ತುರುವೇಕೆರೆ
ತಾಲ್ಲೂಕಿನ ಲಯನ್ಸ್ ಕ್ಲಬ್, ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ ಸಂಘ, ತಾಲ್ಲೂಕು ಆರೋಗ್ಯ ಕೇಂದ್ರ, ಜಿಲ್ಲಾ ಸರ್ಕಾರಿ ರಕ್ತ ನಿಧಿ ಸಂಯುಕ್ತ ಆಶ್ರಯದಲ್ಲಿ ಗ್ಲೋಬಲ್ ಎಂಬಸಿ ಕಾನ್ವೆಂಟ್ ಆವರಣದಲ್ಲಿ ನಡೆದ ರಕ್ತ ಕೊಟ್ಟೇವು, ಪಿಂಚಣಿ ಬಿಡೆವು ಎಂಬ ವಿಶೇಷ ಕಾರ್ಯಕ್ರಮದಡಿಯಲ್ಲಿ ಹಲವಾರು ಸರ್ಕಾರಿ ನೌಕರರಿಂದ ರಕ್ತದಾನ ಮಾಡುವ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿದರು.
ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ವಕೀಲ ಪಿ.ಹೆಚ್.ಧನಪಾಲ್ ಪಿಂಚಣಿ ಎಂಬುದು ನೌಕರರಿಗೆ ಜೀವನಾಧಾರ. ವಯೋಮಾನದನ್ವಯ ನಿವೃತ್ತಿಯಾಗುವ ನೌಕರರ ಕುಟುಂಬದವರ ರಕ್ಷಣೆಗೆ ಪಿಂಚಣಿ ಅಗತ್ಯವಾಗಿದೆ. ಸರ್ಕಾರ ಜಾರಿಗೆ ತಂದಿರುವ ಪಿಂಚಣಿ ರಹಿತ ವ್ಯವಸ್ಥೆಯನ್ನು ರದ್ದು ಮಾಡಿ ಸರ್ಕಾರಿ ನೌಕರರಿಗೆ ಪಿಂಚಣಿ ವ್ಯವಸ್ಥೆಯನ್ನು ಕೂಡಲೇ ಜಾರಿಗೊಳಿಸಬೇಕೆಂದು ಆಗ್ರಹಿಸಿ ಆಗ್ರಹಿಸಿದರು.
ತಾಲ್ಲೂಕು ಸರ್ಕಾರಿ ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ಲೋಕೇಶ್ ಮಾತನಾಡಿ ನಿವೃತ್ತಿದಾರರಿಗೆ ಪಿಂಚಣಿ ಊರುಗೋಲಾಗಿತ್ತು. ಆದರೆ ಈಗ ಪಿಂಚಣಿ ಸೌಲಭ್ಯವನ್ನು ಸರ್ಕಾರ ಕಿತ್ತುಕೊಂಡಿರುವುದರಿಂದ ಜೀವನ ನಡೆಸುವುದು ದುಸ್ತರವಾಗಲಿದೆ. ಆದ್ದರಿಂದ ಸರ್ಕಾರ ಪಿಂಚಣಿ ವ್ಯವಸ್ಥೆಯನ್ನು ಪುನರ್ ಜಾರಿಗೆ ತರಬೇಕು ಎಂದು ಆಗ್ರಹಿಸಲು ನೌಕರರು ರಕ್ತ ನೀಡುವ ಮೂಲಕ ಸರ್ಕಾರದ ಗಮನ ಸೆಳೆಯಲು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿದರು.
ಡಾ.ಎ.ನಾಗರಾಜ್ ಮಾತನಾಡಿ ರಕ್ತದಾನದಂತೆ ಅಂಗದಾನವೂ ಪ್ರಾಮುಖ್ಯತೆ ಪಡೆದಿದೆ. ಇತ್ತೀಚೆಗೆ ಮೂತ್ರಪಿಂಡ ಮತ್ತು ಮೂತ್ರಕೋಶಗಳ ಸಮಸ್ಯೆ ಅತ್ಯಧಿಕವಾಗಿ ಕಾಣಿಸುತ್ತಿದೆ. ಯುವಕರು ಅಂಗದಾನಗಳ ಬಗ್ಗೆಯೂ ಜಾಗೃತಗೊಂಡರೆ ಅವಶ್ಯಕತೆ ಇರುವವರಿಗೆ ನೀಡಲು ಸಹಕಾರಿಯಾಗಲಿದೆ ಎಂದು ಹೇಳಿದರು.
ತಾಲ್ಲೂಕು ಕಾರ್ಯದರ್ಶಿ ಗಿರೀಶ್, ಸಂಘಟನೆಯ ಸಂಚಾಲಕ ನಿರಂಜನ ಪ್ರಸಾದ್ ಮಾತನಾಡಿ ಸರ್ಕಾರಕ್ಕೆ ನಿವೃತ್ತಿ ಹೊಂದಿದವರ ಬದುಕಿನ ಕಷ್ಟ ಗೊತ್ತಿಲ್ಲ. ನಿವೃತ್ತಿ ನಂತರದ ಜೀವನ ಭೀಕರ ಎಂದರು.
ಪ್ರಾಂಶುಪಾಲ ಗಂಗಾಧರ್ ದೇವರಮನೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲಯನ್ಸ್ ಅಧ್ಯಕ್ಷ ನಂಜೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ಲ|| ಮಹೇಶ್, ಕಾರ್ಯದರ್ಶಿ ಲ|| ಬಸವರಾಜು ಸೇರಿದಂತೆ ಅನೇಕ ಸರ್ಕಾರಿ ನೌಕರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








