ತುಮಕೂರು
ತುಮಕೂರು ನಗರದ ದೊಡ್ಡ ಚರಂಡಿಯ ದೊಡ್ಡ ಸಮಸ್ಯೆಗಳು ಹಲವಾರು ವರ್ಷಗಳಿಂದ ನಿವಾರಣೆಯಾಗದೆ ಸವಾಲಾಗಿ ಉಳಿದಿವೆ. ಸಮಸ್ಯೆ ನಿವಾರಿಸುವ ಪ್ರಯತ್ನಗಳಿಗೆ ಒಂದಲ್ಲೊಂದು ಅಡ್ಡಿ ಎದುರಾಗಿ ಪ್ರಯತ್ನ ಪರಿಪೂರ್ಣವಾಗದೇ ಉಳಿದಿದೆ.
27ನೇ ವಾರ್ಡಿನ ಮುಸ್ಲೀಂ ಹಾಸ್ಟೆಲ್ ಹಿಂಭಾಗದ ಭಾಗದಿಂದ ಆರಂಭವಾಗುವ ಈ ಚರಂಡಿ 25, 27, 16 ಹಾಗೂ 19ನೇ ವಾರ್ಡ್‍ವರೆಗೆ ಎಸ್‍ಐಟಿ, ಎಸ್‍ಎಸ್ ಪುರಂ, ಸಿದ್ಧಗಂಗಾ ಬಡಾವಣೆ, ತೋಟಗಾರಿಕೆ ಇಲಾಖೆ ಪ್ರದೇಶ, ಭದ್ರಮ್ಮ ಕಲ್ಯಾಣ ಮಂಟಪ ಎದುರು ಸಾಗಿ, ಆರ್‍ಟಿ ನಗರ, ಕೋತಿ ತೋಪು ಮಾರ್ಗವಾಗಿ ಅಮಾನಿಕೆರೆವರೆಗೂ ಮುಂದುವರೆಯುತ್ತದೆ.
ಈ ಚರಂಡಿಯ ನೀರು ಸರಾಗವಾಗಿ ಹರಿಯಲು ಸಾಧÀ್ಯವಾಗುತ್ತಿಲ್ಲ. ಮಾರ್ಗದ ಅನೇಕ ಕಡೆ ಅರ್ಧ, ಮುಕ್ಕಾಲು ಭಾಗದವರೆಗೂ ಚರಂಡಿ ಒತ್ತೂವರಿ ಮಾಡಿ ಮನೆ, ಕಾಂಪೌಂಡ್ ನಿರ್ಮಿಸಿ ಅದರ ಆಳ ಅಗಲವನ್ನು ಕಿರಿದು ಮಾಡಲಾಗಿದೆ. ಇದರ ಪರಿಣಾಮ ಮಳೆಗಾಲದಲ್ಲಿ ಚರಂಡಿ ತುಂಬಿ ಹರಿದು, ಸಾಮಥ್ರ್ಯ ಮೀರಿದಾಗ ರಸ್ತೆ, ಸಮೀಪದ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಠಿಯಾಗುತ್ತದೆ. ಸಿದ್ಧಗಂಗಾ ಬಡಾವಣೆ, ಆರ್.ಟಿ. ನಗರ ಪ್ರದೇಶದ ಚರಂಡಿ ಪಕ್ಕದ ಮನೆಗಳವರಿಗೆ ಜೋರು ಮಳೆ ಬಂದಾಗಲೆಲ್ಲಾ ಮನೆಗೆ ನೀರು ನುಗ್ಗುವ ಆತಂಕ, ಅವಾಂತರ ತಪ್ಪಿದ್ದಲ್ಲ.
ಬೇಸಿಗೆಯಲ್ಲೂ ಬತ್ತದ ಈ ಸರ್ವಋತು ಚರಂಡಿ ಸಹಜವಾಗಿ ಹರಿಯಲು ಕಸಕಡ್ಡಿಗಳು ಅಡ್ಡಿಯಾಗಿ ಹಲವೆಡೆ ನಿಂತು ಕೊಳೆತ ನಾತ ಬೀರುತ್ತದೆ. ಕೆಲ ಭಾಗಗಳಲ್ಲಿ ಒಳಚರಂಡಿಗೆ ಬದಲಾಗಿ ಈ ಚರಂಡಿಗೆ ಶೌಚಾಲಯಗಳ ಸಂಪರ್ಕ ಮಾಡಿ ಕೊಳಚೆ ಹರಿಸಿ ವ್ಯವಸ್ಥೆಯನ್ನು ಹಾಳು ಮಾಡಲಾಗಿದೆ. ಇದರಿಂದ ಚರಂಡಿಯ ಕೊಳಕು ಹೆಚ್ಚಾಗಿ ದುರ್ವಾಸನೆಯಿಂದ ಅಲ್ಲಿನ ನಿವಾಸಿಗಳು ಉಸಿರುಕಟ್ಟಿ ಯಾತನೆಪಡುವಂತಾಗಿದೆ.
ಇಷ್ಟೇ ಅಲ್ಲದೆ, ಹಲವೆಡೆ ಮನೆಗಳ ಮಳೆ ನೀರನ್ನು ಒಳಚರಂಡಿಗೆ ಬಿಡಲಾಗುತ್ತದೆ. ಇದರಿಂದ ಮಳೆಗಾಲದಲ್ಲಿ ಒಳಚರಂಡಿಯ ಹರಿವು ಹೆಚ್ಚಾಗಿ ಮ್ಯಾನ್‍ಹೋಲ್‍ಗಳಲ್ಲಿ ಉಕ್ಕಿ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತದೆ, ಜೊತೆಗೆ ದೊಡ್ಡ ಚರಂಡಿಗೂ ಸೇರುತ್ತದೆ.
ಜೊತೆಗೆ, ಖಾಲಿ ಪ್ಲಾಸ್ಟಿಕ್ ಬಾಟೆಲ್‍ಗಳು, ಹರಿದ ಹಾಸಿಗೆ, ದಿಂಬು ಸೇರಿದಂತೆ ನಿರುಪಯೋಗಿ ವಸ್ತುಗಳನ್ನು ಈ ಚರಂಡಿಗೆ ತಂದು ತುಂಬಲಾಗುತ್ತದೆ. ಹೀಗಾಗಿ, ನೀರು ಸರಾಗವಾಗಿ ಹರಿಯದೆ ಅಲ್ಲಲ್ಲಿ ಬಂದ್ ಆಗಿ ಸಮಸ್ಯೆಯಾಗುತ್ತದೆ.
ದೊಡ್ಡ ಚರಂಡಿಯನ್ನು ಸುಸ್ಥಿತಿಗೆ ತರಲು ನಗರಪಾಲಿಕೆಯಿಂದ 1.5 ಕೋಟಿ ರೂ.ಗಳ ಯೋಜನೆ ರೂಪಿಸಲಾಗುತ್ತಿದೆ. ವಿವಿಧ ಹಂತಗಳಲ್ಲಿ ಚರಂಡಿ ಅಭಿವೃದ್ಧಿ ಮಾಡಲು ಉದ್ದೇಶಿಸಲಾಗಿದೆ ಎಂದು ಮೇಯರ್ ಫರೀದಾ ಬೇಗಂ ಹೇಳಿದರು.ಈ ಚರಂಡಿಗೆ ಇರುವ ಶೌಚಾಲಯಗಳ ಸಂಪರ್ಕಗಳನ್ನು ಪತ್ತೆ ಮಾಡಿ ಕೂಡಲೇ ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ದೊಡ್ಡ ಚರಂಡಿಯ ಒತ್ತೂವರಿ, ಸದ್ಯದ ಸ್ಥಿತಿಗತಿ ಬಗ್ಗೆ ವರದಿ ತಯಾರಿಸಲು ಸರ್ವೆ ಕಾರ್ಯ ನಡೆದಿದೆ. ಸರ್ವೆ ವರದಿ ಆಧರಿಸಿ ಏನೇನು ಸುಧಾರಣಾ ಕ್ರಮ ತೆಗೆದುಕೊಳ್ಳಬಹುದು ಎಂದು ಯೋಜನೆ ತಯಾರಿಸಿ ಕೆಲಸ ಆರಂಭಿಸುವುದಾಗಿ ಹೇಳಿದರು.
ಮಂಗಳವಾರ 16ನೇ ವಾರ್ಡಿಗೆ ಭೇಟಿ ನೀಡಿದ ಮೇಯರ್ ಈ ಪ್ರದೇಶದ ದೊಡ್ಡ ಚರಂಡಿ ಪರಿಶೀಲಿಸಿ, ಅದರಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ನಾಗರೀಕರಿಂದ ಮಾಹಿತಿ ಪಡೆದರು. ಮಳೆಗಾಲದಲ್ಲಿ ಈ ಚರಂಡಿ ತುಂಬಿ ಹೊರಳಿ ಅಕ್ಕಪಕ್ಕದ ಮನೆಗಳಿಗೆ ನುಗ್ಗಿ ಫಜೀತಿ ಉಂಟಾಗುತ್ತದೆ. ನೀರು ನಿಲ್ಲದಂತೆ ಸರಾಗವಾಗಿ ಹರಿಯುವಂತಾಗಬೇಕು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಬೇಕು ಎಂದು 16ನೇ ವಾರ್ಡ್ ಪಾಲಿಕೆ ಸದಸ್ಯ ಇನಾಯತ್‍ಉಲ್ಲಾ ಖಾನ್ ಮೇಯರ್‍ಗೆ ಮನವಿ ಮಾಡಿದರು.
ಸರ್ವೆ ಕಾರ್ಯ ಮುಗಿದ ನಂತರ, ಪೂರಾ ಚರಂಡಿಯನ್ನು ಸ್ವಚ್ಚಗೊಳಿಸುವುದು, ಆಗಿರುವ ಒತ್ತೂವರಿ ತೆರವಿಗೆ ಪ್ರಯತ್ನಿಸಿ, ತಡೆಗೋಡೆ ನಿರ್ಮಾಣ ಮಾಡಿ, ಅಗತ್ಯವಿರುವ ಕಡೆ ಚರಂಡಿಗೆ ಸ್ಲಾಬ್ ಹಾಕಲು ಉದ್ದೇಶಿಸಲಾಗಿದೆ. ಈ ಬಗ್ಗೆ ಯೋಜನೆ ರೂಪಿಸಿ ಎರಡು, ಮೂರು ಹಂತಗಳಲ್ಲಿ ಚರಂಡಿ ದುರಸ್ಥಿತಿ ಕಾಮಗಾರಿ ಆರಂಭಿಸುವುದಾಗಿ ಫರೀದಾ ಬೇಗಂ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
