ಕೊರೋನಾ ಎಫೆಕ್ಟ್: ಮನೆಯಲ್ಲಿಯೇ ರಂಜಾನ್ ಆಚರಿಸಿದ ಜನತೆ.

ತುಮಕೂರು

      ಕೊರೊನಾ ಮಹಾಮಾರಿಯ ಅಟ್ಟಹಾಸ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಮುಂದುವರೆದಿರುವುದರಿಂದ ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಉಲ್ ಫಿತುರ್ ರಂಜಾನ್ ಹಬ್ಬವನ್ನು ತಮ್ಮ ತಮ್ಮ ಮನೆಗಳಲ್ಲೇ ಸರಳವಾಗಿ ಆಚರಿಸಲಾಯಿತು.

      ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ತಮ್ಮ ತಮ್ಮ ಮನೆಗಳಲ್ಲೇ ಹೊಸ ಉಡುಪುಗಳನ್ನು ಧರಿಸಿ ಭೌತಿಕ ಅಂತರ ಕಾಪಾಡಿಕೊಂಡು ಪ್ರಾರ್ಥನೆ ಸಲ್ಲಿಸಿದರು.ಯಾರೊಬ್ಬರೂ ಈದ್ಗಾ ಮೊಹಲ್ಲಾಗೆ ತೆರಳದೆ ಮನೆಗಳಲ್ಲೇ ಹಬ್ಬವನ್ನು ಸರಳವಾಗಿ ಆಚರಿಸಿದ್ದು ಕಂಡು ಬಂತು.

     ಮಾಜಿ ಶಾಸಕ ಡಾ. ರಫೀಕ್‍ಅಹಮದ್ ಅವರು ಜಯನಗರದ ತಮ್ಮ ನಿವಾಸದಲ್ಲಿ ಕುಟುಂಬದ ಸದಸ್ಯರೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಾರ್ಥನೆ ಸಲ್ಲಿಸುವ ಮೂಲಕ ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಿದರು.ನಂತರ ಮಾತನಾಡಿದ ಡಾ. ರಫೀಕ್‍ಅಹಮದ್ ಅವರು, ನಾಡಿನ ಸಮಸ್ತ ಜನತೆಗೆ ಹಾಗೂ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಿ, ಲಾಕ್‍ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಎಲ್ಲಾ ಮುಸ್ಲಿಂ ಬಾಂಧವರು ತಮ್ಮ ತಮ್ಮ ಮನೆಯಲ್ಲೇ ಹಬ್ಬವನ್ನು ಸರಳವಾಗಿ ಆಚರಣೆ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇಡೀ ಪ್ರಪಂಚಕ್ಕೆ ವಕ್ಕರಿಸಿರುವ ಕೊರೊನಾ ಮಹಾಮಾರಿಯಿಂದ ನಾವೆಲ್ಲರೂ ಮುಕ್ತಿ ಹೊಂದೋಣ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.

      ಇದೇ ರೀತಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಅವರು ಸಹ ಕುಟುಂಬದ ಸದಸ್ಯರೊಂದಿಗೆ ತಮ್ಮ ಮನೆಯಲ್ಲೇ ಸರಳವಾಗಿ ರಂಜಾನ್ ಹಬ್ಬವನ್ನು ಆಚರಿಸಿ, ಪ್ರಾರ್ಥನೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ರಂಜಾನ್ ಪ್ರಯುಕ್ತ ಈದ್ ಆಚರಣೆಯನ್ನು ಕೋವಿಡ್-19 ಮಹಾಮಾರಿಯಿಂದಾಗಿ ಮುಸ್ಲಿಂ ಬಾಂಧವರು ತಮ್ಮ ಮನೆಯಲ್ಲಿ ಸರಳವಾಗಿ ಆಚರಣೆ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶ ಪಾಲಿಸಿ ಎಲ್ಲೂ ಗುಂಪು ಸೇರಿ ಪ್ರಾರ್ಥನೆ ಮಾಡದೆ ಮನೆಯಲ್ಲೇ ಹಬ್ಬಾಚರಣೆ ಮಾಡಿದ್ದೇವೆ ಎಂದರು.

     ಈ ಮಹಾಮಾರಿಯನ್ನು ಪ್ರಪಂಚದಿಂದ ತೊಲಗಿಸಿ ಮಳೆ, ಬೆಳೆ ದಯಪಾಲಿಸಲಿ ಎಂದು ಅಲ್ಲಾನಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link