂಕಿನ ಬಹುತೇಕ ಹಳ್ಳಿಗಳ ಶುದ್ಧ ನೀರಿನ ಘಟಕಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ಸದ್ಯಕ್ಕೆ ಇದು ರಾಜ್ಯಮಟ್ಟದ ಸಮಸ್ಯೆಯಾಗಿದ್ದು, ಇದನ್ನು ಪಂಚಾಯಿತಿಯವರಿಗೆ ವಹಿಸಿ ಅದನ್ನು ಸೂಕ್ತವಾದ ನಿರ್ವಹಣೆ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಸರಕಾರದ ಮಟ್ಟದಲ್ಲಿ ಪ್ರಯತ್ನ ಪಡಲಾಗುವುದು ಎಂದರು. ತಹಸೀಲ್ದಾರ್ ಡಾ. ಜಿ.ವಿಶ್ವನಾಥ್, ತಾಲ್ಲೂಕು ಪಂಚಾಯಿತಿ ಇಓ ದೊಡ್ಡ ಸಿದ್ದಯ್ಯ, ಬೆಸ್ಕಾಂ ಎಇಇ ಕೃಷ್ಣ ಮೂರ್ತಿ, ಎಡಿಎ ಲಕ್ಷ್ಮಣ್ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap