ಬೆಂಗಳೂರು
ಕಸ ತುಂಬಿಕೊಂಡು ಹೋಗುತ್ತಿದ್ದ ಬಿಬಿಎಂಪಿ ಗೂಡ್ಸ್ ಆಟೋ ಆಯತಪ್ಪಿ ಬಿದ್ದು ಕಸ ಸಂಗ್ರಹಿಸುತ್ತಿದ್ದ ವ್ಯಕ್ತಿಯೊಬ್ಬ ಮೃತಪಟ್ಟರೆ, ಅವರ ಪತ್ನಿ ಸೇರಿ ಮೂವರು ಗಾಯಗೊಂಡಿರುವ ದುರ್ಘಟನೆ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ಪಂತರಪಾಳ್ಯದ ಅಂಬೇಡ್ಕರ್ ನಗರದ ಮುನಿಸ್ವಾಮಿ (೪೦)ಎಂದು ಮೃತಪಟ್ಟವರನ್ನು ಗುರುತಿಸಲಾಗಿದ್ದು ಗಾಯಗೊಂಡಿರುವ ಮೃತರ ಪತ್ನಿ ಕೃಷ್ಣವೇಣಿ (೩೦), ಚಂದ್ರ ಹಾಗೂ ಹರಿಜನ ಮಹೇಶ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುಮಾರಸ್ವಾಮಿ ಲೇಔಟ್ ಬಳಿ ಕಸ ಸಂಗ್ರಹಿಸಿಕೊಂಡು ಮಧ್ಯಾಹ್ನ ೨.೪೦ರ ವೇಳೆ ಗೂಡ್ಸ್ ಆಟೋದಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ತುರಹಳ್ಳಿ ಅರಣ್ಯದ ಬಳಿಯ ಬಲ ತಿರುವಿನಲ್ಲಿ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ.
ಆಟೋದ ಹಿಂದೆ ನಿಂತಿದ್ದ ಮುನಿಸ್ವಾಮಿ, ಕೃಷ್ಣವೇಣಿ, ಚಂದ್ರ ಹಾಗೂ ಹರಿಜನ ಮಹೇಶ ಕೆಳಗೆ ಬಿದ್ದಿದ್ದು, ಮುನಿಸ್ವಾಮಿ ಅವರ ಮೇಲೆ ಆಟೋ ಬಿದ್ದಿದ್ದರಿಂದ ತಲೆಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.ಕೃಷ್ಣವೇಣಿಗೆ ಗಂಭೀರ ಗಾಯಗಳಾಗಿದ್ದರೆ, ಚಂದ್ರ ಹಾಗೂ ಹರಿಜನ ಮಹೇಶ್ ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ಅಪಘಾತ ನಡೆದ ನಂತರ ಚಾಲಕ ಸಂಪತ್ಕುಮಾರ್ ಪರಾರಿಯಾಗಿದ್ದು, ಆತನಿಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸೌಮ್ಯಲತಾ ತಿಳಿಸಿದ್ದಾರೆ.
ಕಾರ್ಮಿಕ ಸಾವು
ವೇಗವಾಗಿ ಬಂದ ಕ್ಯಾಂಟರ್ ಹರಿದು ರಸ್ತೆ ದಾಟುತ್ತಿದ್ದ ಕರ್ಲಾನ್ ಹಾಸಿಗೆ ಕಾರ್ಖಾನೆಯ ಕಾರ್ಮಿಕ ಮಂಜುನಾಥ್ (೪೫) ಮೃತಪಟ್ಟಿರುವ ದುರ್ಘಟನೆ ಪೀಣ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ.ದಾಸರಹಳ್ಳಿಯ ಮಲ್ಲಸಂದ್ರದ ಮಂಜುನಾಥ್ ರಾತ್ರಿ ೧೦ರ ವೇಳೆ ಪೀಣ್ಯದ ಕಾರ್ಖಾನೆಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗಲು ಜಾಲಹಳ್ಳಿ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಟ್ಯಾಂಕರ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಅಪಘಾತವೆಸಗಿದ ಕ್ಯಾಂಟರ್ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿರುವ ಪೀಣ್ಯ ಸಂಚಾರ ಪೊಲೀಸರು ಅಪಘಾತವೆಸಗಿದ ಕ್ಯಾಂಟರ್ ಚಾಲಕನಿಗಾಗಿ ತೀವ್ರ ಶೋಧ ನಡೆಸಿದ್ದಾರೆಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
