ಹರಪನಹಳ್ಳಿ
ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದ ಯುವತಿ ಜತೆ ನಿಶ್ಚಿತಾರ್ಥ ಮಾಡಿಕೊಂಡು ವಿವಾಹಕ್ಕೆ ನಿರಾಕರಿಸಿದ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಉಜ್ಜಯಿನಿ ಗ್ರಾಮದ ಮದ್ದಾನಪ್ಪ ಎಂಬ ವ್ಯಕ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಳೆದ 5 ತಿಂಗಳ ಹಿಂದೆ ಯುವತಿಯ ಜೊತೆ ಮದ್ದಾನಪ್ಪ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಆನಂತರ ಹುಡುಗಿಯ ಆರೋಗ್ಯದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದ್ದ ಎನ್ನಲಾಗಿದೆ. ಇದರಿಂದ ಅನುಮಾನಗೊಂಡ ಯುವತಿ ಮನೆಯವರು ಹುಡುಗನ ಗ್ರಾಮವಾದ ಉಜ್ಜಯಿನಿಗೆ ತೆರಳಿ ವಿಚಾರಿಸಿದಾಗ ಹುಡುಗ ಹಾಗೂ ಆತನ ತಾಯಿ ಓಂಕಾರಮ್ಮ ನಿಮ್ಮ ಮಗಳನ್ನು ನಮ್ಮ ಮನೆಗೆ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಎರಡನೇ ಬಾರಿ ಪಂಚಾಯ್ತಿಗೆ ಹೋದರೂ ಮತ್ತೆ ನಿರಾಕರಿಸಿದ್ದಾರೆ.
ಇದರಿಂದ ಬೇಸರಗೊಂಡಿದ್ದ ಹುಡುಗಿ ತಾಲ್ಲೂಕಿನ ಚಿಗಟೇರಿ ಪೊಲೀಸ್ ಠಾಣಿಗೆ ಹುಡುಗ ಹಾಗೂ ಆತನ ತಾಯಿ ಮೇಲೆ ಗುರುವಾರ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಚಿಗಟೇರಿ ಪಿಎಸ್‍ಐ ನಾಗರಾಜ ಅವರು ಮದ್ದಾನಪ್ಪನನ್ನು ಬಂಧಿಸಿ ಶುಕ್ರವಾರ ಹರಪನಹಳ್ಳಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಆರೋಪಿಗೆ ಅ.25 ರವರೆಗೆ ನ್ಯಾಯಾಂಗ ಬಂಧನದಲ್ಲಿಡಲು ನ್ಯಾಯಾಲಯ ಸೂಚಿಸಿದೆ. ಹುಡುಗನ ತಾಯಿ ಓಂಕಾರಮ್ಮ ತಲೆ ಮರೆಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ