ಮಧುಗಿರಿ
ಗ್ರಾಮದಲ್ಲಿ ಅನೈರ್ಮಲ್ಯ ಹೆಚ್ಚಾಗಿರುವುದರಿಂದ ನಾಗರಿಕರು ಕೆಲ ದಿನಗಳಿಂದ ಚಿಕಿತ್ಸೆಗಾಗಿ ಸಾವಿರಾರು ರೂಪಾಯಿಗಳನ್ನು ಆಸ್ಪತ್ರೆಗಳಿಗೆ ವೆಚ್ಚ ಮಾಡುತ್ತಾ, ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
ತಾಲ್ಲೂಕಿನ ಕಸಬಾ ಹೋಬಳಿಯ ಬಿಜಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಶೆಟ್ಟಿಹಳ್ಳಿಯಲ್ಲಿ ಸುಮಾರು 120ಕ್ಕೂ ಹೆಚ್ಚು ಮನೆಗಳಿದ್ದು, 800 ಜನಸಂಖ್ಯೆಯನ್ನು ಹೊಂದಿದೆ. ಈ ಗ್ರಾಮದಲ್ಲಿ ಇರುವ ಮೋರಿಗಳನ್ನು ಶುಚಿಗೊಳಿಸದೆ ಇರುವುದರಿಂದ ಮೋರಿಗಳಲ್ಲಿ ನೀರು ನಿಂತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ.
ಮಧುಗಿರಿ ಪಟ್ಟಣದಿಂದ 5 ಕಿ.ಮೀ ದೂರವಿರುವ ಈ ಗ್ರಾಮದಿಂದ ಪ್ರತಿ ದಿನ ನಾಗರಿಕರು ಹೆಚ್ಚಾಗಿ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಭೇಟಿ ನೀಡುತಿದ್ದಾರೆ. ಸಾವಿರಾರು ರೂಪಾಯಿಗಳನ್ನು ವ್ಯಯಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿಯವರು ಇದುವರೆವಿಗೂ ಮೋರಿಗಳನ್ನು ಶುಚಿ ಗೊಳಿಸಲು ಮುಂದಾಗಿಲ.್ಲ ಮನೆಗಳ ಮುಂದೆಲ್ಲಾ ನೀರು ನಿಲ್ಲುತ್ತಿದೆ. ಮೋರಿಗಳು ದುರ್ವಾಸನೆಯಿಂದ ಕೂಡಿವೆ.
ಗ್ರಾಮದಲ್ಲಿ ಬಹುತೇಕರು ಕೂಲಿ ಕಾರ್ಮಿಕರು, ರೈತರಾಗಿದ್ದು ಕೂಡಿಟ್ಟ ಅಷ್ಟೂ ಇಷ್ಟೂ ಹಣವನ್ನೆಲ್ಲಾ ಚಿಕಿತ್ಸೆಗಾಗಿ ವ್ಯಯಿಸುತ್ತಿದ್ದಾರೆ. ಸೊಳ್ಳೆಗಳು ಹೆಚ್ಚಾಗಿರುವುದರಿಂದ ಪ್ರತಿ ಮನೆಗಳಿಗೆ ಇಬ್ಬರಂತೆ ಸೊಳ್ಳೆಗಳ ಕಡಿತಕ್ಕೆ ಒಳಗಾಗಿ ಮೈ ಕೈ ನೋವು ಜ್ವರಕ್ಕೆ ಬಳಲಿ ನಿತ್ರಾಣ ಸ್ಥಿತಿ ತಲುಪಿದ್ದಾರೆ.
ಜನ ಪ್ರತಿನಿಧಿಗಳನ್ನು ಹಲವಾರು ಬಾರಿ ಮೋರಿಗಳನ್ನು ಸರಿಪಡಿಸುವಂತೆ ಮನವಿ ಮಾಡಿದ್ದರು ಏನೂ ಪ್ರಯೋಜನವಾಗಿಲ್ಲ. ನೀವೆಲ್ಲಾ ನಮಗೇನು ಉಚಿತವಾಗಿ ವೋಟ್ ಹಾಕಿಲ್ಲ, ಸಮಯ ಬಂದಾಗ ಸರಿಪಡಿಸುತ್ತೇನೆ ಹೋಗಿ ಎಂದು ನೇರವಾಗಿಯೆ ಹೇಳುತ್ತಾ ಕಾಲ ಹರಣ ಮಾಡುತ್ತಿದ್ದಾರೆ. ಇವರ ವರ್ತನೆಯಿಂದ ರೋಸಿ ಹೋಗಿದ್ದೇವೆ. ಕನಿಷ್ಠ ಸೌಜನ್ಯಕ್ಕಾದರೂ ಮೋರಿಗಳಲ್ಲಿ ತುಂಬಿರುವ ಕಸವನ್ನು ತೆಗೆಸಲು ಪಂಚಾಯಿತಿಯವರು ಮುಂದಾಗಿಲ್ಲ. ನಮ್ಮಿಂದಾದಷ್ಟೂ ಮೋರಿಗಳಲ್ಲಿ ನೀರು ಕಟ್ಟಿಕೊಳ್ಳದಂತೆ ಎಚ್ಚರ ವಹಿಸುತ್ತಿದ್ದೇವೆ. ಆದರೂ ಈ ಸೊಳ್ಳೆಗಳ ನಿಯಂತ್ರಣ ಆಗುತಿಲ್ಲ ಎಂದು ಊರಿನ ನಿವಾಸಿಗಳು ನೋವು ತೋಡಿಕೊಳ್ಳುತ್ತಿದ್ದರೆ.
ಇಷ್ಟೆಲ್ಲಾ ಆದರೂ ನಮ್ಮ ಆರೋಗ್ಯ ಕಾಪಾಡಬೇಕಾದ ಇಲಾಖೆಯವರು ಒಂದು ಬಾರಿಯು ಗ್ರಾಮಕ್ಕೆ ಭೇಟಿ ನೀಡಿಲ್ಲ. ಔಷಧೋಪಚಾರ ಕೂಡ ಮಾಡಿಲ್ಲ. ಗ್ರಾಮ ಪಂಚಾಯಿತಿಯಿಂದ ಸೊಳ್ಳೆಗಳ ಔಷಧಿಯನ್ನು ಸಿಂಪಡಿಸಿಲ್ಲ.ಹಣವುಳ್ಳವರು ಹೇಗೂ ಹೋಗಿ ಚಿಕಿತ್ಸೆ ಪಡೆದು ಕೊಳ್ಳುತ್ತಾರೆ. ಆದರೆ ಗ್ರಾಮದಲ್ಲಿ ಅನೇಕ ಹಿರಿಯರು ಮತ್ತು ಚಿಕ್ಕಮಕ್ಕಳ ಪರಿಸ್ಥಿತಿಯಂತೂ ಹೇಳ ತೀರದಾಗಿದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತು ಕೊಂಡು ಗ್ರಾಮದ ಶುಚಿತ್ವಕ್ಕೆ ಮುಂದಾಗಬೇಕು. ಆಸ್ಪತ್ರೆಗಳಿಗೆ ಅಲೆದಾಟ ತಪ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
