ಗ್ರಾಪಂ ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ ..!

ಗುಬ್ಬಿ

    ಮೂಲಭೂತ ಸೌಲಭ್ಯ ಒದಗಿಸುವ ಅಭಿವೃದ್ದಿ ಕೆಲಸಗಳು ಮರೀಚಿಕೆಯಾದ ಹಿನ್ನಲೆ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಮತ ಬಹಿಷ್ಕರಿಸಲು ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜವರೇಗೌಡನಪಾಳ್ಯ ಗ್ರಾಮಸ್ಥರು ಒಕ್ಕರಲಿನ ತೀರ್ಮಾನಕ್ಕೆ ಬಂದಿದ್ದಾರೆ.

     ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಬ್ಯಾಡಗೆರೆ ಕ್ಷೇತ್ರಕ್ಕೆ ಒಳಪಟ್ಟ ಮೂರು ಗ್ರಾಮಗಳಿಂದ ಒಟ್ಟು 700 ಮತದಾರರಿದ್ದಾರೆ. ಪಂಚಾಯಿತಿ ನಿಯಮಾನುಸಾರ ಈ ಕ್ಷೇತ್ರ ಎರಡು ಸದಸ್ಯತ್ವ ಪಡೆಯಬೇಕಿದೆ. ಈ ಬಗ್ಗೆ ಕಳೆದ 5 ವರ್ಷದ ಹಿಂದೆಯೇ ಪ್ರಸ್ತಾಪ ಮಾಡಿ ಮತದಾನ ಬಹಿಷ್ಕಾರದ ಪ್ರತಿಭಟನೆ ನಡೆಸಲಾಗಿತ್ತು. ಯಾವುದೇ ಮೂಲ ಸವಲತ್ತು ಪಡೆಯಲು ಬಹಿಷ್ಕಾರದ ಅಸ್ತ್ರ ಬಳಸಬೇಕಿದೆ. ಚುನಾವಣಾ ಸಂದರ್ಭದಲ್ಲಿ ಮಾತ್ರವೇ ಒಂದಿಷ್ಟು ಕೆಲಸ ಮಾಡಿಕೊಡುವ ಅಧಿಕಾರಿಗಳು ಪ್ರತಿಭಟನೆಗೆ ಮಾತ್ರ ಬೆಲೆ ನೀಡುತ್ತಿದ್ದಾರೆ. ಮೌಖಿಕ ಚರ್ಚೆ ಮಾಡಿದರೆ ವರ್ಷನುಗಟ್ಟಲೇ ಯಾವ ಕೆಲಸ ಮಾಡಿಕೊಡುವುದಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

    ಇದೇ ಗ್ರಾಮ ಪಂಚಾಯಿತಿಯಲ್ಲಿ 470 ಮತದಾರರು, 550 ಜನಸಂಖ್ಯೆ ಇರುವ ಗೋಪಾಲಪುರ ಕ್ಷೇತ್ರಕ್ಕೂ ಎರಡು ಸದಸ್ಯ ಸ್ಥಾನ ಕಲ್ಪಿಸಿದ್ದಾರೆ. ಸಾಮಾನ್ಯ ಮೀಸಲಿನ ಈ ಕ್ಷೇತ್ರಗಳಿಗೆ ದೊರೆತ ಸ್ಥಾನಮಾನ ಬ್ಯಾಡಗೆರೆ ಕ್ಷೇತ್ರಕ್ಕೆ ದೊರೆಕಿಲ್ಲ. ಬ್ಯಾಡಗೆರೆ, ಜವರೇ ಗೌಡನಪಾಳ್ಯ ಹಾಗೂ ಎಕೆ ಕಾಲೋನಿ ಮೂರು ಗ್ರಾಮಗಳು ಸೇರಿ ಸರಿ ಸುಮಾರು 800 ಮತದಾರರು ಬರಲಿದ್ದಾರೆ. ಆದರೂ ಒಂದೇ ಕ್ಷೇತ್ರವೆಂದು ಪರಿಗಣಿಸಿ ಯಾವುದೇ ಅಭಿವೃದ್ದಿ ಕೆಲಸಕ್ಕೂ ಒಂದು ಸಾವಿರಕ್ಕೂ ಅಧಿಕ ಜನಸಂಖ್ಯೆ ಗಣನೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಮೂಲ ಸವಲತ್ತಿನ ಕೊರತೆ ಎದ್ದು ಕಾಣುತ್ತಿದೆ. ಈ ಬಗ್ಗೆ ಅಧಿಕಾರಿಗಳು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಸ್ಥಳೀಯ ಜೆ.ಎಂ. ನರಸಿಂಹ ಮೂರ್ತಿ ಬೇಸರವ್ಯಕ್ತಪಡಿಸಿದರು.

     ಈ ಮೊದಲು ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿ ಮೂರ್ನಾಲ್ಕು ಕಿಮೀ ದೂರದಿಂದ ನೀರು ತರುವ ಅನಿವಾರ್ಯ ಬಂದೊದಗಿತ್ತು. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಪುರಸ್ಕರಿಸಿರಲಿಲ್ಲ. ಅದೇ ಸಂದರ್ಭಕ್ಕೆ ಬಂದ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸುವ ಫಲಕದೊಂದಿಗೆ ಪ್ರತಿಭಟನೆ ಮಾಡಿದ ವೇಳೆ ಗ್ರಾಮಕ್ಕೆ ಧಾವಿಸಿದ ಅಂದಿನ ತಹಸೀಲ್ದಾರ್‍ರವರು ಕುಡಿಯುವ ನೀರಿಗೆ ವಾರದೊಳಗೆ ವ್ಯವಸ್ಥೆ ಮಾಡುವ ಕೆಲಸ ಮಾಡಿದ್ದರು. ನಂತರ ಯಾವುದೇ ಕೆಲಸ ಅನುಷ್ಠಾನಕ್ಕೂ ಚುನಾವಣೆ ಬರುವವರಿಗೆ ಕಾಯುವ ದುಸ್ಥಿತಿ ಅಧಿಕಾರಿ ವರ್ಗ ತಂದಿರುವುದು ವಿಪರ್ಯಾಸ. ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿಯೇ ಕೆಲಸ ಮಾಡುವ ಜಡ್ಡು ಅಧಿಕಾರಿಗಳಲ್ಲಿ ಕಾಣಿಸುತ್ತಿದೆ ಎಂದು ಸ್ಥಳೀಯ ಮಹೇಶ್ ಸಿಡಿಮಿಡಿಗೊಂಡರು.

     ಅಭಿವೃದ್ದಿ ಕುಂಠಿತಕ್ಕೆ ಕ್ಷೇತ್ರ ವಿಂಗಡಣೆ ಮಾಡದಿರುವುದು ಕಾರಣವಾಗಿದೆ. ಸಾವಿರ ಜನಸಂಖ್ಯೆಯ ಕ್ಷೇತ್ರಕ್ಕೆ ನಿಯಮಾನುಸಾರ ಎರಡು ಕ್ಷೇತ್ರ ಪನರ್‍ವಿಂಗಡಿಸಬೇಕಿದೆ. ಗ್ರಾಮ ಪಂಚಾಯಿತಿ ಚುನಾವಣಾ ಸಮೀಪಿಸುತ್ತಿದೆ. ಈ ಬಗ್ಗೆ ಕ್ರಮವಹಿಸಲು ಗ್ರಾಮಸ್ಥರು ಕಳೆದ ಜನವರಿ ತಿಂಗಳಲ್ಲಿ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಮನವಿ ಸಲ್ಲಿಸಿದ್ದರು. ಕೋವಿಡ್-19 ವೈರಸ್ ಹಿನ್ನಲೆ ಈ ಮನವಿಗೆ ಬೆಲೆ ಸಿಕ್ಕಿಲ್ಲ. ಈಚೆಗೆ ಮಳೆ ಬಂದು ಇಡೀ ಜವರೇಗೌಡನಪಾಳ್ಯ ಗ್ರಾಮದ ಎಲ್ಲಾ ರಸ್ತೆಗಳು ಸಂಪೂರ್ಣ ಕೆಸರುಮಡುವಾಗಿದ್ದ ಬಗ್ಗೆ ತಿಳಿಸಲಾಗಿತ್ತು. ಆದರೂ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿಲ್ಲ. ಈ ನಿಟ್ಟಿನಲ್ಲಿ ಮುಂಬರುವ ಗ್ರಾಮ ಪಂಚಾಯಿತಿ ಮತದಾನ ಬಹಿಷ್ಕರಿಸುವ ಬಗ್ಗೆ ಗ್ರಾಮಸ್ಥರು ತೀರ್ಮಾನಿಸಲು ಸಭೆ ನಡೆಸಲಿದ್ದಾರೆ. ಈ ಬಗ್ಗೆ ತಾಲ್ಲೂಕು ಆಡಳಿತ ಶೀಘ್ರ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap