ತುಮಕೂರು
ರಾಜ್ಯ ಸರ್ಕಾರದ `ಋಣ ಪರಿಹಾರ ಕಾಯ್ದೆ’ಯಡಿ ಋಣಮುಕ್ತರಾಗಲು ನಿಗದಿತ ನಮೂನೆಯ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ತುಮಕೂರು ಉಪವಿಭಾಗಾಧಿಕಾರಿ ಕಛೇರಿ ಆವರಣದಲ್ಲಿ ಮತ್ತು ಮಿನಿವಿಧಾನಸೌಧದ ಹಿಂಬದಿಯಲ್ಲಿ ಗುರುವಾರ ಇಡೀ ದಿನ ಜನಜಾತ್ರೆ ಉಂಟಾಯಿತು.
ತುಮಕೂರು ನಗರದ ಮಿನಿವಿಧಾನಸೌಧದ ಒಂದನೇ ಮಹಡಿಯಲ್ಲಿರುವ ತುಮಕೂರು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಅರ್ಜಿ ವಿತರಿಸಲಾಗುವುದು ಎಂಬ ಸುದ್ದಿ ಸಾಮಾಜಿಕ ಜಾಲತಾಣವಾದ `ವಾಟ್ಸಾಪ್’ ಮೂಲಕ ಕಾಡ್ಗಿಚ್ಚಿನಂತೆ ಹರಡಿದ ಹಿನ್ನೆಲೆಯಲ್ಲಿ ಗುರುವಾರ ಇಡೀ ದಿನ ಉಪವಿಭಾಗಾಧಿಕಾರಿ ಕಚೇರಿ ಹಾಗೂ ಸುತ್ತಮುತ್ತ ಜನಜಂಗುಳಿ ಹಾಗೂ ನೂಕು ನುಗ್ಗಲು ಉಂಟಾಯಿತು. ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಿಂದ ಬಂದವರು ಹಾಗೂ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಕಂಡುಬಂದರು.
ಉಪವಿಭಾಗಾಧಿಕಾರಿ ಕಚೇರಿ ಮುಂದೆ ಬೆಳಗ್ಗೆ 8 ಗಂಟೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತರು. ಮಕ್ಕಳನ್ನೂ ಎತ್ತಿಕೊಂಡು ಬಂದಿದ್ದ ಅಸಂಖ್ಯಾತ ಮಹಿಳೆಯರು ಮತ್ತು ಪುರುಷರು ಎಲ್ಲರೂ ಏಕಕಾಲದಲ್ಲಿ ಅರ್ಜಿಗಾಗಿ ಮುಗಿಬಿದ್ದು ನೂಕು ನುಗ್ಗಲು ಉಂಟಾಯಿತು . ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ನಿಗದಿತ ಅರ್ಜಿ ನಮೂನೆಯನ್ನು ಉಚಿತವಾಗಿ ವಿತರಿಸಲು ಮತ್ತು ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸಲು ಹೊರಭಾಗದಲ್ಲೇ ವಿಶೇಷ ಕೌಂಟರ್ ಮಾಡಿ, ಬೆಳಗ್ಗೆ 10-30 ರಿಂದ ಸಿಬ್ಬಂದಿ ಕಾರ್ಯನಿರ್ವಹಿಸತೊಡಗಿದರು.
ಫಲಾನುಭವಿಗಳು ಕೊಟ್ಟ ಅರ್ಜಿಯನ್ನು ಸ್ವೀಕರಿಸಿ, ಸದರಿ ಫಲಾನುಭವಿಗೆ ಅರ್ಜಿಯ ನಕಲಿಗೆ ಸ್ವೀಕೃತಿ ಬಗ್ಗೆ ಸೀಲ್ ಹಾಕಿ ನೀಡಿದರು. ಮಧ್ಯಾಹ್ನ ದಾಟಿದರೂ ನೂಕು ನುಗ್ಗಲು ಮಾತ್ರ ಮುಂದುವರಿದೇ ಇತ್ತು. ಅಲ್ಲಿ ಮಾತ್ರವಲ್ಲದೆ ಮಿನಿವಿಧಾನಸೌಧದ ಹಿಂಭಾಗ ಸಹ ಎಲ್ಲೆಡೆ ಈ ಫಲಾನುಭವಿಗಳ ಗುಂಪುಗಳೇ ತುಂಬಿದ್ದವು.
ನಿಗದಿತ ನಮೂನೆಯ ಅರ್ಜಿಗಳ ಜೆರಾಕ್ಸ್ ಪ್ರತಿಗಳಿಗೆ ಹಾಗೂ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳ ಜೆರಾಕ್ಸ್ ಪ್ರತಿಗಳಿಗಾಗಿ ಇಲ್ಲಿರುವ ಜೆರಾಕ್ಸ್ ಅಂಗಡಿಗಳಿಗೆ ಜನರು ಮುಗಿಬಿದ್ದರು. ಅಲ್ಲಿ ಒಂದಕ್ಕೆರಡು ಪಟ್ಟು ಹಣವನ್ನು ತೆತ್ತು ಜೆರಾಕ್ಸ್ ಮಾಡಿಸಿಕೊಂಡರು. ಇದಲ್ಲದೆ ಕೆಲವರು ಅರ್ಜಿ ನಮೂನೆಗಳನ್ನು ಜೆರಾಕ್ಸ್ ಮಾಡಿಸಿ, ಹಣಕ್ಕೆ ಮಾರಾಟವನ್ನೂ ಮಾಡಿದರು. ಮಿನಿವಿಧಾನ ಸೌಧದ ಹಿಂಬದಿಯ ಆವರಣ ಮತ್ತು ಹೊರಗೆ ಅನೇಕ ಸ್ಥಳಗಳಲ್ಲಿ ಅರ್ಜಿಗಳನ್ನು ಭರ್ತಿ ಮಾಡಿಕೊಡುವವರೂ ಕಾಣಿಸಿಕೊಂಡು, ಫಲಾನುಭವಿಗಳಿಂದ 20-30 ರೂ. ಪಡೆದು ಅರ್ಜಿ ಬರೆದುಕೊಟ್ಟ ಪ್ರಸಂಗಗಳೂ ನಡೆದವು. ಅರ್ಜಿ ಪಡೆಯುವುದಕ್ಕೆ ಒಂದೆಡೆ ಧಾವಂತವಾದರೆ, ಅದನ್ನು ಭರ್ತಿ ಮಾಡಿ ನೀಡುವ ಬಗೆಗೂ ಫಲಾನುಭವಿಗಳು ಭಾರಿ ಅವಸರ ಪ್ರದರ್ಶಿಸುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.
ವಾಟ್ಸಾಪ್ ನೋಡಿ ಬಂದೆ
ತುಮಕೂರು ತಾಲ್ಲೂಕು ನಾಗವಲ್ಲಿ ಗ್ರಾಮದಿಂದ ಬಂದಿದ್ದ ವ್ಯಕ್ತಿಯೊಬ್ಬರನ್ನು “ಪ್ರಜಾಪ್ರಗತಿ”ಯು ಮಾತನಾಡಿಸಿದಾಗ “ನಾನು ವಾಟ್ಸಾಪ್ ಸಂದೇಶ ನೋಡಿ ಬೆಳಗ್ಗೆ 8 ಗಂಟೆಗೇ ಅರ್ಜಿ ಪಡೆಯಲು ಇಲ್ಲಿಗೆ ಬಂದೆ. ಆಗಲೇ ಇಲ್ಲಿ ಜನಜಂಗುಳಿ ಇತ್ತು. ಕೊನೆಗೂ ಅರ್ಜಿ ಪಡೆದಿದ್ದೇನೆ” ಎಂದು ಹೇಳಿದರು.
“ಎರಡು ವರ್ಷಗಳ ಹಿಂದೆ ಪತ್ನಿಯ ಹೆರಿಗೆ ಸಂದರ್ಭದಲ್ಲಿ ಕೆಲವು ಚಿನ್ನಾಭರಣಗಳನ್ನು ಸ್ಥಳೀಯವಾಗಿ ಖಾಸಗಿ ವ್ಯಕ್ತಿಯ ಬಳಿ ಅಡ ಇಟ್ಟು 30 ಸಾವಿರ ರೂ. ಸಾಲ ಪಡೆದಿದ್ದೆ. ಈವರೆಗೆ ಸಾಲ ತೀರಿಸಲು ಸಾಧ್ಯವಾಗಿಲ್ಲ. ಸರ್ಕಾರದ ಈ ಯೋಜನೆಯನ್ನು ಉಪಯೋಗಿಸಿಕೊಂಡು ಸಾಲದಿಂದ ಮುಕ್ತನಾಗಲು ಬಯಸಿದ್ದೇನೆ” ಎಂದು ವಿಕಲಚೇತನರೂ ಆದ ಆ ವ್ಯಕ್ತಿ ಪ್ರತಿಕ್ರಿಯಿಸಿದರು.
ನಿಯಮಾವಳಿ ವಿವರ
`ಋಣ ಪರಿಹಾರ ಕಾಯ್ದೆ’ ಪ್ರಕಾರ ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರು ಮತ್ತು ದುರ್ಬಲ ವರ್ಗಕ್ಕೆ ಸೇರಿದ ವ್ಯಕ್ತಿ ಅರ್ಜಿ ಸಲ್ಲಿಸಬಹುದು. ವಾರ್ಷಿಕ ಎಲ್ಲ ಮೂಲಗಳಿಂದ 1,20,000 ರೂಗಳಿಗಿಂತ ಕಡಿಮೆ ವರಮಾನ ಇರಬೇಕು. ಖಾಸಗಿ ಲೇವಾದೇವಿದಾರರು ಮತ್ತು ಗಿರವಿದಾರರಿಂದ 2019 ರ ಜುಲೈ 23 ಕ್ಕೆ ಮೊದಲು ಪಡೆದಿರುವ ಸಾಲಕ್ಕೆ ಈ ಕಾಯ್ದೆ ಅನ್ವಯವಾಗುತ್ತದೆ.
ಸಹಕಾರ ಸಂಘಗಳು, ಸೌಹಾರ್ದ ಸಹಕಾರ ಸಂಘಗಳು, ಆರ್.ಬಿ.ಐ. ಕಾಯ್ದೆಯಡಿ ನಿಯಂತ್ರಿಸಲ್ಪಡುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು, ಸಹಕಾರ ಸಂಘಗಳ ನೋಂದಣಿ ಕಾಯ್ದೆ 1960 ರ ಅಧಿನಿಯಮ 17 ರಲ್ಲಿ ನೋಂದಾಯಿತವಾಗಿರುವ ಅತಿಸಣ್ಣ ಹಣಕಾಸು ಸಂಸ್ಥೆಗಳು, ಚಿಟ್ ಫಂಡ್ ಕಾಯ್ದೆಯಲ್ಲಿ ನೋಂದಣಿಗೊಂಡ ಚಿಟ್ ಕಂಪನಿಗಳಿಂದ ಪಡೆದಿರುವ ಸಾಲವು ಪರಿಹಾರಕ್ಕೆ ಅರ್ಹವಿರುವುದಿಲ್ಲ. ಋಣಪರಿಹಾರ ಕಾಯ್ದೆಯ ಕಲಂ 11 ರಲ್ಲಿ ಉಲ್ಲೇಖಿಸಿರುವ ಸಾಲಗಳು ಅನ್ವಯಿಸುವುದಿಲ್ಲ.
ಅರ್ಜಿ ಸಲ್ಲಿಕೆ ಕಾಲಾವಧಿ
2019 ರ ಜುಲೈ 23 ರಿಂದ 90 ದಿನಗಳೊಳಗೆ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ನಮೂನೆ-2 ರಲ್ಲಿ (ಸಾಲ ಪಡೆದವರು) ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅಗತ್ಯ ದಾಖಲಾತಿಗಳು
ಅರ್ಜಿ ಜೊತೆಗೆ ಆಧಾರ್/ವೋಟರ್ ಐಡಿಕಾರ್ಡ್, ಬಿ.ಪಿ.ಎಲ್. ರೇಷನ್ ಕಾರ್ಡ್, ಸಣ್ಣ ರೈತರಾಗಿದ್ದಲ್ಲಿ ತಹಸೀಲ್ದಾರರಿಂದ ಪಡೆದ ಸಣ್ಣ ರೈತ ದೃಢೀಕರಣ ಪತ್ರ ಹಾಗೂ 1,20,000 ರೂ. ಒಳಗಿನ ಆದಾಯ ಪ್ರಮಾಣ ಪತ್ರ ಮತ್ತು ಕೃಷಿ ವರಮಾನವಲ್ಲದೆ ಬೇರೆ ಮೂಲದ ವರಮಾನ ಹೊಂದಿಲ್ಲವೆಂಬ ಘೋಷಣೆ, ಭೂರಹಿತ ಕೃಷಿ ಕಾರ್ಮಿಕರಾಗಿದ್ದಲ್ಲಿ ತಹಸೀಲ್ದಾರ ರಿಂದ ಪಡೆದ ಕೃಷಿ ಕಾರ್ಮಿಕ ದೃಢೀಕರಣ ಪತ್ರ, ದುರ್ಬಲ ವರ್ಗಗಳಿಗೆ ಸೇರಿದವರಾಗಿದ್ದಲ್ಲಿ ತಹಸೀಲ್ದಾರರಿಂದ ಪಡೆದ ಆದಾಯ ಪ್ರಮಾಣ ಪತ್ರ ಹಾಗೂ ದುರ್ಬಲ ವರ್ಗಕ್ಕೆ ಸೇರಿದವರೆಂದು ತಾನು ಸಣ್ಣ ರೈತನಾಘಿರುವುದಿಲ್ಲ, ಭೂರಹಿತ ಕೃಷಿ ಕಾರ್ಮಿಕನಾಗಿ ರುವುದಿಲ್ಲ ಎಂಬ ಸ್ವಯಂ ದೃಢೀಕರಣ ಪತ್ರ, ಸಾಲ ಪಡೆದಿರುವ ಬಗ್ಗೆ ದಾಖಲಾತಿಗಳನ್ನು ಲಗತ್ತಿಸಬೇಕು ಎಂದು ಸಾರ್ವಜನಿಕರಿಗೆ ಸೂಚಿಸಲಾಗಿದೆ.