ಹುಳಿಯಾರು
ಹುಳಿಯಾರಿನ ಡಿಸಿಸಿ ಬ್ಯಾಂಕ್ ಹಿಂಭಾಗ ಹರಿಜನ-ಗಿರಿಜನ ಯೋಜನೆಯಲ್ಲಿ ನಿರ್ಮಿಸುತ್ತಿರುವ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಪೂರ್ಣಗೊಳಿಸುವಂತೆ ಇಲ್ಲಿನ ನಿವಾಸಿ ಡ್ರೈವರ್ ವರುಣ್ ಮನವಿ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್‍ನಿಂದ ಬೀರದೇವರ ಕಟ್ಟೆಯ ಕಡೆಗೆ ಹೋಗುವ ರಸ್ತೆ ತೀರ ಹದಗೆಟ್ಟು ಓಡಾಡಲು ಅಸಾಧ್ಯ ಎನ್ನುವಂತಾಗಿತ್ತು. ಅಲ್ಲದೆ ಇಲ್ಲಿನ ಮನೆಗಳ ಬಚ್ಚಲು ನೀರು ರಸ್ತೆಗೆ ಬಿಡುತ್ತಿದ್ದರಿಂದ ಸೊಳ್ಳೆಗಳ ಆಶ್ರಯ ತಾಣವಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದವು.
ಈ ವಿಚಾರ ತಿಳಿದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಎಸ್‍ಸಿಪಿಟಿಎಸ್‍ಪಿ ಯೋಜನೆಗೆ ರಸ್ತೆಯನ್ನು ಸೇರಿಸಿ ಕಳೆದ 15 ದಿನಗಳ ಹಿಂದಷ್ಟೆ ಕಾಮಗಾರಿಗೆ ಚಾಲನೆ ನೀಡಿದರು. ಆರಂಭದಲ್ಲಿ ಒಂದು ಕಡೆಯ ಚರಂಡಿ ಮಾಡಲಾರಂಭಿಸಿದ ಗುತ್ತಿಗೆದಾರರು ಕಳೆದ ವಾರದ ಹಿಂದಷ್ಟೆ ಕಾಮಗಾರಿ ನಿಲ್ಲಿಸಿದ್ದು ಇಲ್ಲಿಯವರೆವಿಗೆ ಪುನಃ ಆರಂಭಿಸಿಲ್ಲ. ಮೇಲ್ಭಾಗದ ಮನೆಯ ಕೊಳಚೆ ನೀರು ಹೊಸ ಚರಂಡಿ ಮೂಲಕ ಹರಿದು ಬಂದು ಸ್ಥಗಿತವಾಗಿರುವ ಚರಂಡಿಯ ಮನೆಯ ಮುಂದೆ ನಿಲ್ಲುತ್ತಿದೆ.
ಪರಿಣಾಮ ಇಲ್ಲಿನ ನಿವಾಸಿಗಳಿಗೆ ದುರ್ನಾತ ಬೀರುತ್ತಿದ್ದು, ಮನೆಯಲ್ಲಿ ವಾಸಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ರಾತ್ರಿ ವೇಳೆ ಸೊಳ್ಳೆಗಳು ಮನೆ ತುಂಬ ತುಂಬುತ್ತವೆ. ಜೊತೆಗೆ ಕೊಳಚೆ ನೀರಿನಲ್ಲಿ ಹಂದಿ, ನಾಯಿಗಳು ಬಿದ್ದು ಉರುಳಾಡುತ್ತಿವೆ. ಕಾಮಗಾರಿ ಪುನಃ ಆರಂಭಿಸುವಂತೆ ಗುತ್ತಿಗೆದಾರರಿಗೆ ಹೇಳಿದರೆ ಜಾಗದ ಸಮಸ್ಯೆಯಿಂದ ಸ್ಥಳೀಯರು ಗಲಾಟೆ ಮಾಡಿ, ಸ್ಥಗಿತಗೊಳಿಸಿರುವುದಾಗಿ ಹೇಳುತ್ತಾರೆ. ಆದರೆ ಗುತ್ತಿಗೆದಾರರು ಚರಂಡಿ ಮಾಡುವಾಗ ಪಕ್ಷಪಾತ ಮಾಡಿದ್ದು ಕೆಲವರ ಮನೆ ಮುಂಭಾಗ ಹೊಡೆದಿದ್ದಾರೆ, ಕೆಲವರ ಮನೆಯ ಮುಂದೆ ಚರಂಡಿಯನ್ನೇ ತಿರುಗಿಸಿದ್ದಾರೆ.
ಹಾಗಾಗಿ ನೇರವಾಗಿ ಚರಂಡಿ ಮಾಡುವಂತೆ ಇಲ್ಲಿನ ಜನ ಕೇಳಿದ್ದು ಬಿಟ್ಟರೆ ಕಾಮಗಾರಿ ನಿಲ್ಲಿಸಿಲ್ಲ. ಹಾಗಾಗಿ ಪಿಡಬ್ಲ್ಯೂಡಿ ಎಂಜಿನಿಯರ್ ಕಾಮಗಾರಿ ಸ್ಥಳಕ್ಕೆ ಆಗಮಿಸಿ ಖುದ್ದು ಕಾಮಗಾರಿ ವೀಕ್ಷಿಸಿ ಸಮಸ್ಯೆ ಬಗೆ ಹರಿಸಿ ನ್ಯಾಯಸಮ್ಮತವಾಗಿ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸುವಂತೆ ಟ್ರೈವರ್ ವರುಣ್ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ