ಸೀಲ್ಡೌನ್, ಬಫರ್ ಝೋನ್ ಹೆಸರಿಗಷ್ಟೆ :ಕೇರ್ ಮಾಡದ ಜನ

ಚಿಕ್ಕನಾಯಕನಹಳ್ಳಿ

ವಿಶೇಷ ವರದಿ:ಸಿ.ಗುರುಮೂರ್ತಿ ಕೊಟಿಗೆಮನೆ

     ಸೀಲ್ಡೌನ್ ಪ್ರದೇಶದಲ್ಲಿ ಜನರ ಓಡಾಟವಿದ್ದು, ಬಫರ್ ಝೋನ್‍ನಲ್ಲಿ ಹಾಗೂ ಕ್ವಾರಂಟೈನ್ ಇರುವವರು ಎಲ್ಲರೊಂದಿಗೆ ಬೆರೆಯುತ್ತಿದ್ದಾರೆ. ಮಾಸ್ಕ್ ಅನ್ನುವುದು ನಮ್ಮ ಪ್ರಾಣ ರಕ್ಷಣೆಗಿದೆ ಎಂಬುದಕ್ಕಿಂತ ಆಭರಣದಂತೆ ಬೇಕಾದಾಗ ಹಾಕಿಕೊಳ್ಳುತ್ತಿದ್ದಾರೆ. ಒಟ್ಟಾರೆ ಬಹುತೇಕ ಜನರು ಕೊರೋನಾ ಎಂಬುದರ ಬಗ್ಗೆ ಗಂಭೀರವಾದ ಎಚ್ಚರಿಕೆಯೆ ಇಲ್ಲದಂತೆ ನಡೆಯುತ್ತಿದ್ದಾರೆ. ತಾಲ್ಲೂಕಿನಲ್ಲಿ ನಿಧಾನವಾಗಿ ಕೊರೋನಾ ಸೋಂಕು ಲಗ್ಗೆಯಿಡುತ್ತಿದೆ.

     ಕಳೆದ ಮೂರು ತಿಂಗಳಿನಿಂದ ಕೊರೋನಾ ಎಂಬ ರೋಗವೇ ತಗುಲದ ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿ ಕೊರೋನಾ ಪ್ರಕರಣ ದಾಖಲಾಗಿದೆ. ಈಗಾಗಲೇ ಪಟ್ಟಣದ ಹಿರಿಯಣ್ಣ ಹಟ್ಟಿ ಹಾಗೂ ಗೋಡೆಕೆರೆ ಗೊಲ್ಲರಹಟ್ಟಿ ಭಾಗದಲ್ಲಿ ತಲಾ ಒಂದೊಂದು ಕೊರೋನಾ ಪ್ರಕರಣ ದಾಖಲಾಗಿವೆ. ಕೊರೊನಾ ಸೋಂಕಿತರ ಪ್ರಥಮ ಸಂಪರ್ಕದವರನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಿದ್ದಾರೆ. ದ್ವಿತೀಯ ಸಂಪರ್ಕದಲ್ಲಿರುವವರನ್ನು ಪಟ್ಟಣದ ವಿದ್ಯಾರ್ಥಿ ನಿಲಯಗಳಲ್ಲಿ ಕ್ವಾರಂಟೈನ್ ಮಾಡಿದ್ದಾರೆ.

     ವಸತಿ ನಿಲಯದಲ್ಲಿರುವವರಂತೂ ಯಾವುದೇ ರೀತಿಯ ಮುನ್ನೆಚ್ಚರಿಕೆ ಇಲ್ಲದವರಂತೆ ತಾವಿರುವ ಪ್ರದೇಶಗಳಲ್ಲಿ ಎಲ್ಲರಂತೆ, ಎಲ್ಲರೊಂದಿಗೆ ಓಡಾಡಿಕೊಂಡಿದ್ದಾರೆ. ಇವರ ಈ ನಡೆ ಸುತ್ತಲಿನ ಜನರಿಗೆ, ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಭಯದ ನೆರಳಿನಲ್ಲಿ ಬದುಕುವಂತೆ ಮಾಡಿದೆ. ಕೆಲ ದಿನಸಿ ಅಂಗಡಿ, ಚಿನ್ನದ ಅಂಗಡಿ, ಬಟ್ಟೆ ಅಂಗಡಿ, ಫ್ಯಾನ್ಸಿ ಸ್ಟೋರ್ ಸೇರಿದಂತೆ ಕೆಲ ಅಂಗಡಿಗಳ ಮಾಲೀಕರು ತಮ್ಮ ಅಸೋಸಿಯೇಷನ್‍ಗಳ ಸಭೆ ನಡೆಸಿ ಬೆಳಗ್ಗೆ 8.30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಹಾಗೂ 5 ರವರೆಗೆ ಮಾತ್ರ ಅಂಗಡಿಗಳನ್ನು ತೆರೆಯುವುದು. ನಂತರ ಅಂಗಡಿಗಳ ಬಾಗಿಲು ಮುಚ್ಚಿ ಕೊರೋನಾ ತಡೆಗಟ್ಟಲು ಸ್ವಯಂ ಪ್ರೇರಿತರಾಗಿ ಮುಂದಾಗೋಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅದರಂತೆ ಈಗಾಗಲೆ ಕಳೆದ ಎರಡು ದಿನಗಳಿಂದ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತು ಪಡಿಸಿ ಉಳಿದ ಅಂಗಡಿ ಮಾಲೀಕರು ತಮ್ಮ ಅಂಗಡಿಗಳನ್ನು ಸಂಜೆಯ ನಂತರ ಬಾಗಿಲು ಮುಚ್ಚುತ್ತಿದ್ದಾರೆ.

ಸೀಲ್ ಡೌನ್ ಪ್ರದೇಶ :

     ಪಟ್ಟಣದ ಹೊಸಬೀದಿ ಬಳಿಯ ಹಿರಿಯಣ್ಣಹಟ್ಟಿ ಪ್ರದೇಶದಲ್ಲಿ ಮೊದಲ ಕೊರೋನಾ ಸೋಂಕು ತಗುಲುತ್ತಿದ್ದಂತೆ, ಅಲ್ಲಿನ ಜನರು ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ದಿನನಿತ್ಯ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುವ ಈ ಪ್ರದೇಶದ ಜನರು ಸೀಲ್ ಡೌನ್ ಮುಗಿಯುವವರೆಗೂ ದಿನನಿತ್ಯದ ಜೀವನ ಹೇಗೆ ಎನ್ನುತ್ತಿದ್ದಾರೆ. ಸೀಲ್ ಡೌನ್ ಏರಿಯಾದ ಜನರಿಗೆ ಸಹಾಯವಾಗಲಿ ಎಂದು ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಅಲ್ಲಿನ ನಿವಾಸಿಗಳಿಗೆ ದಿನಸಿ ಕಿಟ್ ನೀಡಿದ್ದಾರೆ.

ಕೆಲವರ ಮನೆ ಬೀಗ :

       ಕೊರೋನಾ ಸೋಂಕು ತಗುಲುತ್ತಿದ್ದಂತೆ ಹಿರಿಯಣ್ಣ ಹಟ್ಟಿ ಪ್ರದೇಶಲ್ಲಿ ವಾಸಿಸುತ್ತಿದ್ದ ಕೆಲವರು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಜನರ ಓಡಾಟ ಹಾಗೂ ವಾಹನಗಳ ಓಡಾಟವನ್ನು ನಿರ್ಬಂಧಿಸಿ ಅಲ್ಲಿನ ರಸ್ತೆಗಳನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಿದರೂ ಜನ ಸಂಚಾರವಿದೆ. ಜನರು ಅಗತ್ಯ ವಸ್ತುಗಳ ಖರೀದಿಗಾಗಿ ಹೊರ ಬರುತ್ತಿದ್ದಾರೆ ಎನ್ನಲಾಗಿದೆ. ಪುರಸಭೆ, ತಾಲ್ಲೂಕು ಆಡಳಿತ ಈ ಪ್ರದೇಶದ ಜನರಿಗೆ ಅಗತ್ಯ ಸಾಮಗ್ರಿಗಳನ್ನು ಪೂರೈಸುವಲ್ಲಿ ಕ್ರಮ ಕೈಗೊಳ್ಳಬೇಕು.

ಕ್ವಾರಂಟೈನ್‍ನಲ್ಲಿರುವವರ ಒತ್ತಾಯ :

      ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಬಿಇಓ ಕಛೇರಿ ಹಿಂಭಾಗದಲ್ಲಿರುವ ಹಾಸ್ಟಲ್ ಗಳಲ್ಲಿ ಕೊರೋನಾ ಸೋಂಕಿಗೆ ಒಳಗಾಗಿ ಸಂಪರ್ಕವಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ. ಇಲ್ಲಿರುವವರಿಗೆ ಊಟ, ತಿಂಡಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಕ್ವಾರಂಟೈನ್‍ಗೆ ಒಳಗಾಗಿರುವ ವ್ಯಕ್ತಿಗಳ ಆರೋಗ್ಯ ತಪಾಸಣೆ ಆಗಾಗ್ಗೆ ಆಗುತ್ತಿಲ್ಲ. ಆಸ್ಪತ್ರೆಯಲ್ಲಿದ್ದರೆ ಮಾತ್ರ ಕ್ವಾರಂಟೈನ್ ಒಳಗಾಗಿರುವವರನ್ನು ವೈದ್ಯರು, ನರ್ಸ್‍ಗಳು, ಆಸ್ಪತ್ರೆ ಸಿಬ್ಬಂದಿ ಆಗಮಿಸಿ ಆರೋಗ್ಯ ವಿಚಾರಿಸುತ್ತಾರೆ. ಹಾಸ್ಟಲ್‍ಗಳಲ್ಲಿ ಕ್ವಾರಂಟೈನ್‍ಗೆ ಒಳಗಾಗಿರುವವರನ್ನೂ ಆಗಾಗ್ಗೆ ಆರೋಗ್ಯ ವಿಚಾರಿಸಲಿ ಎಂದು ಕ್ವಾರಂಟೈನ್ ಗೆ ಒಳಗಾಗಿದ್ದವರು ಹೇಳುತ್ತಿದ್ದಾರೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

      ತಾಲ್ಲೂಕು ಆಡಳಿತ ಪ್ರಕಟಣೆಯೊಂದನ್ನು ಹೊರಡಿಸಿ ನಿಮ್ಮ ಮನೆ, ಅಕ್ಕ-ಪಕ್ಕದ ಮನೆಗೆ ಅಥವಾ ನಿಮ್ಮ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ಇತರೆ ವಿದೇಶ, ರಾಜ್ಯ, ಜಿಲ್ಲೆ, ನಗರ ಪ್ರದೇಶಗಳಿಂದ ಯಾರಾದರೂ ಬಂದಿದ್ದಲ್ಲಿ ಕೂಡಲೇ ಸದರಿ ವ್ಯಕ್ತಿಗಳ ಹೆಸರು ಮತ್ತು ವಿಳಾಸದ ಮಾಹಿತಿಯನ್ನು ಹತ್ತಿರದ ಗ್ರಾಮ ಪಂಚಾಯಿತಿ, ಪೆÇಲೀಸ್ ಠಾಣೆ, ಸರ್ಕಾರಿ ಆಸ್ಪತ್ರೆ ಅಥವಾ ತಾಲ್ಲೂಕು ಕಛೇರಿ ಸಹಾಯವಾಣಿ : 08133-267242 ನಂ. ಗೆ ಕರೆ ಮಾಡಿ ಎಂದು ತಾಲ್ಲೂಕು ಆಡಳಿತ ಪ್ರಕಟಣೆ ಹೊರಡಿಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link