ಸುಪ್ರೀಂ ತೀರ್ಪು ಮರು ಪರಿಶೀಲನೆಗೆ ಭಕ್ತರ ಆಗ್ರಹ

ದಾವಣಗೆರೆ:

       ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಪುನರ್ ಪರಿಶೀಲಿಸಬೇಕೆಂದು ಒತ್ತಾಯಿಸಿ ಶಬರಿಮಲೈ ಅಯ್ಯಪ್ಪಸ್ವಾಮಿ ಸೇವಾ ಸಮಾಜಂ ನೇತೃತ್ವದಲ್ಲಿ ಹಿಂದೂ ಬಾಂಧವರು ನಗರದಲ್ಲಿ ಗುರುವಾರ ಶರಣು ಘೋಷ ರ್ಯಾಲಿ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

         ನಗರದ ಶ್ರೀಬೀರಲಿಂಗೇಶ್ವರ ದೇವಸ್ಥಾನದ ಆವರಣದಿಂದ ಶರಣು ಘೋಷದ ರ್ಯಾಲಿ ನಡೆಸಿದ ಪ್ರತಿಭನಾಕಾರರು, ಅಯ್ಯಪ್ಪಸ್ವಾಮಿಯ ಪರ ಘೋಷಣೆ ಮೊಳಗಿಸುತ್ತಾ, ಅಕ್ಕಮಹಾದೇವಿ ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತದ ಮೂಲಕ ಪಿಬಿ ರಸ್ತೆ ಮುಖಾಂತರ ಎಸಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

        ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಪ್ರಾಂಥ ಕಾರ್ಯದರ್ಶಿ ಎಸ್.ಟಿ.ವೀರೇಶ್ ಮಾತನಾಡಿ, ಸುಪ್ರೀಂ ಕೋರ್ಟ್ ಶಬರಿಮಲೈ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶಿಸಲು ಅವಕಾಶ ನೀಡಿರುವುದರಿಂದ ಶಬರಿಮಲೈಯ ಮೂಲ ಪರಂಪರೆ, ಪದ್ಧತಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿದರು.

         ಶಬರಿಮಲೈಯ ಮೂಲ ಪರಂಪರೆಯನ್ನು ಉಳಿಸಲು, ಸುಪ್ರೀಂ ಕೋರ್ಟ್‍ನ ತೀರ್ಪನ್ನು ಪ್ರತಿಭಟಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಬರೀ ಇದೊಂದೆ ಅಲ್ಲ. ಹಿಂದೂ ಸನಾತನ ಧರ್ಮದ ಮೇಲೆ ನಿರಂತ ದಬ್ಬಾಳಿಕೆ ನಡೆಯುತ್ತಿವೆ. ಆದ್ದರಿಂದ ಹಿಂದೂ ಧರ್ಮಿಯರ ವಿರುದ್ಧ ನಡೆಯುವ ಪಿತೂರಿಗಳ ವಿರುದ್ಧ ಎಲ್ಲರೂ ಎಚ್ಚೆತ್ತು ಹೋರಾಟ ನಡೆಸಬೇಕು. ಆಗಮಾತ್ರ ನಮ್ಮ ಧರ್ಮ, ಸಂಸ್ಕತಿ, ಪರಂಪರೆಯನ್ನು ಉಳಿಸಲು ಸಾಧ್ಯವಾಗಲಿದೆ ಎಂದರು.

       ಶಬರಿಮಲೈ ಅಯ್ಯಪ್ಪಸ್ವಾಮಿ ಸೇವಾ ಸಮಾಜಂನ ಸಂಚಾಲಕ ಸತೀಶ್ ಪೂಜಾರಿ ಮಾತನಾಡಿ, ಅಯ್ಯಪ್ಪಸ್ವಾಮಿಯ ಕೆಂಗಣ್ಣಿಗೆ ಗುರಿಯಾಗಿದ್ದ ಕಾರಣ ಇತ್ತೀಚೆಗೆ ಅನಾಹುತ ಸಂಭವಿಸಿರುವುದು ಗೊತ್ತೇ ಇದೆ. ಆದರೂ ಹಿಂದೂ ಧರ್ಮದ ರೀತಿ-ರಿವಾಜು ಗೊತ್ತಿಲ್ಲದ ಯಾವುದೋ ಸರ್ಕಾರೇತರ ಸಂಸ್ಥೆಯ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶಬರಿಮಲೈನ ಪೂರ್ವಾಪರವನ್ನು ತಿಳಿಯದೇ ಮಹಿಳೆಯರಿಗೂ ಅಯ್ಯಪ್ಪಸ್ವಾಮಿಯ ದೇಗುಲ ಪ್ರವೇಶಕ್ಕೆ ಅನುಮತಿ ನೀಡಿರುವುದರಿಂದ ಅಯ್ಯಪ್ಪನ ಭಕ್ತರ ಹಾಗೂ ಸಮಸ್ತ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

         ಅಯ್ಯಪ್ಪನ ಸನ್ನಿಧಿಗೆ ಹೋಗಲು 18 ಜೀವತತ್ವಗಳನ್ನು ಉಳಿಸಿಕೊಂಡು, 18 ದೇವರ ಕಳೆ ಹೊಂದಿರುವ ಹದಿನೆಂಟು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಅಯ್ಯಪ್ಪನಿಗೆ ನಡೆದು ಕೊಳ್ಳುವವರಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಎಂಬ ಯಾವುದೇ ಭಿನ್ನಾಭಿಪ್ರಾಯವಿಲ್ಲ.

        ಸರ್ವ ಧರ್ಮಿಯರು ಸಹ ಪಂದಳಕಂದನಿಗೆ ನಡೆದುಕೊಳ್ಳುತ್ತಾರೆ. ಆದರೆ, ಮಹಿಳೆಯರ ಋತು ಚಕ್ರದ ಸಮಸ್ಯೆಯ ಹಿನ್ನೆಲೆಯಲ್ಲಿ ಮಡಿಯ ಕಾರಣಕ್ಕೆ 10 ವರ್ಷದ ಮೇಲ್ಪಟ್ಟ ಹಾಗೂ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿರಾಕರಿಸಲಾಗಿದೆ. ಇದನ್ನು ಅರಿಯದೇ, ಧರ್ಮದ ಮೂಲ ತತ್ವಗಳನ್ನು ತಿಳಿಯದೇ ಸುಪ್ರೀಂ ಕೋರ್ಟ್ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವುದು ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ಹಿಂದೂ ಸಂಸ್ಕøತಿಯ ಅರಿವಿಲ್ಲದೇ, ಸುಪ್ರೀಂ ಕೋರ್ಟ್‍ನಲ್ಲಿ ಶಬರಿಮಲೈ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ನೀಡಬೇಕೆಂದು ಅರ್ಜಿ ಸಲ್ಲಿಸಿ, ಸಮಾಜದ ಸಾಮರಸ್ಯ ಕದಡಲು ಮುಂದಾಗಿರುವ ಅವಿವೇಕಿ ಹೆಣ್ಣು ಮಗಳನ್ನು ಬಂಧಿಸಬೇಕು ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪುನರ್ ಪರಿಶೀಲಿಸಬೇಕೆಂದು ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ಸಮಾಜಂನ ರಾಘವೇಂದ್ರ ಚವ್ಹಾಣ್, ಎಂ.ಎನ್.ಗೋಪಾಲ ರಾವ್, ನವೀನಕುಮಾರ, ರಾಜು, ಅವಿನಾಶ್, ಕೃಷ್ಣಪ್ಪ, ಪರಶುರಾಂ, ಎಂ.ಎನ್.ಗೋಪಾಲರಾವ್, ಸತೀಶ, ಶಾಂತಾ ದೊರೈ, ಶಾಮ, ಪ್ರಹ್ಲಾದ ತೇಲ್ಕರ್, ಯೋಗೇಶ್ ಭಟ್, ರಾಜಲಕ್ಷ್ಮಿ ಮೋಹನ, ಶಿವಪ್ರಸಾದ್ ಕುರಡಿಮಠ, ಮಂಜುನಾಥ್, ಲಿಂಗರಾಜ, ಬೀರೇಶ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link