ತಿಪಟೂರು
ನಗರದ ಹೃದಯ ಭಾಗದಲ್ಲಿನ ಮೋರ್ ಸೂಪರ್ ಮಾರ್ಕೆಟ್ ಮುಂದಿನ ಚರಂಡಿಯಲ್ಲಿ ಅಧಂರ್ಬರ್ಧ ಕೊಳೆತ ಸ್ಥಿತಿಯಲ್ಲ್ಲಿ ಪುರಷನ ಶವ ದೊರೆತಿದ್ದು ಗುರುತು ಪತ್ತೆಯಾಗಿಲ್ಲ.ಬಿ.ಎಚ್.ರಸ್ತೆಯಲ್ಲಿರುವ ಮೋರ್ ಸೂಪರ್ ಮಾರ್ಕೆಟ್ ಮುಂದಿನ ಚರಂಡಿಯಲ್ಲಿ ದುರ್ನಾತ ಬೀರುತ್ತಿದ್ದನ್ನು ಗಮನಿಸಿ, ನಗರಸಭೆ ಸಿಬ್ಬಂದಿ ಮತ್ತು ಆರಕ್ಷಕರು ಚರಂಡಿಯ ಸ್ಲ್ಯಾಬ್ ಹೊಡೆದಾಗ ಕೈಗಳನ್ನು ಹಗ್ಗದಿಂದ ಬಿಗಿದ ಸ್ಥಿತಿಯಲ್ಲಿನ ಪುರುಷನ ಶವ ಕಂಡು ಬಂದಿದೆ.
ಬೆತ್ತಲೆಯಾಗಿ ಅರ್ಧಕೊಳೆತ ಸ್ಥಿತಿಯಲ್ಲಿ ಶವ ಇದೆ. ಶವವನ್ನು ಹೊರತೆಗೆಯಲು ಸುಮಾರು 2 ಗಂಟೆಗಳ ಸತತ ಪ್ರಯತ್ನದಿಂದ ಕಾಂಕ್ರೀಟ್ ಕಟರ್ ಬಳಸಿ ಚರಂಡಿಯ ಸ್ಲ್ಯಾಬ್ ಹೊಡೆಯಲಾಯಿತು. ಈ ಸಂದರ್ಭದಲ್ಲಿ ಡಿ.ವೈ.ಎಸ್ಪಿ, ನಗರಠಾಣೆಯ ಸಿ.ಪಿ.ಐ, ಎಸ್.ಐ ಹಾಗೂ ನಗರಸಭೆ ಪೌರಾಯುಕ್ತರು ಹಾಗೂ ಸಿಬ್ಬಂದಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು. ಶವವನ್ನು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಗ್ಗದಿಂದ ಬಿಗಿದ ಸ್ಥಿತಿಯಲ್ಲಿದ್ದು ಮತ್ತು ಚರಂಡಿ ಸಂಪೂರ್ಣವಾಗಿ ಮುಚ್ಚಿರುವುದರಿಂದ ಯಾರೊ ದುಷ್ಕರ್ಮಿಗಳು ಕೊಲೆಮಾಡಿ ಹಾಕಿರಬಹುದೆಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದು, ಹೆಚ್ಚಿನ ಮಾಹಿತಿ ಪೊಲೀಸರ ತನಿಖೆಯಿಂದ ಹೊರಬೀಳಬೇಕಾಗಿದೆ.ಶವವನ್ನು ನೋಡಲು ಆತುರದಲ್ಲಿ ಕೊರೊನಾ ಮಹಾಮಾರಿಯನ್ನು ಮರೆತು ಕಿಕ್ಕಿರಿದು ಸೇರಿದ್ದ ಜನರನ್ನು ನಿಭಾಯಿಸುವುದೇ ಆರಕ್ಷಕರಿಗೆ ಹರಸಾಹಸವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ