ತುಮಕೂರು
ಅನುದಾನಿತ ವಿದ್ಯಾಸಂಸ್ಥೆಗಳ ನೌಕರರಿಗೆ ಕಾಲ್ಪನಿಕ ವೇತನ ಸೌಲಭ್ಯ ಮತ್ತು ನಿಶ್ಚಿತ ಪಿಂಚಣಿ ಸೌಲಭ್ಯ ಶೀಘ್ರ ಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಮಧುಗಿರಿ ಶೈಕ್ಷಣಿಕ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಜಿಲ್ಲೆಯ ಅನುದಾನಿತ ವಿದ್ಯಾಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಕಾಲ್ಪನಿಕ ವೇತನ ಸೌಲಭ್ಯ ಹಾಗೂ ಪಿಂಚಣಿ ಸೌಲಭ್ಯ ಸಿಗದೆ ಸುಮಾರು 1500ಕ್ಕೂ ಹೆಚ್ಚು ನೌಕರರು ಕೊನೆಯ ಸಂಬಳ ಮಾತ್ರ ಪಡೆದು ಬರಿಗೈಯಲ್ಲಿಯೇ ನಿವೃತ್ತರಾಗಿದ್ದಾರೆ. ಅನೇಕರು ಸೇವೆಯಲ್ಲಿರುವಾಗಲೇ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಇವರ ಕುಟುಂಬಗಳಿಗೆ ಯಾವುದೇ ಆರ್ಥಿಕ ಸೌಲಭ್ಯ ದೊರೆತಿಲ್ಲ. ನೌಕರರು ಸೇವೆಗೆ ಸೇರಿದ ದಿನಾಂಕದಿಂದಲೇ ಪರಿಗಣಿಸಿ ವಿವಿಧ ಸೌಲಭ್ಯಗಳನ್ನು ನೀಡಬೇಕೆಂದು ಸವೋಚ್ಛ ನ್ಯಾಯಾಲಯವೇ ತೀರ್ಪು ನೀಡಿದರೂ ಸಹ ಸರ್ಕಾರ ಮಾತ್ರ ಬೇಡಿಕೆ ಈಡೇರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
2006ರ ಏಪ್ರೆಲ್ 1 ರಿಂದ ಜಾರಿಗೆ ಬಂದ ನೂತನ ಪಿಂಚಣಿ ಯೋಜನೆಯಲ್ಲಿ ಪಿಂಚಣಿ ನಿಧಿಗೆ ವಂತಿಕೆಯನ್ನು ನೀಡುವ ಹೊಣೆಗಾರಿಕೆಯನ್ನು ಸರ್ಕಾರದ ಬದಲಿಗೆ ಆಡಳಿತ ಮಂಡಳಿಗಳಿಗೆ ವಹಿಸುವ ಮೂಲಕ ನೌಕರರಿಗೆ ವಂಚನೆ ಮಾಡಿದೆ. ಇಡೀ ದೇಶದಲ್ಲಿ ಎಲ್ಲಿಯೂ ಇಲ್ಲದೆ ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವೇ ಈ ತಾರತಮ್ಯ ಇರುವುದು ದುರಂತವೇ ಸರಿ. ಇದರ ವಿರುದ್ಧ ಈಗಾಗಲೇ ಹಲವು ಹೋರಾಟಗಳನ್ನು ಮಾಡಿದ್ದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ 11 ದಿನಗಳ ಕಾಲ ಪ್ರತಿಭಟನೆ ಮಾಡಲಾಗಿದ್ದು, ಉಪಚುನಾವಣೆ ನಂತರ ಬೇಡಿಕೆ ಈಡೇರಿಸುವುದಾಗಿ ಸಿಎಂ ಕುಮಾರಸ್ವಾಮಿಯವರು ಹೇಳಿದ್ದರು.
ಇತ್ತೀಚೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಸಮಸ್ಯೆ ಇತ್ಯರ್ಥ ಮಾಡುವುದಾಗಿ ಸಿಎಂ ಕಾರ್ಯಾಲಯದ ಉನ್ನತಾಧಿಕಾರಿಗಳಿಂದ ಮಾಹಿತಿ ಬಂದಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಸಹಕಾರ್ಯದರ್ಶಿ ಶಶಿಧರ ಸಿ.ಎಂ., ಅಧ್ಯಕ್ಷ ಧರ್ಮೇಂದ್ರ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಸಿದ್ದೇಶ್ ಕೆ.ಸಿ., ಖಜಾಂಚಿ ನರೇಶ್ ಎನ್. ಸೇರಿದಂತೆ ತಾಲ್ಲೂಕು ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.