ತುಮಕೂರು
ರಸ್ತೆ ಅಪಘಾತಗಳನ್ನು ತಡೆದು ಜನರ ಜೀವಹಾನಿ ತಪ್ಪಿಸುವ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಇದೀಗ ಜನಸಾಮಾನ್ಯರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕಾಯ್ದೆ ರಚನೆಯಾದ ಸಂದರ್ಭದಲ್ಲಿ ಕೆಲವೇ ಮಂದಿ ವಿರೋಧ ವ್ಯಕ್ತಪಡಿಸಿದ್ದರು. ಆಗ ಕಾಯ್ದೆಯ ಬಿಸಿ ತಟ್ಟಿರಲಿಲ್ಲ. ಇದೀಗ ನಿಯಮ ಜಾರಿಯಾಗಿ ಎಲ್ಲರಿಗೂ ಬಿಸಿ ಮುಟ್ಟುತ್ತಿರುವ ಸಂದರ್ಭ ಎದುರಾಗಿದ್ದು ಸಿಟ್ಟು, ಆಕ್ರೋಶ ಹೊರಹಾಕುತ್ತಿದ್ದಾರೆ.
ಬ್ರಿಟನ್, ಕೆನಡಾ, ಅರ್ಜೆಂಟೈನಾ ಮೊದಲಾದ ದೇಶಗಳಲ್ಲಿರುವ ವ್ಯವಸ್ಥೆಗಳನ್ನು ಪರಿಶೀಲಿಸಿ ಇಲ್ಲಿಯೂ ಕಾನೂನು ಜಾರಿಗೆ ತರುತ್ತಿರುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಆದರೆ ಆ ದೇಶಗಳಿಗೆ ಭಾರತವನ್ನು ಹೋಲಿಸುವುದು ಔಚಿತ್ಯವೇ? ಈಗಾಗಲೇ ಮುಂದುವರಿದಿರುವ ಆ ರಾಷ್ಟ್ರಗಳಲ್ಲಿ ರಸ್ತೆಗಳು ಹೇಗಿವೆ? ವಾಹನ ಸಂಚಾರ ಹೇಗಿದೆ? ರಸ್ತೆಯ ನಿಯಮಗಳ ಪಾಲನೆ ಹೇಗಿದೆ? ಇವೆಲ್ಲವನ್ನೂ ಗಮನಕ್ಕೆ ತೆಗೆದುಕೊಳ್ಳಬೇಕಲ್ಲವೆ? ಇಲ್ಲಿ ರಸ್ತೆಗಳೇ ಸರಿಯಿಲ್ಲ. ದಿಢೀರ್ ಗುಂಡಿಗಳು ಕಂಡುಬರುತ್ತವೆ. ವಿಶಾಲವಾದ ರಸ್ತೆಗಳಿಲ್ಲ.
ಪದೇ ಪದೇ ರಸ್ತೆಯನ್ನು ಅಗೆದು ಗುಂಡಿ ಗಟಾರಗಳು ಬಿದ್ದಿರುತ್ತವೆ. ಸಮರ್ಪಕ ಸೂಚನಾ ಫಲಕಗಳಿಲ್ಲ. ಸಿಗ್ನಲ್ ಲೈಟ್‍ಗಳು ಪದೆ ಪದೆ ಕೆಟ್ಟು ಹೋಗುತ್ತವೆ. ಈ ಬಗ್ಗೆ ಮಾಹಿತಿ ನೀಡುವ ಯಾವ ವ್ಯವಸ್ಥೆಯೂ ಇಲ್ಲ. ಇಂತಹ ದೇಶ, ರಾಜ್ಯ, ಜಿಲ್ಲೆಯಲ್ಲಿ ವಾಸ ಮಾಡುತ್ತಿರುವ ನಮ್ಮ ಜನರ ಮೇಲೆ ಮುಂದುವರಿದ ದೇಶಗಳ ಕಾನೂನನ್ನು ಏಕಪಕ್ಷೀಯವಾಗಿ ಹೇರುತ್ತಿರುವುದು ಸರಿಯೇ? ಇದು ಈಗ ಹೆಚ್ಚು ಚರ್ಚಿತವಾಗುತ್ತಿರುವ ವಿಷಯ.
ಈಗ ಜಾರಿಗೆ ಬಂದಿರುವ ನೂತನ ಕಾಯ್ದೆಯ ಪ್ರಕಾರ ವಾಹನ ಚಾಲನೆ ಸಂದರ್ಭದಲ್ಲಿ ಸಣ್ಣ ಲೋಪ ಕಂಡು ಬಂದರೂ 1000 ರೂ.ಗಳ ಮೇಲ್ಪಟ್ಟು ದಂಡ ವಿಧಿಸಲಾಗುತ್ತದೆ. ಹೆಲ್ಮೆಟ್‍ನಿಂದ ಆರಂಭವಾಗಿ ದಾಖಲೆಗಳು ಇಲ್ಲದೆ ಇರುವುದು, ಸಿಗ್ನಲ್ ಜಂಪ್ ಇತ್ಯಾದಿಗಳನ್ನು ಅವಲೋಕಿಸಿದರೆ ದಂಡದ ಮೊತ್ತ ವಾಹನಗಳ ಅರ್ಧ ಮೊತ್ತದಷ್ಟು ಇದೆ. ಈ ದಂಡವನ್ನು ನೋಡಿಯೇ ಕೆಲವರು ಹೌಹಾರುತ್ತಿದ್ದಾರೆ. ದೇಶದ ಕೆಲವು ಕಡೆಗಳಲ್ಲಿ ದಂಡ ಪಾವತಿಸಲಾಗದೆ ವಾಹನಗಳನ್ನು ಪೋಲೀಸರ ಬಳಿಯೇ ಬಿಟ್ಟು ಹೋಗುತ್ತಿದ್ದಾರೆ.
ಇನ್ನು ಕೆಲವು ಕಡೆ ಸಂಘರ್ಷಗಳು ಆರಂಭವಾಗಿವೆ. ಪೋಲೀಸರು ಮತ್ತು ಸಾರ್ವಜನಿಕರ ನಡುವೆ ಹಿಂದಿನಿಂದಲೂ ಜಗಳ, ವಾಗ್ವಾದ ನಡೆದುಕೊಂಡೆ ಬಂದಿದೆ. ಈಗ ಇದು ಅತಿರೇಕಕ್ಕೆ ಹೋದರೂ ಅಚ್ಚರಿಯಿಲ್ಲ. ಅಷ್ಟೇ ಅಲ್ಲ, ಕೇಂದ್ರ ಮತ್ತು ರಾಜ್ಯಗಳ ನಡುವೆ ಕಿತ್ತಾಟಕ್ಕೂ ಇದು ವೇದಿಕೆಯಾಗಿದೆ.
ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲೇ ಈ ನೂತನ ಕಾಯ್ದೆಯ ವಿರುದ್ಧ ಅಪಸ್ವರಗಳು ಎದುರಾಗಿವೆ. ಪ್ರಧಾನಿ ಮತ್ತು ಗೃಹ ಸಚಿವರ ಸ್ವಕ್ಷೇತ್ರ ಗುಜರಾತ್‍ನಲ್ಲೆ ಈ ಕಾಯ್ದೆಗೆ ವಿರೋಧವಿದೆ. ಕಾಯ್ದೆ ಜಾರಿಗೆ ತರುವ ಮುನ್ನ ರಾಜ್ಯಗಳ ಜೊತೆ ಸಮಾಲೋಚಿಸಬೇಕಿತ್ತು. ತಜ್ಞರ ಜೊತೆ ಚರ್ಚಿಸಬೇಕಿತ್ತು. ಸಂಬಂಧಪಟ್ಟ ಇಲಾಖೆಗಳ ನಡುವೆ ಸಮನ್ವಯತೆ ಕಾಯ್ದುಕೊಳ್ಳ ಬೇಕಾಗಿತ್ತು. ಇದಾವುದನ್ನೂ ಪರಿಶೀಲಿಸದೆ ಏಕಾಏಕಿ ಜಾರಿಗೆ ತಂದ ಈ ಕಾಯ್ದೆ ಒಕ್ಕೂಟ ವ್ಯವಸ್ಥೆಗೆ ಮತ್ತೆ ಧಕ್ಕೆ ತರತೊಡಗಿದೆ. ಈ ಹಿನ್ನೆಲೆಯಲ್ಲಿಯೆ ಕೆಲವು ರಾಜ್ಯಗಳು ಈ ಕಾನೂನನ್ನು ಸಾರಾಸಗಟಾಗಿ ತಿರಸ್ಕರಿಸಿವೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಯ್ದೆ ಜಾರಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ಕರ್ನಾಟಕ ಸರ್ಕಾರಕ್ಕೂ ಇದರ ಬಿಸಿ ತಟ್ಟಿದೆ. ಆರೋಗ್ಯ ಸಚಿವ ಶ್ರೀರಾಮುಲು ಈ ಕಾಯಿದೆ ಕುರಿತು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ದಂಡ ಕಡಿತ ಮಾಡಬಹುದೆ ಎಂಬುದನ್ನು ಪರಿಶೀಲಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾರಿಗೆ ಸಚಿವರಿಗೆ ಸೂಚಿಸಿದ್ದಾರೆ. ಹೀಗೆ ಮುಖ್ಯಮಂತ್ರಿಗಳೆ ಸೂಚಿಸಿರುವ ಹಿನ್ನೆಲೆಯನ್ನು ಗಮನಿಸಿದರೆ ಸರ್ಕಾರಕ್ಕೆ ಬಿಸಿ ತಟ್ಟಿರುವುದು ವೇದ್ಯವಾಗುತ್ತದೆ. ಈಗಾಗಲೆ ಹಲವು ಹತ್ತು ನಿಯಮ, ನಿಬಂಧನೆಗಳಿಂದ ರೋಸಿ ಹೋಗಿರುವ ಜನತೆ ಈಗ ಮತ್ತಷ್ಟು ನಿಯಮಗಳಿಂದ ಕಂಗಾಲಾಗುವಂತಾಗಿರುವುದು ಸರ್ಕಾರಕ್ಕೂ ಗೊತ್ತಾಗುತ್ತಿದೆ.
ಬಿಜೆಪಿ ಅಧಿಕಾರದಲ್ಲಿರುವ ಹಾಗೂ ಸ್ವಪಕ್ಷೀಯರಿಂದಲೆ ಟೀಕೆಗೆ ಒಳಗಾಗುತ್ತಿರುವ ಇಂತಹ ಕಾನೂನನ್ನು ಜಾರಿಗೆ ತರುವ ಅವಶ್ಯಕತೆ ಇತ್ತೆ ಎಂಬ ಪ್ರಶ್ನೆಗಳು ಈಗ ಹೆಚ್ಚು ಚರ್ಚೆಗೆ ಬಂದಿವೆ. ಇವೆಲ್ಲವನ್ನೂ ನೋಡುತ್ತಿದ್ದರೆ ಇಂತಹ ನಿರ್ಧಾರಗಳು ಅಪಹಾಸ್ಯಕ್ಕೂ ಒಳಗಾಗುತ್ತಿವೆ.
ಸಮಸ್ಯೆಗಳೇ ಹೆಚ್ಚು ಇಂತಹ ಕಾನೂನುಗಳನ್ನು ಜಾರಿಗೆ ತರುವ ಮುನ್ನ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಬೇಕು. ತುಮಕೂರು ನಗರವನ್ನೂ ಒಳಗೊಂಡಂತೆ ಈ ದೇಶದ ಉದ್ದಗಲಕ್ಕೂ ಹೋಗಿ ಬಂದರೆ ವಿದೇಶಗಳಲ್ಲಿರುವ ರಸ್ತೆ ಸಂಚಾರದ ಸುವ್ಯವಸ್ಥೆ ನಮ್ಮಲ್ಲಿ ಅಷ್ಟಾಗಿಲ್ಲ. ಕಿರಿದಾದ ರಸ್ತೆಗಳು, ಅದರೊಳಗೆ ಗುಂಡಿಗಳು ಇರುವಾಗ ಸಂಚಾರ ನಿಯಮ ಪಾಲಿಸಲಿಲ್ಲ ಎಂದು ದುಪ್ಪಟ್ಟು ದಂಡ
ವಿಧಿಸುವುದು ಸರಿಯಾದ ಕ್ರಮವೇ?
ತುಮಕೂರು ನಗರವನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ ಇಲ್ಲಿನ ಕೆಲವು ವೃತ್ತಗಳಲ್ಲಿ ವಾರಕ್ಕೆ ಒಂದೆರಡು ಬಾರಿ ಸಿಗ್ನಲ್ ಲೈಟ್‍ಗಳು ಸ್ಥಗಿತ ಗೊಳ್ಳುತ್ತವೆ. ಒಟ್ಟಾರೆ ಸಂಚಾರಿ ವ್ಯವಸ್ಥೆಯೇ ಸರಿಯಿಲ್ಲ. ಇನ್ನು ಮುಂದಕ್ಕೆ ಹೇಳುವುದೇ ಬೇಡ. ರಾತ್ರಿ 8 ಗಂಟೆಯ ನಂತರ ಸಿಗ್ನಲ್ ಲೈಟ್‍ಗಳು ಸ್ಥಗಿತಗೊಳ್ಳುತ್ತವೆ. ಪೋಲೀಸರು ಮನೆಗೆ ತೆರಳುತ್ತಾರೆ. ಹೇಳಬೇಕೆಂದರೆ ಹೆಚ್ಚು ದಟ್ಟಣೆ ಉಂಟಾಗುವುದೇ ಆ ಸಂದರ್ಭದಲ್ಲಿ. ರಾಜಧಾನಿಯಿಂದ ಮತ್ತೊಂದು ಕಡೆಗೆ ತೆರಳುವ ಹಾಗೂ ಮತ್ತೊಂದು ಕಡೆಯಿಂದ ರಾಜಧಾನಿಯತ್ತ ತೆರಳುವ ವಾಹನವೂ ಸೇರಿದಂತೆ ನಗರದ ಸ್ಥಳೀಯ ವಾಹನಗಳು ಸೇರಿ ವಿಪರೀತ ದಟ್ಟಣೆ ಉಂಟಾಗುತ್ತದೆ. ಸಂಚಾರಿ ಕಿರಿಕಿರಿ ನಡುವೆಯೇ ವಾಹನಗಳು ಸಾಗುತ್ತವೆ. ರಾತ್ರಿ ವೇಳೆ ಸುಗಮ ಸಂಚಾರಕ್ಕೆ ಯಾವ ವ್ಯವಸ್ಥೆಯೂ ಇಲ್ಲ. ಕಳ್ಳಕಾಕರು ರಸ್ತೆ ಬದಿಗಳಲ್ಲಿ ನಿಂತು ವಾಹನ ಸವಾರರನ್ನು ಅಡ್ಡಗಟ್ಟಿದರೆ ಕೇಳುವವರೆ ದಿಕ್ಕಿಲ್ಲ.
ಇನ್ನು ಪದೆ ಪದೆ ಕಾಮಗಾರಿಗಳು ನಡೆಯುತ್ತಿರುತ್ತವೆ. ಒಂದಾದ ನಂತರ ಮತ್ತೊಂದು ಎಂಬಂತೆ ಗುಂಡಿಗಳನ್ನು ಅಗೆಯಲಾಗುತ್ತದೆ. ಇದನ್ನು ಮುಚ್ಚುವ ವೇಳೆಗೆ ಹಲವು ತಿಂಗಳು ಉರುಳಿ ಹೋಗುತ್ತವೆ. ಎಷ್ಟೋ ಮಂದಿ ಇಂತಹ ಗುಂಡಿಗಳ ಒಳಗೆ ಬಿದ್ದು ಗಾಯ ಮಾಡಿಕೊಂಡಿರುವ ಉದಾಹರಣೆಗಳಿವೆ. ಇನ್ನು ಮಳೆ ಬಂದರಂತೂ ಮುಗಿದೆ ಹೋಯಿತು. ಸಣ್ಣ ಮಳೆಗೂ ರಸ್ತೆಗಳು ಅಧ್ವಾನಗೊಳ್ಳುತ್ತವೆ. ತುಮಕೂರಿನ ಯಾವುದೆ ರಸ್ತೆಗಳು ಸರಿಯಿಲ್ಲ. ಗುಂಡಿ ಗಟಾರಗಳಿಂದ ಜನತೆ ನಲುಗಿ ಹೋಗಿದ್ದಾರೆ. ಸಂಚಾರ ವ್ಯವಸ್ಥೆಯಂತೂ ಹದಗೆಟ್ಟು ಹೋಗಿದೆ. ಸಮರ್ಪಕ ನಾಮ ಫಲಕಗಳಿಲ್ಲ. ರಸ್ತೆಗಳನ್ನು ತೋರಿಸುವ ಸೂಚನಾ ಫಲಕಗಳು ಎಲ್ಲ ಕಡೆ ಇರಬೇಕು. ಎಷ್ಟು ಕಡೆ ಇದೆ ಎಂಬುದನ್ನು ಹುಡುಕಿ ನೋಡಬೇಕು.
ರಾತ್ರಿ ವೇಳೆ ಎಲ್ಲ ಕಡೆಯೂ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ಇರಬೇಕು. ಕೆಲವು ಕಡೆ ತಿಂಗಳಾನುಗಟ್ಟಲೆ ಕಳೆದರೂ ಬೀದಿ ದೀಪಗಳು ಉರಿಯುವುದೇ ಇಲ್ಲ. ದೀಪಗಳನ್ನು ಹಾಕಿಸಲು ಮನವಿ ಮಾಡಬೇಕಾದ ಪರಿಸ್ಥಿತಿ ಇದೆ. ಇಂತಹ ನೂರೆಂಟು ಸಮಸ್ಯೆಗಳ ನಡುವೆ ಇಲ್ಲಿನ ಜನ ಬದುಕು ಸವೆಸುತ್ತಿದ್ದಾರೆ. ಪ್ರತಿವರ್ಷ ನಗರ ಪಾಲಿಕೆಗೆ ಕಂದಾಯ ಪಾವತಿಸುತ್ತಾ ಬರುತ್ತಾರೆ. ವಿವಿಧ ರೀತಿಯ ಸೆಸ್‍ಗಳ ಹೆಸರಿನಲ್ಲಿ ಜನರ ಜೇಬು ಬರಿದಾಗುತ್ತಿವೆಯೆ ಹೊರತು ಸೌಲಭ್ಯಗಳಂತೂ ಮರೀಚಿಕೆಯಾಗುತ್ತಿವೆ. ಜನರು ಪಾವತಿಸುವ ತೆರಿಗೆ ಹಣದಲ್ಲಿ ಅರ್ಧ ಖರ್ಚು ಮಾಡಿದರೆ ಸಾಕು. ಆದರೆ ಅದೂ ಸಾಧ್ಯವಾಗುತ್ತಿಲ್ಲ.
ಯಾವುದೆ ಕಾನೂನುಗಳು ಜಾರಿಗೆ ಬಂದರೂ ಒಂದು ಉತ್ತಮ ಉದ್ದೇಶ ಅದರ ಹಿಂದಿರುತ್ತದೆ. ಈಗ ಬಂದಿರುವ ಸಂಚಾರಿ ನೂತನ ನಿಯಮವನ್ನು ಮುಂದಿಟ್ಟುಕೊಂಡು ಪೋಲೀಸರು ಬೀದಿಗೆ ಇಳಿದಿದ್ದಾರೆ. ಜನರ ರಕ್ಷಣೆಗಿಂತ ಹೆಚ್ಚಾಗಿ ದಂಡ ಹಾಕುವುದೇ ಇವರ ಮುಖ್ಯ ಕೆಲಸವಾಗಿದೆ. ಈ ಹಿಂದೆಯೂ ಅದೇ ಕೆಲಸವಾಗಿತ್ತು. ತುಮಕೂರಿನಲ್ಲಿ ಈ ಕಾನೂನು ಜಾರಿಯಾದ ಮೊದಲ ದಿನವೆ 60,000 ರೂ.ಗಳ ದಂಡ ಸಂಗ್ರಹಿಸಿರುವ ಹೆಗ್ಗಳಿಕೆ ಸಂಚಾರಿ ಪೋಲೀಸರದ್ದು. ದಂಡ ಹಾಕುವಲ್ಲಿ, ಅದನ್ನು ವಸೂಲಿ ಮಾಡುವಲ್ಲಿ ಅತಿ ಹೆಚ್ಚು ಕಾಳಜಿ ವಹಿಸುವ ಪೋಲೀಸರಿಗೆ ಜನರ ರಕ್ಷಣೆ, ಅವರ ಹಕ್ಕು ಬಾಧ್ಯತೆಗಳು ಕಾಣಿಸುವುದಿಲ್ಲವೆ?
ಪೋಲೀಸ್ ಇಲಾಖೆ ಇರುವುದೇ ಜನರ ರಕ್ಷಣೆ, ಕಾನೂನು ಸುವ್ಯವಸ್ಥೆ ಕಾಪಾಡಲಿಕ್ಕಾಗಿ. ಆದರೆ ಅದರ ಮೂಲ ಅರ್ಥವೇ ಕಳೆದು ಹೋಗಿದೆ. ವಾಹನಗಳನ್ನು ಹುಡುಕಿ ದಂಡ ಹಾಕುವುದೇ ಪ್ರಥಮ ಆದ್ಯತೆ ಎನ್ನುವಷ್ಟರ ಮಟ್ಟಿಗೆ ಇಲಾಖೆ ಬಂದು ನಿಂತಿದೆ. ಒಂದೆರಡು ಇಲಾಖೆಗಳು ಸರ್ಕಾರದ ಬೊಕ್ಕಸ ತುಂಬುವ ಇಲಾಖೆಗಳಾಗಿ ಹೆಸರು ಪಡೆದಿವೆ. ಇದೀಗ ಪೋಲೀಸ್ ಇಲಾಖೆಯೂ ಆ ಪಟ್ಟಿಗೆ ಸೇರಿ ಬಿಟ್ಟಿದೆ. ಇಂತಿಷ್ಟು ವಸೂಲಿ ಮಾಡಲೆ ಬೇಕು ಎಂಬ ನಿಯಮ ಆ ಇಲಾಖೆಯಲ್ಲೂ ಬಂದಿರುವಂತಿದೆ.
ದಂಡ ವಸೂಲಿ ಮಾಡುವ ಹಣ ಹೆಚ್ಚುತ್ತಲೆ ಹೋಗುತ್ತದೆ. ಹೋಗಲಿ ಆ ಹಣದಿಂದಲಾದರೂ ಮೂಲ ಸೌಕರ್ಯಗಳನ್ನು ಕಲ್ಪಿಸುತ್ತಾರೆಯೇ? ಹಾಗಾದರೆ ಕಾನೂನು ಜಾರಿ ಹೆಸರಿನಲ್ಲಿ ಸರ್ಕಾರಕ್ಕೆ ಹಣ ಮಾಡಿ ಕೊಡುವ ಉದ್ದೇಶ ಒಂದೆ ಇದರ ಗುರಿಯಾಗಿದೆಯೇ?
ಯಾವುದೇ ಕಾನೂನನ್ನು ಜಾರಿಗೆ ತರುವ ಮುನ್ನ ಸಂಬಂಧಪಟ್ಟ ಇಲಾಖೆಗಳೊಂದಿಗೆ, ಅಧಿಕಾರಿಗಳೊಂದಿಗೆ ಚರ್ಚಿಸಬೇಕು. ಜನ ಸಾಮಾನ್ಯರಲ್ಲಿ ಅರಿವು ಮೂಡಿಸಬೇಕು. ಇಂತಹ ದಿನಾಂಕದಿಂದ ಕಾಯಿದೆ ಜಾರಿಗೆ ಬರುತ್ತದೆ ಎಂಬ ವಿವರಣೆ ನೀಡಬೇಕು. ಅದಕ್ಕೆ ತಕರಾರು ಅಥವಾ ಆಕ್ಷೇಪಣೆಗಳನ್ನು ಸ್ವೀಕರಿಸಬೇಕು. ಇಲ್ಲಿ ಯಾವುದೆ ತಕರಾರು ಸ್ವೀಕರಿಸುವ, ಆಕ್ಷೇಪಣೆಗಳನ್ನು ಕೇಳುವ ವ್ಯವಧಾನ ಇಲ್ಲವೆ ಇಲ್ಲ. ಏಕಪಕ್ಷೀಯ ನಿರ್ಧಾರದಿಂದಾಗಿ ಸಾಮಾನ್ಯ ಜನ ಪರದಾಡುವಂತಾಗಿದೆ.
ಅರಿವು ಮೂಡಿಸುವ ಕಾರ್ಯಕ್ರಮಗಳು ಇಲಾಖೆಗಳಿಂದ ಹೆಚ್ಚು ಹೆಚ್ಚಾಗಿ ಆಗಬೇಕು. ವರ್ಷದಲ್ಲಿ ಒಮ್ಮೆ ಮಾತ್ರ ಪೋಲೀಸ್ ಇಲಾಖೆಯಿಂದ ಅರಿವಿನ ಕಾರ್ಯಕ್ರಮ ನಡೆಯುತ್ತದೆ. ಅಪರಾಧ ತಡೆ ಮಾಸಾಚರಣೆ-ಸಂಚಾರಿ ಸಪ್ತಾಹ ಬಿಟ್ಟರೆ ಇನ್ನಾವ ಮಾಹಿತಿ ನೀಡುವ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಯಾವ ಮಾಹಿತಿಯನ್ನೂ ನೀಡದೆ ಜನರ ಮೇಲೆ ದಂಡ ವಿಧಿಸುವ ಅಥವಾ ಶಿಕ್ಷೆ ವಿಧಿಸುವುದೇ ಇಲಾಖೆಯ ಪ್ರಥಮ ಆದ್ಯತೆಯಾಗಬೇಕೆ?
ನಮ್ಮ ನಗರಗಳಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಫುಟ್‍ಪಾತ್‍ಗಳಂತೂ ಆಕ್ರಮಣಕ್ಕೆ ಒಳಗಾಗಿವೆ. ವಾಹನ ನಿಲುಗಡೆಗೆ ಜಾಗ ಯಾವುದು ಎಂದು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಫುಟ್‍ಪಾತ್‍ಗಳನ್ನು ಅಂಗಡಿಗಳು ಆಕ್ರಮಿಸಿಕೊಂಡಿವೆ. ಈ ಬಗ್ಗೆ ಯಾವುದೇ ನಿಯಂತ್ರಣ, ನಿರ್ಬಂಧಗಳಿಲ್ಲ. ಫುಟ್‍ಪಾತ್‍ಗಳಲ್ಲೆಲ್ಲಾ ಅಂಗಡಿಗಳನ್ನು ಇಡಲಾಗಿದೆ ಎಂದು ಹಿಂದೆ ಕೆಲವರು ಬೊಬ್ಬೆ ಹಾಕುತ್ತಿದ್ದರು. ಈಗ ಆಡಳಿತ ಬದಲಾಗಿದೆ. ಆದರೂ ಯಾವುದೇ ಕ್ರಮ ಜರುಗುತ್ತಿಲ್ಲ.
ಮತ್ತೊಂದು ಶಾಕ್ !
ಇದಿಷ್ಟೇ ಅಲ್ಲ, ವಾಹನ ಚಲಾಯಿಸುವವರು ಮುಂದಿನ ದಿನಗಳಲ್ಲಿ ಪಂಚೆ ಉಡ ಬಾರದಂತೆ. ಚಪ್ಪಲಿ ಹಾಕಬಾರದಂತೆ. ಎಲ್ಲರೂ ಶೂ ಹಾಕಿಕೊಂಡೆ ವಾಹನ ಓಡಿಸಬೇಕೆ? ವಿದೇಶಗಳಲ್ಲಿ ರಸ್ತೆಗಳು ತುಂಬಾ ಉತ್ತಮ ಸ್ಥಿತಿಯಲ್ಲಿವೆ. ಅಲ್ಲಿನ ದ್ವಿಚಕ್ರ ವಾಹನಗಳು ಇಲ್ಲಿನ ರೀತಿ ಇಲ್ಲ. ಕೆಲವೆ ಇದ್ದರೂ ಅವೆಲ್ಲ 300 ಸಿ.ಸಿ. ಮೇಲ್ಪಟ್ಟಿರುತ್ತವೆ. ಅಂತಹ ಗಾಡಿಗಳಲ್ಲಿ ವಾಹನ ಚಾಲನೆ ಮಾಡುವಾಗ ಶೂ ಧರಿಸುವುದು ಸಾಮಾನ್ಯ. ಇದು ಅವರ ಮನೋಸ್ಥಿತಿ ಮಾತ್ರವಲ್ಲದೆ, ಬೈಕ್ ಚಾಲನೆ ಸಂದರ್ಭದಲ್ಲಿ ಸುರಕ್ಷಿತ ದೃಷ್ಟಿಯಿಂದ ಈ ಕಾನೂನುಗಳನ್ನು ಅಲ್ಲಿ ಜಾರಿಗೆ ತರಲಾಗಿದೆ.
ನಮ್ಮ ಭಾರತದಲ್ಲಿ ದ್ವಿಚಕ್ರ ವಾಹನಗಳೆ ಹೆಚ್ಚು. ಸೂಪರ್ ಬೈಕ್‍ಗಳು ಇಲ್ಲಿ ಕಡಿಮೆ. 100 ಸಿ.ಸಿ. ಮೇಲ್ಪಟ್ಟ ವಾಹನಗಳು ಇಲ್ಲಿ ಹೆಚ್ಚು ಬಳಕೆಯಾಗುತ್ತಿಲ್ಲ. ಈ ದ್ವಿಚಕ್ರ ವಾಹನಗಳಲ್ಲಿ ಚಾಲನೆ ಮಾಡುವವರು ಚಪ್ಪಲಿ ಧರಿಸಬಾರದು. ಅವರೂ ಸಹ ಶೂ ಧರಿಸಬೇಕು ಎಂದರೆ ಇಲ್ಲಿನ ಪಾರಂಪರಿಕ ವ್ಯವಸ್ಥೆಯೆ ವ್ಯತಿರಿಕ್ತವಾಗುತ್ತದೆ. ಉಡುಗೆ, ತೊಡುಗೆಗಳು ಅವರವರ ವೈಯಕ್ತಿಕ ಪಾಲನೆಗೆ ಬಿಟ್ಟಂತಹ ವಿಷಯಗಳು. ಅಲ್ಲದೆ, ರಾಜ್ಯವಾರು, ಕ್ಷೇತ್ರವಾರು ಇಂತಹ ಉಡುಗೆಗಳಿಂದಲೆ ಆ ವರ್ಗದ ಜನರು ಹೆಚ್ಚು ಚಿರಪರಿಚಿತ. ತಮಿಳುನಾಡು, ಕೇರಳ ಪ್ರಾಂತ್ಯಗಳಲ್ಲಿ ಇಂದಿಗೂ ಪಂಚೆ ಹೆಚ್ಚು ಹೆಸರುವಾಸಿ. ಇನ್ನು ಮುಂದೆ ಅವರೆಲ್ಲ ಪಂಚೆ ಧರಿಸಬಾರದೆ? ಇಂತಹ ಅವೈಜ್ಞಾನಿಕ
ಕಾನೂನುಗಳನ್ನು ತರುವ ಮುನ್ನ ಒಮ್ಮೆ ಯೋಚಿಸಬಾರದೆ?
ಈಗಲೇ ಇಂತಹ ಅವೈಜ್ಞಾನಿಕ ನಿಯಮಗಳು ಜಾರಿಗೆ ಬರುತ್ತಿವೆ. ಇನ್ನು ಕೆಲವು ವರ್ಷಗಳು ಕಳೆದರೆ ಇನ್ನು ಎಂಥೆಂತಹ ನಿಯಮಗಳು ಜಾರಿಗೆ ಬರಲಿವೆಯೋ? ಎದುರಿಸಲು, ಅನುಭವಿಸಲು ಸಿದ್ಧರಾಗಬೇಕು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ