ಮೌಲ್ಯ ನಾಶ ಮಾಡುವವರ ಸಂಖ್ಯೆ ಹೆಚ್ಚು:ಡಾ.ವೀರಸೋಮೇಶ್ವರ ಜಗದ್ಗುರು

ದಾವಣಗೆರೆ :

   ಸ್ವಾರ್ಥ ಸಾಧನೆಗಾಗಿ ಮೌಲ್ಯ ಹಾಗೂ ಆದರ್ಶಗಳನ್ನು ನಾಶ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರು ವಿಷಾದ ವ್ಯಕ್ಯಪಡಿಸಿದರು.

    ನಗರದ ಶ್ರೀಮದಭಿನವ ರೇಣುಕ ಮಂದಿರದಲ್ಲಿ ಶನಿವಾರ ನಡೆದ 24ನೇ ವರ್ಷದ ಅಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಸಂಗಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಧರ್ಮ ಸಂಸ್ಕೃತಿ ಪರಂಪರೆ ಕಟ್ಟಿ ಬೆಳೆಸುವುದು ಬಲು ಕಷ್ಟದ ಕೆಲಸವಾಗಿದೆ. ಆದರೆ, ಅವುಗಳನ್ನು ನಾಶ ಮಾಡಲು ಬಹಳ ಶ್ರಮಪಡಬೇಕಾಗಿಲ್ಲ. ಸತ್ಯ ಸಂಸ್ಕೃತಿಯ ರಕ್ಷಾಕವಚ ನಾಶಗೊಂಡರೆ ಏನೊಂದು ಉಳಿಯುವುದಿಲ್ಲ ಎಚಿದು ಸೂಚ್ಯವಾಗಿ ಎಚ್ಚರಿಸಿದರು.

     ಸತ್ಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ ಆಗಬೇಕಾಗಿದೆ. ಮನುಷ್ಯ ಮೌಲ್ಯಾಧಾರಿತ ಜೀವನ ಜೀವನ ನಡೆಸಿದಾಗ ಮಾತ್ರ ಆತನ ಬದುಕಿಗೆ ನೆಲೆ ಬೆಲೆ ಪ್ರಾಪ್ತವಾಗುತ್ತದೆ. ಅರಿವಿನ ಸತ್ಪಥದಲ್ಲಿ ಮೌಲ್ಯಾಧಾರಿತ ಜೀವನ ನಮ್ಮದಾದರೆ, ಬದುಕಿನಲ್ಲಿ ಸುಖ ಶಾಂತಿ ದೊರಕಲು ಸಾಧ್ಯ ಎಂದು ನುಡಿದರು.

     ಕಲ್ಲು ಮುಳ್ಳುಗಳಿಂದ ತುಂಬಿದ ಜೀವನ ಮಾರ್ಗದಲ್ಲಿ ಹೂ ಗಿಡಗಳನ್ನು ನೆಟ್ಟು ಸುಗಂಧ ಪರಿಮಳ ಬೀರುವಂತೆ ಮಾಡುವುದೇ ಗುರುವಿನ ಧರ್ಮವಾಗಿದೆ. ಸಕಲ ಜೀವಾತ್ಮರಿಗೂ ಸದಾ ಒಳಿತನ್ನೇ ವೀರಶೈವ ಧರ್ಮ ಬಯಸಿದೆ. ಶ್ರೀಜಗದ್ಗುರು ರೇಣುಕಾಚಾರ್ಯರು ವಿಶ್ವ ಬಂದುತ್ವದ ಆದರ್ಶ ಚಿಂತನಗಳನ್ನು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಬೋಧಿಸಿದ್ದಾರೆ. ಪೂರ್ವಜರು ಹಾಕಿದ ಧರ್ಮ ದಾರಿಯಲ್ಲಿ ನಡೆಯುವುದೇ ನಮ್ಮೆಲ್ಲರ ಗುರಿಯಾಗಬೇಕೆಂದು ಕಿವಿಮಾತು ಹೇಳಿದರು.

     ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಭಾರತ ವೀರಶೈವ ಮಹಾಸಭಾ ಉಪಾಧ್ಯಕ್ಷ ಅಥಣಿ ವೀರಣ್ಣ, ವೀರಶೈವ-ಲಿಂಗಾಯತ ಒಂದಾಗಲು ರಂಭಾಪುರಿ ಜಗದ್ಗುರುಗಳು ಹಾಗೂ ಡಾ.ಶಾಮನೂರು ಶಿವಶಂಕರಪ್ಪನವರ ದಿಟ್ಟ ನಿಲುವೇ ಕಾರಣವಾಗಿದೆ. ಇಲ್ಲದಿದ್ದರೆ, ಧರ್ಮ ಒಡೆದು ಹೋಗುತಿತ್ತು. ರೇಣುಕಾಚಾರ್ಯರು 13ನೇ ಶತಮಾನದಲ್ಲಿಯೇ ವೀರಶೈವ ಧರ್ಮವನ್ನು ಹುಟ್ಟು ಹಾಕಿದ್ದರು. ಅದನ್ನು ಬಸವಣ್ಣನವರು ಸಹ 12ನೇ ಶತಮಾನದಲ್ಲಿ ಅಪ್ಪಿಕೊಂಡರು ಎಂದು ಹೇಳಿದರು.

     ಕೆಲವರು ಸಿದ್ದರಾಮಯ್ಯನವರ ಮನಸ್ಸಿನಲ್ಲಿ ವೀರಶೈವ ಹಾಗೂ ಲಿಂಗಾಯತ ಬೇರೆ, ಬೇರೆ ಎಂಬುದನ್ನು ಹುಟ್ಟಿಸಿ ಬಿಟ್ಟರು. ಹೀಗಾಗಿ ರಾಜ್ಯದಲ್ಲಿ  ಬಹಳಷ್ಟು ಗೊಂದಲಗಳು ನಡೆದವು. ಆದರೆ, ಇಭ್ಭಾಗವಾಗುತ್ತಿದ್ದ ಸಮಾಜವನ್ನು ಉಳಿಸಿದ ಕೀರ್ತಿ ಶ್ರೀರಂಭಾಪುರಿ ಜಗದ್ಗುರುಗಳಿಗೆ ಸಲ್ಲುತ್ತದೆ ಎಂದರು.

    ಕಾರ್ಯಕ್ರಮದಲ್ಲಿ ಆವರಗೊಳ್ಳ ಪುರವರ್ಗ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ, ಪಾಲಿಕೆ ಸದಸ್ಯ ದಿನೇಶ್ ಕೆ ಶೆಟ್ಟಿ, ದಾವಣಗೆರೆ ಹರಿಹರ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್‍ನ ಅಧ್ಯಕ್ಷ ಎನ್.ಎ.ಮುರುಗೇಶ್, ವಿನಾಯಕ ಏಜುಕೇಷನ್ ಟ್ರಸ್ಟ್‍ನ ಎಸ್.ಕೆ.ವೀರಣ್ಣ, ಮಕ್ಕಳ ತಜ್ಞ ಕಾಳಪ್ಪ ಮತ್ತಿತರರು ಉಪಸ್ಥಿತರಿದ್ದರು. ಹಲವರಿಗೆ ಶ್ರೀರಂಭಾಪುರಿ ಜಗದ್ಗುರುಗಳು ಗುರು ರಕ್ಷೆಯಿತ್ತು ಶುಭ ಹಾರೈಸಿದರು. ಗದುಗಿನ ಗಾನಭೂಷಣ ವೀರೇಶ ಕಿತ್ತೂರರಿಂದ ಸಂಗೀತ ಸೌರಭ ಜರುಗಿತು. ದೇವರಮನೆ ಶಿವಕುಮಾರ್ ಸ್ವಾಗತಿಸಿದರು. ಕೆ.ಎಂ.ಶಿವಯೋಗಿ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link