ದಾವಣಗೆರೆ :
ಮಹಾನಗರ ಪಾಲಿಕೆ ವ್ಯಾಪ್ತಿಯ 23ನೇ ವಾರ್ಡ್‍ನ ಆವರಗೆರೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿ, ಅಲ್ಲಿಯ ನಿವಾಸಿಗಳು ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್‍ಸಿಹೆಚ್ ಡಾ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಆವರಗರೆಯು ದಾವಣಗೆರೆ ಮಹಾನಗರ ಪಾಲಿಕೆ ಸೇರ್ಪಡೆಯಾಗಿ ಎರಡು ದಶಕವಾದರೂ ಆರೋಗ್ಯ ಸೌಲಭ್ಯ ದೊರೆತಿಲ್ಲ. 23ನೇ ವಾರ್ಡ್ ವ್ಯಾಪ್ತಿ ಆವರಗೆರೆ, ಗೋಶಾಲೆ, ಮೋತಿನಗರ, ಪಿ. ಬಸವನಗೌಡ ಬಡಾವಣೆ, ಹರಳಯ್ಯ ನಗರ, ಚಿಕ್ಕನಹಳ್ಳಿ ಹೊಡ ಬಡಾವಣೆಗಳು ಬೆಳೆಯುತ್ತಿದ್ದು ಇಲ್ಲಿಯ ನಿವಾಸಿಗಳು, ಹಮಾಲರು, ಕಟ್ಟಡ ಕಾರ್ಮಿಕರು, ಆಂಜನೇಯ ಮಿಲ್ ಕೆಲಸಗಾರರು, ಸಣ್ಣ ರೈತರು 20 ಸಾವಿರಕ್ಕೂ ಹೆಚ್ಚು ವಾಸ ಮಾಡುತ್ತಿದ್ದಾರೆ. ಆದರೆ, ಸಕಾಲಕ್ಕೆ ಬಾಣಂತಿಯರಿಗೆ ಹೆರಿಗೆ ಸೌಲಭ್ಯ ಸಿಗುತ್ತಿಲ್ಲ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.
ದಾವಣಗೆರೆ ಜಿಲ್ಲಾ ಕೇಂದ್ರಕ್ಕೆ ಐಗೂರು 7 ಕಿ.ಮೀ. ದೂರ ಆಗುತ್ತದೆ. ಇಲ್ಲಿರುವ ನಿವಾಸಿಗಳಿಗೆ ಮತ್ತು ಮಹಿಳಾ ಹಾಗೂ ಪುರುಷ ಕಿರಿಯ ಆರೋಗ್ಯ ಸಹಾಯಕಿರಿಗೆ, ಆಶಾ ಕಾರ್ಯಕರ್ತರಿಗೂ ದಿನನಿತ್ಯ ತೊಂದರೆ ಆಗುತ್ತದೆ. ಆದ್ದರಿಂದ ಆವರಗೆರೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಎವೈಒನ ಆವರಗೆರೆ ವಾಸು, ಚನ್ನಳ್ಳಿ ರಾಜು, ತಿಪ್ಪೇಶ್, ಡಿ.ಗುರುಮೂರ್ತಿ, ಹೆಚ್.ಚಂದ್ರಪ್ಪ, ಬಸವರಾಜಪ್ಪ, ಐಗೂರು ಜಯಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ