ವರುಣನ ಆರ್ಭಟಕ್ಕೆ ಪರದಾಡಿದ ಜನತೆ

ದಾವಣಗೆರೆ:

       ಬುಧವಾರ ಇಡೀ ರಾತ್ರಿ ಸುರಿದ ಭಾರೀ ಮಳೆಗೆ ನಗರದ ಹಲವು ಬಡಾವಣೆಗೆಳ, ಪ್ರದೇಶಗಳ ಮನೆಗಳು, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ರಸ್ತೆಗಳು ಜಲಾವೃತಗೊಂಡಿದ್ದರ ಪರಿಣಾಮ ನಾಗರೀಕರು ಪರದಾಡಿದ ದೃಶ್ಯ ನಗರಾದ್ಯಂತ ಗೋಚರಿಸುತಿತ್ತು.

         ಬುದವಾರ ರಾತ್ರಿ ಸುರಿದ ಮಳೆಯ ಅವಾಂತರದಿಂದಾಗಿ ಮನೆ, ಆಸ್ಪತ್ರೆ, ಕಟ್ಟಡಗಳು ಜಲಾವೃತಗೊಂಡಿದ್ದವು. ಹೀಗಾಗಿ ಮನೆಗೆ ನುಗ್ಗಿದ ನೀರನ್ನು ಮನೆಯಿಂದ ಹೊರ ಹಾಕಲು ಕೆಲ ಪ್ರದೇಶಗಳ ನಾಗರೀಕರು ರಾತ್ರಿ ಎಲ್ಲಾ ಜಾಗರಣೆ ಮಾಡಿದರೆ, ರಸ್ತೆಗಳು ಜಲಾವೃತಗೊಂಡಿದ್ದರ ಪರಿಣಾಮ ಮೊಳಕಾಲು ಮಟ್ಟ ನಿಂತಿದ್ದ ನೀರಿನಲ್ಲಿ ವಾಹನಗಳನ್ನು ಓಡಿಸಿಕೊಂಡು ಹೋಗಲು ಪರದಾಡುತ್ತಿದ್ದ ದೃಶ್ಯ ಅಲ್ಲಲ್ಲಿ ಸಾಮಾನ್ಯವಾಗಿದ್ದರೆ, ಸಂಪೂರ್ಣ ಜಲಾವೃತಗೊಂಡಿದ್ದ ಪ್ರದೇಶಗಳಿಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹೋಗಿ ಅಲ್ಲಿದ್ದ ಮಳೆ ನೀರು ಖಾಲಿ ಮಾಡಲು ವಿವಿಧ ಪ್ರದೇಶಗಳಲ್ಲಿ ರಾತ್ರಿ ಇಡೀ ಹರಸಹಾಸ ಪಟ್ಟರು. ಅಲ್ಲದೆ, ಪಾಲಿಕೆ ಸಿಬ್ಬಂದಿಗಳು ಸಹ ಜೆಸಿಬಿಗಳ ಮೂಲಕ ಕಟ್ಟಿದ ಚರಂಡಿಗಳನ್ನು ಶುಚಿಗೊಳಿಸುವ ಮೂಲಕ ನೀರು ಸರಾಗವಾಗಿ ಹರಿದುಕೊಂಡು ಹೋಗಲು ಅನುವು ಮಾಡಿಕೊಡುವುದರಲ್ಲಿ ನಿರತರಾಗಿದ್ದರು.

      ಹಿಂದೆ ಮಳೆ ಬಂದಾಗೆಲ್ಲಾ ಹಳೇ ದಾವಣಗೆರೆಯ ಕೆಲ ಭಾಗಗಳು ಮಾತ್ರ ಜಲಾವೃತಗೊಳ್ಳುತ್ತಿದ್ದವು. ಆದರೆ, ಮೊನ್ನೆ ಸುರಿದ ಮಳೆಗೆ ಹೊಸಭಾಗದ ಪ್ರತಿಷ್ಠಿತ ಬಡಾವಣೆಗಳು ಸಹ ಜಲಾವೃತಗೊಂಡಿದ್ದು, ಆ ಭಾಗಗಳ ನಾಗರೀಕರ ಎದೆಯಲ್ಲೂ ತೌಡು ಕುಟ್ಟುವ ಸದ್ದನ್ನು ಮಾಡಿಸಿದ್ದು ಮಾತ್ರ ಸುಳ್ಳಲ್ಲ.

    ಎಂದಿನಂತೆ ಹಳೇಭಾಗದ ಶೇಖರಪ್ಪ ನಗರ, ಜಾಲಿ ನಗರ, ಶಿವನಗರ, ಭಾರತ್ ಕಾಲೋನಿ, ಆಜಾದ್ ನಗರ, ಭಾಷಾ ನಗರ, ಹೆಗಡೆ ನಗರ, ಎಸ್‍ಪಿಎಸ್ ನಗರ, ಎಸ್.ಎಂ.ಕೃಷ್ಣ ನಗರ, ದೇವರಾಜ ಅರಸು ಬಡಾವಣೆ, ಕುರುಬರ ಕೇರಿ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿದ್ದವು. ಆದರೆ, ಈ ಬಾರಿ ಸಿದ್ಧವೀರಪ್ಪ ಬಡಾವಣೆ, ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗಿತ್ತು.

      ಇನ್ನೂ ದಸರಾ ಹಿನ್ನೆಲೆಯಲ್ಲಿ ಹೂವು, ಹಣ್ಣು ಮಾರಾಟ ಮಾಡಲು ಬಂದಿದ್ದವರಲ್ಲು ಬಹುತೇಕರು ವರುಣನ ಆರ್ಭಟಕ್ಕೆ ಹಾಕಿದ್ದ ಮಾಲು ಹಾಳಾಗಿ ನಷ್ಟ ಅನುಭವಿಸಿದರೆ, ಮಾರನೆಯ ದಿನ ಆಯುಧ ಪೂಜೆಯ ತಯಾರಿಗಾಗಿ ಬೇಕಾಗಿದ್ದ ಪೂಜಾ ಸಾಮಗ್ರಿಗಳನ್ನು ಖರೀದಿ ಮನೆ ಕಡೆಗೆ ಹೊರಟಿದ್ದ ಗ್ರಾಹಕರು ಮೂರ್ನಾಲ್ಕು ಗಂಟೆಗಳ ವರೆಗೆ ಆಯಾ ರಸ್ತೆಗಳ ಪಕ್ಕದಲ್ಲೇ ಇದ್ದ ಕಟ್ಟಡಗಳ ಬಳಿ ನಿಂತು ಆಶ್ರಯ ಪಡೆಯಬೇಕಾಯಿತು. ಕೆಲವರಂತು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ, ಮನೆ ಸೇರಿದರು.

      ಮಳೆಯಿಂದ ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣ ಜಲಾವೃತಗೊಂಡಿತ್ತು. ತ್ರಿಶೂಲ್ ಚಿತ್ರಮಂದಿರದ ಬಳಿಯ ಪಿ.ಬಿ.ರಸ್ತೆಯಿಂದ ಆಗ್ನಿಶಾಮಕ ದಳದ ಕಚೇರಿವರೆಗೆ ಹೊಸ ಕೋರ್ಟ್‍ನಿಂದ ದೇವರಾಜ ಅರಸು ಬಡಾವಣೆಯ ರಿಂಗ್ ರಸ್ತೆ, ಜಾಲಿ ನಗರದ ಹಲವು ರಸ್ತೆಗಳು, ರೈಲ್ವೆ ಅಂಡರ್ ಬಿಡ್ಜ್ ಕೆಳಗಿನ ರಸ್ತೆಗಳು ಸೇರಿದಂತೆ ಹಲವು ರಸ್ತೆಗಳು ಸಂಪೂರ್ಣ ಜಲಾವೃತವಾಗಿ ಮೊಣಕಾಲು ವರೆಗೂ ನೀರು ನಿಂತಿತ್ತು. ಹೀಗಾಗಿ ಈ ರಸ್ತೆಗಳಲ್ಲಿ ವಾಹನ ಚಲಾಯಿಸಲು ವಾಹನ ಸವಾರರು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿತ್ತು.
ಮಳೆಗೆ ಕುಂದವಾಡ ಕೆರೆ ಸುತ್ತಮುತ್ತ, ನಿಜಲಿಂಗಪ್ಪ ಬಡಾವಣೆಗಳು ಸಂಪೂರ್ಣ ಜನಾವೃತಗೊಂಡಿದ್ದು ಜನಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ವೇಳೆ ತೆಪ್ಪಗಳ ಮೂಲಕ ಜನಸಂಚರಿಸಿದರು. ಒಟ್ಟಿನಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ಜನಜೀವನ ತತ್ತರಿಸಿ ಹೋಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap