ಕುಣಿಗಲ್
ಹಸಿದವರಿಗೆ ಅನ್ನ ನೀಡುವ ರೈತಾಪಿ ಜನರ ಬೆನ್ನೆಲುಬಾಗಿರುವ ರಾಸುಗಳ ರಕ್ಷಣೆಗಾಗಿ ಪಶು ವೈದ್ಯನಾಗುವ ಬಯಕೆ ನನ್ನದು ಎಂದು ತಾಲ್ಲೂಕಿನ ಹುಲಿಯೂರುದುರ್ಗ ಬಸ್‍ನಿಲ್ದಾಣದಲ್ಲಿ ಕಡಲೆ ಕಾಯಿ ಮಾರಾಟ ಮಾಡಿ, ಪಿಯುಸಿಯಲ್ಲಿ ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದಿರುವ ಹೆಚ್.ವಿ.ಮಂಜೇಶ ಎಂಬ ವಿದ್ಯಾರ್ಥಿಯ ಕನಸು ನನಸಾಗುವುದೇ?!
ಮನೆಯಲ್ಲಿ ಬಡತನದ ಬೇಗೆಯೊಂದಿಗೆ ತನ್ನ ವಿದ್ಯಾಭ್ಯಾಸವನ್ನ ಅಂತು-ಇಂತೂ ಚೆನ್ನಾಗಿ ಕಲಿತು ಸಾಧಿಸಿದ ಇವನಿಗೆ ಮುಂದಿನ ಶಿಕ್ಷಣಕ್ಕೆ ಆಸರೆ ಹೇಗೆ ಎಂಬುದೇ ಚಿಂತೆಯಾಗಿದೆ ಕಾಡುತ್ತಿದೆ. ಕುಣಿಗಲ್‍ನ ಜ್ಞಾನ ಭಾರತಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ. 96% ಅಂಕಗಳನ್ನು ಪಡೆದು ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದಿರುವ ಹೆಚ್.ವಿ.ಮಂಜೇಶ ಎಂಬ ವಿದ್ಯಾರ್ಥಿಯ ಕನಸು ಇದು.
ಮಳೆ ಇಲ್ಲದೆ ಬೆಳೆ ಇಲ್ಲದೆ ಇಂದು ಅದೆಷ್ಟೋ ಮಂದಿ ಹಸು, ಕುರಿ, ಎಮ್ಮೆ ಸಾಕುತ್ತ ಹೈನುಗಾರಿಕೆಯನ್ನೆ ಉಪಕಸುಬನ್ನಾಗಿ ರೂಪಿಸಿಕೊಂಡಿದ್ದಾರೆ. ಆದರೆ ಈ ಹೊತ್ತಿನ ದಿನಗಳಲ್ಲಿ ಪಶುಗಳಿಗೆ ಸಾಕಷ್ಟು ರೋಗಗಳು ಕಾಣಿಸಿಕೊಳ್ಳುತ್ತಿವೆ. ರೋಗ ಕಾಣಿಸಿಕೊಂಡರೂ ನಮ್ಮ ರೈತರಿಗೆ ಕಾಯಿಲೆ ಅರಿವಾಗುವುದಿಲ್ಲ. ಸೂಕ್ತ ಚಿಕಿತ್ಸೆ ದೊರಕುತ್ತಿಲ್ಲ. ಹೀಗಾಗಿ ರಾಸುಗಳು ಸಾವನ್ನಪ್ಪುತ್ತಿವೆ. ಮನುಷ್ಯರು ನೋವನ್ನು ಹೇಳಿಕೊಳ್ಳುತ್ತಾರೆ. ಆದರೆ ಪಶುಗಳು ಹೇಳುವುದಿಲ್ಲ. ಪಶುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎನ್ನುವುದು ಈ ವಿದ್ಯಾರ್ಥಿಯ ಮನದಾಳದ ಮಾತು.
ಬಡತನದಲ್ಲಿ ಓದಿ ಇವನು ಸಾಧಿಸಿದ ಅಂಕಗಳು ಎಸ್‍ಎಸ್‍ಎಲ್‍ಸಿಯಲ್ಲಿ ಶೇ.92.60 ಅಂಕ ಪಡೆದಿದ್ದನು. ಈಗ ಪಿಯುಸಿಯಲ್ಲಿ ಶೇ. 96.16 ಅಂಕ ಪಡೆದಿದ್ದಾನೆ. ಕನ್ನಡ-97, ಇಂಗ್ಲೀಷ್-91, ಭೌತಶಾಸ್ತ್ರ-98, ರಸಾಯಸ ಶಾಸ್ತ್ರ-99, ಗಣಿತ-98 ಮತ್ತು ಜೀವಶಾಸ್ತ್ರ-94 ಅಂಕಗಳನ್ನು ಗಳಿಸಿದ್ದಾನೆ. ತಾಲ್ಲೂಕಿನ ಹುಲಿಯೂರುದುರ್ಗದ ಹಳೆಪೇಟೆ ವೆಂಕಟೇಶ್ ಮತ್ತು ಪ್ರತಿಮಾ ಅವರ ಪುತ್ರನಾಗಿರುವ ಮಂಜೇಶ ಓದಿನಲ್ಲಿ ಸದಾ ಮುಂದು.
ಸಂಜೆ ಮತ್ತು ರಜೆ ಸಮಯದಲ್ಲಿ ಕಡಲೆಕಾಯಿ ಮಾರುವ ಕಾಯಕ. ಕಡಲೆ ಕಾಯಿ ಮಾರಿದರೆ ಬದುಕಿನ ಬಂಡಿ ಓಡುತ್ತದೆ, ಇಲ್ಲದಿದ್ದರೆ ಇಲ್ಲ. ಕಡಲೆಕಾಯಿಯನ್ನು ಹುಲಿಯೂರುದುರ್ಗದ ಬಸ್ ನಿಲ್ದಾಣದಲ್ಲಿ ಸಂಜೆ ಮತ್ತು ರಜೆ ಸಮಯದಲ್ಲಿ ಮಾರಾಟ ಮಾಡುವುದು ಈತನ ಕಾಯಕವಾದರೆ, ಅತ್ತ ತಂದೆ ತಾಯಿ ಕೂಲಿಗೆ ಹೋಗುತ್ತಾರೆ. ಈತ ಓದಿನ ಜೊತೆಗೆ ರಜೆ ದಿನಗಳಲ್ಲಿ ಕುರಿಗಾಹಿಯಾಗಿಯೂ ಬೆಟ್ಟ ಗುಡ್ಡಗಳಲ್ಲಿ ಓಡಾಡಿಕೊಂಡು ಇದ್ದನು. ಆದರೆ, ಮನೆಯ ಸಂಸಾರದ ಬಂಡಿ ಸಾಗಿಸುತ್ತಿದ್ದ ಹಲವಾರು ಕುರಿಗಳು ರೋಗಕ್ಕೆ ತುತ್ತಾಗಿ ಸಾವನ್ನಪ್ಪಿವೆ. ಇನ್ನುಳಿದ ಕುರಿಗಳನ್ನು ಅಕ್ಕನ ಮದುವೆಗಾಗಿ ಮಾರಾಟ ಮಾಡಿಕೊಂಡು ಈಗ ದಿಕ್ಕು ತೋಚದೆ ಇಡೀ ಕುಟುಂಬ ಕೈಕಟ್ಟಿ ಕುಳಿತಿದೆ.
ತಂದೆ-ತಾಯಿಯ ಕಷ್ಟ ನೋಡಲಾಗದೆ ಛಲದಿಂದ ಕಷ್ಟ ಪಟ್ಟು ವ್ಯಾಸಂಗ ಮಾಡಿದೆ. ಕಾಲೇಜಿನ ಆಡಳಿತ ಮಂಡಳಿ ಮತ್ತು ನಮ್ಮ ಕಾಲೇಜಿನ ಪ್ರಾಚಾರ್ಯರಾದ ಕಪನಿಪಾಳ್ಯ ರಮೇಶ ಅವರು ನಾನು ಇಷ್ಟು ಅಂಕ ಗಳಿಸಲು ಪ್ರೇರಣೆಯಾಗಿದ್ದಾರೆ. ಕಾಲೇಜಿನಲ್ಲಿ ಕೊನೆಯ ಮೂರು ತಿಂಗಳು ನಡೆಸಿದ ನೈಟ್ ಕ್ಲಾಸ್ ಜೊತೆಗೆ ಕಾಲೇಜಿನ ಉಪನ್ಯಾಸಕರ ಪ್ರೊತ್ಸಾಹ ದಿಂದ ಓದಿಗೆ ಅನುಕೂಲವಾಯಿತು ಎಂದು ತಿಳಿಸಿದ.
ಶಿಕ್ಷಕರ ಪ್ರೊತ್ಸಾಹದ ನುಡಿಯೇ ಸಾಧನೆಗೆ ಮೆಟ್ಟಿಲು :
ಪ್ರಾಚಾರ್ಯ ಡಾ.ಕಪನಿಪಾಳ್ಯ ರಮೇಶ ಕಡಲೆಕಾಯಿ ವ್ಯಾಪಾರ ಮಾಡಿಕೊಂಡು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದಿರುವ ನಮ್ಮ ಕಾಲೇಜಿನ ವಿದ್ಯಾರ್ಥಿ ಮಂಜೇಶನ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಸದಾ ಓದಿನಲ್ಲಿ ಮುಂದಿದ್ದ ಮಂಜೇಶ್ ತಾನು ಬಿಡುವಿನ ವೇಳೆಯಲ್ಲಿ ಸಂಸಾರ ನಿರ್ವಹಣೆಗಾಗಿ ಮಾಡುತ್ತಿದ್ದ ಕಡಲೆಕಾಯಿ ವ್ಯಾಪಾರದ ವಿಚಾರವನ್ನು ಫಲಿತಾಂಶ ಬಂದ ನಂತರ ತಿಳಿದು ಆಶ್ಚರ್ಯವಾಯಿತು ಎಂದು ಖುಷಿ ಹಂಚಿಕೊಂಡರು.