ಲಾಕ್ ಡೌನ್ ಮುಗಿಯುವವರೆಗೆ ಅಧಿಕಾರಿಗಳ ಜತೆ ಸಹಕರಿಸಿ : ಸುರೇಶ್ ಅಂಗಡಿ

ಬೆಳಗಾವಿ

     ಕೋವಿಡ್-19 ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿನಿಲಯದಲ್ಲಿ ಆಶ್ರಯ ಪಡೆದಿರುವ ರಾಜಸ್ತಾನ ಮತ್ತಿತರ ರಾಜ್ಯಗಳ ವಲಸೆ ಕಾರ್ಮಿಕರನ್ನು ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಭೇಟಿ ಮಾಡಿ ಸಮಸ್ಯೆ ಆಲಿಸಿದರು.

     ವಿವಿಧ ರಾಜ್ಯಗಳ ವಲಸೆ ಕಾರ್ಮಿಕರನ್ನು ಇರಿಸಲಾಗಿರುವ ಆಶ್ರಯ ಕೇಂದ್ರಕ್ಕೆ ಗುರುವಾರ ಇಂದು‌ ಭೇಟಿ ನೀಡಿದ ಸಚಿವರು, ಕಾರ್ಮಿಕರಿಗೆ ನೀಡಲಾಗುತ್ತಿರುವ ಊಟ ಮತ್ತಿತರ ಮೂಲಸೌಕರ್ಯಗಳ ಬಗ್ಗೆ ಕಾರ್ಮಿಕರಿಂದಲೇ ಮಾಹಿತಿಯನ್ನು ಪಡೆದುಕೊಂಡರು .ಇದೇ ವೇಳೆ ಅವರ ಅಹವಾಲುಗಳನ್ನು ಕೂಡ ಆಲಿಸಿದ ಸಚಿವರು, ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ಉದ್ಧೇಶದಿಂದ ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದರಿಂದ ವಲಸೆ ಕಾರ್ಮಿಕರ ಸಂಚಾರವನ್ನು ನಿರ್ಬಂಧಿಸಿ ಅಯಾ ರಾಜ್ಯ ಹಾಗೂ ಜಿಲ್ಲೆಗಳಲ್ಲಿಯೇ ಅವರಿಗೆ ಊಟ, ವಸತಿ ಸೌಲಭ್ಯ ಒದಗಿಸಲಾಗಿದ್ದು, ಲಾಕ್ ಡೌನ್ ಮುಗಿಯುವವರೆಗೆ ಅಧಿಕಾರಿಗಳ ಜತೆ ಸಹಕರಿಸಬೇಕು ಎಂದು ತಿಳಿಸಿದರು.

     ಅದೇ ರೀತಿ ಸಂಕಷ್ಟದಲ್ಲಿ ಸಿಲುಕಿರುವ ಕಾರ್ಮಿಕರು ಅನಿವಾರ್ಯವಾಗಿ ಆಶ್ರಯ ಪಡೆದುಕೊಂಡಿದ್ದು, ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ ಆರೋಗ್ಯದ ಬಗ್ಗೆಯೂ ನಿಗಾ ವಹಿಸಬೇಕು ಎಂದು ಸಚಿವ ಸುರೇಶ್ ಅಂಗಡಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಸ್ವತಃ ಸಚಿವರೇ ತಮ್ಮ ಬಳಿ ಬಂದು ಅಹವಾಲುಗಳನ್ನು ಆಲಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಕಾರ್ಮಿಕರು, ಜಿಲ್ಲಾಡಳಿತದಿಂದ ತಮಗೆ ಉತ್ತಮ ಊಟೋಪಹಾರ ಹಾಗೂ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಸಚಿವರಿಗೆ ತಿಳಿಸಿದರು.ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್.ಶಾಸಕ ಅನಿಲ‌ ಬೆಣಕೆ ಮತ್ತಿತರರು‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link