ಶಿರಾ
ಶಿರಾ ವಿಧಾನಸಭಾ ಕ್ಷೇತ್ರವು ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದ್ದು, ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡು ಮಧ್ಯಾಹ್ನದವರೆಗೂ ಅತ್ಯಂತ ನೀರಸ ಮತದಾನ ಪ್ರಕ್ರಿಯೆ ಕಂಡು ಬಂದರೆ, ಮಧ್ಯಾಹ್ನದ ನಂತರ ಚುರುಕಿನಿಂದ ಮತದಾನ ನಡೆದಿದೆ. ವಿ.ವಿ.ಪ್ಯಾಡ್‍ನ ದೋಷದಿಂದ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಮತದಾನ ಕೊಂಚ ತಡವಾಗಿ ಆರಂಭಗೊಂಡ ಪ್ರಸಂಗಗಳೂ ನಡೆದಿವೆ.
ಮತದಾನ ಆರಂಭಗೊಂಡಾಗ ತಾಲ್ಲೂಕಿನ ಹಾಲೇನಹಳ್ಳಿ, ಬರಗೂರು, ದೊಡ್ಡಗೂಳ ಗ್ರಾಮದ ಮತಗಟ್ಟೆಯಲ್ಲಿ ಮತಯಂತ್ರದ ದೋಷದಿಂದ 10 ನಿಮಿಷ ತಡವಾಗಿ ಮತದಾನ ಆರಂಭಗೊಂಡಿತು ಎನ್ನಲಾಗಿದೆ.
ಮತ ಯಂತ್ರದ ತಾಂತ್ರಿಕ ದೋಷದಿಂದ ತಾಲ್ಲೂಕಿನ ತಾವರೆಕೆರೆ ವ್ಯಾಪ್ತಿಯ ಕೆ.ರಂಗನಹಳ್ಳಿ ಮತಗಟ್ಟೆಯಲ್ಲಿ 2 ಗಂಟೆ, ದೇವರಹಳ್ಳಿ ಮತಗಟ್ಟೆಯಲ್ಲಿ ಅರ್ಧ ತಾಸಿನವರೆಗೆ ಮತದಾನ ತಡವಾಗಿ ಆರಂಭಗೊಂಡಿದೆ. ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಗೋಣಿಹಳ್ಳಿ, ಹಂದಿಕುಂಟೆ ಹಾಗೂ ಕೆ.ಕೆ.ಪಾಳ್ಯಗಳ ಮತಗಟ್ಟೆಯಲ್ಲೂ ಮತ ಯಂತ್ರದ ದೋಷದಿಂದ ಅರ್ಧ ಗಂಟೆ ತಡವಾಗಿ ಮತದಾನ ಆರಂಭಗೊಂಡಿದೆ.
ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ತಾಲ್ಲೂಕಿನ ಮೇಕೇರಹಳ್ಳಿ, ಮುದಿಗೆರೆ, ಬೂವನಹಳ್ಳಿ ಮತಗಟ್ಟೆಯಲ್ಲಿ ಶೆ.50 ರಷ್ಟು ಮತದಾನ ನಡೆದಿದ್ದರೆ, ಶಿರಾ ನಗರದ ಅನೇಕ ಮತಗಟ್ಟೆಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೂ ಮತದಾನ ಚುರುಕಿನಿಂದ ನಡೆಯಲಿಲ್ಲ. ಶಿರಾ ನಗರದಲ್ಲಿ ಬೆಳಗ್ಗೆ 7 ಗಂಟೆಯಲ್ಲಿ ಸರದಿಯ ಸಾಲಲ್ಲಿ ನಿಂತು ಮತದಾರರು ಮತ ಚಲಾಯಿಸಿದರಾದರೂ, ಮಧ್ಯಾಹ್ನ 1 ಗಂಟೆಯ ನಂತರ ನೀರಸ ಪ್ರತಿಕ್ರಿಯೆ ಕಂಡು ಬಂದಿತು. ಸಂಜೆ 4 ಗಂಟೆಯ ನಂತರ ಶಿರಾ ನಗರದ ಮತಗಟ್ಟೆಗಳಲ್ಲಿ ಚುರುಕಿನಿಂದ ಮತದಾನ ನಡೆಯಿತು. ಶಿರಾ ನಗರದಲ್ಲಿ ಶೇ.65ರಷ್ಟು ಮತದಾನ ನಡೆದಿದೆ ಎನ್ನಲಾಗಿದೆ.
ಶಿರಾ ನಗರದ ಹಳೆಯ ಪುರಸಭಾ ಕಚೆರಿಯಲ್ಲಿ ಈ ಕಳೆದ ಚುನಾವಣೆಗಳಲ್ಲಿ 171 ಮತ್ತು 172ರ ಮತಗಟ್ಟೆ ಸ್ಥಾಪಿಸಲಾಗಿದ್ದು, ಈ ಎರಡೂ ಮತಗಟ್ಟೆಗಳನ್ನು ರಂಗನಾಥ ಕಾಲೇಜಿನ ಮತಗಟ್ಟೆಗೆ 171ನ್ನು ಹಾಗೂ 172 ರ ಸಂಖ್ಯೆಯ ಮತಗಟ್ಟೆಯನ್ನು ಸರ್ಕಾರಿ ಪ್ರ.ದ. ಕಾಲೇಜಿನ ಮತಗಟ್ಟೆಗೆ ವರ್ಗಾವಣೆ ಮಾಡಲಾಗಿದ್ದು, ಮತಗಟ್ಟೆ ಬದಲಾದ ಮಾಹಿತಿ ಇಲ್ಲದ ಮತದಾರರು ಹಳೆಯ ಪುರಸಭಾ ಕಚೆರಿಗೆ ಬಂದು ಮತಗಟ್ಟೆಯನ್ನು ಕಾಣದೆ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಅನೇಕ ಮತಗಟ್ಟೆಗಳಲ್ಲಿ ಸಂಜೆ 6 ಗಂಟೆಯವರೆಗೆ ಕೆಲವೆಡೆ ಶೇ.71 ರಷ್ಟು ಮತ್ತಲವೆಡೆ ಶೇ.65ರಷ್ಟು ಮತದಾನ ನಡೆದಿದೆ. ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಶಿರಾ ತಾಲ್ಲೂಕಿನ ಕಂಚಿಗಾನಹಳ್ಳಿ ಮತಗಟ್ಟೆಯಲ್ಲಿ 1610 ಮತದಾರರಿರುವ ಒಂದು ಮತಗಟ್ಟೆ ಇದ್ದದ್ದರಿಂದ ಮತದಾರರು ಕಿಕ್ಕಿರಿದು ಸರದಿ ಸಾಲಲ್ಲಿ ನಿಂತಾಗ ಕೆಲ ಮತದಾರರು ಎರಡು ಮತಗಟ್ಟೆ ಮಾಡಬೇಕಿತ್ತು ಎಂದು ಆರೋಪಿಸಿ ಮತಗಟ್ಟೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.ಇದೇ ಶಿರಾ ತಾಲ್ಲೂಕಿನ ಗೋಪಾಲದೇವರಹಳ್ಳಿ ಗ್ರಾಮದ ಮತಗಟ್ಟೆಯೂ ಕೂಡ ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದ್ದು ಮತ ಯಂತ್ರದ ದೋಷದಿಂದ ಒಂದು ಗಂಟೆ ತಡವಾಗಿ ಮತದಾನ ಆರಂಭಗೊಂಡಿತು ಎನ್ನಲಾಗಿದೆ.