ಬೆಂಗಳೂರು
ಸ್ಕೂಟರ್ ಡಿಕ್ಕಿಯಿಂದ 3 ಲಕ್ಷ ರೂಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ದುಷ್ಕರ್ಮಿಗಳನ್ನು ಹಿಡಿದ ಸ್ಥಳೀಯರು ಗೂಸಾ ಕೊಟ್ಟು ರಾಜಗೋಪಾಲನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.ಪೀಣ್ಯದ ಎಪಿ ನಗರದ ಲಕ್ಷ್ಮಣ್ ಅವರು ಶುಕ್ರವಾರ ಮಧ್ಯಾಹ್ನ 3 ಲಕ್ಷ ರೂ. ಹಣವನ್ನು ಬ್ಯಾಂಕಿನಿಂದ ಡ್ರಾ ಮಾಡಿಕೊಂಡು ಬಂದು ಹಣವನ್ನು ಸ್ಕೂಟರ್ ಡಿಕ್ಕಿಯಲ್ಲಿಟ್ಟು ಮನೆಗೆ ಹೊರಟಾಗ ಅವರನ್ನು ಬೌನ್ಸ್ ಸ್ಕೂಟರ್ನಲ್ಲಿ ಹಿಂಬಾಲಿಸಿಕೊಂಡು ದುಷ್ಕರ್ಮಿಗಳು ಬಂದಿದ್ದಾರೆ. ಮನೆ ಬಳಿ ಬಂದು ಏನೋ ತೆಗೆದುಕೊಳ್ಳಲು ಲಕ್ಷ್ಮಣ್ ಅವರು ಒಳ ಹೋದಾಗ ಸ್ಕೂಟರ್ ಡಿಕ್ಕಿ ಮುರಿದು ಹಣ ಎಗರಿಸಿದ್ದಾರೆ.
ಕೃತ್ಯವನ್ನು ಲಕ್ಷ್ಮಣ್ ಅವರ ಪುತ್ರ ಜೋರಾಗಿ ಕೂಗಿ ಸಾರ್ವಜನಿಕರ ಸಹಾಯ ಕೇಳಿದ್ದರು. ಕೂಡಲೇ ಸ್ಥಳದಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ಸಾರ್ವಜನಿಕರ ಕೈಗೆ ಸಿಕ್ಕಿಬಿದಿದ್ದಾನೆ. ಆತನನ್ನು ಮರಕ್ಕೆ ಕಟ್ಟಿ ಹಾಕಿ ಸಾರ್ವಜನಿಕರು ಗೂಸಾ ಕೊಟ್ಟಿದ್ದಾರೆ. ಈ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದರು.
ಈ ಸಂದರ್ಭದಲ್ಲಿ ಸಿಕ್ಕಿಬಿದ್ದ ಯುವಕನೊಂದಿಗೆ ಇದ್ದ ಮತ್ತಿಬ್ಬರು ಸ್ಥಳದಿಂದ ಪರಾರಿಯಾಗಿದ್ದರು. ಆದರೆ ಆ ಬಳಿಕ ಯುವಕನಿಂದ ಮಾಹಿತಿ ಪಡೆದ ಪೊಲೀಸರು ಮತ್ತಿಬ್ಬರು ಯುವಕರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದಾರೆ. ಸದ್ಯ ಮೂವರು ಯುವಕರು ತಾವು ಹಣವನ್ನು ಕಳ್ಳತನ ಮಾಡಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರ ಮಾಹಿತಿಯ ಅನ್ವಯ ಸಿಕ್ಕಿಬಿದ್ದವರು 12 ರಿಂದ 14ವರ್ಷ ವಯಸ್ಸಿನವರಾಗಿದ್ದು, ಬೇರೆ ಯಾರೋ ಕೃತ್ಯ ಎಸಗಿದ್ದಾರೆ. ಬ್ಯಾಂಕ್ ಹೊರಗೆ ಬೇರೆ ವ್ಯಕ್ತಿಗಳು ನಿಂತು ಕಾಯುತ್ತಿರುವುದು ಸಿಸಿಟಿವಿಯಲ್ಲಿ ಸಿಕ್ಕಿದ್ದು, ಸಾರ್ವಜನಿಕರು ಹಿಡಿದವರು ಈ ಕೃತ್ಯ ಮಾಡಿಲ್ಲ ಎಂಬ ಅನುಮಾನವಿದೆ ಎಂದು ತಿಳಿಸಿದ್ದಾರೆ. ಸದ್ಯ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡಿರುವ ಬಗ್ಗೆ ದೂರು ದಾಖಲಿಸಿಕೊಂಡಿದ್ದು, ಕಳ್ಳರು ಯಾರು ಎಂಬುವುದನ್ನು ಪತ್ತೆ ಮಾಡಲು ತನಿಖೆ ಮುಂದುವರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








