ಕೊರೊನಾ ಭೀತಿ : ಸಾರ್ವಜನಿಕ ಸೇವೆ ಅಸ್ತವ್ಯಸ್ತ

ತುಮಕೂರು

    ಕೊರೊನಾ ವೈರಾಣು ಜನರ ಬದುಕನ್ನು ಹೈರಾಣಾಗಿಸಿದೆ. ಕೊರೊನಾ ಕಾಣಿಸಿಕೊಂಡಾಗಿನಿಂದ ಸಾರ್ವಜನಿಕ ಸೇವೆಗಳು ಕಡಿತಗೊಳ್ಳುತ್ತಾ, ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದೆ.

    ಮಾರಕ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ತಡೆಯಲು ಜನ ಗುಂಪು ಸೇರದಂತೆ ನಿಯಂತ್ರಿಸಲು ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ. ಸಂತೆ, ಜಾತ್ರೆ, ಮದುವೆಯಂತಹ ಸಮಾರಂಭಗಳಿಗೆ ನಿಷೇಧ ಹೇರಲಾಗಿದೆ. ಕೆಲ ವ್ಯವಹಾರ ಉದ್ಯಮಗಳನ್ನು ನಿರ್ಬಂಧಿಸಲಾಗಿದೆ. ವಾಣಿಜ್ಯ ಸಂಕೀರ್ಣಗಳು, ಚಲನಚಿತ್ರ ಮಂದಿರಗಳನ್ನು ಈಗಾಗಲೇ ಬಂದ್ ಮಾಡಲಾಗಿದೆ. ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

     ಅದರಂತೆ ಸೋಮವಾರ ಕೆಎಸ್‍ಆರ್‍ಟಿಸಿ ರಾಜ್ಯಾದ್ಯಂತ ಬಸ್ ಸೇವೆ ಸ್ಥಗಿತಗೊಳಿಸಿತ್ತು. ಇದರಿಂದ ತುರ್ತು ಕೆಲಸಗಳಿಗೆ ಹೋಗಿಬರುವವರು ಪರದಾಡುವಂತಾಯಿತು.ಬಸ್‍ಗಳೇ ಇಲ್ಲವೆಂದ ಮೇಲೆ ಪ್ರಯಾಣಿಕರಿನ್ನೆಲ್ಲಿ ಎನ್ನುವಂತೆ ನಗರದ ಕೆಸ್‍ಆರ್‍ಟಿಸಿ ಬಸ್ ನಿಲ್ದಾಣ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಆದರೆ, ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿದ್ದರೂ ಹೇಳಿಕೊಳ್ಳುವಂತಹ ನೂಕು ನುಗ್ಗಲಿರಲಿಲ್ಲ. ಉದ್ಯೋಗ, ವ್ಯವಹಾರಕ್ಕೆ ಹೋಗುವವರು ಬೆಳಿಗ್ಗೆ ಹೊರಟ ಬಸ್‍ಗಳಲ್ಲಿ ತುಂಬಿದ್ದರು, ಮಧ್ಯಾಹ್ನದ ವೇಳೆಗೆ ಇಲ್ಲಿಯೂ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿತ್ತು.

     ಕೆಎಸ್‍ಆರ್‍ಟಿಸಿ ಬಸ್ ಇಲ್ಲದಿರುವಾಗ ಖಾಸಗಿ ಬಸ್‍ಗಳ ಬೇಡಿಕೆ ಹೆಚ್ಚಾಗಬೇಕಾಗಿತ್ತು, ಆದರೂ ನಿರೀಕ್ಷಿತ ಸಂಖ್ಯೆಯ ಪ್ರಯಾಣಿಕರು ಇಲ್ಲದಿರುವುದಕ್ಕೆ ಕಾರಣ, ಹಳ್ಳಿಗಳಲ್ಲಿ ಜಾತ್ರೆಗಳು ನಡೆಯುತ್ತಿಲ್ಲ. ಮದುವೆ ಸಂಬ್ರಮಗಳಿಲ್ಲ. ಕೊರೊನಾ ಭೀತಿಯಲ್ಲಿ ಹಾಗೂ ಯುಗಾದಿ ಹಬ್ಬದ ಸಿದ್ಧತೆಯಲ್ಲಿರು ಕಾರಣ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ ಎಂದು ಖಾಸಗಿ ಬಸ್ ನಿರ್ವಾಹಕರೊಬ್ಬರು ಅಭಿಪ್ರಾಯಪಟ್ಟರು.

    ಆದರೆ, ತುಮಕೂರಿನಿಂದ ಬೆಂಗಳೂರಿಗೆ ಉದ್ಯೋಗ, ವ್ಯವಹಾರ ನಿಮಿತ್ತ ನಿತ್ಯ ಹೋಗಿಬರುತ್ತಿದ್ದ ಸಾವಿರಾರು ಜನರಿಗೆ ರೈಲು ಹಾಗೂ ಕೆಎಸ್‍ಆರ್‍ಟಿಸಿ ಬಸ್ ಸೇವೆ ಸ್ಥಗಿತಗೊಂಡಿದ್ದರಿಂದ ಸೋಮವಾರ ಸಮಸ್ಯೆಯಾಯಿತು. ಬೆಂಗಳೂರಿಗೆ ಖಾಸಗಿ ಬಸ್‍ಗಳೂ ಹೆಚ್ಚಿನ ಟ್ರಿಪ್ ಮಾಡಿದರೂ ಅಷ್ಟೂ ಪ್ರಯಾಣಿಕರಿಗೆ ಈ ಬಸ್‍ಗಳ ಸೇವೆ ಸಾಕಾಗಲಿಲ್ಲ. ಬೆಳಿಗ್ಗೆ ಎಲ್ಲಾ ಬಸ್‍ಗಳಲ್ಲೂ ಪ್ರಯಾಣಿಕರು ನಿಲ್ಲಲೂ ಆಗದಷ್ಟು ರಷ್‍ನಲ್ಲಿ ಪ್ರಯಾಣ ಮಾಡಿದರು. ಬೇಡಿಕೆಯ ಪ್ರಯೋಜನ ಪಡೆಯಲು ಮುಂದಾದ ಕೆಲ ಕಾರು ಚಾಲಕರು ಬೆಂಗಳೂರು ಪ್ರಯಾಣಿಕರನ್ನು ಕೂಗಿ ಕರೆದು ಹತ್ತಿಸಿಕೊಂಡು ಹೋಗುತ್ತಿದ್ದರು.

    ತುಮಕೂರಿನಿಂದ ಹೇಗಾದರೂ ಬೆಂಗಳೂರಿಗೆ ತಲುಪಿದರೂ ಅಲ್ಲಿಂದ ತಮ್ಮ ಕೆಲಸದ ಜಾಗಕ್ಕೆ ಹೋಗಲು ಬಿಎಂಟಿಸಿ ಬಸ್, ಮೆಟ್ರೋ ಸೇವೆ ಇಲ್ಲ. ದುಬಾರಿ ಹಣ ನೀಡಿ ಆಟೋಗಳನ್ನು ಅವಲಂಬಿಸಬೇಕು ಎನ್ನವಂತಹ ಪರಿಸ್ಥಿತಿ ಇತ್ತು. ಬೆಳಿಗ್ಗೆ ತುಮಕೂರಿನಿಂದ ಪ್ರಯಾಣಿಕರನ್ನು ತುಂಬಿಕೊಂಡು ಹೋದ ಖಾಸಗಿ ಬಸ್‍ಗಳು ಮಧ್ಯಾಹ್ನದ ವೇಳೆಗೆ ಬೆರಳೆಣಿಕೆ ಪ್ರಯಾಣಿಕರನ್ನು ಹತ್ತಿಸಿಕೊಂಡು ವಾಪಸ್ ಬರುವಂತಾಗಿತ್ತು.

    ಕೆಎಸ್‍ಆರ್‍ಟಿಸಿ ಬಸ್ ಇಲ್ಲದೆ ತಾಲ್ಲೂಕು ಕೇಂದ್ರಗಳಿಂದ ತುಮಕೂರಿಗೆ ಬರುವ, ಇಲ್ಲಿಂದ ಹಳ್ಳಿಗಳಿಗೆ ಹೋಗುವ ಜನರಿಗೆ ತೊಂದರೆಯಾಯಿತು. ನಿತ್ಯ ಕಚೇರಿಗಳಿಗೆ ಬಂದುಹೋಗುವವರಿಗೆ ಅನಾನುಕೂಲವಾಯಿತು. ನಗರ ಸಾರಿಗೆ ಬಸ್‍ಗಳೂ ಇಲ್ಲದ ಕಾರಣ ವಿವಿಧ ಬಡಾವಣೆಗಳಿಗೆ ಹೋಗುವವರು ಆಟೋಗಳನ್ನು ಆಶ್ರಯಿಸಬೇಕಾಯಿತು. ಕೆಲ ಆಟೋದವರು ನಿಗಧಿತ ದರಕ್ಕಿಂತಾ ಹೆಚ್ಚು ಹಣ ಕೇಳಿ ಪಡೆದರು ಎಂದು ಪ್ರಯಾಣಿಕರು ಗೊಣಗಿಕೊಂಡಿದ್ದೂ ಉಂಟು.

    ಬಸ್‍ಗಳ ಅಭಾವದ ಕಾರಣ ನಗರದ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಸಂಖ್ಯೆ ಕಡಿಮೆ ಇತ್ತು. ಜನರಿಂದ ತುಂಬಿರುತ್ತಿದ್ದ ನಗರಪಾಲಿಕೆ, ಮಿನಿವಿಧಾನಸೌಧದ ಕಚೇರಿಗಳು ಸೋಮವಾರ ಜನರಿಲ್ಲದೆ ಬಣಗುಟ್ಟಿದವು.ಯುಗಾದಿ ಹಬ್ಬದ ಸಂದರ್ಭದಲ್ಲಿ ಎಂಜಿ ರಸ್ತೆಯ ಅಂಗಡಿಗಳು ಜನರಿಂದ ಕಿಕ್ಕಿರಿಯಬೇಕಾಗಿತ್ತು. ಹಬ್ಬಕ್ಕೆ ಒಂದೇ ದಿನವಿದ್ದರೂ ಅಲ್ಲಿನ ಅಂಗಡಿಗಳಲ್ಲಿ ನಿರೀಕ್ಷಿಸಿದಷ್ಟು ಜನಜಂಗುಳಿ ಕಾಣಲಿಲ್ಲ. ಈ ಬಾರಿ ಹಳ್ಳಿಗಳ ಜನ ಹಬ್ಬದ ಖರೀದಿಗೆ ತುಮಕೂರಿಗೆ ಬರಲಿಲ್ಲ.

    ಕೊರೊನಾ ಭೀತಿ, ಬಸ್‍ಗಳ ಕೊರತೆ, ಆರ್ಥಿಕ ಸಂಕಷ್ಟದಿಂದ ಹಳ್ಳಿ ಜನ ತುಮಕೂರಿಗೆ ಬಂದು ಬಟ್ಟೆಬರೆ ಕೊಂಡುಕೊಳ್ಳುವ ಆಸಕ್ತಿ ತೋರಿಸಿಲ್ಲ. ಈ ಪರಿಸ್ಥಿತಿಯಲ್ಲಿ ಅವರಲ್ಲಿ ಹಬ್ಬದ ಉತ್ಸಾಹವೂ ಇದ್ದಂತಿಲ್ಲ. ಹೇಗೋ ಹಬ್ಬ ಮಾಡಿ ಮುಗಿಸಿದರಾಯಿತು ಎಂದು ಹೆಚ್ಚು ಜನ ತಾಲ್ಲೂಕು, ಹೋಬಳಿ ಕೇಂದ್ರದ ಅಂಗಡಿಗಳಲ್ಲಿ ಹಬ್ಬದ ಖರೀದಿ ಮುಗಿಸಿಕೊಂಡಿದ್ದಾರೆ ಎಂದು ಎಂಜಿ ರಸ್ತೆಯ ಬಟ್ಟೆ ಅಂಗಡಿ ಮಾಲೀಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.ಸದ್ಯಕ್ಕೆ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸೇವೆ ಇನ್ನಷ್ಟು ದುರ್ಲಭವಾಗಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap