ಶೀಘ್ರವೇ ಆಟೋಗಳಿಗೆ ಮಾಹಿತಿ ಫಲಕ ಹಾಕಿಸಿ

ದಾವಣಗೆರೆ:

      ಇನ್ನೂ 15 ದಿನಗಳ ಒಳಗಾಗಿ ನಗರದಲ್ಲಿರುವ ಎಲ್ಲ ಆಟೋಗಳಿಗೂ ಕಡ್ಡಾಯವಾಗಿ ಮಾಹಿತಿ ಫಲಕ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ, ರಾತ್ರಿ ವೇಳೆಯಲ್ಲಿ ಆಟೋ ಓಡಿಸಲು ಬಿಡುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಅವರು ಆಟೋ ಚಾಲಕರು ಹಾಗೂ ಮಾಲೀಕರಿಗೆ ಸೂಚ್ಯವಾಗಿ ಎಚ್ಚರಿಸಿದರು.

      ನಗರದ ಪ್ರೌಢಶಾಲಾ ಮೈದಾನದಲ್ಲಿ ಶನಿವಾರ ಜಿಲ್ಲಾ ಪೊಲೀಸ್, ಆಟೋ ಚಾಲಕರು ಮತ್ತು ಮಾಲೀಕರ ಸಂಘಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಟೋ ಚಾಲಕರಿಗೆ ಮತ್ತು ಮಾಲೀಕರಿಗೆ ಮಾಹಿತಿ ಫಲಕ ವಿತರಿಸಿ ಅವರು ಮಾತನಾಡಿದರು.

      ಆಟೋಗಳಲ್ಲಿ ಮಾಹಿತಿ ಫಲಕ ಅಳವಡಿಸುವುದರಿಂದ ಆಟೋ ಚಾಲಕರು ಮತ್ತು ಮಾಲೀಕರ ಎಲ್ಲಾ ದಾಖಲಾತಿಗಳನ್ನು ಒಳಗೊಂಡಿರುವ ಬಗ್ಗೆ ಪೊಲೀಸರಿಗೆ ಖಾತ್ರಿಯಾಗಲಿದೆ. ಆದ್ದರಿಂದ ತಪಾಸಣೆಗೆ ಒಳಪಡುವ ಮತ್ತು ಅನುಮಾನಕ್ಕೆ ಆಸ್ಪದ ಇರುವುದಿಲ್ಲ. ಅಲ್ಲದೇ, ಪ್ರಯಾಣಿಕರು ತಾವು ಪ್ರಯಾಣಿಸುವ ಆಟೋ ಚಾಲಕರ ಬಗ್ಗೆ ಕ್ಯೂಆರ್ ಕೋಡ್ ಮುಖಾಂತರ ಸುಲಭವಾಗಿ ಮಾಹಿತಿ ಕಲೆ ಹಾಕಲು ಸಾಧ್ಯವಾಗುವುದರಿಂದ, ಪ್ರಯಾಣಿಕರಿಗೂ ಆಟೋ ಚಾಲಕರ ಬಗ್ಗೆ ನಂಬಿಕೆ ಬರಲು ಸಾಧ್ಯವಾಗಲಿದೆ ಎಂದರು.

       ಆಟೋ ಚಾಲಕರು ಮತ್ತು ಮಾಲೀಕರು ತಮ್ಮ ಸಂಪೂರ್ಣ ಮಾಹಿತಿಯ ಫಲಕವನ್ನು ಕಡ್ಡಾಯವಾಗಿ ತಮ್ಮ ಆಟೋದಲ್ಲಿ ಅಳವಡಿಸಿಕೊಳ್ಳುವುದರಿಂದ ಪ್ರಯಾಣಿಕರ ನಂಬಿಕೆ ಗಳಿಸಲು ಸಾಧ್ಯವಾಗಲಿದೆ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ನಡೆಯುತ್ತಿರುವ ಘಟನೆಗಳಿಂದ ಎಲ್ಲರ ಮೇಲೂ ಅನುಮಾನ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

      ಮಹಿಳೆಯರು ರಾತ್ರಿ ಅಥವಾ ಬೆಳಿಗ್ಗೆ ಮನೆಗೆ ತೆರಳಬೇಕಾದರೆ, ಆಟೋಗಳ ಮೇಲೆಯೇ ಹೆಚ್ಚು ಅವಲಂಬಿತರಾಗಿರುತ್ತಾರೆ. ಆದರೆ, ಯಾರೋ ಒಬ್ಬರು ಆಟೋ ಚಾಲಕರ ಸೋಗಿನಲ್ಲಿ ದುಷ್ಕøತ್ಯ ಎಸಗಿ ತಪ್ಪು ಮಾಡಿದರೇ, ಪ್ರಾಮಾಣಿಕ ಆಟೋ ಚಾಲಕರ ಬಗ್ಗೆಯೂ ಅನುಮಾನ ಮೂಡಲಿದೆ. ಆದ್ದರಿಂದ ಈ ಅನುಮಾನ, ಶಂಕೆ ದೂರ ಮಾಡಲು ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಹಾಗೂ ಪ್ರಾಮಾಣಿಕ ಆಟೋ ಚಾಲಕರ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಲು ಮಾಹಿತಿ ಫಲಕ ಪೂರಕವಾಗಿದೆ ಎಂದರು.

      ಮಾಹಿತಿ ಫಲಕಕ್ಕೆ ಸುಮಾರು 150 ರಿಂದ 200 ರೂ ದರ ಇದೆ. ಇದನ್ನು ಭರಿಸಲು ಆಗುವುದಿಲ್ಲವೆಂದು ಕಡಿಮೆ ಬೆಲೆಗೆ ಬೇರೆ ಕಡೆ ಮಾಡಿಸಿಕೊಂಡರೆ, ನಿಮ್ಮ ಬಗ್ಗೆ ತಪ್ಪು ಮಾಹಿತಿ ಕೊಟ್ಟಂತಾಗಲಿದೆ. ಅಲ್ಲದೇ, ಜನರಲ್ಲಿ ಅಪನಂಬಿಕೆಯ ಜೊತೆಗೆ ವಂಚಿಸಿದಂತಾಗಲಿದೆ. ಹೀಗಾಗಿ ಬೇರೆಕಡೆಯಲ್ಲಿ ಮಾಹಿತಿ ಫಲಕ ಮಾಡಿಸಿದರೆ, ಅಪರಾಧದಿಂದಾಗಿ ಐದು ವರ್ಷ ಜೈಲು ಶಿಕ್ಷೆ ಅನುಭವಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.

       ಮೂರನೇ ವ್ಯಕ್ತಿ ವಿಮೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಇಲ್ಲದಿದ್ದರೆ, ಅಂತಹ ಆಟೋಗಳನ್ನು ಜಪ್ತಿ ಮಾಡಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ ಸುಮಾರು 100 ಆಟೋಗಳನ್ನು ಜಪ್ತಿ ಮಾಡಲಾಗಿದೆ. ವಿಮೆ ಇದ್ದು ಒಂದು ವೇಳೆ ಪ್ರಯಾಣದ ಸಂದರ್ಭದಲ್ಲಿ ಅಪಘಾತವಾದರೆ ಪ್ರಯಾಣಿಕರಿಗೆ ವಿಮೆಯಿಂದ ವೈದ್ಯಕೀಯ ವೆಚ್ಚ ಸಿಗಲಿದ್ದು, ಇದರಿಂದ ಆಟೋ ಚಾಲಕರು ಮತ್ತು ಮಾಲೀಕರಿಗೆ ಹೊರೆ ಕಡಿಮೆಯಾಗಲಿದೆ ಎಂದರು.ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಆಟೋಗಳಿಗೆ ಎಸ್‍ಪಿ ಚೇತನ್ ಅವರು ಮಾಹಿತಿ ಫಲಕ ಅಳವಡಿಸಿದರು. 300ಕ್ಕೂ ಹೆಚ್ಚು ಆಟೋ ಚಾಲಕರು ಮಾಹಿತಿ ನಾಮಫಲಕ ಪಡೆದರು.ಕಾರ್ಯಕ್ರಮದಲ್ಲಿ ನಗರ ಉಪವಿಭಾಗದ ಡಿವೈಎಸ್‍ಪಿ ಆರ್.ನಾಗರಾಜ್, ವೃತ್ತ ನಿರೀಕ್ಷಕ ಇ.ಆನಂದ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap