ತಿಪಟೂರು
ನಗರದಲ್ಲಿ ಸೋಮವಾರ ಸಂಜೆ ಸುರಿದ ಮಳೆಗೆ ರಸ್ತೆಯ ತುಂಬೆಲ್ಲಾ ಹರಿದಿದ್ದರಿಂದ ವಾಹನ ಸವಾರರು ಸಂಚರಿಸಲು ಪರದಾಡಿದ್ದಲ್ಲದೆ ನಗರಸಭೆಗೆ ಹಿಡಿ ಶಾಪ ಹಾಕಿದರು.
ಕಳೆದ ವಾರದಿಂದ ತಾಲ್ಲೂಕಿನಾದ್ಯಂತಹ ಸುರಿಯುತ್ತಿರುವ ಮಳೆಗೆ ಅನ್ನದಾತರು ಸ್ವಲ್ಪ ನಗು ಮತ್ತು ಅದೇ ರೀತಿ ಮುನಿಸನ್ನು ತೋರುತಿದ್ದರೆ, ನಗರ ಜನರು ಖುಷಿಯಾಗಿದ್ದಾರೆ. ನಗರಸಭೆಯ ಅಧಿಕಾರಿಗಳಿಗೆ ಹಿಡಿಶಾಪವನ್ನು ಹಾಕುತ್ತಿರುವುದಂತು ಸತ್ಯವಾಗಿದೆ. ನಗರದ ಮುಖ್ಯರಸ್ತೆಯಲ್ಲಿ ಸ್ವಲ್ಪಮಳೆಯಾದರೂ ರಸ್ತೆಯಲ್ಲಿ ನೀರು ಹರಿಯದೆ, ಚರಂಡಿಯಿಂದ ರಸ್ತೆಗೆ ನೇರವಾಗಿ ಮಳೆ ನೀರು ಬರುತ್ತಿದೆ. ನಗರಸಭೆಯವರು ಯಾವುದೇ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳದೆ, ಮಳೆಗಾಲದಲ್ಲೂ ಚರಡಿಯನ್ನು ಸ್ವಚ್ಛ ಮಾಡದೇ ಇರುವುದರಿಂದ ನೀರು ಏಕಾಏಕಿ ರಸ್ತೆಗೆ ಬರುತ್ತಿದ್ದು, ಸಾರ್ವಜನಿಕರು ವಾಹನಗಳಲ್ಲಿ ಸಂಚರಿಸಲು ತುಂಬಾ ತೊಂದರೆ ಆಗಿದೆ.
206 ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಲಾವೃತ : ನಗರದ ಮಧ್ಯ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206 ಕ್ಕೆ ನೇರವಾಗಿ ಧಾವಿಸುವ ಮಳೆ ನೀರು ರಸ್ತೆಯಲ್ಲಿ, ಮುಖ್ಯವಾಗಿ ಕೋಡಿ ಸರ್ಕಲ್ ನಿಂದ ಕೆಳಗಿನ ವೈಶಾಲಿ ಬಾರ್ ಮುಂಭಾಗ, ಬಸ್‍ನಿಲ್ದಾಣದ ವೈಭವ ಮಾಲ್ ಮುಂಭಾಗ, ಎಸ್.ಬಿ.ಐ ಬ್ಯಾಂಕ್ ಮುಂಭಾಗ, ಹಾಗೆಯೇ ಮೋರ್ ಮುಂಭಾಗದಲ್ಲಂತೂ ಸಾಕಷ್ಟು ನೀರು ನಿಂತು ತೊಂದರೆ ಉಂಟಾಗುತ್ತಿದೆ. ಮಳಿಗೆಗಳಿಗೂ ನೀರು ನುಗ್ಗುತ್ತಿದ್ದು, ಪಂಪ್‍ಸೆಟ್ ಸಹಾಯದಿಂದ ನೀರನ್ನು ಹೊರ ತೆಗೆದ ಉದಾಹರಣೆಗಳಿವೆ.
ಉಕ್ಕಿ ಹರಿಯುವ ಮ್ಯಾನ್ ಹೋಲ್ :
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೋಡಿ ಸರ್ಕಲ್‍ನ ಕೆಳಭಾಗದಲ್ಲಿ ಈಡೇನಹಳ್ಳಿ ಗೇಟ್ ಹತ್ತಿರವಂತೂ ಸ್ವಲ್ಪ ಮಳೆಯಾದರೂ ಇಲ್ಲಿನ ಮ್ಯಾನ್‍ಹೋಲ್ ಉಕ್ಕಿ ಹರಿದು, ನಗರದ ಎಲ್ಲಾ ಬಗೆಯ ತ್ಯಾಜ್ಯವು ನೀರಿನಲ್ಲಿ ತೇಲುತ್ತದೆ. ಅಲ್ಲದೆ ಮಳೆ ನಿಂತ ಸುಮಾರು ಹೊತ್ತು ಜನರು ಈ ಅಸಹ್ಯವಾದ ನೀರಿನಲ್ಲಿ ಸಂಚರಿಸುವುದರಿಂದ ಮನೆಗೆ ಹೋಗುತ್ತಿದ್ದಂತೆಯೇ ತುರಿಕೆಗೆ ಒಳಗಾಗುತ್ತಿದ್ದಾರೆ. ನಗರಸಭೆಯ ಆಯುಕ್ತರು ಈ ಸ್ಥಳಕ್ಕೆ ಭೇಟಿ ನೀಡಿ ಮ್ಯಾನ್‍ಹೋಲ್‍ನಿಂದ ಹೊರಬಂದ ನೀರನ್ನು ಮಾತ್ರ ಚರಂಡಿಗೆ ಕಳುಹಿಸುವ ಕೆಲಸವನ್ನು ಮಾಡಿಸುತ್ತಿದ್ದಾರೆಯೇ ವಿನಹ ಮ್ಯಾನ್‍ಹೋಲ್‍ನಿಂದ ನೀರು ಏಕೆ ಹೊರಬರುತ್ತಿದೆ ಎಂದು ಗಮನಿಸಿ ಸೂಕ್ತ ಪರಿಹಾರವನ್ನು ಹುಡುಕುತ್ತಿಲ್ಲ.
ಮಳೆಯಲ್ಲೇ ರಸ್ತೆಗೆ ಡಾಂಬರೀಕರಣ :
ನಗರದಲ್ಲಿ ಒಂದು ಕಡೆ ಮಳೆಯಾಗುತ್ತಿದ್ದರೂ ಗುತ್ತಿಗೆದಾರ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮೆರೆದು ಆಧುನಿಕ ಬಸವಣ್ಣರಂತೆ ಕಾಯಕವನ್ನು ಮಾಡುತ್ತಿದ್ದಾರೆ. ಹಾಲ್ಕುರಿಕೆ ಮತ್ತು ತಿಪಟೂರು ರಸ್ತೆಗೆ ಗೋವಿನಪುರದ ಹತ್ತಿರ ರಸ್ತೆ ಕಾಮಗಾರಿ ನಡೆಯುತ್ತಿದೆ. ಡಾಂಬರೀಕರಣ ನಡೆಯುತ್ತಿದ್ದು, ಜೋರಾಗಿ ಮಳೆ ಬಂದು ರಸ್ತೆಯ ಮೇಲೆ ಮಳೆ ನೀರು ಹರಿಯುತ್ತಿದ್ದರೂ ಸಹ ತಲೆ ಕೆಡಿಸಿಕೊಳ್ಳದ ಗುತ್ತಿಗೆದಾರರು ರಸ್ತೆಗೆ ಡಾಂಬರೀಕರಣ ಮಾಡಿದರು. ಈ ಕಾಮಗಾರಿ ಎಷ್ಟು ದಿನ ಬಾಳಿಕೆ ಬರುತ್ತದೆ ಎಂದು ಕೇಳಿದರೆ ಏನು ಆಗುವುದಿಲ್ಲವೆಂದು ಹೇಳುತ್ತಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
