ವಿದ್ಯಾಪೀಠದ ಬೃಂದಾವನದಲ್ಲಿ ಚಿರ ನಿದ್ರೆಗೆ ಜಾರಿದ ಪೇಜಾವರ ಶ್ರೀಗಳು..!

ಬೆಂಗಳೂರು

      ಇಂದು ನಿಧನರಾದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಪಾರ್ಥೀವ ಶರೀರದ ಬೃಂದಾವನ ಕಾರ್ಯಕ್ರಮವು ಸಕಲ ಸರ್ಕಾರಿ ಗೌರವ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿದ್ಯಾಪೀಠದಲ್ಲಿ ಇಂದು ನೆರವೇರಿತು. 

ಉಡುಪಿಯಿಂದ ವಿಶೇಷ ವಿಮಾನದ ಮೂಲಕ ಬಂದ ಪಾರ್ಥೀವ ಶರೀರವನ್ನು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ಸಂಜೆ 6-20ಕ್ಕೆ ನಗರದ ವಿದ್ಯಾಪೀಠಕ್ಕೆ ಅಂತ್ಯಸಂಸ್ಕಾರಕ್ಕಾಗಿ ತರಲಾಯಿತು. 

 ಬಳಿಕ ವಿದ್ಯಾಪೀಠ ಆವರಣದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರುಗಳಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ, ಬಸವರಾಜ್ ಬೊಮ್ಮಾಯಿ, ಸಂಸದರಾದ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ,ಕೇಂದ್ರದ ಮಾಜಿ ಸಚಿವೆ ಉಮಾಭಾರತಿ, ಸಿರಿಗೆರೆ ಮಠದ ಶ್ರೀ ಸೇರಿದಂತೆ ಅನೇಕರು ಅಂತಿಮ ನಮನ ಸಲ್ಲಿಸಿದರು. 

ತೀವ್ರ ಅನಾರೋಗ್ಯದ ಬಳಲುತ್ತಿದ್ದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವ ತೀರ್ಥ ಸ್ವಾಮೀಜಿಯವರ ಬೃಂದಾವನಸ್ಥರಾದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶ್ರೀಗಳು ಚಿಕಿತ್ಸೆ ಫಲಕಾರಿಯಾಗದೆ ಬೃಂದಾವನಸ್ಥರಾಗಿದ್ದಾರೆ.

ಉಡುಪಿಯ ಅಜ್ಜರ ಕಾಡಿನಲ್ಲಿ ಶ್ರೀಗಳ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಟ್ಟನಂತರ ಹೆಲಿಕ್ಯಾಪ್ಟರ್ ಮೂಲಕ ಬೆಂಗಳೂರಿಗೆ ತಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು ಸಂಜೆ ಕತ್ರಿಗುಪ್ಪೆಯಲ್ಲಿರುವ ವಿದ್ಯಾಪೀಠದಲ್ಲಿ ಶ್ರೀಗಳ ಬೃಂದಾವನಸ್ಥ ಕಾರ್ಯ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.

ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರದ ಮಾಜಿ ಸಚಿವೆ ಹಾಗೂ ಶ್ರೀಗಳ ಶಿಷ್ಯೆ ಉಮಾಭಾರತಿ ಸರ್ಕಾರದ ಹಲವು ಸಚಿವರುಗಳು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾದವ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟಿಲ್, ಶಾಸಕರುಗಳು, ವಿವಿಧ ಪಕ್ಷದ ಮುಖಂಡರುಗಳು, ಧಾರ್ಮಿಕ ನಾಯಕರುಗಳು, ಸ್ವಾಮೀಜಿಗಳು, ಯತಿವರ್ಯರುಗಳ ಸಮ್ಮುಖದಲ್ಲಿ ಬೃಂದಾವನಸ್ಥ ಕಾರ್ಯ ನಡೆಯಿತು.

ಶ್ರೀಗಳಿಗೆ 88 ವರ್ಷ ವಯಸ್ಸಾಗಿತ್ತು. ಉಡುಪಿಯ ಶ್ರೀ ಕೃಷ್ಣಮಠದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು. ರಾಮಮಂದಿರ ಆಂದೋಲನದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಬೆಂಗಳೂರಿನಲ್ಲಿ ಶ್ರೀ ಕೃಷ್ಣ ಸೇವಾಶ್ರಮ ಆಸ್ಪತ್ರೆ ಸ್ಥಾಪಿಸಿ ವೈದ್ಯಕೀಯ ಸೇವೆಯನ್ನು ನೀಡುತ್ತಾ ಬಂದಿದ್ದಾರೆ.

ದಕ್ಷಿಣ ಭಾರತದ ಸ್ವಾಮೀಜಿಯೊಬ್ಬರು ಇಡೀ ದೇಶದಲ್ಲೇ ಚಿರಪರಿಚಿತರಾಗಿದ್ದರು. ರಾಜ್ಯ ಮಾತ್ರವಲ್ಲದೆ, ರಾಷ್ಟ್ರಮಟ್ಟದಲ್ಲೂ ಶ್ರೀಗಳ ಕೀರ್ತಿ ವಿಸ್ತರಿಸಿತ್ತು. ಉಡುಪಿಯ ಸುಬ್ರಮಣ್ಯದ ಸಮೀಪದ ಹಳ್ಳಿ. ಅಚಾರ್ಯ ಮಧ್ವರು ನಡೆದಾಡಿದ ಪವಿತ್ರ ಸ್ಥಳ. ಹೆಸರು ರಾಮಕುಂಜ. ಬಹಳ ಜನಕ್ಕೆ ಹೆಸರು ಕೇಳಿಯೇ ಗೊತ್ತಿಲ್ಲ. ಅಂಥ ಆಜ್ಞಾತವಾದೊಂದು ಕುಗ್ರಾಮ. ಇಂಥ ಹಳ್ಳಿಯಲ್ಲಿ 1931 ಏಪ್ರಿಲ್ 27ರಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಜನಿಸಿದ್ದರು.

8 ದಿನಗಳ ಹಿಂದಷ್ಟೇ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪೇಜಾವರ ಶ್ರೀಗಳು ಡಿ.20ರಂದು ಮುಂಜಾನೆ 5ಕ್ಕೆ ಮಣಿಪಾಲ ಆಸ್ಪತ್ರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ದಾಖಲಾಗಿದ್ದರು. ಅಂದಿನಿಂದ ಪ್ರಜ್ಞೆ ಮರಳಿ ಬಂದಿರಲಿಲ್ಲ. ನ್ಯೂಮೋನಿಯಾ ನಿಯಂತ್ರಣಕ್ಕೆ ಬಂದರೂ, ದಿನದಿಂದ ದಿನಕ್ಕೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟು, ಅವರನ್ನು ಪ್ರಜ್ಞೆ ಮರಳಿಸುವ ಪ್ರಯತ್ನಗಳೆಲ್ಲವೂ ವಿಫಲಗೊಂಡಿವೆ. ಆರೋಗ್ಯ ತೀವ್ರ ಕುಸಿದಿದ್ದು, ಮೆದುಳು ಕಾರ್ಯ ಕುಂಠಿತಗೊಂಡಿತ್ತು.

ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಲಕ್ಷಣಗಳು ಕಂಡು ಬರದ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ 6.55ರ ಸುಮಾರಿಗೆ ಪೇಜಾವರ ಮಠಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆಸ್ಪತ್ರೆಯಿಂದ ಉಡುಪಿಯ ಪೇಜಾವರ ಮಠಕ್ಕೆ ಆಯಂಬುಲೆನ್ಸ್ ಮೂಲಕ ಶ್ರೀಗಳನ್ನು ಶಿಫ್ಟ್ ಮಾಡಲಾಗಿತ್ತು. ಅಲ್ಲದೆ, ಮಠದ ಕೊಠಡಿಯಲ್ಲಿಯೇ ಐಸಿಯುನಂತಹ ವಾತಾವರಣದಲ್ಲಿ ಚಿಕಿತ್ಸೆ ನೀಡಲು ಆರಂಭಿಸಲಾಗಿತ್ತು. ಆದರೂ, ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಳು ಇಂದು ಕೊನೆಯುಸಿರೆಳೆದಿದ್ದಾರೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap