ಬೆಂಗಳೂರು
ರಾಜ್ಯದ ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಕ್ಷೇತ್ರಗಳಿಗೆ ಇಂದು ನಡೆದು ಉಪಚುನಾವಣೆಯಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಗುಲ್ಬರ್ಗಾ ಜಿಲ್ಲೆ ಚಿಂಚೋಳಿಯಲ್ಲಿ ಶೇ.70.30ರಷ್ಟು ಮತದಾನವಾಗಿದ್ದರೆ, ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಶೇ.81.33ರಷ್ಟು ಮತದಾನ ದಾಖಲಾಗಿದೆ.
ಎರಡೂ ಕ್ಷೇತ್ರಗಳಲ್ಲಿ ಮತದಾರರು ಉತ್ಸಾಹದಿಂದ ಬಂದು ಮತ ಚಲಾಯಿಸಿದ್ದರು. ಮಧ್ಯಾಹ್ನ 1 ಗಂಟೆಯ ವೇಳೆಗೆ ಎರಡೂ ಕ್ಷೇತ್ರಗಳಲ್ಲಿ ಶೇ.40ಕ್ಕೂ ಹೆಚ್ಚು ಮತದಾನವಾಗಿತ್ತು.
ಮತದಾನಕ್ಕೂ ಮುನ್ನ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಖಾನಾಪುರ ಗ್ರಾಮದಲ್ಲಿ ಮತದಾರರಿಗೆ ಕಾಂಗ್ರೆಸ್ ಪರ ಮತಚಲಾಯಿಸುವಂತೆ ಆಮಿಷ ಒಡ್ಡಲು, ಹಣ ಹಂಚಲು ಬಂದಿದ್ದ ಚಿತ್ತಾಪುರ ತಾಲೂಕು ಪಂಚಾಯ್ತಿ ಸದಸ್ಯ ನಾಮದೇವ ರಾಠೊಡ್ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದರಿಂದ ಆಕ್ರೋಶಗೊಂಡ ಮಾಜಿ ಶಾಸಕ ಡಾ.ಉಮೇಶ್ ಜಾಧವ್, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರಿಂದ ಕೆಲ ಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.ಚಿಂಚೋಳಿಯ ಚಿಮ್ಮಿ ಇದಲಾಯಿ ಗ್ರಾಮದಲ್ಲಿ ನವ ವಧುವರರು ಮತದಾನ ಮಾಡಿದ್ದಾರೆ. ಸಪ್ತಪದಿ ತುಳಿದ ನಂತರ, ಬೈಕ್ ನಲ್ಲಿ ಆಗಮಿಸಿದ ದಂಪತಿ ಮತಚಲಾಯಿಸಿದರು.