ಫಲ ಪುಷ್ಪ ಪ್ರದರ್ಶನ

ಚಿತ್ರದುರ್ಗ

         ಚಿತ್ರದುರ್ಗ ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಸಹಯೋಗದಲ್ಲಿ ಆಕರ್ಷಕ ಫಲ-ಪುಷ್ಪ ಪ್ರದರ್ಶನವನ್ನು ಫೆ. 10 ರಿಂದ 12 ರವರೆಗೆ ಮೂರು ದಿನಗಳ ಕಾಲ ಚಿತ್ರದುರ್ಗದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಎಲ್ಲ ರೈತರು, ಸಾರ್ವಜನಿಕರು ಈ ಪ್ರದರ್ಶನ ವೀಕ್ಷಿಸಿ, ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್. ರವೀಂದ್ರ ಅವರು ಹೇಳಿದರು.

         ಚಿತ್ರದುರ್ಗದಲ್ಲಿ ಫಲ-ಪುಷ್ಪ ಪ್ರದರ್ಶನ ಆಯೋಜಿಸುವ ಕುರಿತಂತೆ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಕಳೆದ 1981 ರಿಂದಲೂ ತೋಟಗಾರಿಕೆ ಸಂಘ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ವಿಶೇಷ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತಿದ್ದು, ಈ ಬಾರಿಯೂ 28 ನೇ ಫಲ-ಪುಷ್ಪ ಪ್ರದರ್ಶನವನ್ನು ಫೆ. 10 ರಿಂದ 12 ರವರೆಗೆ ಮೂರು ದಿನಗಳ ಕಾಲ ಆಯೋಜಿಸಲಾಗಿದೆ. ಬೆಳಿಗ್ಗೆ 09 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಸಾರ್ವಜನಿಕರಿಗೆ ಮುಕ್ತ ವೀಕ್ಷಣೆಗೆ ಅವಕಾಶವಿದೆ ಎಂದರು

       ಜಿಲ್ಲೆಯಲ್ಲಿ ಏರ್ಪಡಿಸುವ ಫಲ-ಪುಷ್ಪ ಪ್ರದರ್ಶನವು ವೈವಿಧ್ಯಮಯ ಹಾಗೂ ಆಕರ್ಷಣೆಗೆ ಖ್ಯಾತಿ ಹೊಂದಿದ್ದು, ವಿವಿಧ ಜಾತಿಯ ಹೂಗಳು, ಹಣ್ಣುಗಳು, ತರಕಾರಿಗಳು, ಮತ್ತು ಹಲವು ವಿಶೇಷ ಬಗೆಯ ಅಲಂಕಾರಿಕಾ ಗಿಡಗಳನ್ನು ಬೆಳೆಸಿ ಪ್ರದರ್ಶಿಸುತ್ತಿರುವುದು ಇದಕ್ಕೆ ಕಾರಣವಾಗಿದೆ. ಫಲ-ಪುಷ್ಪ ಪ್ರದರ್ಶನದಲ್ಲಿ ಹೂವಿನ ಗಿಡಗಳ ಬೃಹತ್ ಪ್ರದರ್ಶನ, ಇಕೆಬಾನ, ಕುಬ್ಜ ಮರ ಗಿಡಗಳು, ತರಕಾರಿ ಕೆತ್ತನೆ, ಅಲಂಕಾರಿಕಾ ಗಿಡಗಳ ಜೋಡಣೆ ಹಾಗೂ ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ಏರ್ಪಡಿಸಿ, ವಿವಿಧ ಸ್ಪರ್ಧೆಗಳನ್ನು ಸಹ ಹಮ್ಮಿಕೊಳ್ಳಲಾಗುವುದು. ವಿಶೇಷವಾಗಿ ಈ ಬಾರಿ ತುಮಕೂರು ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಕಲಾಕೃತಿಯನ್ನು ಪುಷ್ಪ ಪ್ರದರ್ಶನದ ಆಕರ್ಷಣಾ ಕೇಂದ್ರವಾಗಿಸುತ್ತಿದ್ದು, ಅವರ 111 ವರ್ಷಗಳ ಸಾಧನೆ ಪ್ರದರ್ಶನಗೊಳ್ಳಲಿದೆ. ಅಲ್ಲದೆ ಶ್ರೀಗಳ ಕುರಿತ ತರಕಾರಿ ಕೆತ್ತನೆ ವಿಶೇಷವಾಗಿರಲಿದೆ.

         ಈ ಬಾರಿಯ ವಿಶೇಷತೆಗಳಲ್ಲಿ ಪ್ರಕೃತಿ ಮಾತೆಯ ಕಲಾಕೃತಿಯನ್ನು ನಿರ್ಮಿಸಿ ಪ್ರಕೃತಿಯ ಮಾಹತ್ವವನ್ನು ಸಾರುವ, ಸಕಲ ಜೀವ ರಾಶಿಗಳಿಗೂ ತಾಯಿಯಾಗಿರುವ ನಿಸರ್ಗ ಮಾತೆಗೆ ನಮನ ಸಲ್ಲಿಸುವ ಕಲಾಕೃತಿ ಮಾದರಿ ಪ್ರದರ್ಶನ. ವಿವಿಧ ಪ್ರಾಣಿಗಳ ಕಲಾಕೃತಿ ನಿರ್ಮಾಣ ಮಾಡಿ ಕಾಡು ಉಳಿಸಿ,ಗಿಡಗಳನ್ನು ಬೆಳೆಸಿ ಕಾಡು ಪ್ರಾಣಿಗಳನ್ನು ರಕ್ಷಿಸಿ ಎಂಬ ಪರಿಕಲ್ಪನೆಯ ಪ್ರದರ್ಶನ. ಪಕ್ಷಿಗಳ ಕಲಾಕೃತಿಗಳನ್ನು ನಿರ್ಮಿಸಿ ಮೊಬೈಲ್ ಬಳಕೆಯನ್ನು ಕಡಿಮೆಮಾಡಿ ಪಕ್ಷಿಗಳ ಸಂತತಿ ಉಳಿಸಿ ಎಂಬ ಸಂದೇಶವನ್ನು ಸಾರುವ ಪರಿಕಲ್ಪನೆಯ ಪ್ರದರ್ಶನ ಏರ್ಪಡಿಸಲಾಗುವುದು. ಇತ್ತೀಚಿನ ದಿನಗಳಲ್ಲಿ ಅಹಾರ ಭದ್ರತೆಯ ಬಗ್ಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು ಆದ ಕಾರಣ ಅಣಬೆಯು ಒಂದು ಪೌಷ್ಟಿಕ ಸಂಪೂರ್ಣ 100ಕ್ಕೆ 100% ಸಸ್ಯಆಹಾರವಾಗಿದ್ದು ಅಣಬೆ ಬೆಳೆಯುವ ವiಹತ್ವವನ್ನು ತಿಳಿಸಲು ಅಣಬೆ ಬೆಳೆಯ ಬೆಳೆಯುವ ವಿಧಾನವನ್ನು ಸ್ತಬ್ದಚಿತ್ರಗಳ ಮುಖಾಂತರ ಅನಾವರಣಗೊಳಿಸಲಾಗುವುದು.

         ರೈತರು ಅಳವಡಿಕೆ ಮಾಡಿಕೊಳ್ಳಬೇಕಾದ ತೋಟಗಾರಿಕೆ ಕ್ಷೇತ್ರದ ಒಂದು ಮಾದರಿ ನಿರ್ಮಿಸಿ ವಿವಿಧ ಬಹು ಬೆಳೆ ಪದ್ಧತಿ ಬಗ್ಗೆ ನೀರನ್ನು ಮಿತಗೊಳಿಸಿ ನೀರಾವರಿ ಒದಗಿಸುವುದು, ಮಲ್ಚಿಂಗ್ ,ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಇತ್ಯಾದಿ ಅಂಶಗಳ ಪ್ರದರ್ಶನ. ಮಣ್ಣು ರಹಿತ ಬೆಳೆ ಬೆಳೆಯುವ ಇಸ್ರೇಲ್ ತಂತ್ರಜಾÐನದ ಒಂದು ಪದ್ಧತಿಯಾದ ಹೈಡ್ರೋಪೊನಿಕ್ಸ್ ಪ್ರದರ್ಶಿಸಲಾಗುವುದು ಎಂದರು.

ವಿವಿಧ ಬಗೆಯ ಹೂಗಳ ಪ್ರದರ್ಶನ 

         ಫಲ-ಪುಷ್ಪ ಪ್ರದರ್ಶನದಲ್ಲಿ ಹಲವು ಬಗೆಯ ವಿಶೇಷ ಹೂಗಳನ್ನು ಬಳಸುತ್ತಿರುವುದರ ಜೊತೆಗೆ ಕುಂಡದಲ್ಲಿ ಬೆಳೆದ ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ ಸುಮಾರು 50ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಆರ್ಕಿಡ್ಸ್, ಕಾರ್ನೇಶನ್, ಕಾಕ್ಸ್ ಕೂಂಬ್, ಸೆಲೋಶಿಯಾ, ಪ್ಲಾಕ್ಸ್, ಗಾಕ್ಸೀನಿಯ, ಕಲಂಚಾ, ಲಿಲ್ಲಿಸ್, ಇಂಪೇಷನ್ಸ್(ಮಿಕ್ಸ್‍ಡ್), ಡೇಲಿಯಾ(ಡ್ವಾರ್ಫ್), ಸಾಲ್ವಿಯಾ(ಕೆಂಪು, ನೀಲಿ ಕೇಸರಿ, ಬಿಳಿ) ಚೆಂಡು ಹೂ, ಚಿಂತಾಮಣಿ ಚೆಂಡು ಹೂ, ಜಿನಿಯಾ, ಪೆಟೂನಿಯಾ, ಕಾಸ್‍ಮಾಸ್, ಬಾಲ್ಸಂ, ಜಿರೇನಿಯಂ, ಹಾಲಿಹಾಕ್, ಆಂಟಿರಿನಮ್, ಡಯಾಂತಸ್, ಕ್ಯಾಲೊಂಡೋಲಾ, ಸೇವಂತಿಗೆ, ಪೆಂಟಾಸ್, ಫ್ಯಾನ್ಸಿ, ಇಪೋರ್ಬಿಯ ಮಿಲ್ಲಿ, ಫ್ಯಾಂಸಿಟಿಯಾ ಇತ್ಯಾದಿ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ವಿವಿಧ ಪುಷ್ಪ ಸಸಿಗಳು, ನೂರಕ್ಕೂ ಹೆಚ್ಚು ಬಗೆಯ ತಳಿಗಳು, ಪ್ರದರ್ಶಿಸುವುದರೊಂದಿಗೆ ಪುಷ್ಪ ರಸಿಕರಿಗೆ ಪ್ರದರ್ಶನ ಮುದ ನೀಡಲಿವೆ.

ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನ 

          ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳು ಹಾಗೂ ಇತರೆ ರೈತರು ಬೆಳೆದ ಹೂ,ತರಕಾರಿ, ಹಣ್ಣು, ಹಾಗೂ ಇತರೆ ವಿಶೇಷವಾದ ತೋಟಗಾರಿಕೆ ಉತ್ಪನ್ನಗಳನ್ನು ಫಲ-ಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು. ಸುಮಾರು 500 ಕ್ಕೂ ಹೆಚ್ಚು ವಿವಿಧ ಜಾತಿಯ ಉತ್ಪನ್ನಗಳನ್ನು ಪ್ರದರ್ಶಿಸಲು ತೀರ್ಮಾನಿಸಲಾಗಿರುತ್ತದೆ. ಉತ್ತಮವಾಗಿ ಬೆಳೆದ ರೈತರಿಗೆ ಬಹುಮಾನಗಳನ್ನು ಕೊಡುವುದರಿಂದ ತೋಟಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಇನ್ನಷ್ಟು ಉತ್ತೇಜನ ನೀಡಿದಂತಾಗುತ್ತದೆ.

ಇತರೆ ವಿಶೇಷತೆಗಳು 

            ಫಲ-ಪುಷ್ಪ ಪ್ರದರ್ಶನದ ಅಂಗವಾಗಿ, ತೆಂಗಿನ ಚಿಪ್ಪಿನಲ್ಲಿ ವಿವಿಧ ರೀತಿಯ ಕಲಾಕೃತಿಗಳನ್ನು ಕೆತ್ತೆನೆ ಮಾಡಿ ಪ್ರದರ್ಶಿಸಲಾಗುವುದು. ನೀರಿನ ಕಾರಂಜಿಯು ಸಹ ಈ ಬಾರಿಯ ಫಲ-ಪುಷ್ಪ ಪ್ರದರ್ಶನದಲ್ಲಿ ಅನಾವರಣಗೊಳ್ಳಲಿದೆ. ಪ್ರದರ್ಶನದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಿಂದ ತಮ್ಮ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದರಿಂದ ಒಂದೇ ಸೂರಿನಡಿ ಎಲ್ಲಾ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಮಾಹಿತಿ ರೈತರಿಗೆ ಹಾಗೂ ಆಸಕ್ತ ಸಾರ್ವಜನಿಕರಿಗೆ ದೊರೆಯುತ್ತದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link