ಚಳ್ಳಕೆರೆ
ನಗರದ ಹೋಟೆಲ್, ಕಿರಾಣಿ ಅಂಗಡಿ, ಬೇಕರಿ, ಹೂ ಮಾರಾಟಗಾರರು ಮುಂತಾದ ಕಡೆಗಳಲ್ಲಿ ಪ್ಲಾಸ್ಟಿಕ್ ಕವರ್, ಪ್ಲೇಟ್, ಲೋಟ, ತಟ್ಟೆಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಈಗಾಗಲೇ ಹಲವಾರು ಬಾರಿ ಪರಿಶೀಲನೆ ನಡೆಸಿದ ಎಚ್ಚರಿಕೆ ನೀಡಿದ್ದರೂ ಸಹ ಕೆಲವರು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದು, ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ಪೌರಾಯುಕ್ತ ಜೆ.ಟಿ.ಹನುಮಂತರಾಜು ನೀಡಿದ್ಧಾರೆ.
ಅವರು ಶನಿವಾರ ಬೆಳ್ಳಂಬೆಳಗ್ಗೆ ನಗರದ ನೆಹರೂ ಸರ್ಕಲ್‍ನ ಅನ್ನಪೂರ್ಣ ಹೋಟೆಲ್, ಉಪಾಧ್ಯ ಬೇಕರಿ, ತರಕಾರಿ ಮಾರುಕಟ್ಟೆ, ಹೂವಿನ ಅಂಗಡಿಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ವಸ್ತಗಳ ಬಳಕೆಯ ಬಗ್ಗೆ ದಿಢೀರ್ ದಾಳಿ ನಡೆಸಿ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರಲ್ಲದೆ ಯಾರೇಯಾದರೂ ನಿಯಮ ಬಾಹಿರವಾಗಿ ಇಂತಹ ಚಟುವಟಿಕೆಯಲ್ಲಿ ಭಾಗವಹಿಸಿದರೆ, ಕಾನೂನು ವಿರುದ್ದವಾಗಿ ನಡೆದುಕೊಂಡಲ್ಲಿ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಂಡು ಸಂಬಂಧಪಟ್ಟ ಉದ್ದಿಮೆ ಪರವಾನಿಗೆಯನ್ನು ರದ್ದು ಪಡಿಸಲಾಗುವುದು ಎಂಬ ಎಚ್ಚರಿಕೆ ನೀಡಿದ್ಧಾರೆ.
ಈಗಾಗಲೇ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಕಳೆದ ಸುಮಾರು ಎಂಟ್ಹತ್ತು ದಿನಗಳಿಂದ ನಗರಸಭಾ ಸಿಬ್ಬಂದಿಯೊಂದಿಗೆ ದಾಳಿ ನಡೆಸುತ್ತಿದ್ದು ಪ್ಲಾಸ್ಟಿಕ್ ಬಳಕೆ ನಿಯಂತ್ರಣದಲ್ಲಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಮತ್ತೆ ಈ ದಂಧೆ ಪುನರಾಂಭವಾಗಿದ್ದು, ಎಲ್ಲೇಯಾಗಲಿ ಪ್ಲಾಸ್ಟಿಕ್ ಕವರ್ ಹಾಗೂ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾರಾಟ ಬಗ್ಗೆ ಮಾಹಿತಿ ಇದ್ದು ಶನಿವಾರ ಮತ್ತೊಮ್ಮೆ ದಾಳಿ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ನಗರ ವ್ಯಾಪ್ತಿ ಪ್ರದೇಶದಲ್ಲಿ ಯಾವುದೇ ಅಂಗಡಿ ಮಾಲೀಕರು ಕಾನೂನು ಬಾಹಿರವಾಗಿ ಪ್ಲಾಸ್ಟಿಕ್ ಕವರ್‍ಗಳಲ್ಲಿ ಆಹಾರ ಪದಾರ್ಥಗಳನ್ನು ನೀಡಿದಲ್ಲಿ ಅಂತಹವರ ವಿರುದ್ದ ಪ್ರಕರಣ ದಾಖಲಿಸಲಾಗುವುದು.
ಈಗಾಗಲೇ ಹಲವಾರು ಬಾರಿ ಎಚ್ಚರಿಕೆ ನೀಡಲಾಗಿದೆ. ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಎರಡು ಬಾರಿ ಪ್ಲಾಸ್ಟಿಕ್ ಬಳಕೆಯ ಬಗ್ಗೆ ನಿಗಾವಹಿಸಲಾಗುತ್ತಿದೆ. ಅಂಗಡಿಗಳ ಮಾಲೀಕರಿಗೂ ಸಹ ಅಂತಿಮ ಎಚ್ಚರಿಕೆ ನೀಡಲಾಗುತ್ತಿದೆ. ಕೋರ್ಟ್‍ನ ಆದೇಶದ ಮೇರೆಗೆ ಮಾನ್ಯ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಗರ ಪ್ರದೇಶದ ಯಾವುದೇ ಅಂಗಡಿಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಕಂಡು ಬಂದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ದಯಮಾಡಿ ನಗರದ ಎಲ್ಲಾ ವರ್ತಕರು, ಹೋಟೆಲ್ ಮಾಲೀಕರು ನಗರಸಭೆಯೊಂದಿಗೆ ಸಹಕರಿಸಲು ಮನವಿ ಮಾಡಿದ್ದಾರೆ.
ನಿವೇಶದಾರರಿಗೆ ಅಧಿಕ ದಂಡ
ಈಗಾಗಲೇ ನಗರದ ಎಲ್ಲಾ ವಾರ್ಡ್‍ಗಳಲ್ಲಿ ಖಾಸಗಿ ನಿವೇಶನವನ್ನು ಹೊಂದಿರುವ ಮಾಲೀಕರು ನಗರಸಭೆಯ ನಿಯಮಗಳನ್ನು ಉಲ್ಲಂಘಿಸಿ ತಮ್ಮ ನಿವೇಶನಗಳಲ್ಲಿ ಬೆಳೆದ ಜಾಲಿ ಹಾಗೂ ಇತರೆ ಗಿಡಗಳನ್ನು ಬೆಳೆಸಿದ್ದು, ಇವುಗಳನ್ನು ಸ್ವಚ್ಚಗೊಳಿಸುವಂತೆ ಸೂಚನೆ ನೀಡಿದ್ದರೂ ಸಹ ನಿರ್ಲಕ್ಷ್ಯೆ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಸಭೆಯ ಇಂತಹ ನಿವೇಶನಗಳನ್ನು ಸ್ವಚ್ಚತೆಗೊಳಿಸಿ ನಿವೇಶನದ ಮಾಲೀಕರಿಗೆ ದಂಡವನ್ನು ವಿಧಿಸಲಾಗುವುದು.
ನಗರದಲ್ಲಿ 40*30 ಅಳತೆಯ ನಿವೇಶನ ಸ್ವಚ್ಚಗೊಳಿಸಿದಲ್ಲಿ 5 ಸಾವಿರ, 60*40 ಅಳತೆಯ ನಿವೇಶನ ಸ್ವಚ್ಚಗೊಳಿಸಿದಲ್ಲಿ 15-20 ಸಾವಿರ ದಂಡವನ್ನು ವಿಧಿಸಲಾಗುವುದು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಾಗರೀಕರೂ ನಗರಸಭೆಯ ಸೂಚನೆಗಳನ್ನು ಪಾಲಿಸಬೇಕೆಂದು ಅವರು ಮನವಿ ಮಾಡಿದ್ಧಾರೆ.ಈ ಸಂದರ್ಭದಲ್ಲಿ ನೈರ್ಮಲ್ಯ ಮತ್ತು ಪರಿಸರ ಇಂಜಿನಿಯರ್ ನರೇಂದ್ರಬಾಬು, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಕಿರಿಯ ಆರೋಗ್ಯ ನಿರೀಕ್ಷಕ ಗಣೇಶ್, ಓಬಳೇಶ್, ನಿರ್ಮಲ ಮುಂತಾದವರು ದಾಳಿನಡೆಸಿದರು.