ತುರುವೇಕೆರೆ
ವಿವಿಧ ಹಣ್ಣುಗಳ ಬೆಲೆ ಏರಿಕೆಗಳ ನಡುವೆಯೂ ಸಹ ಸಂಪ್ರದಾಯದಂತೆ ಗೌರಿ-ಗಣೇಶ ಹಬ್ಬವನ್ನು ಆಚರಿಸುವ ಸಲುವಾಗಿ ಭಾನುವಾರ ಪಟ್ಟಣದಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದು ಕಂಡು ಬಂತು.
ಈ ಬಾರಿ ಗೌರಿ ಗಣೇಶ ಹಬ್ಬವು ಒಂದೇ ದಿನ ಬಂದಿರುವುದರಿಂದ ಹಬ್ಬ ಆಚರಣೆಗೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಬಾಳೆಹಣ್ಣು ಕೆ.ಜಿ.ಗೆ 100 ರೂ. ನಿಂದ 120 ರೂ, ಹೂವು ಮಾರು 100 ರೂ, ಹಣ್ಣುಗಳು ಕೆ.ಜಿ. 150 ರೂಗಳಿಗೇರಿದ್ದು ಜನತೆ ಕೊಳ್ಳಲು ಹಿಂದು ಮುಂದು ಯೋಚಿಸುವಂತಾಗಿದೆ. ಗೌರಿ ಗಣೇಶನ ಹಬ್ಬಕ್ಕೆ ಹಾಗೂ ಹೆಣ್ಣು ಮಕ್ಕಳಿಗೆ ಬಾಗಿನ ನೀಡುವ ಸಲುವಾಗಿ ಸಂಪ್ರದಾಯದಂತೆ ಎಲ್ಲಾ ಅಗತ್ಯ ವಸ್ತುಗಳನ್ನು ಕೊಳ್ಳಲೇಬೇಕಾಗಿದೆ. ಆದರೆ ಈ ವರ್ಷವು ಸಹ ಬರಗಾಲದಿಂದ ಬೇಸತ್ತಿರುವ ರೈತರು ಸಂಪ್ರದಾಯದಂತೆ ಹಬ್ಬ ಆಚರಿಸಲು ಮುಂದಾಗಿದ್ದಾರೆ.
ಪಟ್ಟಣಕ್ಕೆ ಬಂದ ಮಣ್ಣಿನ ಗಣಪ : ಪಟ್ಟಣದ ರಸ್ತೆ ಬದಿಯಲ್ಲ್ಲಿ ಗೌರಿ ಗಣೇಶನ ಮೂರ್ತಿಗಳನ್ನಿಟ್ಟು ಮಾರಾಟ ಮಾಡುತ್ತಿದ್ದಾರೆ. ಆನೆ, ನವಿಲು, ಬಸವನ ಮೇಲಿನ ಗಣಪ ವಿವಿಧ ರೀತಿಯ ಗಣಪಗಳು ಕಂಡು ಬಂದಿವೆ. ತಾಲ್ಲೂಕಿನ ಹಳ್ಳಿಗಳು ಸೇರಿದಂತೆ ಪಟ್ಟಣದ ವಾರ್ಡ್ಗಳಲ್ಲಿ ಯುವಕರಿಂದ ಹಿಡಿದು ಮಕ್ಕಳಾದಿಯಾಗಿ ಗೌರಿ ಗಣೇಶನನ್ನು ಪ್ರತಿಷ್ಠಾಪಿಸಲು ವ್ಯಾಪಾರ ಮಾಡುತ್ತಿದ್ದು ಕಂಡು ಬಂತು. ಪಿಓಪಿ ಗಣಪತಿ ಮಾರಾಟ ಮಾಡದಂತೆ ಆದೇಶದ ಹಿನ್ನಲೆಯಲ್ಲಿ ಮಣ್ಣಿನ ಗಣಪತಿಗಳಿಗೆ ಬೇಡಿಕೆ ಹೆಚ್ಚಿದ್ದು ಗಣೇಶನ ಮಾರಾಟ ಬಹು ಜೋರಾಗಿಯೇ ನಡೆದಿದೆ.
ಕತ್ತಲೆಯಲ್ಲೇ ವ್ಯಾಪಾರ:
ಪಟ್ಟಣದ ಯಡಿಯೂರು-ತಿಪಟೂರು ರಸ್ತೆ ಬೀದಿ ಬದಿ ದೀಪಗಳು ಹಲವು ದಿನಗಳಿಂದ ಕೆಟ್ಟಿದ್ದು ಹಬ್ಬದ ಮುನ್ನಾ ದಿನ ಸಂಜೆ ಗ್ರಾಹಕರು ಕತ್ತಲೆಯಲ್ಲೇ ಅಗತ್ಯ ವಸ್ತುಗಳನ್ನು ಕೊಳ್ಳುವಂತಾಗಿತ್ತು. ಬೀದಿ ಬದಿ ವ್ಯಾಪಾರಿಗಳೂ ಸಹಾ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳ ಬೆಳಕಿನಲ್ಲೇ ಮಾರಾಟ ಮಾಡುತ್ತಿದ್ದುದಲ್ಲದೆ ಮಹಿಳೆಯರಾದಿಯಾಗಿ ಆತಂಕದಲ್ಲೇ ಖರೀದಿಸುತ್ತಿದ್ದುದನ್ನು ಕಂಡ ರಾಘವೇಂದ್ರ ಹೋಟೆಲ್ ಮುಂಭಾಗ ನಿಂತಿದ್ದ ಕೆಲವು ನಾಗರೀಕರು ಬೇಸರ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ