ಚಿತ್ರದುರ್ಗ 
ಸಮಾಜದಲ್ಲಿ ಜರುಗುವ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಪ್ರಮುಖವಾಗಿದ್ದು, ಸಮಾಜದ ಮೌಲ್ಯ ಉಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನಗಳು ನಿರಂತರ ನಡೆಯಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ವೈ ವಟವಟಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯೂನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಬಾಲ್ಯವಿವಾಹ ನಿಷೇಧ ಹಾಗೂ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ ಕುರಿತು ವಿಭಾಗೀಯ ಮಟ್ಟದ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು.
ಮದುವೆ ಸಂದರ್ಭದಲ್ಲಿ ಹೆಣ್ಣಿಗೆ 18, ಗಂಡಿಗೆ 21 ವರ್ಷಗಳಾಗಿರಬೇಕು. ಈ ನಿಯಮ ಜಾರಿಯಾಗುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಅವಶ್ಯವಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆ ಬಗ್ಗೆ ಹಲವಾರು ದೂರುಗಳು ದಾಖಲಾಗುತ್ತಿವೆ. ಆದರೆ ಸಮಾಜದ ಏಳಿಗೆಗಾಗಿ ತಮ್ಮ ಕರ್ತವ್ಯ ನಿರ್ವಹಿಸುವ ಬಗ್ಗೆ ಸಾರ್ವಜನಿಕರು ಗಮನಹರಿಸದೆ ಇರುವುದು ಬೇಸರದ ಸಂಗತಿ ಎಂದರು
ಮಾನವ ಕಳ್ಳ ಸಾಗಣೆಯಿಂದ ಅಂಗಾಂಗಗಳ ಮಾರಾಟ ಹೆಚ್ಚಾಗುತ್ತಿದೆ. ಈ ರೀತಿಯ ಅಮಾನವೀಯ ಕೃತ್ಯ ಸಮಾಜಕ್ಕೆ ಮಾರಕವಾಗಿದೆ. ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಲ್ಲಿ ಸಾರ್ವಜನಿಕರು ತಮ್ಮ ಕೊಡುಗೆ ನೀಡಬೇಕು. ಈ ರೀತಿಯ ಅಮಾನವೀಯ ಕೃತ್ಯಗಳನ್ನು ನಿಲ್ಲಿಸಬೇಕು. ಸಮಾಜದ ಮೌಲ್ಯ ಉಳಿಸುವಲ್ಲಿ ನಿರಂತರ ಪ್ರಾಮಾಣಿಕ ಪ್ರಯತ್ನ ಅಗತ್ಯವಿದೆ.
ಪ್ರಸ್ತುತ ದಿನಮಾನಗಳಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದೆ. ಆದರೆ ಸಂವಿಧಾನದಲ್ಲಿ ಉಲ್ಲೇಖವಾಗಿರುವ ಮೂಲಭೂತ ಕರ್ತವ್ಯಗಳನ್ನು ಪಾಲಿಸಿದರೆ, ಮೂಲಭೂತ ಹಕ್ಕುಗಳು ತಂತಾನೆ ದೊರೆಯುತ್ತವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ವೈ ವಟವಟಿ ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಕೆ. ದಯಾನಂದ ಅವರು ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕರ್ನಾಟಕದಲ್ಲಿ ತಳಮಟ್ಟದಿಂದ ಮೊದಲುಗೊಂಡು ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿಯೂ ಅತಿ ಹೆಚ್ಚು ಅಧಿಕಾರಿಗಳಿದ್ದಾರೆ. ಬಾಲ್ಯವಿವಾಹ ನಿಷೇಧಕ್ಕೆ ಸಂಬಂಧಿಸಿದಂತೆ ಯಾವ ಅಧಿಕಾರಿಗಳೂ ಸಂವೇದನಾ ಶೀಲತೆಯಿಂದ ಕೆಲಸ ಮಾಡದಿರುವುದು ಬೇಸರದ ಸಂಗತಿ. ಅಧಿಕಾರಿಗಳು ಮುನ್ನೆಚರಿಕೆಯಿಂದ ಕಾರ್ಯನಿರ್ವಹಿಸಿ, ಸಮಾಜದ ಪಿಡುಗುಗಳನ್ನು ತೊಡೆಯುವಲ್ಲಿ ಭಾಗವಹಿಸಬೇಕು ಎಂದು ನುಡಿದರು
ಸಮಾಜದಲ್ಲಿ ನಡೆಯುವ ಕಾನೂನು ಬಾಹಿರ ಘಟನೆಗಳಿಗೆ ಮೌನವಹಿಸಿದರೆ, ಪರೋಕ್ಷವಾಗಿ ಅಪರಾಧಿಗಳಾದಂತೆ. ಇಂದಿನ ತಂತ್ರಜ್ಞಾನ ಯುಗದ ಪ್ರಭಾವದಿಂದಾಗಿ ಸಾಮಾಜಿಕ ಭಯ ಕಡಿಮೆಯಾಗುತ್ತಿರುವದೇ ಅನೈತಿಕ ಚಟುವಟಿಕೆಗಳಿಗೆ ಕಾರಣವಾಗಿದೆ. ಮಹಿಳೆ ಸೂಕ್ಷ್ಮ ಹಾಗೂ ಸಂವೇದನಾಶೀಲತೆಯಿಂದ ಕಾರ್ಯ ನಿರ್ವಹಿಸುತ್ತಾರೆ ಎಂಬ ಕಾರಣದಿಂದಾಗಿಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಹೆಚ್ಚು ಅವಕಾಶ ನೀಡಲಾಗಿದೆ. ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಸದುಪಯೋಗವಾಗುವಂತೆ ಮಾಡಿ, ಸಮಾಜದ ಬದಲಾವಣೆಗೆ ಶ್ರಮಿಸಬೇಕು ಎಂಬುದಾಗಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಅವರು ಮಾತನಾಡಿ, ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಕ್ಷೇತ್ರಕ್ಕೆ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ಬಾಲ್ಯವಿವಾಹ ಹಾಗೂ ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಬಾಲ್ಯವಿವಾಹ ತಡೆಗಟ್ಟುವಲ್ಲಿ ಶಿಕ್ಷಣ ಇಲಾಖೆ ಪಾತ್ರ ಬಹುಮುಖ್ಯವಾಗಿದೆ. ಶಾಲೆ ಬಿಟ್ಟ ಮಕ್ಕಳು, ಅದರಲ್ಲೂ ಬಾಲಕಿಯರ ಬಗ್ಗೆ ಹೆಚ್ಚು ಗಮನಹರಿಸಬೇಕು. ಮಕ್ಕಳ ಕುಟುಂಬದೊಂದಿಗೆ ನಿರಂತರ ಸಂಪರ್ಕ ಹೊಂದಿ, ಅವರ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು
ಚಿತ್ರದುರ್ಗ ಹಿಂದುಳಿದ ಜಿಲ್ಲೆಯಾಗಿದ್ದು, ಬಾಲ್ಯವಿವಾಹದಂತಹ ಪ್ರಕರಣ ಹೆಚ್ಚು ನಡೆಯುತ್ತಿವೆ. ಅನಕ್ಷರತೆಯಿಂದ, ಸಾಂಪ್ರದಾಯಿಕ ಹಾಗೂ ಆರ್ಥಿಕ ಪಿಡುಗುಗಳಂತಹ ಜ್ವಲಂತ ಸಮಸ್ಯೆಗಳು, ಊರಿನ ಪ್ರಮುಖ ಹಬ್ಬ ಆಚರಣೆಗಳಲ್ಲಿ ಅಥವಾ ಸಾಮೂಹಿಕ ವಿವಾಹಗಳ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಬಾಲ್ಯವಿವಾಹ ನಡೆಯುತ್ತಿದೆ. ಆರ್ಥಿಕ ಹೊಣೆ ನಿವಾರಿಸುವ ಸಲುವಾಗಿ ವಲಸೆ ಹೋಗುವವರು. ತಮ್ಮ ಹೆಣ್ಣು ಮಕ್ಕಳ ರಕ್ಷಣೆಗಾಗಿ ಮದುವೆ ಮಾಡಿ, ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾಯಿಸುತ್ತಾರೆ. ಶಿಕ್ಷಣ ಇಲಾಖೆ ಇತ್ತ ಗಮನಹರಿಸಿ, ಬಾಲಕಿಯರ ವಸತಿ ನಿಲಯಗಳಲ್ಲಿ ಅವರಿಗೆ ಆಶ್ರಯ ಕಲ್ಪಿಸಿ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಿ, ಆರ್ಥಿಕ ಸಬಲರನ್ನಾಗಿಸಬೇಕು ಎಂದರು
ಮಹಿಳೆಯರು ಸ್ವಾಲಂಬಿಯಾಗಿ ಬದುಕುವಂತೆ ಅವಕಾಶ ಕಲ್ಪಿಸಬೇಕು. ಪ್ರಸ್ತುತ ದಿನಮಾನಗಳಲ್ಲಿ ಮನೆಕೆಲಸ, ದತ್ತು, ಮದುವೆಯಂತಹ ಸುಳ್ಳು ಹೆಸರಿನಲ್ಲಿ ಮಾನವ ಕಳ್ಳ ಸಾಗಣೆ ನಡೆಯುತ್ತಿದೆ, ಅಧಿಕಾರಿಗಳು ಇತ್ತ ಗಮನಹರಿಸಿ, ಅವರಿಗೆ ಮೂಲಭೂತ ಹಕ್ಕು ಹಾಗೂ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಎಂದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು ಮಾತನಾಡಿ, ಜಿಲ್ಲೆಯಲ್ಲಿ ಶಿಕ್ಷಣದ ಕೊರತೆಯಿಂದ ಸಾಂಪ್ರದಾಯಿಕ ಮೌಢ್ಯಗಳು ಹೆಚ್ಚಾಗಿ ಬಾಲ್ಯ ವಿವಾಹಗಳು ಜರುಗುತ್ತಿವೆ. ಮಹಿಳೆಯರು ಅಬಲೆಯರಲ್ಲ, ಆದರೆ ಸಬಲರಿಂದ ನಿರಂತರ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಮಾತೃಪೂರ್ಣ, ಮಾತೃವಂದನ ಯೋಜನೆಗಳ ಬಗ್ಗೆ ಗ್ರಾಮಗಳಲ್ಲಿ ಅರಿವು ಮೂಡಿಸಿ, ಸದುಪಯೋಗ ಆಗುವಂತೆ ಮಾಡಬೇಕು. ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಜಾರಿಯಲ್ಲಿರುವ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಶಾಸಕಾಂಗದ ನಿಯಮವನ್ನು ಕಾರ್ಯಾಂಗ ಪಾಲಿಸುವಂತಾಗಬೇಕು. ಸರ್ಕಾರದ ಬಜೆಟ್ನಲ್ಲಿ ಅತಿಹೆಚ್ಚು ಹಣ ಒದಗಿಸುವುದು ಅಕ್ಷರದಾಸೋಹ, ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ. ಇದರ ಉದ್ದೇಶ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಯೇ ಆಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕಿ ಕೆ.ಎಂ ರೇವತಿ, ಬೆಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಹಲೀಮಾ ಕೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ. ಪ್ರಭಾಕರ್ ಆರ್. ಯೂನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ವಿಭಾಗೀಯ ಸಂಯೋಜಕ ರಾಘವೇಂದ್ರ ಭಟ್, ಮಹಿಳಾ ಪೊಲೀಸ್ ಠಾಣೆ ಪಿಐ ಲಕ್ಷ್ಮೀಕಾಂತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯಕ್ ಸೇರಿದಂತೆ ರಾಜ್ಯದ ದಾವಣಗೆರೆ, ಚಿತ್ರದುರ್ಗ, ರಾಮನಗರ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








