ಕೋಟೆನಗರಿಯಲ್ಲಿ ಶೋಭಾಯಾತ್ರೆಗೆ ಜನಜಾತ್ರೆ

ಚಿತ್ರದುರ್ಗ;

     ಕೋಟೆನಾಡು ಚಿತ್ರದುರ್ಗದಲ್ಲಿ ಶನಿವಾರ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ಅಂಗವಾಗಿ ಜರುಗಿದ ಬೃಹತ್ ಶೋಭಾಯಾತ್ರೆಗೆ ಲಕ್ಷಾಂತರ ಮಂದಿ ಸಂಘಪರಿವಾರದ ಕಾರ್ಯಕರ್ತರು, ಭಕ್ತರು ಹಾಗೂ ಸಾರ್ವಜನಿಕರು ಸಾಕ್ಷಿಯಾದರು
ನಗರದ ಸ್ಟೇಡಿಯಂ ರಸ್ತೆಯ ಖಾಸಗಿ ಶಾಲಾ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗ ದಳವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಪೂಜೆ ಚಾಲನೆ ಪಡೆದುಕೊಂಡಿತು.

     ಸ್ಥಳೀಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಶ್ರೀಮಾದಾರಚೆನ್ನಯ್ಯ ಸ್ವಾಮೀಜಿ, ಕಬೀರಾನಂದಾಶ್ರಮದ ಶ್ರೀಶಿವಲಿಂಗಾನಂದಸ್ವಾಮೀಜಿ, ಶ್ರೀಶಾಂತವೀರ ಸ್ವಾಮೀಜಿ,ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ವಿಶ್ವ ಹಿಂದೂಪರಿಷತ್ ಪ್ರಮುಖ್ ರಾಮಮೂರ್ತಿ, ಲೋಕಸಭಾ ಸದಸ್ಯ ಎ.ನಾರಾಯಣಸ್ವಾಮಿ, ಸೇರಿದಂತೆ ವಿವಿಧ ಮಠಾಧೀಶರು, ಸಂಘಪರಿವಾರದ ಪ್ರಮುಖರು ಹಾಜರಿದ್ದು, ಮೆರವಣಿಗೆಗೆ ಅದ್ದೂರಿಯ ಚಾಲನೆ ನೀಡಿದರು

     ದಿನವಿಡೀ ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದು ಬಂದಿತ್ತು. ಶೊಭಾಯಾತ್ರೆಯ ಹಿನ್ನಲೆಯಲ್ಲಿ ಪ್ರಮುಖ ರಸ್ತೆಗಳೆಲ್ಲ ಕೇಸರಿಮಯವಾಗಿತ್ತು. ರಾಜವೀರ ಮದಕರಿ ನಾಯಕರ ಪ್ರತಿಮೆ, ವೀರವನಿತೆ ಒನಕೆ ಓಬವ್ವನ ಪ್ರತಿಮೆ ವೃತ್ತ, ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣನ ವೃತ್ತಗಳನ್ನು ಕೇಸರಿ ಬಾವುಟಗಳಿಂದ ಅಲಂಕಾರ ಮಾಡಲಾಗಿತ್ತು. ಮುಖ್ಯ ರಸ್ತೆಯ ಉದ್ದಗಲಕ್ಕೂ ಕೇಸರಿ ಬಟ್ಟೆ, ಬಾವುಟಗಳನ್ನು ಕಟ್ಟಲಾಗಿತ್ತು.

      ಚಿತ್ರದುರ್ಗ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಅಪಾರ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಬೆಳಿಗ್ಗೆಯಿಂದಲೇ ಯುವಕರು, ಮಹಿಳೆಯರು ದ್ವಿಚಕ್ರವಾಹನ, ಟ್ರಾಕ್ಟರ್, ಬಸ್, ಇನ್ನಿತರೆ ವಾಹನಗಳಲ್ಲಿ ಸಾಗರೋಪಾದಿಯಲ್ಲಿ ಸೇರಿದರು. ಕಣ್ಣು ಹಾಯಿಸಿದಷ್ಟು ದೂರದವರೆಗೂ ಜನಸ್ತೋಮವೇ ಕಣ್ಣಿಗೆ ರಾಚುತ್ತಿತ್ತು.

    ಎಲ್ಲಡೆಯೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಶೋಭಾಯಾತ್ರೆ ಶಾಂತಿಯುತವಾಗಿ ನೆರವೇರಿತು.ಕೈಯಲ್ಲಿ ಕೇಸರಿಯ ಬಾವುಟ ಹಿಡಿದು ಹಣೆಯ ಮೇಲೆ ಕೇಸರಿ ಟೇಪು, ಕೇಸರಿ ಶಲ್ಯ ತೊಟ್ಟ ಯುವಕರಿಂದ ಪ್ರಮುಖ ರಸ್ತೆಗಳು ಕಿಕ್ಕಿರಿದು ತುಂಬಿದ್ದವು. ಮೆರವಣಿಗೆಯ ಉದ್ದಕ್ಕೂ ಯುವಕರು ಜೈಕಾರ ಹಾಕುತ್ತಾ, ಕುಣಿದು ಕುಪ್ಪಳಿಸುತ್ತಲೇ ಸಾಗಿದರು. ಎದೆ ನಡುಗಿಸುವ ಅಬ್ಬರದ ಮ್ಯೂಸಿಕ್‍ಗೆ ಸಾವಿರಾರು ಮಂದಿ ಯುವಕರು ಹುಚ್ಚೆದ್ದು ಕುಣಿದರು.

      ಹುಲಿವೇಶ, ವೀರಗಾಸೆ, ಡೊಳ್ಳುವಾದ್ಯ, ಚಂಡೆ ವಾದ್ಯ, ನಾಸಿಕ್ ಬ್ಯಾಂಡ್ ಇನ್ನಿತರೆ ಕಲಾತಂಡಗಳು ಶೋಭಾಯಾತ್ರೆಗೆ ಇನ್ನಷ್ಟು ಮೆರಗು ನೀಡಿದವು. ದೇಶಭಕ್ತರ ಹತ್ತಾರು ಸ್ಥಬ್ದಚಿತ್ರಗಳು, ಗೋವಿನ ಸಂತತಿ ಉಳಿಸಿ ಎಂಬ ಸಂದೇಶ ಸಾರುವ ವಿಭಿನ್ನವಾದ ಟ್ಯಾಬ್ಲೋ ಸಹ ಮೆರವಣಿಗೆಯಲ್ಲಿ ಸಾಗಿದವು.

     ಮೆರವಣಿಗೆಯ ಉದ್ದಕ್ಕೂ ಸ್ವಯಂ ಸೇವಕರು ಕುಡಿಯುವ ನೀರು, ಮಜಿಗೆ, ಉಪಹಾರದ ವ್ಯವಸ್ಥೆ ಮಾಡಿದ್ದರು. ಮಹಾಗಣಪತಿ ಶೋಭಾಯಾತ್ರೆ ವೀಕ್ಷಣೆಗೆ ಮಹಿಳೆಯರು, ಮಕ್ಕಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.ಮದಕರಿ ನಾಯಕ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ತುಂಬಿದ್ದರು. ಮೆರವಣಿಗೆ ಸಾಗಿಬರುವ ಮಾರ್ಗಗಳ ಉದ್ದಕ್ಕೂ ಗಣೇಶನ ವಿಗ್ರಹ ವೀಕ್ಷಿಸಲು ಹಾಗೂ ಚಿತ್ರಗಳನ್ನು ಕ್ಯಾಮೆರಾಗಳಲ್ಲಿ ಚಿತ್ರೀಕರಿಸಿಕೊಳ್ಳಲು ನೂಕುನುಗ್ಗಲು ಉಂಟಾಗಿತ್ತು. ಮುಖ್ಯ ರಸ್ತೆಯ ಎಲ್ಲಾ ಅಂಗಡಿ ಮುಂಗಟ್ಟು ಮುಂಜಾನೆಯಿಂದಲೇ ಬಾಗಿಲು ಮುಚ್ಚಿದ್ದವು. ಜನ ಸ್ವಯಂ ಪ್ರೇರಿತವಾಗಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap